ಕವಿಯಾಗಿ ಎಚ್ ಎಸ್ ವೆಂಕಟೇಶಮೂರ್ತಿ ಅವರು ಗಳಿಸಿದ ಖ್ಯಾತಿ ಕಾವ್ಯರಸಿಕರ ಪ್ರೀತಿ ಅಪಾರ

10 months ago

ಪ್ರೀತಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರ ಜನುಮ ದಿನಕ್ಕೆ ಅಂದು ಸಲ್ಲಿಸಿದ ನನ್ನ ಆ ನುಡಿಗೌರವವನ್ನೇ  ಅವರ ಅಗಲಿಕೆಯ ಈ ನಿರ್ವಾತದಲ್ಲಿ ಇಂದು ಚರಮಗೀತೆಯ ನುಡಿನಮನವನ್ನಾಗಿ  ಅರ್ಪಿಸಿರುವೆ.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದ ಅಪರೂಪದ ಕವಿ, ಕಥೆಗಾರ, ನಾಟಕಕಾರ, ಕಾದಂಬರಿಕಾರ, ಎಚ್.ಎಸ್.ವೆಂಕಟೇಶಮೂರ್ತಿ ಅವರು ಜನಿಸಿದ್ದು1944 ರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಎಂಬ ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಲ್ಲಿ. ಮೂವತ್ತು ವರ್ಷಗಳ ಕಾಲ ಗ್ರಾಮಜೀವನ ನಡೆಸಿ,1973 ರಲ್ಲಿ ಬೆಂಗಳೂರಿನ ಸೆಂಟ್ ಜೋಸೆಫ್ಸ್ ವಾಣಿಜ್ಯ  ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡು 27 ವರ್ಷಗಳ ಕಾಲ ಅಧ್ಯಾಪನ ವೃತ್ತಿಯನ್ನು ಕೈಗೊಂಡು 2000 ನೇ ಇಸವಿಯಲ್ಲಿ ನಿವೃತ್ತರಾದರು.

ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದ ಎಚ್.ಎಸ್ .ವಿ ಅವರ ಸೃಜನಶೀಲ ಪ್ರತಿಭೆ ಬಹುಮುಖಿಯಾದುದು. ಅದರ ಹಿಂದಿನ ಪ್ರಭಾವ ಪ್ರೇರಣೆಗಳಾಗಿ ಅವರು ಬಾಲ್ಯದಿಂದಲೂ ಕಂಡುಂಡ ಯಕ್ಷಗಾನ, ಬಯಲಾಟದಂತಹ ರಂಗಪ್ರದರ್ಶನಗಳು ಅವರನ್ನು ಗಾಢವಾಗಿ ಪ್ರಭಾವಿಸಿವೆ. ಬಾಲ್ಯದಲ್ಲೆ ತಮಗೊದಗಿ ಬಂದ ಕುಮಾರವ್ಯಾಸ, ಲಕ್ಷ್ಮೀಶ, ಪುರಂದರದಾಸ ಮೊದಲಾದವರ ಕೃತಿಗಳೊಂದಿಗಿನ ನಿಕಟ ಸಂಪರ್ಕ, ಮುಂದೆ ಕನ್ನಡ, ಸಂಸ್ಕೃತ, ಇಂಗ್ಲೀಷ್ ಸಾಹಿತ್ಯ ಪರಂಪರೆಗಳೊಂದಿಗೆ ನಡೆಸಿದ ಅಧ್ಯಯನ, ಅಧ್ಯಾಪನ, ಅನುಸಂಧಾನಗಳ ಫಲವಾಗಿ ಅವರಿಂದ ವೈವಿಧ್ಯಮಯ ಕೃತಿಗಳು ಹೊರಬಂದಿವೆ.

ಎಚ್ ಎಸ್.ವಿಯವರ ಕಾವ್ಯಪ್ರತಿಭೆ ಎಷ್ಟು ಪ್ರಜ್ವಲವಾದದ್ದೆಂದರೆ ಅದು ಅವರ ಉಳಿದೆಲ್ಲಾ ಬಹುಮುಖಿಯಾದ ಸಾಧನೆಗಳನ್ನು ಮಸುಕುಮಾಡುವಷ್ಟು. ಹಾಗಾಗಿಯೆ ಕವಿಯಾಗಿ ಗೀತರಚನಕಾರರಾಗಿ ಅವರನ್ನು ಸಾರಸ್ವತಲೋಕ ಗುರುತಿಸುವಷ್ಟು ಬೇರೆ ಕ್ಷೇತ್ರ ಹಾಗೂ ಪ್ರಕಾರಗಳಲ್ಲಿ ವ್ಯಕ್ತವಾದ ಅವರ ಪ್ರತಿಭಾವಿಲಾಸವನ್ನು ಗುರುತಿಸಲಾಗಲಿಲ್ಲವೆನ್ನಿಸುತ್ತದೆ. ಅವರು ಹೇಗೆ ಜನಪ್ರಿಯ ಹಾಗೂ ಜನಪ್ರೀತಿಯ ಕವಿಯೋ ಹಾಗೇ ಅವರು ವಿದ್ಯಾರ್ಥಿಪ್ರಿಯ ಕನ್ನಡ ಪ್ರಾಧ್ಯಾಪಕರೂ ಆಗಿದ್ದರು. ಸೆಂಟ್ ಜೋಸೆಫ್ಸ್ ಕಾಲೇಜಿನ ತಮ್ಮ 27 ವರ್ಷಗಳ ಪ್ರಾಧ್ಯಾಪಕ ವೃತ್ತಿಯಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಪ್ರೀತಿ, ಆಕರ್ಷಣೆ ಉಂಟಾಗುವಂತೆ ಬೋಧಿಸುತ್ತಿದ್ದಲ್ಲದೆ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅಂತರ ಕಾಲೇಜು ಸ್ಪರ್ಧೆಗಳಿಗೆ ಅವರನ್ನು ಸಜ್ಜುಗೊಳಿಸುತ್ತಿದ್ದರು. ಕಾಲೇಜಿನಲ್ಲಿ ಕನ್ನಡ ಸಂಘ ಕಟ್ಟಿ, ಪುಸ್ತಕ ಪ್ರಕಟಿಸಿದರು. ಇವರ ಗರಡಿಯಲ್ಲಿ ಪಳಗಿದ ನೂರಾರು ಶಿಷ್ಯರು ದೇಶ ವಿದೇಶಗಳಲ್ಲಿ ನೆಲೆಸಿ ವಿವಿಧ ರಂಗಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟರಾದ ನಮ್ಮ ಪ್ರಕಾಶ್ ರೈ ಕೂಡ ಒಬ್ಬರು. ತಮ್ಮ ಪ್ರತೀ ಹಂತದ ಸಾಧನೆಯ ಹಿಂದೆ ಎಚ್ಚೆಸ್ವಿ ಮೆಷ್ಟ್ರಿದ್ದಾರೆ ಎಂದು ಪ್ರಕಾಶ್ ರೈ ಸದಾ ಸ್ಮರಿಸುತ್ತಾರೆ.

