‘ನಕ್ಷತ್ರಕ್ಕಂಟಿದ ನೆತ್ತರು’ ಇದು ಗೋವಿಂದ ರಾಜು ಎಂ.ಕಲ್ಲೂರು ಎಂಬ ಪ್ರತಿಭಾವಂತ ಕಥೆಗಾರನ ಮೊದಲ ಕಥಾಸಂಕಲನ. ತಮ್ಮ ಚೊಚ್ಚಲ ಕಥಾಸಂಕಲನಕ್ಕೇ ೨೦೨೩ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವೀ.ಚಿ ಸಾಹಿತ್ಯ ಪ್ರಶಸ್ತಿ ಹಾಗೂ ಮತ್ತಿತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಈ ಕಥಾಸಂಕಲನ ತನ್ನದಾಗಿಸಿಕೊಂಡಿದೆ. ಈ ಸಂಕಲನದಲ್ಲಿ ಎಂಟು ಕಥೆಗಳಿದ್ದು ಈ ಎಂಟೂ ಕಥೆಗಳೂ ತಮ್ಮ ವಸ್ತು, ಅಭಿವ್ಯಕ್ತಿ, ಆಶಯ ಹಾಗೂ ಆಕೃತಿಗಳ ದೃಷ್ಟಿಯಿಂದ ಹಾಗೂ ಕಥೆಗಾರನ ವ್ಯಕ್ತಿವಿಶಿಷ್ಟತೆಗಳಿಂದ ಗಮನ ಸೆಳೆಯುತ್ತವೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಕಥೆಗಾರ ತಮ್ಮ ಕಥೆಗಳಲ್ಲಿ ತಮ್ಮ ಸಮಕಾಲೀನ ವಾಸ್ತವಗಳನ್ನು ಎಲ್ಲೂ ವಾಚ್ಯವಾಗಿಸದೆ, ಭಾವಾವೇಶಕ್ಕೆ ಒಳಗಾಗದೆ ನಿರ್ಲಿಪ್ತತೆ ಹಾಗೂ ಸನ್ನಿವೇಶ ಹಾಗೂ ಪಾತ್ರಗಳೊಂದಿಗೆ ಕಾಯ್ದುಕೊಳ್ಳುವ ಮಾನಸಿಕ ಅಂತರ, ವಿವೇಕ, ಮತ್ತು ಕವಿಯೊಬ್ಬ ತನ್ನ ಕವಿತೆಯಲ್ಲಿ ಬಳಸುವ ರೂಪಕ ಮತ್ತು ಪ್ರತಿಮಾತ್ಮವಾದ ಭಾಷೆಯ ಕಸುಬುಗಾರಿಕೆಯನ್ನು ಇಲ್ಲಿನ ಕಥೆಗಳಲ್ಲೂ ಕೂಡಾ (ಮೂಲತಃ ಒಳ್ಳೆಯ ಕವಿಯೂ ಆಗಿರುವ ಇವರು) ಕಾಯ್ದುಕೊಂಡಿರುವುದು ಇಲ್ಲಿನ ಕಥೆಗಳ ಕಲಾತ್ಮಕವಾದ ಅಭಿವ್ಯಕ್ತಿಯಲ್ಲಿನ ಮತ್ತೊಂದು ವೈಶಿಷ್ಟ್ಯ.
ಈ ಕಥೆಗಾರ ತನ್ನ ಬೆನ್ನಿಗಿರುವ ಕಥನ ಪರಂಪರೆಯ ಜಾಡಲ್ಲೇ ನಡೆದೂ ಕೂಡ, ತನ್ನ ಕಾಲದ ತವಕ – ತಲ್ಲಣಗಳನ್ನು ಪರಿಣಾಮಕಾರಿಯಾಗಿ ಸಮಕಾಲೀನಗೊಳಿಸಲು ಇವರು ಬಳಸುವ ಪೌರಾಣಿಕ ಮತ್ತು ಜನಪದೀಯ ರೂಪಕಗಳು ಮತ್ತು ಕಥನ ಮಾದರಿಗಳು ತನ್ನ ಓರಗೆಯ ಕಥೆಗಾರರಿಗಿಂತ ಭಿನ್ನವಾದದ್ದು ಮತ್ತು ವಿಶಿಷ್ಟವಾದದ್ದು ಎಂಬುದರಿಂದಲೂ ಈ ಸಂಕಲನ ಅನನ್ಯವಾದದ್ದು.

