ಕವಿತಾರಚನೆಗೆ ಬೇಕಾದ ಪೂರಕ-ಪ್ರೇರಕ-ಪೋಷಕ ವಾತಾವರಣ ಆಶಾದಾಯಕವಾಗಿಲ್ಲವೇ?

22 hours ago

ಹಾರೈಕೆಯ ನುಡಿ

ಮಂಜುನಾಥ ಪಾಳ್ಯ ಅವರ ನಾಲ್ಕು ಕವಿತಾ ಸಂಕಲನಗಳನ್ನು ಒಳಗೊಂಡ ಈವರೆಗಿನ ಕವಿತೆಗಳ ಗುಚ್ಛ ಇಲ್ಲಿದೆ. ಇಲ್ಲಿ ಇಂದಿಗೆ ಎರಡು ದಶಕಗಳ ಹಿಂದೆ(2005)ರಲ್ಲಿ ಅವರು ಪದವಿ ಮುಗಿಸಿ, ಸ್ನಾತಕೋತ್ತರ ವಿದ್ಯಾರ್ಥಿ ದೆಸೆಯಲ್ಲಿ ಬರೆದು ಪ್ರಕಟಿಸಿದ್ದ ‘ಒಳದನಿ’, ‘ಕತ್ತಲೆಯೊಳಗೆ ಬೆಳಕು’ (2009), ‘ಹೆಪ್ಪುಗಟ್ಟಿದ ಮಾತುಗಳು’ (2024) ಹಾಗೂ ‘ಐವತ್ತಕ್ಕೆ ನೂರೊಂದು ಗುರಿ’ ಇತ್ತೀಚೆಗೆ ಬರೆದ ಕವಿತೆಗಳೊಂದಿಗೆ ಕವಿಯೊಬ್ಬನ ಕಾವ್ಯ ಯಾನದ ಒಟ್ಟಂದವನ್ನು ಕಟ್ಟಿಕೊಡುವ ರೀತಿಯಲ್ಲಿ ಕನ್ನಡ ಕಾವ್ಯದ ಸಹೃದಯೀ ಓದುಗನ ಕೈಸೇರುತ್ತಿದೆ. ಇದು ಕವಿಯೊಬ್ಬನ ಕಾವ್ಯದ ಸಮಗ್ರ ನೋಟದ ಗ್ರಹಿಕೆಗೆ, ಅಧ್ಯಯನಕ್ಕೆ, ಸಂಶೋಧನೆಗಳ ಸಲುವಾಗಿಯೂ ಉಪಯುಕ್ತವಾದ ತೀರ್ಮಾನ.

ಮಂಜುನಾಥ ಪಾಳ್ಯ ಅವರ ಈ ನಾಲ್ಕು ಸಂಕಲನಗಳು ಮೈ ಪಡೆದ ಅವಧಿ, ಅವರ ಈವರೆಗಿನ ಜೀವಿತಾವಧಿಯಾದ ಐವತ್ತು ವರ್ಷಗಳನ್ನು ಗಮನಿಸಿದರೆ, ಕವಿಯೊಬ್ಬ ತನ್ನ ತೀರಾ ಇಳಿಗಾಲದಲ್ಲಿ ಅಥವ ತನ್ನ ಮಾಗಿದ ಜೀವನಾನುಭವದ ಸಂಧ್ಯಾಕಾಲದಲ್ಲಿ ಇಂತಹ ಈವರೆಗಿನ ಕವಿತೆಗಳನ್ನು ಅಥವಾ ಸಮಗ್ರ ಕಾವ್ಯವನ್ನು ಹೊರತಂದು ಇನ್ನು ಮುಂದೆ ನನಗೆ ಬರೆಯುವ ಸಾಧ್ಯತೆಗಳಿಲ್ಲ ಎಂಬುದರ ಸೂಚನೆಯಂತೆ ಅದು ಕಾಣುತ್ತದೆ. ಇನ್ನೂ ಐದೋ, ಆರೋ ದಶಕಗಳ ಸುದೀರ್ಘ ಜೀವಿತದ ಅವಧಿ ತನ್ನ ಖಾತೆಯಲ್ಲಿರುವಾಗಲೇ- ಇವರ ಈವರೆಗಿನ ಕವಿತೆಗಳು ಪ್ರಕಟವಾಗುತ್ತಿರುವುದು ಈ ಕವಿ ಕಾವ್ಯದಿಂದ ವಿಮುಖತೆ ಹೊಂದಲಿರುವ ಮುನ್ಸೂಚನೆಯೋ ಅಥವಾ ಕಾವ್ಯೇತರ ಪ್ರಕಾರಗಳ ಕಡೆಗಿನ ಒಲವು ತೀವ್ರವಾಗಿರುವುದರ ಬಗೆಗಿನ ಕಾರಣವೋ? ಎಂಬ ಗುಮಾನಿಯ ಜೊತೆಗೆ ಇದು ಬಹಳ ಆತುರದ ತೀರ್ಮಾನದ ಹಾಗೆಯೂ ಗೋಚರಿಸುವುದಕ್ಕೆ ಈ ಈವರೆಗಿನ ಕವಿತಾ ಸಂಕಲನ ಆಸ್ಪದವನ್ನು ಒದಗಿಸುತ್ತದೆ. ಜೊತೆಗೆ ಕನ್ನಡದ ಸಂದರ್ಭದಲ್ಲಿ ಕವಿಯಾದವನಿಗೆ ಕವಿತಾರಚನೆಗೆ ಬೇಕಾದ ಪೂರಕ-ಪ್ರೇರಕ-ಪೋಷಕ ವಾತಾವರಣ ಆಶಾದಾಯಕವಾಗಿಲ್ಲವೇ? ಎಂಬುದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾಗಿರುವ ಬಗ್ಗೆಯೂ ಚಿಂತಿಸುವಂತೆ ಮಾಡುತ್ತದೆ.

ಅವರ ಮೊದಲ ಸಂಕಲನ ‘ಒಳದನಿ’ ಮತ್ತು ಎರಡನೆಯ ಸಂಕಲನ ‘ಕತ್ತಲೆಯೊಳಗೆ ಬೆಳಕು’ ಸಂಕಲನಗಳ ಕವಿತೆಗಳನ್ನು ಆಶಯದ ದೃಷ್ಟಿಯಿಂದ ಗಮನಿಸುವುದಾದರೆ- ಈ ಯಾನ ಕವಿಯೊಬ್ಬನ ಒಳ-ಹೊರಗಿನ ಬಿಡುಗಡೆ ಹಾಗೂ ಶೋಧದ ಹಾಗೆ. ಅಂದರೆ ತನ್ನ ಒಳಗಿನ ಭಾವತುಮುಲಗಳ ಬಿಡುಗಡೆ ಮತ್ತು ಹೊರಗಿನ ಲೋಕದ ಜೊತೆಗಿನ ಅನುಸಂಧಾನದ ರೂಪದಲ್ಲಿದೆ. ಈ ಒಳ-ಹೊರಗಿನ ಸ್ವ ಮತ್ತು ಪರ, ವ್ಯಷ್ಠಿ ಮತ್ತು ಸಮಷ್ಠಿಗಳ ನಡುವಿನ ಆತ್ಮವಿಮರ್ಶೆ ಮತ್ತು ಸಮಾಜ ವಿಮರ್ಶೆಗಳ ಮೂಲಕ ತನ್ನ ಅನುಭವಕ್ಕೆ ಶಕ್ತವಾದ ಮಾತು ಹುಡುಕುವ ಕವಿಯ ಸೃಜನಶೀಲ ಶೋಧ, ಸಂಕಟ ಮತ್ತು ಹೊರಗಣ ವ್ಯವಸ್ಥೆಯೊಂದಿಗೆ ರಾಜಿಯಾಗಲು ಆಗದ, ಆದರ್ಶಗಳ ಪತನ, ಮೌಲ್ಯಗಳ ಕುಸಿತದ ಬಗೆಗಿನ ಸಿಟ್ಟು, ಆಕ್ರೋಶ, ತನ್ನಿಂದ ಸರಿಪಡಿಸಲು ಆಗದ ಸಾಮಾಜಿಕ ಬದುಕಿನ ಕೈಮೀರಿದ ಸಂಗತಿಗಳ ಬಗೆಗಿನ ಹತಾಶೆ, ವಿಷಾದಗಳ ನವ್ಯ ನಾಯಕನ ವಿಕ್ಷಿಪ್ತತೆ ಭಾವತುಮುಲಗಳ ಸಂಕೀರ್ಣ ಜಗತ್ತು ಈ ಎರಡೂ ಕವಿತಾ ಸಂಕಲನಗಳ ಕವಿತೆಗಳಲ್ಲಿ ಪ್ರಧಾನವಾಗಿದೆ.

ಈ ಸಂಕಲನಗಳಲ್ಲಿ ಕವಿಯೇ ತನ್ನ ಕಾವ್ಯಾರಂಭದ ಪ್ರಾರಂಭದ ದಿನಗಳಲ್ಲಿ ತನ್ನ ಅಂತರಂಗದ ಬಿಡುಗಡೆ ತನಗೆ ಅತ್ಯಂತ ಕಷ್ಟಕರವಾದ ಸಂಗತಿ ಎಂದು ಅದನ್ನು ಶಬ್ದಗಳಲ್ಲಿ ಹೊರಹಾಕುವಾಗ, ಹೊರಹಾಕಿದ ನಂತರದಲ್ಲಿ ಅದು ಕಾವ್ಯವಾಗಿದೆಯೋ ಇಲ್ಲವೋ ಎಂಬ ಆತಂಕ- ಇದು ಜಗದೆಲ್ಲಾ ಕವಿಗಳು ಅನುಭವಿಸಲೇಬೇಕಾದ ಸೃಜನಶೀಲ ಬೇನೆ. ‘ಆಳದ ಅನುಭವವನ್ನು ಮಾತು ಕೈಹಿಡಿಯ ಬೇಕು, ಕಾವನ್ನು ಬೆಳಕಾಗಿಸಬೇಕು’ ನರಸಿಂಹಸ್ವಾಮಿಯವರ ಈ ಕಾವ್ಯದ ಬಗೆಗಿನ ವ್ಯಾಖ್ಯೆ ಸಫಲವಾಗಿದೆಯೇ ಎಂಬ ಆತ್ಮವಿಮರ್ಶೆ ಪ್ರತೀಯುಗದ ಕವಿಯದ್ದೂ ಹೌದು. ಮಂಜುನಾಥ ‘ಒಳದನಿ’ಯ ಮಾತುಗಳು ‘ಹೆಪ್ಪುಗಟ್ಟಿದ ಮೌನ’ವನ್ನು ಮುರಿದು, ಒಳಗಿನ ಕತ್ತಲನ್ನು ದಾಟಿಕೊಂಡು, ಹೊರಗಣ ಬೆಳಕಿಗೆ ಬಂದು ಮುಖ ತೀಡಿಕೊಳ್ಳುವ, ರೆಕ್ಕೆ ಜೋಡಿಸಿಕೊಳ್ಳುವ ‘ಭೃಂಗದ ಬೆನ್ನೇರಿ ಬರುವ ಸಹಜ ಪ್ರಾಸವನ್ನು’ ಪಡೆದುಕೊಳ್ಳುವ ‘ಚಂಚರೀಕ ಯಾನ’ (ಕುವೆಂಪು) ಮತ್ತು ‘ನಾದದ ನವನೀತ’ವನ್ನು ತನ್ನ ಕವಿತೆಯು ಒಳಗೊಳ್ಳುವ ಹಾಗೆ ನೋಡಿಕೊಳ್ಳುವ ಅಡಿಗರು ಹೇಳುವ ಕವಿಯ ಪಾಲಿನ ಅಸಲು ಕಸುಬುಗಾರಿಕೆಯ ಪ್ರಾಯೋಗಿಕ ಪರೀಕ್ಷೆಯ ಮಜಲುಗಳನ್ನು ಈ ಮೊದಲೆರಡು ಸಂಕಲನಗಳಲ್ಲಿ ಕಾಣಬಹುದಾಗಿದೆ.

ಇವರ ಪ್ರಾರಂಭದಿಂದ ಈವರೆಗಿನ ಕವಿತೆಗಳ ಯಾನದ ಉದ್ದಕ್ಕೂ ತನ್ನ ಬಾಲ್ಯದ ಗ್ರಾಮೀಣ ಪರಿಸರ ಹಾಗೂ ತನ್ನ ಸದ್ಯದ ಬದುಕು ಕಟ್ಟಿಕೊಂಡ ನಗರ ಜೀವನದ ಅನುಭವಗಳ ಮುಖಾಮುಖಿ ಕಾಣಸಿಗುತ್ತದೆ. ಮೊದಲ ಸಂಕಲನದ ಬಾಲ್ಯದ ನೆನಪು, ಗೆಳೆಯರ ಬಳಗ, ಐವತ್ತಕ್ಕೆ ನೂರೊಂದು ಗುರಿಯ ವರೆಗೆ ತನ್ನ ‘ಭೂತ’ವನ್ನು ವರ್ತಮಾನದ ಬೆಳಕಿನಲ್ಲಿ ತಡವಿನೋಡಿಕೊಳ್ಳುವ ಪ್ರಯತ್ನ ಕಾಣುತ್ತದೆ. ಈ ಭೂತವನ್ನು ವರ್ತಮಾನಕ್ಕೆ ಒಗ್ಗಿಸುವಾಗಿನ ಕವಿಯ ಮುಂದಿನ ಸವಾಲು ಎಂದರೆ ಭೂತದ ಪ್ರಶಂಸೆ, ವರ್ತಮಾನದ ತೆಗಳಿಕೆಯ ಚರ್ವಿತಚರ್ವಣದ ಪರಂಪರೆಯನ್ನು ಬಿಟ್ಟು, ವಾಸ್ತವಿಕ ನೆಲೆಯಲ್ಲಿ ಅದನ್ನು ಒಪ್ಪಿಕೊಂಡೇ ಸಾಗುವ ಮನಸ್ಥಿತಿ ಬಹುಮುಖ್ಯವಾದುದು. ಈ ನೆಲೆಯಲ್ಲಿ ಈ ಕವಿ ತನ್ನ ಭೂತದ ಚರಿತ್ರೆಯನ್ನು ತನ್ನ, ಅವ್ವ, ಅಜ್ಜಿ, ತಂದೆ, ತಾತಂದಿರ ಮೂಲಕ ಅಂದಿನ ಅವರ ಮೌಲ್ಯ ಪ್ರಜ್ಞೆಯನ್ನು ಸದ್ಯದ ಸನ್ನಿವೇಶದೊಂದಿಗೆ ತಾಳೆಹಾಕುವ ಮೂಲಕ ಪರಂಪರೆಯ ವಾರಸುದಾರಿಕೆ ವಾಸ್ತವವನ್ನು ಅಲ್ಲಗಳೆಯದೆ, ಪರಂಪರೆಯನ್ನು ತನ್ನದಾಗಿಸಿಕೊಳ್ಳುವ ವಿವೇಚನೆಯೊಂದಿಗೆ ಮುಂದುವರಿಯುವುದನ್ನು ಕಾಣಬಹುದಾಗಿದೆ.

ಅವರದೇ ಹೊಸ ಕವಿತೆಯಲ್ಲಿ ಬರುವ ‘ಒಳಸುಳಿಗಳ-ಹೊರಭಾವಗಳ, ದುಗುಡದುಮ್ಮಾನಗಳ ಬಿಗುಮಾನಗಳನ್ನು ಕಳಚಿ ಅಷ್ಟಾವಕ್ರ ಗೀತೆ’ಯ ಸಾಲುಗಳನ್ನು ಮಥಿಸಿ ಮಥಿಸಿ ಹೊರಹಾಕುವ ಈ ಪ್ರಯತ್ನದಲ್ಲಿ ತಮ್ಮ ಭೂತದ ಬಗೆಗಿನ ಪ್ರಶಂಸೆ, ವರ್ತಮಾನದ ಬಗೆಗಿನ ವರಾತಗಳು ನಿಚ್ಚಳವಾಗಿ ಕಾಣುತ್ತವೆ. ಅವರ ಅಜ್ಜನ ಬಗೆಗಿನ ಕವಿತೆಯಲ್ಲಿ ಅಜ್ಜನ ಮೂಲಕ ಅಪ್ಪನ ವ್ಯಕ್ತಿತ್ವದ ಮಾದರಿ ಹುಡುಕಿ ನಿರಾಸೆಗೊಳ್ಳುವ ನಿರೂಪಕ ಮೂರನೇ ತಲೆಮಾರಿನ ಮೊಮ್ಮಗ. ಅಡಿಗರ ‘ವರ್ಧಮಾನ’ ಕವಿತೆಯಲ್ಲಿ ತಲೆಮಾರುಗಳ ನಡುವಿನ ಅಂತರದ ಸಮಸ್ಯೆ ತಂದೆ ಮತ್ತು ಮಕ್ಕಳ ಮೂಲಕ ಸಂಬಂಧದ ತಿಕ್ಕಾಟದ ರೂಪದಲ್ಲಿ ಪಿತೃ-ಪಿತಾಮಹಾರಿಗೆ ಅನ್ನ ನೀರಿಡುವ ವಾರಸುದಾರರಿಲ್ಲದೆ ಹೋಗುವ ಗತಿಯ ಆತಂಕದಿಂದ ಪ್ರಾರಂಭವಾದರೆ, ಇವರ ಅಜ್ಜ ಕವಿತೆಯಲ್ಲಿ ಅಜ್ಜನ ಮಾದರಿಯಾದ ವ್ಯಕ್ತಿತ್ವ ಅಪ್ಪನಲ್ಲಿ ಕಾಣೆಯಾಗಿರುವ ಬಗ್ಗೆ ಕೊರಗುವ ಮೊಮ್ಮಗನ ಮುಖಾಂತರ ವ್ಯಕ್ತವಾಗುತ್ತದೆ.

ಮಂಜುನಾಥರ ಕವಿತೆಯ ಉದ್ದಕ್ಕೂ ಈ ಸಮಾಜವನ್ನು ರಕ್ಷಿಸಬೇಕಾದ ಖಾದಿ, ಕಾವಿ, ಕಾಕಿಗಳ ಬಗೆಗಿನ ಸಿಟ್ಟು ಮತ್ತೆ ಮತ್ತೆ ವ್ಯಕ್ತವಾಗುತ್ತದೆ. ಇದರ ಜೊತೆಗೆ ಸಮಾಜವನ್ನು ತಿದ್ದಬೇಕಾದ ಬುದ್ದಿಜೀವಿಗಳು ರಾಜಕಾರಣಿಗಳನ್ನೂ ಮೀರಿಸುವಷ್ಟು ಭ್ರಷ್ಟರಾಗಿರುವ ಬಗ್ಗೆಯೂ ಸಿಟ್ಟಿದೆ. ವ್ಯವಸ್ಥೆಯ ಬಗೆಗಿನ ಸಿಟ್ಟನ್ನು ವ್ಯಕ್ತಪಡಿಸುವ ಸಂದರ್ಭದ ಇವರ ಭಾಷೆ ಕಿಡಿಕಾರುವ ಬೆಂಕಿ ಉಂಡೆಯಾಗುತ್ತದೆ. ಬಂಡಾಯದ ಬರಗೂರು ಹಾಗೂ ಸಿದ್ಧಲಿಂಗಯ್ಯನವರು ಬಳಸುವ ಪ್ರತಿಮಾತ್ಮಕತೆ ಸಾಧ್ಯವಾಗದಿದ್ದರೂ ಅವರ ಕಾವ್ಯದ ಪ್ರೇರಣೆ ಇವರ ಬಂಡಾಯ ಕವಿತೆಗಳಲ್ಲಿ ಕಂಡುಬರುತ್ತದೆ.

ಕನ್ನಡ ಕಾವ್ಯ ಪರಂಪರೆಯನ್ನು ಸಾಹಿತ್ಯದ ವಿದ್ಯಾರ್ಥಿಯಾಗಿ ಹಾಗೂ ಕವಿಯಾಗಿ ಆರ್ಜಿಸಿಕೊಂಡದ್ದರ ಫಲವೆಂಬಂತೆ ಇವರ ಕವಿತೆಗಳನ್ನು ಪರಿಭಾವಿಸುವಾಗ ಕನ್ನಡದ ಹಲವು ಹಿರಿಯ ಕವಿಗಳ ಪ್ರೇರಣೆ-ಪ್ರಭಾವಗಳು ಸಹಜವಾಗಿಯೇ ಕಾಣಸಿಗುವುದು ಸಂತಸದ ಸಂಗತಿ. ಇವರ ‘ಗೆಳೆಯರ ಬಳಗ’ ಕವಿತೆಯನ್ನು ಓದುವಾಗ ನರಸಿಂಹಸ್ವಾಮಿಯವರ ‘ಕೊನೆಯ ಬೆಂಚಿನ ಹುಡುಗರು’ ಕವಿತೆ, ‘ಅವ್ವನ ತಾಕತ್ತು’ ಕವಿತೆಯನ್ನು ಓದುವಾಗ ಎಲ್. ಹನುಮಂತಯ್ಯ ನವರ ‘ಅವ್ವ’ ಕವಿತೆ, ‘ಹಗಲುಗನಸು’ ಓದುವಾಗ ನರಸಿಂಹಸ್ವಾಮಿಯವರ ‘ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು’ ಸಾಲುಗಳು, ಪತ್ನಿ ಜೊತೆ ಇರುವಾಗಲೂ ಹಗಲು ಕನಸಿನ ಬೆನ್ನೇರಿ ಅಲೌಕಿಕ ಕನ್ಯೆಯೊಬ್ಬಳ ಬಗೆಗಿನ ಸುಪ್ತ ಮನಸಿನ ಹಂಬಲ ಅಕ್ಕಮಹಾದೇವಿಯು ಹಂಬಲಿಸುವ ಅಲೌಕಿಕ ಪತಿಯಾದ ಚನ್ನಮಲ್ಲಿಕಾರ್ಜುನನಿಗಾಗಿ ಹಂಬಲಿಸಿ ಕನಸಿಲಿ ಮಿಕ್ಕುಮೀರಿ ಹೋಗುವ ಅವನ ಬೆಂಬಿಡಿದು ಕೈಹಿಡಿಯುವ ಪರಿ, ಕಂಬಾರರ ಬಗೆಗಿನ, ಕಾರಂತರ ಬಗೆಗಿನ, ಕುವೆಂಪು ಅವರ ಬಗೆಗಿನ ಕವಿತೆಗಳು ಸಾಹಿತ್ಯದ ಜೊತೆಗಿನ ಮೇಷ್ಟ್ರಗಿರಿ ಮತ್ತು ಕವಿಯಾಗಿ ಕಾವ್ಯಪರಂಪರೆಯೊಂದಿಗೆ ಸತತವಾಗಿ ನಡೆಸಿದ ಅನುಸಂಧಾನದ ಫಲಶೃತಿ ಎಂಬುದನ್ನು ಸಾಕ್ಷೀಕರಿಸುತ್ತವೆ.

ಕವಿತೆಯ ವಸ್ತು, ಆಶಯಗಳನ್ನು ಕಾವ್ಯ ಪರಂಪರೆಯಿಂದ ಎರವಲಾಗಿ ಪಡೆದು ಮರುಸೃಷ್ಟಿಗೆ ಇಳಿಯುವುದು ಪ್ರತಿಯೊಬ್ಬ ತನ್ನತನದ ವ್ಯಕ್ತಿವಿಶಿಷ್ಟತೆಯನ್ನು ಸಾಬೀತುಪಡಿಸಬಯಸುವ ಕವಿಯ ಮುಂದಿರುವ ಸವಾಲು, ತನ್ನ ಪರಂಪರೆಗಿಂತ ಭಿನ್ನವಾದ ತನ್ನ ‘ನುಡಿಯೊಳೆ’ ಬಣ್ಣಿಸುವ ಮಾತನ್ನು ಶಬ್ದಾರ್ಥಗಳ ರೂಪಕ ಪ್ರತಿಮೆಗಳನ್ನು ಠಂಕಿಸುವ ನುಡಿನಿಪುಣತೆಯನ್ನು ಮಂಜುನಾಥ ಅವರು ಸಾಧಿಸುವ ಗಂಭೀರಯತ್ನದ ಅಗ್ನಿದಿವ್ಯವನ್ನು ಅವರಿನ್ನೂ ಹಾಯಲೇಬೇಕಿದೆ ಎಂಬುದನ್ನು ಅವರ ಕಾವ್ಯದ ಶರೀರವನ್ನು ಗಮನಿಸಿದರೆ ನಿಚ್ಚಳವಾಗಿ ಗೋಚರಿಸುತ್ತದೆ. ಇದನ್ನು ಸಾಧಿಸಲು ‘ಆಳಕ್ಕೆ ಗುದ್ದಲಿಯೊತ್ತಿ ಕುಕ್ಕಿ’ ಗೆರೆಮಿರಿವ ಚಿನ್ನದ ಅದಿರನ್ನು ಸೋಸುವ ಅಸಲು ಕಸುಬುಗಾರಿಕೆ ಮತ್ತು ತನ್ನಿಷ್ಟದೈವದ ಮೂರ್ತಿಗಳನ್ನು ಕಾವ್ಯಶಿಲ್ಪದಲ್ಲಿ ಎರಕ ಹೊಯ್ದುಕೊಳ್ಳುವ ರಸವಿದ್ಯೆಯನ್ನು ಮಂಜುನಾಥ ಅವರು ಸಾಧಿಸಬೇಕಾದ ಹಾದಿಯಲ್ಲಿ ಇದ್ದಾರೆ ಎನ್ನಬೇಕೆ ಹೊರತು ಸಾಧಿಸಿಬಿಟ್ಟಿದ್ದಾರೆ ಎನ್ನುವ ಹುಸಿ ಹೊಗಳಿಕೆಯ ಆತ್ಮಘಾತುಕದ ಹುಚ್ಚುಬುಡ್ಡೆಯನ್ನು ಹಾರಿಸಲಾರೆ.

ಹೆಣ್ಣುಮಕ್ಕಳ ಬಗೆಗಿನ ಅಪಾರ ಗೌರವ ಮತ್ತು ಕಾಳಜಿ ಇರುವ ಹೆಂಗರುಳಿನ ಈ ಕವಿ ತನ್ನ ತಾಯಿಯ ಕಷ್ಟಸಹಿಷ್ಣುತೆ, ಅಂತಃಕರಣ, ತ್ಯಾಗಗಳ ಬಗೆಗೆ ಅನ್ಯಾದೃಶ್ಯವಾಗಿ ಬರೆಯಬಲ್ಲರು. ತಾಯಿ ಹಾಗೂ ಜಗದ ತಾಯಂದಿರನ್ನು ನೆನಪಿಸುವ ನಾಲೈದು ಕವಿತೆಗಳು ಇಲ್ಲಿವೆ. ತನ್ನ ಮಡದಿ ಹಾಗೂ ಕಾವ್ಯಕನ್ನಿಕೆಯ ಬಗ್ಗೆ ಬರೆಯುವಾಗಲೂ, ಪುರುಷಪ್ರಧಾನ ಸಮಾಜದ ಕಾಮಲೋಲುಪತೆಗೆ ಸಿಕ್ಕಿ ನಲುಗಿದ ಮಹಿಳೆಯರ ಬಗ್ಗೆ ಬರೆಯುವಾಗ- ಅವರ ವಿಮುಕ್ತಿಯ ಹೊರದಾರಿಗಳ ಬಗ್ಗೆ ಅತ್ಯಂತ ಅಂತಃಕರಣದಿಂದ ಬರೆಯಬಲ್ಲ ಈ ಕವಿಗೆ-

ಈ ಸಮಾಜದ ಮುಗಿವಿಲ್ಲದ ನೋವಿಗೆ, ಹಿಂಸೆಗೆ ಬುದ್ಧನ ಕಾರುಣ್ಯ, ಬಸವಣ್ಣನ ಜೀವದಯೆ, ಕುವೆಂಪು ಅವರ ವೈಚಾರಿಕ, ವೈಜ್ಞಾನಿಕ ಮನೋಭಾವಗಳೆ ಈ ಪಿಡುಗುಗಳನ್ನು ನಿವಾರಿಸುವ ದಿವ್ಯ ಔಷಧಿ ಎಂಬುದು ಇವರ ಬಗ್ಗೆ ಬರೆದ ಕವಿತೆಗಳಿಂದ ಗೋಚರಿಸುತ್ತದೆ.

ಧರ್ಮದ ಹೆಸರಲ್ಲಿ, ದೇವರ ಹೆಸರಲ್ಲಿ ನಡೆಯುವ ನಕಲಿಯ ಭಕ್ತಿಯನ್ನು ಕಂಡು ಅಸಹನೆಗೊಳ್ಳುವ ಪರಿಯನ್ನು ಹೂವದು ಯಾವುದು? ಕವಿತೆಯಲ್ಲಿ ಕಾಣಬಹುದು. ಹೆತ್ತಮ್ಮನ ಕಣ್ಣೀರಧಾರೆ ಕವಿತೆಯಲ್ಲೂ ಇದು ವ್ಯಕ್ತವಾಗಿದೆ.

ಧರ್ಮ, ಜಾತಿ, ವ್ಯಕ್ತಿಗಳಿಗೊಂದೊಂದು ದೈವಗಳ ಸೃಷ್ಟಿಸಿ, ದೆವ್ವಗಳಿಗೂ ವೇದಿಕೆ ಸೃಷ್ಟಿಸಿ ಆಯಿತು ಕೈಕಾಲುಗಳಿಗೆ ಮೊಳೆ ಜಡಿದು ಶಿಲುಬೆ ಮಾಡಿಯಾಯಿತು.

ನಕ್ಷತ್ರ ಸೇರಿಸಿ ಧರ್ಮ ಕಟ್ಟಿಯಾಯಿತು ಅವತಾರಗಳ ಹೆಸರಲ್ಲಿ ಯುದ್ಧ ಮಾಡಿ ಭೂಮಿಯನ್ನೇ ರಣರಂಗ ಮಾಡಿಯಾಯಿತು

(ಹೆತ್ತಮ್ಮನ ಕಣ್ಣೀರಧಾರೆ)

ಕಳ್ಳಿಯ ಹಾಲಲ್ಲಿ ಕೆನೆತೆಗೆದು, ನವನೀತವ ಮಾಡಲೊರಟಿರುವ ಆಧುನಿಕ ಯುಗದ ಪ್ರಕೃತಿಯ ವಿರುದ್ಧದ ನಡೆ, ಕೃತಕ ಬುದ್ದಿಮತ್ತೆಯ ಅವಾಂತರ, ನಗರ ಜೀವನದ ಸಂಕಟಗಳು, ವಲಸಿಗರ ಸಮಸ್ಯೆ, ಕನ್ನಡ ನಾಡು-ನುಡಿಯ ಗತವೈಭವದ ಆರಾಧನೆ, ಅನ್ಯಭಾಷಿಕರಿಂದ ಕನ್ನಡಕ್ಕೆ ಬಂದೊದಗಿರುವ ದುರ್ಗತಿ, ಪದವೀಧರ ಕನ್ನಡ ನಿರುದ್ಯೋಗಿಗಳ ಸಮಸ್ಯೆ, ಜಾಗತಿಕ ತಾಪಮಾನದ ಸಮಸ್ಯೆ, ಸುನಾಮಿ, ಭೂಮಿ ಬಂಜೆತನ ಇವುಗಳ ಬಗೆಗೆ ಸಮಕಾಲೀನ ತಲ್ಲಣಗಳ ಬಗೆಗಿನ ಆತಂಕಗಳನ್ನು ಗಮನಿಸಿದರೆ ಬೇಂದ್ರೆಯವರ ‘ಚಿಗರಿಗಂಗಳ ಚೆಲುವೆ’ ಎಂಬ ನೆಲದಾಯಿಯ ಮೇಲಿನ ಮನುಷ್ಯನ ಆಕ್ರಮಣದ ಪರಿಪರಿಯಾದ ಚಿತ್ರಣವನ್ನು ಅತ್ಯಂತ ರೂಪಾತ್ಮಕವಾಗಿ ಬೇಂದ್ರೆಯವರು ಸಾಧಿಸಿದ ಸಫಲತೆಯನ್ನು ಮಂಜುನಾಥ ಅವರು ಸತತ ಕಾವ್ಯಾಭ್ಯಾಸ ಹಾಗೂ ಅಧ್ಯಯನಗಳಿಂದ ಸಾಧಿಸಬೇಕು-ಸಾಧಿಸಬಲ್ಲರು ಎಂಬ ನಿರೀಕ್ಷೆ ಮತ್ತು ಭರವಸೆಗಳನ್ನು ಅವರ ಕವಿತೆಗಳು ಹುಟ್ಟಿಸುತ್ತವೆ.

ತಮ್ಮ ಮಗಳು ಸು-ನಿಧಿಯ ಬಗ್ಗೆ ಬರೆದ ಸಾಲುಗಳನ್ನು ಓದುವಾಗ ಥಟ್ಟನೆ ನರಸಿಂಹಸ್ವಾಮಿಯವರ ತುಂಗಭದ್ರೆ ‘ಹೊಳೆಯಲ್ಲಿ ವರುಷದ ಮಗಳು’- ಎಂಬ ಸಾಲುಗಳ ಮೂಲಕ ತಂದೆ ತನದ, ತಾಯ್ತನದ ಆರ್ದತೆ ಗಂಡ ಹೆಂಡತಿಯರ ಎರಡು ದಡಗಳ ನಡುವಿನ ಬೆಸುಗೆಯಾಗುವ ಮಗಳ ಚಿತ್ರವನ್ನು ನೆನಪಿಸುವ ಮಂಜುನಾಥ ಅವರ ಕವಿತೆ ಮುಂಬರುವ ದಿನಗಳಲ್ಲಿ ಹೊಸ ರೂಪಕ ಪ್ರತಿಮೆಗಳ ಕಾವ್ಯ ಭಾಷೆಯೊಂದಿಗೆ ಮತ್ತೂ ಹೊಸಬಗೆಯಲ್ಲಿ ಅವತರಿಸಲಿ, ತಮ್ಮ ಬದುಕದು ಚೆನ್ನ ಕವಿತೆಯ ತನ್ನ ದಾಂಪತ್ಯದ ಸಖ್ಯದಲ್ಲಿ ಸಖಿಯಾದ ಬಾಳಸಂಗಾತಿಗೆ ಹೇಳುವ ಮಾತುಗಳ ಮೂಲಕ ಬೇಂದ್ರೆಯವರು ತಮ್ಮ ‘ಮನದನ್ನೆ’ ಕವಿತೆಯಲ್ಲಿ ಆಶಿಸುವ ‘ಕೂಡಿರಲಿ ಬಾಳು ಹಿಡಿಗಾಳಿನಂತೆ’ಯೂ ವಿರಸ ಮರಣವನ್ನು ದೂಡಿ, ಸರಸ ಜನ್ಯವಾದ ದಾಂಪತ್ಯಗೀತೆ ಹಾಡಿಕೊಳ್ಳುವ ಸಂಸಾರ ಸಾರೋದಯನಾದ ಈ ಕವಿ ತನ್ನ ಕಾವ್ಯ ಸಂಸಾರದಲ್ಲಿ ನವರಸಗಳ ಹಾಯಿದೋಣಿಯಲ್ಲಿ ರಸಾನಂದ ಸಾಗರದಲ್ಲಿ ಸಹೃದಯರನ್ನು ತೇಲಿಸುವಂತಹ ಕಾವ್ಯ ಕೃತಿಗಳ ರಚನೆಯನ್ನು ಮಾಡುತ್ತಿರಲಿ.

ಕನ್ನಡ ಪರಂಪರೆಯ ಸದೃಢವಾರಸುದಾರಿಕೆ ಅವರ ಕಾವ್ಯದಿಂದಲೇ ಪ್ರಾಪ್ತವಾಗುವಂತಹ ಶ್ರದ್ಧೆಯ ಕಾವ್ಯಕಸುಬನ್ನು ಮಾಡುತ್ತಿರಲಿ ಎಂದು ಹಾರೈಸುವೆ ಪ್ರೀತಿಯಿಂದ.

– ಪ್ರೊ. ಟಿ. ಯಲ್ಲಪ್ಪ, ಸಾಹಿತಿಗಳು ಮತ್ತು ಕನ್ನಡ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಪುರಂ, ಬೆಂಗಳೂರು

Leave a Reply