ಪ್ರೀತಿಯ ಮೇಷ್ಟ್ರಾಗಿ ಎಚ್ಚೆಸ್ವಿ: ಎಚ್ಚೆಸ್ವಿ ಒಬ್ಬ ಮೇಷ್ಟ್ರಾಗಿ ಗಳಿಸಿದ ವಿದ್ಯಾರ್ಥಿ ಪ್ರೀತಿ ಮತ್ತು ಸಾರ್ಥಕತೆಗೆ ಅವರು 2000 ನೇ ಇಸವಿಯಲ್ಲಿ ವೃತ್ತಿ ಬದುಕಿನಿಂದ ನಿವೃತ್ತರಾದಾಗ ಅವರ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ  ತಮ್ಮ ನೆಚ್ಚಿನ ಗುರುವಿಗೆ ಗುರುಕಾಣಿಕೆಯಾಗಿ ಒಂದು ಲಕ್ಷ ರೂಪಾಯಿಗಳ ಉಡುಗೊರೆಯನ್ನು ನೀಡಿ ಗೌರವಿಸಿದ್ದು, ಅಭಿನಂದಿಸಿದ್ದೇ ಸಾಕ್ಷಿಯಾಗಿದೆ. ಎಚ್ಚೆಸ್ವಿ ಅದನ್ನು ಬಳಸಿದ ರೀತಿಯಂತೂ ಅವರಿಗೆ ಅವರ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿಯನ್ನು ಅಭಿವ್ಯಕ್ತಿ ಪಡಿಸಿದ ರೀತಿಗೆ ದ್ಯೋತಕವಾಗಿದೆ. ಆ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ ಅದರಿಂದ ಬರುವ ಬಡ್ಡಿಯ ಹಣದಲ್ಲಿ ಎಚ್ಚೆಸ್ವಿ ತಮ್ಮ ಹಳೆಯ ವಿದ್ಯಾರ್ಥಿಗಳು ಬರೆದ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. 2010 ರಲ್ಲಿ , ‘ಅಭ್ಯಾಸ’ ಎಂಬ ಬಳಗ ಕಟ್ಟಿದ ಇವರು ರಾಜಶೇಖರ ಮಳ್ಳೂರರ ಸಂಚಾಲಕತ್ವದಲ್ಲಿ ಪ್ರತೀ ತಿಂಗಳು ಅದರ ಸದಸ್ಯರಿಗೆ ಪಾಠ ಮಾಡುವ ಮಾಸ್ತರಿಕೆಯನ್ನು ಮುಂದುವರಿಸಿದ್ದಾರೆ.

ಕವಿಯಾಗಿ ಎಚ್ಚೆಸ್ವಿ: ಕವಿಯಾಗಿ ಎಚ್ಚೆಸ್ವಿ ಅವರು ಗಳಿಸಿದ ಖ್ಯಾತಿ ಕಾವ್ಯರಸಿಕರ ಪ್ರೀತಿ ಅಪಾರವಾದದ್ದು. 1968 ರಲ್ಲಿ ಪ್ರಕಟವಾದ ಅವರ ‘ ಪರಿವೃತ್ತ ‘ ಕವಿತಾ ಸಂಕಲನದಿಂದ ಹಿಡಿದು 2017 ರಲ್ಲಿ ಪ್ರಕಟವಾದ ‘ ಋಗ್ವೇದ ಸ್ಪುರಣ’ದವರೆಗೆ ಸುಮಾರು 35 ಕಾವ್ಯಕೃತಿಗಳನ್ನು ಎಚ್ಚೆಸ್ವಿ ಪ್ರಕಟಿಸದ್ದಾರೆ. ಇದರಲ್ಲಿ ಮಕ್ಕಳ ಕವಿತಾ ಸಂಕಲನಗಳು, ‘ ವಿಮಿಕ್ತಿ ‘ ಎಂಬ ಖಂಡಕಾವ್ಯವೂ ಸೇರಿದೆ. ‘ ಕುಮಾರವ್ಯಾಸ ಕಥಾಂತರ’  ‘ ಪಂಪನ ವಿಕ್ರಮಾರ್ಜುನ ವಿಜಯಕ್ಕೆ ತಾವೇ ಬರೆದ ತಿಳಿಗನ್ನಡ ಅವತರಣಿಕೆ, ಕಾಳಿದಾಸ ಕವಿಯ ‘ ‘ ಋತುಸಂಹಾರ’ವನ್ನು ಕುರಿತು ಮಾಡಿದ ಅನುವಾದ ಕೃತಿ ‘ಋತುವಿಲಾಸ ‘ ವಾಲ್ಮೀಕಿ ರಾಮಾಯಣವನ್ನು  ಸಂಕ್ಷಿಪ್ತವಾಗಿ ತಿಳಿಗನ್ನಡದ ಚೌಪದಿಯಲ್ಲಿ ಕಟ್ಟಿಕೊಟ್ಟ ‘ ಋಗ್ವೇದ ಸ್ಪುರಣ’ ಕೃತಿಗಳು ಅವರ ಸೃಜನಾತ್ಮಕ ಕೃತಿಗಳಲ್ಲಿ ಸೇರಿವೆ ಎಂಬುದನ್ನು ಅವಲೋಕಿಸಿದಾಗ ಎಚ್ಚೆಸ್ವಿ  ಅವರಿಗಿರುವ ಕನ್ನಡ, ಸಂಸ್ಕೃತ, ಅಥವಾ ಭಾರತೀಯ ಕಾವ್ಯಕಲೆಗಳ ಬಗೆಗಿರುವ ವ್ಯಾಪಕವಾದ ಅರಿವು ,ಅಧ್ಯಯನ, ಹಾಗೂ ಅನುಸಂಧಾನಗಳ ವ್ಯಾಪ್ತಿ ಎಷ್ಟು ವಿಸ್ತಾರವಾದದ್ದು ಎಂಬುದು ಅರಿವಿಗೆ ಬರುತ್ತದೆ.

ವ್ಯಾಪಕ ಓದಿನ ಎಚ್ಚೆಸ್ವಿ: ತಮ್ಮ ಕವಿತೆಯ ಮೂಲಕ ಪರಂಪರೆಯನ್ನು ಅರ್ಥಪೂರ್ಣವಾಗಿ  ವರ್ತಮಾನಕ್ಕೆ ಒಗ್ಗಿಸಿಕೊಳ್ಳುವ ಕಲೆ ಎಚ್ಚೆಸ್ವಿ  ಅವರಿಗೆ ಸಿದ್ದ್ಧಿಸಿದೆ. ಜೊತೆಗೆ ಮುಂದಿನ ತಲೆಮಾರಿಗೆ  ಅದನ್ನು ಪರಿಣಾಮಕಾರಿಯಾಗಿ  ತಲುಪಿಸಬಲ್ಲ  ಕಲೆಯಲ್ಲೂ ಅವರು ಸಿದ್ಧಹಸ್ತರು.ಇದು ಕಾವ್ಯಪರಂಪರೆಗೆ ಅನ್ವಯಿಸುವ ಮಾತೇ ಆಗಿದೆ. ಪಂಪ, ಕುಮಾರವ್ಯಾಸ, ಪು.ತಿ.ನ ಅಡಿಗರಾದಿಯಾಗಿ ಕಾವ್ಯದೊಂದಿಗೆ ಎಚ್ಚೆಸ್ವಿ ನಿರಂತರವಾಗಿ ಅನುಸಂಧಾನಗೈದಿದ್ದಾರೆ. ಭಾರತೀಯ ಸಾಹಿತ್ಯ ಪರಂಪರೆಯ  ಕಾಳಿದಾಸ, ಪಾಶ್ಚಾತ್ಯ ಪರಂಪರೆಯ  ವರ್ಡ್ಸ್ವರ್ತ್ ,ಎಲಿಯಟ್,  ಅವರುಗಳನ್ನೂ ಒಳಗೊಂಡಂತೆ ಅವರಿಗಿರುವ ವ್ಯಾಪಕವಾದ ಓದು,  ಅನುಸಂಧಾನಗಳಿಂದ ಇದು  ಸಾಧ್ಯವಾಗಿದೆ.

ಎಚ್ಚೆಸ್ವಿ ಅವರ ಆಪ್ತ ಮಿತ್ರರಲ್ಲಿ ಒಬ್ಬರಾದ ಬಿ.ಆರ್.ಲಕ್ಷ್ಮಣರಾವ್ ಅವರ ಮಾತಲ್ಲಿ ಹೇಳುವುದಾದರೆ ” ಸತ್ವ ಮತ್ತು ಸಮೃದ್ಧಿ ಎಚ್ಚೆಸ್ವಿ ಸಾಹಿತ್ಯಕೃಷಿಯ ವೈಶಿಷ್ಟ್ಯ”. ಈ ಕವಿಯು ಯಾವುದೇ ಒಂದು ಸಿದ್ಧಾಂತಕ್ಕೆ ತಮ್ಮನ್ನು ಬಿಗಿದುಕೊಂಡವರಲ್ಲ. ಜೀವನದ ಎಲ್ಲ ಅನುಭವಗಳಿಗೂ ಮುಕ್ತವಾಗಿ ತೆರದುಕೊಂಡು ಅದರ ಸತ್ವವನ್ನು ಹೀರಿಯೇ ತಮ್ಮ ಕವಿತೆಯ ತಾತ್ವಿಕತೆಯನ್ನು ರೂಪಿಸಿಕೊಂಡವರು. ಎಚ್ಚೆಸ್ವಿ ಅವರ ಗುರುಗಳಾದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಎಚ್ಚೆಸ್ವಿ ಅವರ ಕಾವ್ಯದ ಬಗ್ಗೆ ಆಡಿರುವ ಮಾತುಗಳು ಅವರ ಕಾವ್ಯದ ಒಟ್ಟಂದವನ್ನು ಕಟ್ಟಿಕೊಡುತ್ತವೆ.  “ನವ್ವಕಾವ್ಯದ  ಆಡು ಮಾತಿನ ಲಯವನ್ನು  ಹೊಸ ರೀತಿಯ ಕಥನಕ್ರಮದಲ್ಲಿ ಬಳಸಿದ್ದು, ನಾದಮಯತೆ, ಚಿತ್ರಕಶಕ್ತಿ, ಭಾವಗೀತಾತ್ಮಕತೆಯನ್ನು ತುಂಬಿಕೊಂಡೂ ಆಡುಮಾತಿನ ಲಯ ಮತ್ತು ಸೊಗಸನ್ನು ಕೆಡದಂತೆ ಬಳಸುವ ಜಾಣ್ಮೆ ಅವರ ಕಾವ್ಯದ ಸೊಗಸನ್ನು ಹೆಚ್ಚಿಸಿವೆ”

ಅವರು ತಮ್ಮಕಾವ್ಯದ ಮರುವಿನ್ಯಾಸಕ್ಕೆ, ಲಯಕ್ಕೆ ಚೌಪದಿ, ಷಟ್ಪದಿ, ಸುನೀತ ಮತ್ತು ಹಳೆಯ ಛಂದಸ್ಸಿನ ಪ್ರಾಸ ಒಳಪ್ರಾಸಗಳನ್ನು ತಮ್ಮ ಕವಿತೆಗಳಿಗೆ ಬಳಸಿ ಹೋಸ ರೀತಿಯ ಕಾವ್ಯಪ್ರಯೋಗಗಳನ್ನು ಮಾಡುವ ಕಾವ್ಯಕಸುಬುದಾರರು.ಪರಂಪರೆಯ ಸತ್ವವನ್ನು ಹೀರಿ ತನ್ನ ಇಷ್ಟದೇವತಾ ವಿಗ್ರಹಕ್ಕೆ  ಒಗ್ಗಿಸುವ, ಸೋಸುವ, ಬಸಿಯುವ, ಕಾವ್ಯತತ್ವದ ಅಸಲು ಕಸುಬುಗಾರಿಕೆಯನ್ನು ಎಚ್ಚೆಸ್ವಿ ಸಾಧಿಸಿಕೊಂಡಿದ್ದಾರೆ

ಬಾಲಸಾಹಿತ್ಯ ಪುರಸ್ಕಾರಗೊಂಡ ಎಚ್ಚೆಸ್ವಿ: ಎಚ್ಚೆಸ್ವಿ ಕವಿಯಾಗಿ ಪಡೆದ ಜನಪ್ರಿಯತೆಯಲ್ಲಿ ಅವರ ಭಾವಗೀತೆಗಳು, ಶಿಶುಪ್ರಾಸಗಳು, ಧಾರಾವಾಹಿಗಳು ಹಾಗೂ ಚಲನಚಿತ್ರಗಳಿಗೆ ಬರೆದ ಗೀತಸಾಹಿತ್ಯದ ಪಾಲೂ ಇದೆ. ಅವರದ್ದೇ ಕಾದಂಬರಿ ‘ ಚಿನ್ನಾರಿ ಮುತ್ತ’ ಕ್ಕೆ ಬರೆದ ಎಲ್ಲಾ ಹಾಡುಗಳೂ ಜನಪ್ರಿಯವಾದವು. ಅವರಿಗೆ ಅಪಾರ ಖ್ಯಾತಿಯ ಜೊತೆಗೆ ರಾಷ್ಟ್ರಪ್ರಶಸ್ತಿಯನ್ನೂ ಆ ಸಿನೆಮಾ ತಂದುಕೊಟ್ಟಿತು. ಅವರು ಧಾರಾವಾಹಿಗಳಿಗೆ ಬರೆದ ಶೀರ್ಶಿಕೆ ಗೀತೆಗಳಂತೂ ಮನೆಮಾತಾಗಿ, ಹಾಡಾಗಿ ಗುನುಗುವಂತೆ ಅವರ ಶಿಶುಪ್ರಾಸಗಳು ಹೊಸಕಾಲದ ಮಕ್ಕಳ ಬಾಲ್ಯವನ್ನು ಸಂಭ್ರಮಿಸುವಂತೆ ಮಾಡಿವೆ. ಎಚ್ಚೆಸ್ವಿ ದೊಡ್ಡವರಿಗಾಗಿ ಬರೆದಷ್ಟೇ ಮುತುವರ್ಜಿಯಿಂದ ಮಕ್ಕಳ ಬಗ್ಗೆಯೂ ಬರೆದಿರುವುದು ಮತ್ತೊಂದು ವಿಶೇಷ. ಮಕ್ಕಳ ಸಾಹಿತ್ಯಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಪರಿಗಣಿಸಿಯೇ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ( ಸಮಗ್ರ ಬಾಲಸಾಹಿತ್ಯಕ್ಕೆ 2013 ರಲ್ಲಿ ) ಸಂದಾಯವಾಗಿದೆ. ಹಕ್ಕಿಸಾಲು,  ಎಲೆಗಳು ನೂರಾರು, ಹೂವಿನ ಶಾಲೆ, ಸೋನಿ ಪದ್ಯಗಳು,  ಅಜ್ಜಿ ಕಥೆ ಹೇಳು, ಬಾರೊ ಬಾರೋ ಮಳೆರಾಯ, ಇವು ಎಚ್ಚೆಸ್ವಿ ಮಕ್ಕಳಿಗೆಂದೇ ಬರೆದ ಕವಿತಾ ಸಂಕಲನಗಳು. ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತ ಎಂಬ ಮಕ್ಕಳ ನಾಟಕಗಳು, ಅಮಾನುಷರು, ಕದಿರನ ಕೋಟೆ, ಅಗ್ನಿಮುಖಿ ಎಂಬ ಮಕ್ಕಳ ಕಾದಂಬರಿಗಳು ಮಕ್ಕಳಿಗಾಗಿಯೇ ಅವರು ತಂದ ಗಿಲಿಗಿಲಿ ಗೆಜ್ಜೆ,  ಚಕೋರಿಯಮ್ಮ ಧ್ವನಿ ಸುರುಳಿಗಳು, ಕೊಟ್ರೇಶಿ ಕನಸು, ಒಂದೂರಲ್ಲಿ ಎಂಬ ಮಕ್ಕಳ ಚಲನಚಿತ್ರಗಳಿಗೆಂದೇ ಬರೆದ ಹಾಡುಗಳು ಯಾವುದನ್ನೂ ಮರೆಯುವಂತೆಯೇ ಇಲ್ಲ.

ಸುಗಮ ಸಂಗೀತ ಕ್ಷೇತ್ರದ ಸೇವೆ: ಕನ್ನಡ ಸುಗಮ ಸಂಗೀತ ಕ್ಷೇತ್ರಕ್ಕೆ ಎಚ್ಚೆಸ್ವಿ ಅವರ ಕೊಡುಗೆಯೂ ಅಪಾರವಾಗಿದೆ. ಅವರ ಭಾವಗೀತೆಗಳು ಕನ್ನಡ ಜನಮಾನಸದಲ್ಲಿ ಅಚ್ಚಳಿಯದಂತಿವೆ.ಅವರು ಹದಿನೈದು ಹದಿನಾರು ಭಾವಗೀತೆಗಳ ಧ್ವನಿ ಸುರುಳಿಗಳನ್ನು ಹೊರತಂದಿದ್ದಾರೆ. ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್, ಉಪಾಸನಾ ಮೋಹನ್ ಅವರಂತಹ ಕನ್ನಡದ ಖ್ಯಾತ, ಪ್ರತಿಭಾವಂತ ಸಂಗೀತ ನಿರ್ದೇಶಕರಿಗೆ ಭಾವಗೀತೆಗಳನ್ನು  ಬರೆದುಕೊಟ್ಟು ಜನಮನ್ನಣೆ ಗಳಿಸಿದ್ದಾರೆ. ಕರ್ನಾಟಕದಲ್ಲಿ ಸುಗಮಸಂಗೀತವನ್ನು  ಒಂದು ಚಳವಳಿಯಾಗಿ ಬೆಳೆಸಲು ದುಡಿದವರಲ್ಲಿ  ಎಚ್ಚೆಸ್ವಿಯವರ ಪಾಲೂ ಇದೆ ಎಂಬುದನ್ನು ಮರೆಯುವಂತಿಲ್ಲ.ಬಿ.ಆರ್.ಲಕ್ಷ್ಮಣರಾವ್, ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ, ಎಂ.ಎನ್.ವ್ಯಾಸರಾವ್,  ಅವರಂತಹ ತಮ್ಮ ಗೆಳೆಯರ ಬಳಗದ ಮೂಲಕ ಸುಗಮ ಸಂಗೀತ ಸೇವೆಯಲ್ಲಿ , ಕನ್ನಡ ಸುಗಮ ಸಂಗೀತ ಸಂಪನ್ನವಾದುದನ್ನು ಸ್ಮರಿಸದೆ ಇರಲಾಗದು.

ಎಚ್ಚೆಸ್ವಿ ಸಾಹಿತ್ಯದ ಬಹುಮುಖೀ ಆಯಾಮಗಳು: ಎಚ್ಚೆಸ್ವಿಯವರನ್ನು ಕಥೆಗಾರರನ್ನಾಗಿಯಾಗಲಿ, ಕಾದಂಬರಿಕಾರರನ್ನಾಗಿ ಆಗಲಿ ,ಅವರು ಬರೆದ ವಿಮರ್ಶಾಕೃತಿಗಳ ಬಗ್ಗೆಯಾಗಲಿ ( ಕಾವ್ಯಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯಷ್ಟೇ ಸೇವೆಯನ್ನು) ನಾಟಕ ರಂಗಗಳಿಗೂ ಅವರು ಕೊಡುಗೆಯನ್ನು ನೀಡಿದ್ದರೂ ಅದನ್ನು ಗುರುತಿಸುವಲ್ಲಿ ಹಿನ್ನಡೆಯಾಗಿರುವುದು ಅತ್ಯಂತ ಆಶ್ಚರ್ಯಕರವಾದ ಸಂಗತಿ.’ ತಾಪಿ’ , ‘ವೇದಾವತಿ ನದಿಯಲ್ಲ’ ಎಂಬ  ಈ ಎರಡೂ ಕಾದಂಬರಿಗಳು ಕನ್ನಡದ ಧ್ವನಿಪೂರ್ಣ ಕಾದಂಬರಿಗಳು,  ‘ಬಾನಸವಾಡಿಯ ಬೆಂಕಿ’ ಹಾಗೂ ಅವರ ಈವರೆಗಿನ ಸಮಗ್ರ ಕಥಾ ಸಂಪುಟವೂ ಪ್ರಕಟವಾಗಿದ್ದರೂ ಇವುಗಳ ಬಗ್ಗೆ ಹೆಚ್ಚು ಚರ್ಚೆಯಾಗಿಲ್ಲ.

ಹನ್ನೆರಡು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿರುವ  ಎಚ್ಚೆಸ್ವಿ ಅವರ ಸಾಹಿತ್ಯದ ಅಧ್ಯಯನದ ಹರಹನ್ನು  ಈ ಸಂಕಲನಗಳಲ್ಲಿ ಕಾಣಬಹುದು. ಕನ್ನಡ ಸಾಹಿತ್ಯವನ್ನೂ ಒಳಗೊಂಡಂತೆ ಭಾರತೀಯ ಸಾಹಿತ್ಯದ ಬಗ್ಗೆ ಅವರಿಗಿರುವ ವ್ಯಾಪಕವಾದ ಅಧ್ಯಯನದ ಆಳ,ಸಮತೂಕದ ವಿಮರ್ಶೆಯ ವಿವೇಕ, ತೌಲನಿಕ ಅಧ್ಯಯನದ ವಿಸ್ತಾರ, ವಿವಿಧ ವಿಮರ್ಶಾ ಪ್ರಕಾರದ  ತಾತ್ವಿಕತೆ ಮತ್ತು ಸಾಧ್ಯತೆಗಳನ್ನು  ಕನ್ನಡದ ಸಂಧರ್ಭಕ್ಕೆ ಅನ್ವಯಿಸಿ ನೋಡುವ ಆನ್ವಯಿಕತೆ ಅವರ ವಿಮರ್ಶಾ ಬರಹಗಳಲ್ಲಿ ಎದ್ದು ಕಾಣುತ್ತದೆ.

ಚಲನಚಿತ್ರ ಕ್ಷೇತ್ರಕ್ಕೆ ಸಂದ ಸೇವೆ: ಕನ್ನಡ ಚಲನಚಿತ್ರ ಕ್ಷೇತ್ರಕ್ಕೂ ಎಚ್ಚೆಸ್ವಿ ಅವರ ಸೇವೆ ಸಂದಿದೆ. ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು, ಕ್ರೌರ್ಯ, ಕೊಟ್ಟ, ಒಂದೂರಲ್ಲಿ  ಇವು ಎಚ್ಚೆಸ್ವಿ ಅವರ ಹಾಡು, ಸಂಭಾಷಣೆಗಳನ್ನು ಒಳಗೊಂಡು ಅವರ ಕಾವ್ಯ ಹಾಗೂ ವ್ಯಕ್ತಿವೈಷ್ಟ್ಯತೆಯ  ಸ್ಪರ್ಶದಿಂದ ಗೆದ್ದ ಚಿತ್ರಗಳಾಗಿವೆ. ಇತ್ತೀಚೆಗೆ ‘ಹಸಿರು ರಿಬ್ಬನ್’ ಎಂಬ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಎಚ್ಚೆಸ್ವಿ ತಮ್ಮ ಸೃಜನಶೀಲತೆಯ ಮಗದೊಂದು ಆಯಾಮವನ್ನೂ ಸಮರ್ಥವಾಗಿ ನಿರ್ವಹಿಸಿದ್ದು ಗಮನೀಯ ಸಂಗತಿ.

ಮನುಷ್ಯರಾಗುವ ಹಾದಿಯಲ್ಲಿ ಎಚ್ಚೆಸ್ವಿ: ಎಚ್ಚೆಸ್ವಿ ಬದುಕು- ಬರಹ ಎರಡನ್ನೂ ಎಂದೂ ದುಂದು ಮಾಡಿದವರಲ್ಲ. ಒಂದೊಂದು ಕ್ಷಣವನ್ನೂ ಸದುಪಯೋಗಪಡಿಸಿಕೊಂಡು , ಸಾರ್ಥಕಪಡಿಸಿಕೊಂಡವರು. ಅವರು ಬದುಕಿಗಿಂತ ಕಾವ್ಯ ದೊಡ್ಡದು, ಕಾವ್ಯಕ್ಕಿಂತ ಮನುಷ್ಯತ್ವ ದೊಡ್ಡದು ಅಂತ ಒಳ್ಳೆಯ ಮನುಷ್ಯರಾಗಲು ಹಂಬಲಿಸಿ ಅದರಂತಾದವರು. ಅವರು ಹೇಗೆ ಒಬ್ಬ ಒಳ್ಳೆಯ ಕವಿ, ಮೇಷ್ಟ್ರು, ಕಥೆಗಾರ, ಕಾದಂಬರಿಕಾರ, ವಿಮರ್ಶಕರಾದರೋ ಹಾಗೆಯೇ ಅವರೊಬ್ಬ ಒಳ್ಳೆಯ ಗೆಳೆಯ, ಗಂಡ, ತಂದೆ, ತಾತ, ಎಲ್ಲವೂ ಆಗುವುದರ ಜೊತೆಗೆ  ಪ್ರೀತಿ , ಅಂತಃಕರಣ ತುಂಬಿಕೊಂಡ ಮನುಷ್ಯರೂ ಆಗಿದ್ದಾರೆ.

ಸ್ವಾರ್ಥವನ್ನು ಬದಿಗೊತ್ತಿ ತನ್ನಂತೆ ತನ್ನ ಗೆಳೆಯರೂ, ಸಹಪಾಠಿ ಲೇಖಕರೂ, ಹೊಸ ಕಾಲದ ಕವಿಗಳೂ ಬೆಳೆಯಬೇಕೆಂದು ಬೆನ್ನು ತಟ್ಟಿದ್ದಾರೆ. ಡಾ.ನರಹಳ್ಳಿಯವರು ಹೇಳುವ ಹಾಗೆ  “ಮಾತೃವಾತ್ಸಲ್ಯ ಹಾಗೂ ತಾಯ್ತನದ ಪಾಲನಾ ಗುಣಗಳು ಹೇಗೆ ಎಚ್ಚೆಸ್ವಿಯವರ ವ್ಯಕ್ತಿತ್ವದ ಮೂಲಗುಣಗಳಾಗಿವೆಯೋ  ಅವು ಅವರ ಬರವಣಿಗೆಯ ಮೂಲದ್ರವ್ಯವೂ  ಆಗಿವೆ.

ಅವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರಿಗೆ ಅರ್ಪಿಸಿರುವ  ಅಭಿನಂದನಾ ಗ್ರಂಥದ ಹೆಸರು ‘ ಅಂತಃಕರಣ ‘ ಎಂಬುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಎಚ್ಚೆಸ್ವಿ ಅವರ ಸಂಪರ್ಕಕ್ಕೆ ಬಂದವರಾರೂ ಹಾಗೆಯೇ ಉಳಿದು ಹೋಗುವುದಿಲ್ಲ. ರಾಘವೇಂದ್ರ ಪಾಟೀಲರು ಹೇಳುವ ಮಾತಿನಂತೆ  ” ಅವರೆಲ್ಲ ಸಖ್ಯಯೋಗದ ದೀಕ್ಷೆ ಪಡೆದು ,ಸಂಬಂಧದ ಸುಧೆಯುಂಡು, ಪ್ರೀತಿಯ ಊರ್ಜೆಯಿಂದ ಆವಾಹಿತಗೊಂಡು , ಕಂಪಿಸುವ ಮನಸಿನಿಂದ  ಹೊರಡುವಂತಾಗುತ್ತದೆ”

ನಿಜ ಅವರಂತೆಯೇ ಅವರ ಕವಿತೆ ಕೂಡಾ ಅವರದ್ದೇ ಕವಿತೆ ಶ್ರೀರಾಮನನ್ನು ಕುರಿತು ಬರೆದ ‘ಶ್ರೀಸಂಸಾರಿ’ಯಂತೆ  ಹೇಗೆ ಶ್ರೀರಾಮ  ತನ್ನವರನ್ನೆಲ್ಲಾ  ಜೊತೆಗಿಟ್ಟುಕೊಂಡೇ ಪೂಜೆಗೊಳ್ಳುತ್ತಾನೋ  ಹಾಗೆ ಎಚ್ಚೆಸ್ವಿ ಕೂಡಾ ಸುಖವಾಗಲಿ, ದುಃಖವಾಗಲಿ, ಒಂಟಿಯಾಗಿ ನಿಂತು ಅನುಭವಿಸಿದವರಲ್ಲ. ಅವರದು ಬಳಗಪ್ರಜ್ಞೆ. ಪಂಪನ ಹಾಗೆ ಹಿತಮಿತ ಮೃಧುಭಾಷಿ. ಊಟ- ಉಡುಗೆ- ತೊಡುಗೆ ಎಲ್ಲದರಲ್ಲೂ ಸದಭಿರುಚಿ ಸೌಂದರ್ಯಪ್ರಜ್ಞೆಗಳು  ಹದವಾಗಿ ಬೆರೆತು, ತಾನದನು ಸವಿದು,ಸಹೃದಯರಿಗೂ ಉಣಬಡಿಸುವ ಸಹೃದಯತೆ.

ಬೆಂಗಳೂರಿರಲಿ, ಕರ್ನಾಟಕ ಅಥವಾ ಭಾರತದ ಯಾವುದೇ ಮೂಲೆಯ ಹೋಟೆಲಿನಲ್ಲಿಯ ಸವಿರುಚಿಯನ್ನು ಗುರುತಿಸಿ ಹೋಗಿ ಸವಿದು ಬರುವ, ಮುಕ್ತಕಂಠದಿಂದ ಪ್ರಶಂಸೆ ಮಾಡಿ ಬರುವ ಎಚ್ಚೆಸ್ವಿ ಅವರು ಕನ್ನಡ- ಭಾರತೀಯ- ಪಾಶ್ಚಿಮಾತ್ಯ ಕಾವ್ಯ, ಕಾಳಿದಾಸ, ಪಂಪ, ಭಾರವಿ, ಶೇಕ್ಸ್ ಪಿಯರ್  ಯಾರದೇ ಕಾವ್ಯದ ಅಸಾಸ್ವಾದನೆಗೈವ ಅಪರೂಪದ ಆಸ್ವಾದನಾ ಗುಣವಿದ್ದವರು. ಹಿರಿ- ಕಿರಿ ತಲೆಮಾರುಗಳ ನಡುವಿನ ಸುವರ್ಣ ಸೇತುವೆಯಂತಿರುವ ಎಚ್ಚೆಸ್ವಿ ಹೊಸಪೀಳಿಗೆಯ ಪ್ರತಿಭಾವಂತ ಕವಿ- ಕಥೆಗಾರರನ್ನು ಗುರುತಿಸಿ ಅವರನ್ನು ಸದಾ ಬೆನ್ನುತಟ್ಟುವ ಸಾಹಿತ್ಯ ಪರಿಚಾರಿಕೆಯನ್ನು ಸದ್ದಿಲ್ಲದೆ ಮಾಡುತ್ತಾ ಬಂದವರು.

ಜೀವನ ಮೀಮಾಂಸೆಯ ‘ ಉತ್ತರಾಯಣ’ : ಕವಿತೆ ಎಚ್ಚೆಸ್ವಿಯವರ ಉಚ್ವಾಸ- ನಿಸ್ವಾಸದಂತೆ ಬೆರೆತು ಹೋಗಿದೆ.ತನ್ನೆಲ್ಲಾ ಭಾವಗಳ ಅಭಿವ್ಯಕ್ತಿಗೆ  ಅವರಿಗೆ ಕಾವ್ಯ ಪರಮಾಪ್ತ ಸಖ- ಸಖಿ-ಹೊರದಾರಿ.ನೋವು, ಸಂಭ್ರಮ, ವಿಷಾದ, ಕನವರಿಕೆ, ನೆನವರಿಕೆ, ವಿರಹ, ವೇದಾಂತ ಏನಿದ್ದರೂ ಅವರಿಗೆ ಪ್ರಾಯಶಃ ಕಾವ್ಯದ ಮೂಲಕವೇ ಸಾಕಾರಗೊಳಿಸಬೇಕು” ಎಂಬ ವೈದೇಹಿಯವರ ಮಾತುಗಳು ಅರ್ಥಪೂರ್ಣವಾದುವೇ ಆಗಿವೆ. ದೇವರಲ್ಲೂ ಮನುಷ್ಯರನ್ನೇ ಕಾಣುವ ಅವರ ನಿರಂತರ ಹಂಬಲ ಅವರಲ್ಲಿನ ಮಾನವಪ್ರೇಮಕ್ಕೆ ಸಾಕ್ಷಿ.ಬದುಕಿನಲ್ಲಿ  ಬಹಳ ಮಹತ್ವವಾದುದನ್ನು  ಕಳೆದುಕೊಂಡಾಗ ಅಥವಾ ಬಹಳ ದೊಡ್ಡ ಪೆಟ್ಟನ್ನು ತಿಂದಾಗಲೇ ಕವಿಯಾದವನು ಬಹಳ ಮಹತ್ವವಾದುದನ್ನು ಕೊಡಲು ಸಾಧ್ಯ ಎಂಬಂತೆ ತಮ್ಮ ಬದುಕಿನ ಭಾಗವೂ ಜೀವವೇ ಆಗಿದ್ದ ತಮ್ಮ ಬಾಳಸಂಗಾತಿಯಾದ ರಾಜಲಕ್ಷ್ಮಿಯವರನ್ನು ಕಳೆದುಕೊಂಡು, ಆ ನೋವಿನಲ್ಲಿ ಬೆಂದಾಗ ಅವರಿಂದ ಹೊರಬಂದ ಅವರ ಉತ್ತರಾಯಣ ದ ಕವಿತೆಗಳು, ಗಂಗಾಧರ ಚಿತ್ತಾಲರ ನಂತರ ಕನ್ನಡ ಕಾವ್ಯದಲ್ಲಿ ಸಾವನ್ನು ಅದರ ನೋವನ್ನು ಹಾಗೇಯೇ ಪ್ರೇಮದ ಪರಿತಾಪವನ್ನು ಅತ್ಯಂತ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಂತಹ ಏಕೈಕ ಕವಿಯೆಂದರೆ ಅದು ಎಚ್ಚೆಸ್ವಿ ಅವರೆ.ಅದು ಓದುಗರ ಹೃದಯವನ್ನು ಕಲಕಿಬಿಡುತ್ತದೆ.   ಸದಾ ನಮ್ಮನ್ನು  ಹುಟ್ಟು ಸಾವುಗಳ ಬಗ್ಗೆ  ಚಿಂತನೆಗೀಡುಮಾಡುವ  ಜೀವನಮೀಮಾಂಸೆಯೇ ಅದರೊಳಗೆ ಅಡಗಿದೆ.

ಎಚ್ಚೆಸ್ವಿ ಬರವಣಿಗೆ ಪ್ರಾರಂಭಿಸಿದ ಈ ಅರವತ್ತು ವರ್ಷಗಳ ಅವಧಿಯಲ್ಲಿ 102 ಕ್ಕೂ ಹೆಚ್ಚು ವೈವಿಧ್ಯಮಯವಾದ ಸಾಹಿತ್ಯಕೃತಿಗಳನ್ನು , 16 ಧ್ವನಿಸುರುಳಿಗಳನ್ನು  ಹೊರತಂದಿದ್ದಾರೆ. ಐದಾರು ಚಲನಚಿತ್ರಗಳಿಗೆ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಇದೇನೂ ಕಡಿಮೆ ಸಾಧನೆ ಅಲ್ಲ. ಬರವಣಿಗೆ ಅವರಿಗೆ ಒಂದು ತಪಸ್ಸಿನ ಹಾಗೆ. ಅವರದ್ದೇ ಕವಿತೆ ಗಂಧವ್ರತದ ಹಾಗೆ . ಅವರ ಕೊಡುಗೆ ಸಂಖ್ಯೆಯಿಂದ ಮಾತ್ರವಲ್ಲ ಸತ್ವದಿಂದಲೂ, ಸೌಂದರ್ಯದಿಂದಲೂ ಆಸ್ವಾದನೀಯ, ಸುಗಂಧಮಯ. ತನ್ನ ಪಾಡಿಗೆ ತಾನು ತನ್ನನ್ನೇ ಸುಟ್ಟುಕೊಂಡು ಸುಗಂಧ ಬೀರುವ ಅಗರಬತ್ತಿಯ ಹಾಗೆ

ಅಗರಬತ್ತಿಯೆ ತೆಪ್ಪಗುರಿಯುತ್ತ ಉರಿಯುತ್ತ
ಆಯುಷ್ಯ ಸವೆಸು,ವ್ರತದಂತೆ ಒಂದೇ ಹದದಲ್ಲಿ
ಎದೆಯಲೊಂದು ಕಿಡಿಕೆಂಡ ಹಿಡಿದು,ಅಂತಸ್ಥ
ಚಿತ್ತವನೆತ್ತಿ
ಚಿತ್ತಾರ ಮಾಡಿಬಿಡು ಹೊರಗೆ, ಮೂಗುಳ್ಳವರು
ಎಲ್ಲೋ ದೂರದಲಿದ್ದೂ, ಗಾಳಿಯಲಿ ತೇಲಿಬಂದ ಕಂಪಿಗೆ
ಕಣ್ಣು ಮುಗಿದು ತಲೆ ದೂಗುವರು, ನಿನ್ನನ್ನು ಕಣ್ಣು ಕಾಣದವರೂ…
ನಿನ್ನ ಗಂಧವ್ರತವ ಮೆಚ್ಚುವರು- ಮನಸೋತು
ಇದ್ದಾಗ ಇಷ್ಟು ಉಳಿದದ್ದು ನಾಳೆಯ ಮಾತು

ಹೀಗೆ ಎಚ್ಚೆಸ್ವಿ ಕಾವ್ಯ- ಸಾಹಿತ್ಯ ಕನ್ನಡ ಸಾರಸ್ವತ ಲೋಕದ ಉದ್ದಕ್ಕೂ ಕಂಪು ಸೂಸುವ ಅಗರಬತ್ತಿಯ ಅತ್ತಿನ ಹಾಗೆ ಕನ್ನಡ ನಾಡನ್ನು, ನಾಡಾಡಿಗಳ ಮನಸನ್ನು ಆವರಿಸುತ್ತಲೇ ಇರುವ ಪರಿಮಳವಾಗಿ ಇರುತ್ತದೆ.ಇದಕ್ಕಾಗಿ ಈ ಗಂಧವ್ರತಿಗೆ ಸಂದ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ,ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಹೀಗೆ ಹತ್ತು ಹಲವು ಗೌರವಗಳು ಸಂದಿವೆ.

ಕಾವ್ಯ ಅವರ ಉಸಿರು- ಬುದ್ಧಿ- ಭಾವ- ಭಾಷೆ , ಕನಸು- ದರ್ಶನಗಳನ್ನು ಹಿಡಿದಿಡುವ, ಅವರ ಸ್ಮೃತಿ ಮತ್ತು ಆಧುನಿಕ ಜ್ಞಾನಗಳನ್ನು  ಹದವಾಗಿ ಬೆಸಿದಿರುವ ಸೂತ್ರವೆಂದರೆ ಅತಿಶಯೋಕ್ತಿಯಾಗಲಾರದು.

“ಕಾವ್ಯ ಅವರಿಗೆ ಜೀವನವನ್ನು ನೋಡುವ, ಅರ್ಥೈಸುವ, ಗ್ರಹಿಸುವ ವ್ಯಾಖ್ಯಾನಿಸುವ ಒಂದು ಕ್ರಮವೂ ಹೌದೆನ್ನುವ” ಟಿ.ಪಿ ಅಶೋಕರ ಈ ಮಾತುಗಳು ಎಚ್ಚೆಸ್ವ ಅವರ ಕಾವ್ಯಧೋರಣೆಗೆ ಹಿಡಿದ ಕನ್ನಡಿಯಂತಿದೆ.

ಕನ್ನಡ ಕಾವ್ಯಪರಂಪರೆಯ ಅತ್ಯ್ತತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಅದನ್ನು  ವರ್ತಮಾನಕ್ಕೆ ಸಲ್ಲಿಸುತ್ತಿರುವಂತೆ ಬರೆಯುತ್ತಿದ್ದ, ಪರಂಪರೆಯ ಅರಿವು, ವರ್ತಮಾನದ ಅನುಸಂಧಾನ, ಪ್ರಯೋಗಶೀಲತೆಯ ಮೂಲಕ ಕನ್ನಡದ ಕಾವ್ಯದನಿಯಾಗಿದ್ದ, ಅಹಂಕಾರ- ಆತ್ಮರತಿಗಳಿರದ , ಪರಸ್ಪರ ವಿರೋಧಾಭಾಸಗಳಿಲ್ಲದ ಸಮಚಿತ್ತ, ಅಜಾತಶತೃ , ಸ್ನೇಹಜೀವಿ, ಧ್ಯಾನಿಸಲು ಗಂಧವ್ರತಿಯಂತಹ ಎಚ್ಚೆಸ್ವಿ ನಮ್ಮ ನಡುವೆ ನೂರಾರು ವರುಷ ಸುಖವಾಗಿ ಬಾಳುತ್ತಾ, ಕನ್ನಡ ಸಾರಸ್ವತ ಲೋಕವನ್ನು ಮತ್ತೂ ಸಂಪನ್ನಗೊಳಿಸುತ್ತಿರಲೆಂಬ ಕನ್ನಡಿಗರ ಅಭಿಲಾಷೆ ಫಲಿಸುವ ಮುನ್ನವೇ ಎಂಬತ್ತು ವಸಂತಗಳ ತುಂಬುಬಾಳನ್ನು ಸಾರ್ಥಕವಾಗಿ ಬಾಳಿ  ನಿರ್ಗಮಿಸಿರುವ ಎಚ್ಚೆಸ್ವಿಯವರು ನೂರು ವಸಂತಗಳನ್ನು ಪೂರೈಸದೇ ಹೋದರೆಂಬ ವಿಷಾದದ ನಡುವೆಯೂ ಅವರು ಕವಿಯಾಗಿ ಸದಾ ನಾಡಿನ ಜನಮಾನಸದಲ್ಲಿ ಸಾಮ್ರಾಟನಂತೆ ಇರುತ್ತಾರೆ.ಅವರ ಕಾವ್ಯದ. ಸಾಹಿತ್ಯದ ಪ್ರೇರಣೆ  ತಲೆತಲೆಮಾರಿಗೂ ಅಮೃತವಾಹಿನಿಯಂತೆ ಪ್ರವಹಿಸುತ್ತಲೇ ಇರುತ್ತದೆ ಎಂಬುದು ಭರವಸೆಯ ಸಂಗತಿ.

ಪ್ರೊ.ಟಿ.ಯಲ್ಲಪ್ಪ, ಹಿರಿಯ ಸಾಹಿತಿ

Leave a Reply