ಸ್ಟೀರಿಯೋ ಟೈಪ್ಡ್ ಆದ ಅಥವಾ ಮಾನೊಲಿಥಿಕಲ್ ಆದ ಪುರಾಣದ ಕಂಟೆಂಟ್ ಮತ್ತು ನರೇಟಿವ್ ಮಾದರಿಗಳನ್ನು ಮುರಿದು ಕಟ್ಟುವ ಮತ್ತು ಅವನ್ನು ರೀಸೈಕಲಿಂಗ್ ಮಾಡುವ ಕಸುಬುಗಾರಿಕೆ ಮತ್ತು ಸಮಕಾಲೀನ ವಾಸ್ತವಗಳಿಗೆ ಒಗ್ಗಿಸುವ ಪ್ರತಿಭೆಯನ್ನು ಗೋವಿಂದರಾಜು ಅವರ ‘ಮೆಚ್ಚನಾ ಪರಮಾತ್ಮನು’ ಕಥೆಯ ಎರಡನೇ ತಲೆಮಾರಿನ ಪುಣ್ಯಕೋಟಿಯ ಮಗಳಾದ ‘ಪುಣ್ಯವತಿ’ ಮತ್ತು ‘ಅರ್ಬುದ’ನೆಂಬ ವ್ಯಾಘ್ರನ ಮಗನ ಮುಖಾಮುಖಿಯ ಸನ್ನಿವೇಶಗಳೇ ಸಾಕ್ಷಿಯಾಗಿವೆ. ಜೊತೆಗೆ ಸ್ತ್ರೀ ಅಸ್ಮಿತೆಯನ್ನು ಮರುಸ್ಥಾಪಿಸುವ “ಎಷ್ಟಾದರೂ ನಾನು ಹೆಣ್ಣಲ್ಲವೆ? ನನ್ನ ದೇಹ, ನನ್ನ ಹಕ್ಕು ಎಂದು ಗಟ್ಟಿಯಾಗಿ ಹೇಳಲೇಬೇಕು” ಎಂಬ ಪುಣ್ಯಕೋಟಿಯ ಮಾತೇ ಇದಕ್ಕೆ ಸಾಕ್ಷಿ. ‘ಮಡಿಲೊಳಗಿನ ಕಳೇಬರವು’ ಕಥೆಯಲ್ಲಿ ತನ್ನ ಶೀಲವನ್ನು ಶಂಕಿಸುವ ಗಂಡ ನೀಲಯ್ಯನಿಗೆ ‘ನಾನು ಕುಲಟೆಯಲ್ಲ ಎಂದು ಧೈರ್ಯವಾಗಿ ಕೂಗಿ ಹೇಳುವ ‘ಸಂಕವ್ವ’, ‘ಒಂಟಿ ನಕ್ಷತ್ರ ಗುಳೇ ಹೋದ ದಿವಸ’ ಕಥೆಯ ಗುರಪ್ಪಗೌಡನ ಪತ್ನಿ, ಇಂತಹ ಪಾತ್ರಗಳ ಮುಖಾಂತರ ಈ ಸಂಕಲನದ ಕಥೆಗಾರ ಸ್ತ್ರೀ ಅಸ್ಮಿತೆಯ ಹಲವು ಮಾದರಿಗಳನ್ನು ಚಿತ್ರಿಸಿರುವುದು ಅತ್ಯಂತ ಶ್ಲಾಘನೀಯವಾದ ಸಂಗತಿ.

ಆಹಾರ ರಾಜಕಾರಣ, ಗೋ ರಾಜಕಾರಣ, ಜಾತಿ ರಾಜಕಾರಣ ಮತ್ತು ಧರ್ಮರಾಜಕಾರಣಗಳ ಸಲುವಾಗಿ ಹಲವು ಸಮಕಾಲೀನ ಕೇಡಿನ ಸೂತಕದ ಛಾಯೆಯನ್ನು ಸದಾ ತಮ್ಮ ಒಡಲಲ್ಲೇ ಇಟ್ಟುಕೊಂಡಿರುವ ಇಲ್ಲಿನ ಕಥೆಗಳು ಆಧುನಿಕ ಸಮಾಜದ ಸ್ವಾಸ್ಥ್ಯವನ್ನು ಕದಡಿರುವ ಸಂಗತಿಗಳಿಗೆ ಮದ್ದರೆಯುವ ಕೆಲಸವನ್ನೂ ಮಾಡುತ್ತವೆ. ಉದಾ: ‘ಒಂಟಿ ನಕ್ಷತ್ರ ಗುಳೇ ಹೋದ ದಿವಸ’ ಕಥೆಯಲ್ಲಿ ಕಥಾ ನಾಯಕ ‘ಪಿಂಗಾಣಿ’ ಆಡುವ ‘ನಿತ್ಯ ಕರುವನ್ನು ಅಡ್ಡಾಡಿಸಿ, ಮೇಯಿಸಿ, ದೇವರುಗಳನ್ನು ಹೊರಗಿಡುವುದಕ್ಕಿಂತ, ಅವುಗಳನ್ನು ಅನ್ನವಾಗಿಸಿ ತಿಂದು, ದೇವಾನುದೇವತೆಗಳನ್ನು ತನ್ನ ದೇಹದೊಳಕ್ಕೆ ಇಳಿಸಿಕೊಂಡು ತಾನೇ ದೇವರಾಗುವುದು ಉತ್ತಮ” ಎಂಬ ತಾತ್ವಿಕತೆ, ದೇವರಿಗೆ ಬಿಟ್ಟ ಬಸವನನ್ನು ಕದ್ದು ಬಾಡು ಮಾಡಿದ್ದಾರೆ ಎಂಬ ಆರೋಪವನ್ನು ಎದುರಿಸಿದ ಗಡ್ಡದಯ್ಯನ ಮುಖಾಂತರ ಅನ್ನರಾಜಕಾರಣದ ಹೆಸರಿನಲ್ಲಿ ನಡೆಯುವ ಅನ್ಯಾಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಈ ಕಥೆಗಾರ ಪರಿಣಾಮಕಾರಿಯಾಗಿ ಸಾಧಿಸಿದ್ದಾರೆ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನಾಗಚಂದ್ರ, ಪಂಪ, ರನ್ನ, ಕುವೆಂಪು ತನಕ ಪಾಲಿಸುತ್ತಾ ಬಂದ ಖಳನಾಯಕನಲ್ಲಿನ ಉದಾತ್ತೀಕರಣವನ್ನು ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾದ ಗೋವಿಂದರಾಜೂ ಕೂಡಾ ಇಲ್ಲಿನ ‘ಮೆಚ್ಚನಾ ಪರಮಾತ್ಮನು ‘ ಕಥೆಯ ಪುಣ್ಯಕೋಟಿ ಮತ್ತು ಅರ್ಬುದಗಳ ಭೇಟಿಯ ಸಂದರ್ಭದಲ್ಲಿ, ಪುಣ್ಯಕೋಟಿ ಅರ್ಬುದನಿಗೆ ಹೇಳುವ “ನಾ ಕಂಡ ದೇವನೊಬ್ಬ ಇದ್ದರೆ ಅದು ನೀನೊಬ್ಬನೇ! ಹಸಿದ ವೇಳೆಯಲ್ಲೂ ಸಿಕ್ಕ ಅನ್ನವನ್ನು ಬಿಟ್ಟುಕೊಟ್ಟ ಪರಮ ವೈರಾಗ್ಯಮೂರ್ತಿ ನೀನು, ನನ್ನ ಕಂದನ ಪಾಲಿಗೆ ತಾಯಿಯನ್ನು ತಿರುಗಿಸಿ ಕೊಟ್ಟ ನೀನು ಮಾತ್ರ ನನ್ನ ಪಾಲಿನ ನಿಜದೈವ. ಗೋವೊಂದೇ ನಿಜದೈವ ಎಂಬ ಮೂಢ ನಂಬಿಕೆಯಿಂದ ಹೊರ ಬಾ ಅರ್ಬುದ” ಎನ್ನುವ ಮಾತುಗಳಲ್ಲಿ, ಅರ್ಬುದದ ಬಗೆಗಿರುವ ಸ್ಥಾಪಿತ ದೃಷ್ಟಿಕೋನದ ಲೇಬಲನ್ನು ಕಳಚಿ ಅದರ ಔದಾರ್ಯ ವನ್ನು ಉದಾತ್ತೀಕರಿಸುವ ಕೆಲಸವನ್ನು ಈ ಕಥೆಗಾರ ಮಾಡಿರುವುದು ಶ್ಲಾಘನೀಯ.
ಹೀಗೆ ಈ ಕಥೆಗಾರ ತಮ್ಮ ಚೊಚ್ಚಲ ಸಂಕಲನದಲ್ಲೇ ಪ್ರಯೋಗಶೀಲತೆ, ವಸ್ತುವೈವಿಧ್ಯತೆ, ಪುನರ್ ನಿರ್ಮಾಣ, ಭೂತ- ವರ್ತಮಾನಗಳ ಮುಖಾಮುಖಿ, ಸ್ತ್ರೀ ಸಂವೇದನೆಯ ಅನನ್ಯತೆ, ಹೊಸ ಹೊಸ ರೂಪಕ ಮತ್ತು ಪ್ರತಿಮೆಗಳಿಂದ ಕೂಡಿದ ಕಾವ್ಯಾತ್ಮಕವಾದ ಭಾಷೆ, ವೈಚಾರಿಕತೆ, ತಳ ಸಮುದಾಯಗಳ ಪರವಾದ ಕಳಕಳಿ, ಇಂತಹ ಬಹುಮುಖಿಯಾದ ಆಯಾಮಗಳಿಂದ ಗಮನಾರ್ಹವಾದ ಈ ಕೃತಿ ಮತ್ತು ಈ ಕಥೆಗಾರ ಕನ್ನಡ ಕಥಾಕಣಜಕ್ಕೆ ಒದಗಲಿರುವ ಭರವಸೆಯ ಕಥೆಗಾರ ಎಂಬ ಆಶಾಭಾವನೆಯನ್ನು ಇಲ್ಲಿನ ಕಥೆಗಳು ಮೂಡಿಸುತ್ತವೆ ಎಂಬ ಕಾರಣಕ್ಕಾಗಿಯೇ ಈ ಕಥೆಗಾರನನ್ನು ನಾವು ಪ್ರೀತಿಯಿಂದ ಆಧರಿಸಿ ಓದಬೇಕಾಗಿದೆ.ಅಭಿನಂದಿಸಲೂ ಬೇಕಿದೆ.
– ಪ್ರೊ.ಟಿ.ಯಲ್ಲಪ್ಪ, ಪ್ರಾಧ್ಯಾಪಕರು ಹಾಗೂ ಕವಿ




One Response
ಮಾಲ್ಗುಡಿ ಎಕ್ಸ್‌ಪ್ರೆಸ್ ಪತ್ರಿಕೆಗೆ ನನ್ನ ಪುಸ್ತಕ ವಿಮರ್ಶೆ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು