ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರ ಶೋಷಣೆ ನಿರಂತರ

2 years ago

ಶೋಷಣೆ ಕೇವಲ ಚಲನಚಿತ್ರ ರಂಗಕ್ಕೆ ಸೀಮಿತವಲ್ಲ

ಕೆಲವು ದಿನಗಳಿಂದ ಮಲಯಾಳಂ ಚಲನಚಿತ್ರ ರಂಗದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರದಲ್ಲಿ ನೀಡಿರುವ ವರದಿಯ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲೂ ಸಹ ಚಲನಚಿತ್ರ ರಂಗದಲ್ಲಿ ಇಂತಹ ಮಾತುಗಳು ಕೇಳಿಬರುತ್ತಿವೆ. ಕೇವಲ ಚಲನಚಿತ್ರರಂಗದಲ್ಲಿ ಮಾತ್ರ ಮಹಿಳೆಯರ ಶೋಷಣೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದಕ್ಕಿಂತ ಭಯಾನಕವಾದ ಘಟನೆಗಳು ಬೇರೆ ಬೇರೆ ವಿಭಾಗದಲ್ಲೂ ಸಹ ನಡೆಯುತ್ತಲೇ ಇವೆ‌. ಅಂತವರ ವಿಚಾರದಲ್ಲಿ ಯಾರೂ ಮಾತನಾಡುವುದಿಲ್ಲ , ಜೊತೆಗೆ ಇಂತಹ ಜನರಿಗೆ ಸಂಘಟನೆಯ ಬಲವೂ ಇರುವುದಿಲ್ಲ, ಹೀಗಾಗಿ ಇವರ ಧ್ವನಿಗಳು ದೊರೆಯ ತನಕ ಮುಟ್ಟುವುದೇ ಇಲ್ಲ.

ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಕಟ್ಟಡ ಕಾರ್ಮಿಕರಾಗಿ ಇತರೆ ವಿಭಾಗಗಳಲ್ಲಿ ದಿನಗೂಲಿ ಕೆಲಸವನ್ನ ಮಾಡುತ್ತಲೇ ಇದ್ದಾರೆ. ಗಂಡಸರಿಗೆ ಮತ್ತು ಹೆಂಗಸರಿಗೆ ಕೊಡುವಂತಹ ಕೂಲಿಯ ಪ್ರಮಾಣದಲ್ಲೂ ಸಹ ತಾರತಮ್ಯವಿದೆ. ಆದರೆ ಬೆವರು ಸುರಿಸಿ ದುಡಿಯುವುದರಲ್ಲಿ ಗಂಡಸರಿಗಿಂತ ಹೆಂಗಸರ ಪಾತ್ರ ಹೆಚ್ಚು ಇರುತ್ತದೆ. ಆದರೂ ಈ ತಾರತಮ್ಯದ ವಿಚಾರದಲ್ಲಿ ಯಾರೂ ಗಮನಹರಿಸಿರುವುದಿಲ್ಲ. ಇನ್ನು ಇಲ್ಲಿ ನಡೆಯುವಷ್ಟು ಶೋಷಣೆ ದಬ್ಬಾಳಿಕೆ ದೌರ್ಜನ್ಯಗಳು ಎಲ್ಲಿಯೂ ನಡೆಯುವುದಿಲ್ಲ, ಇಂಥವರ ರಕ್ಷಣೆಗೆ ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎನ್ನುವುದನ್ನು ಯೋಚಿಸಬೇಕಾಗಿದೆ.

ದೇಶದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ದುಡಿಯುವಂತಹ ಮಹಿಳೆಯರ ಮೇಲೂ ಸಹ ಇಂತಹ ಅನೇಕ ಪ್ರಕರಣಗಳು ನಡೆಯುತ್ತಲೇ ಇವೆ. ಇಲ್ಲಿಯೂ ಸಹ ಯಾವ ಕ್ರಮಗಳನ್ನ ಅನುಸರಿಸಬೇಕು ಎನ್ನುವ ಮಾನದಂಡವೇ ಇಲ್ಲ.

ದೇಶದ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವಂತಹ ಮತ್ತು ಪಿ ಎಚ್ ಡಿ ಪದವಿಗಾಗಿ ಅಭ್ಯಾಸ ನಡೆಸುವಂತಹ, ನೂರಾರು ಮಹಿಳೆಯರ ಮೇಲೂ ಸಹ ಇಂತಹ ದಬ್ಬಾಳಿಕೆಗಳು, ದುರುಪಯೋಗಗಳು ನಡೆಯುತ್ತಲೇ ಇವೆ. ಇವುಗಳ ಬಗ್ಗೆ ಧ್ವನಿ ಎತ್ತುವರು ಯಾರು?

ಲಕ್ಷಾಂತರ ಮಹಿಳೆಯರು ತಮ್ಮ ಬದುಕಿಗಾಗಿ ಮನೆ ಕೆಲಸಗಳನ್ನ ಮಾಡುತ್ತಾರೆ. ಮನೆ ಕೆಲಸ ಮಾಡುವ ಮಹಿಳೆಯರಿಗೆ ಎಷ್ಟರಮಟ್ಟಿಗೆ ರಕ್ಷಣೆಯನ್ನು ಕೊಟ್ಟಿದ್ದೇವೆ, ಎಷ್ಟು ಪ್ರಕರಣಗಳು ದಾಖಲಾಗಿದೆ ಎನ್ನುವ ವಿಚಾರವನ್ನು ನಾವು ಆಲೋಚಿಸಬೇಕಾಗಿದೆ.

ಸಾರ್ವಜನಿಕ ಜೀವನದಲ್ಲೂ ಸಹ ವಿವಿಧ ಕ್ಷೇತ್ರಗಳಲ್ಲಿ ಕನಸುಗಳನ್ನು ಹೊತ್ತು ಬರುವ ಮಹಿಳೆಯರ ಮೇಲೆ ಇಂತಹ ದಬ್ಬಾಳಿಕೆಗಳು, ದೌರ್ಜನ್ಯಗಳು ಸುದ್ದಿಯಾಗದೆ ನಡೆಯುತ್ತಲೇ ಇರುತ್ತವೆ. ಇಲ್ಲಿ ಕಾನೂನು ಮಾಡುವಂತಹ ಅನೇಕರು ಸಹಕರಿಸುತ್ತಾರೆ ಇಲ್ಲವೇ ಪಾಲುದಾರರಾಗಿರುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿದ್ದೇವೆ?

ಪಟ್ಟಿ ಮಾಡುತ್ತಾ ಹೋದರೆ ಮಹಿಳೆಯರ ಮೇಲಿನ ಶೋಷಣೆಗೆ ಇತಿಮಿತಿಯೇ ಇಲ್ಲ, ಎಲ್ಲರೂ ಹೇಳುವುದು ಹೆಣ್ಣು ದೇವತೆಯ ಸಮಾನ, ತಾಯಿಯ ಸಮಾನ, ಎಂಬೆಲ್ಲಾ ಮಾತುಗಳು ವೇದಿಕೆಗಳ ಮೇಲೆ ನಿಂತರೆ ಭಾಷಣ ಮಾಡುವವರಿಂದ ಹರಿದುಬರುತ್ತವೆ. ಪ್ರತಿದಿನವೂ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನಾವು ಗಮನಿಸುತ್ತಿರುವ ವಿಚಾರವೇನೆಂದರೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಅವರ ದುರುಪಯೋಗ ಇವುಗಳ ವಿಚಾರದಲ್ಲಿ ನ್ಯಾಯಾಲಯಗಳಲ್ಲಿ ನಡೆಯುವ ಚರ್ಚೆಯನ್ನ ಗಮನಿಸಿದಾಗ ಬಹಳಷ್ಟು ಪ್ರಕರಣಗಳಲ್ಲಿ ಮಹಿಳೆಯರ ವ್ಯಕ್ತಿತ್ವವನ್ನ ಮತ್ತು ಚರಿತ್ರೆಯನ್ನು ಪ್ರಶ್ನೆ ಮಾಡುವಂತಹ ರೀತಿಯಲ್ಲಿ ವಾದ ವಿವಾದಗಳು ಇರುತ್ತದೆಯೇ ಹೊರತು, ನ್ಯಾಯವನ್ನ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ ಇರುವುದಿಲ್ಲ.

ಉಳ್ಳವರು ದೊಡ್ಡ ,ದೊಡ್ಡವರ ಮನೆಯವರು ದೊಡ್ಡದೊಡ್ಡ ವಕೀಲರನ್ನ ನೇಮಿಸಿಕೊಂಡು ದೊಡ್ಡಮಟ್ಟದಲ್ಲಿ ವಾದಗಳನ್ನು ಮಾಡಿಸಿಕೊಂಡು, ತಾವು ನೇಮಿಸಿಕೊಂಡ ಹೆಸರಾಂತ ವಕೀಲರ ಮೂಲಕ ಪ್ರಕರಣಗಳಿಗೆ ದಿಕ್ಕು ತಪ್ಪಿಸಿ ಅಂತಿಮವಾಗಿ ಸಾಕ್ಷಿಗಳ ಕೊರತೆ, ಅಪರಾಧವನ್ನು ದೃಢೀಕರಿಸುವಲ್ಲಿ ತಾಂತ್ರಿಕ ದೋಷಗಳು ಮುಂತಾದ ಕಾರಣಗಳ ಹಿನ್ನೆಲೆಯಲ್ಲಿ ಎಲ್ಲ ಮಹಾಪುರುಷರು ನಿರಪರಾಧಿಗಳಾಗಿ ಇಲ್ಲವೇ ಜಾಮೀನು ಪಡೆದುಕೊಂಡು ಹೊರಗಡೆ ಬಂದು ಹಾರ ತುರಾಯಿಗಳನ್ನ ಹಾಕಿಸಿಕೊಂಡು ಸಂಭ್ರಮಿಸುತ್ತಾರೆ.

ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಲೈಂಗಿಕ ಕಿರುಕುಳ, ವಿಚಾರದಲ್ಲಿ ಮತ್ತಷ್ಟು ಕಾನೂನುಗಳು ಬಿಗಿಯಾಗುವ ರೀತಿಯಲ್ಲಿ ರೂಪಗೊಳ್ಳಬೇಕು. ಜೊತೆಗೆ ಇಲ್ಲಿ ಮಹಿಳೆಯರಿಗೆ ಹೆಚ್ಚು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗಮನವಿರಬೇಕೇ ಹೊರತು ದೊಡ್ಡವರನ್ನ ರಕ್ಷಿಸುವ ನಿಟ್ಟಿನಲ್ಲಿ ಆಸಕ್ತಿಗಳಿರಬಾರದು.

ವಿಶೇಷವಾಗಿ ದುಡಿಯುವಂತಹ ಮಹಿಳೆಯರು ಮನೆ ಕೆಲಸದವರಿರಬಹುದು, ಗಾರ್ಮೆಂಟ್ಸ್ ನೌಕರರು ಇರಬಹುದು, ಕಟ್ಟಡ ಕಾರ್ಮಿಕರು ಇರಬಹುದು, ಇವರುಗಳ ರಕ್ಷಣೆಯ ವಿಚಾರದಲ್ಲಿ ತುರ್ತು ಕ್ರಮಗಳ ಅಗತ್ಯವಿದೆ, ನಿಸ್ಸಹಾಯಕ ಹೆಣ್ಣು ಮಕ್ಕಳ ವಿಚಾರದಲ್ಲಿ ವಿಶೇಷವಾದ ಗಮನವನ್ನು ಹರಿಸಬೇಕಾಗಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply