ನೆಲದೊಡನಾಟದೊಡನೆ ಒಡನಾಡುತ್ತಾ…

3 years ago

ಚಿಕ್ಕಬಳ್ಳಾಪುರ ಜಿಲ್ಲೆಯ ಪುಟ್ಟ ಊರೊಂದರಿಂದ ಬಂದ ಎನ್.ಎಸ್. ಅಶೋಕ್ ನನಗೆ ಇತ್ತೀಚೆಗಷ್ಟೇ ಪರಿಚಯವಾದವರು. ಬಡತನದೊಟ್ಟಿಗೆ ಓದುವ ಹಂಬಲದ ಶ್ರೀಮಂತಿಕೆಯನ್ನು ಇಷ್ಟಿಷ್ಟೇ ಕೂಡಿಸಿಟ್ಟುಕೊಂಡು ಬೆಳೆದ ಅಶೋಕ್ ಮಾತಾಡಿಸಿದಷ್ಟೂ ಮೃದ್ವಂಗಿಯಂತಹ ಸಂಯಮಶೀಲ ಸ್ನೇಹಜೀವಿ; ಹೊಸ ತಲೆಮಾರಿನ ಹೊಸ ದನಿಯ ಲೇಖಕರಲ್ಲೊಬ್ಬರು. ಚಿಕ್ಕಮುನಿಮಂಗಲ ಎಂಬ ಪುಟ್ಟ ನೆಲದ ರೈತ ಕುಟುಂಬದಿಂದ ಜ್ಞಾನಭಾರತಿಯವರೆಗಿನ ಅಶೋಕ್ ಅವರ ಬದುಕಿನ ಹಾದಿ ಕಲ್ಲು ಮುಳ್ಳಿನದ್ದು.

ಕನ್ನಡದ ಪ್ರಭಾವಶಾಲಿ ಕವಿ ಸಿದ್ದಲಿಂಗಯ್ಯ ಹಾಗೂ ಅಷ್ಟೇ ‘ಬೆಂಕಿಯುಂಡೆ’ಯಂತಹ ಕವಿತೆಗಳನ್ನು ಬರೆದ ಮರಾಠಿ ಕವಿ ನಾಮದೇವ ಢಸಾಳರ ಕಾವ್ಯದ ಕುರಿತು ನಟರಾಜ್ ಹುಳಿಯಾರ್ ಮಾರ್ಗದರ್ಶನದಲ್ಲಿ ನಡೆಸಿದ ಅಧ್ಯಯನಕ್ಕಾಗಿ ಪಿಎಚ್‌ಡಿ ಪಡೆದಿರುವ ಅಶೋಕ್ ಸದ್ಯ ಬೆಂಗಳೂರಿನ ಎಸ್‌ಜೆಆರ್ ಮಹಿಳಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ವಿಷಯವೇನೆಂದರೆ,ಅಶೋಕ್ ಇದೀಗ ತಮ್ಮ ಈವರೆಗಿನ ಬರಹಗಳನ್ನು ಸಂಕಲಿಸಿ ‘ನೆಲದೊಡನಾಟ’ ಕೃತಿಯನ್ನು ಹೊರತರುತ್ತಿದ್ದಾರೆ. ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ಸಿನಿಮಾ, ರಾಜಕೀಯ, ಸಮಕಾಲೀನ ಹೀಗೆ ವಿವಿಧ ವಸ್ತು ವಿಷಯಗಳನ್ನು ‘ನೆಲದೊಡನಾಟ’ ಮುಖಾಮುಖಿಯಾಗಿದೆ.

ಸಾದತ್ ಹಸನ್ ಮಾಂಟೋ ಕತೆಗಳ ವಿಶ್ಲೇಷಣೆಯಿಂದ ಹಿಡಿದು ರೈತರ ಆತ್ಮಹತ್ಯೆ, ಮಾಧ್ಯಮಗಳ ಪೂರ್ವಾಗ್ರಹ, ಏಕಲವ್ಯನ ಪಾತ್ರ ಶೋಧನೆಯವರೆಗೆ ಅವರ ಚಿಂತನೆಯ ಹರವು ಹಬ್ಬಿದೆ. ಅಶೋಕ್ ಅವರ ವಿಮರ್ಶಾ ಬರಹಗಳಲ್ಲಿ ಅತಿ ಭಾರವೆನ್ನಿಸುವ ಅಕಾಡೆಮಿಕ್ ಜಡತೆ ಇಲ್ಲ; ಬದಲಿಗೆ ಸಾಹಿತ್ಯ ವಿಶ್ಲೇಷಣೆ ಸಾಮಾನ್ಯ ಓದುಗನಿಗೂ ತಲುಪಬೇಕೆಂಬ ಸರಳ ಆಶಯ ಇದೆ.

ಅವರ ಬರಹಗಳಲ್ಲಿ ನನಗೆ ಹೆಚ್ಚು ಇಷ್ಟವಾದವುಗಳೆಂದರೆ ಕೆಲವು ಸಾಂಸ್ಕೃತಿಕ ಟಿಪ್ಪಣಿಗಳು; ‘ಹಬ್ಬ ಎನ್ನುವುದು ನೆಪವಾಗಿ ಮಾತ್ರ’, ‘ಬೇರುಗಳತ್ತ ಒಂದು ಚಿತ್ತ’, ‘ಇವರು ಉದ್ಯಮಿಗಳ ಪಾಲುದಾರರೋ, ವಾರಸುದಾರರೋ’-ಇಂತಹ ಟಿಪ್ಪಣಿಗಳಲ್ಲಿ ಅವರ ಬರಹಗಳು ಸೃಜನಶೀಲತೆಯ ಚಿಗುರು ಪಡೆದಿವೆ. ಅಂತಹವುಗಳಲ್ಲಿ ನನ್ನನ್ನು ಹೆಚ್ಚು ಹೊತ್ತು ಹಿಡಿದು ನಿಲ್ಲಿಸಿದ್ದು ‘ಹಿಂದ್ ಸ್ವರಾಜ್ ಮತ್ತು ನಮ್ಮೂರು’ ಎಂಬ ಬರಹ.

ಕೆಲಕಾಲ ಟೀವಿ ಮಾಧ್ಯಮದಲ್ಲಿಯೂ ಕೆಲಸ ಮಾಡಿರುವ ಅಶೋಕ್ ಅಲ್ಲಿನ ತಮ್ಮ ಅನುಭವಗಳನ್ನು ಇಲ್ಲಿ ಗಾಢವಾಗಿ ದಾಖಲಿಸಿದ್ದಾರೆ. ಅಶೋಕ್ ಅವರ 'ನೆಲದೊಡನಾಟ' ಕೃತಿಗೆ ಶುಭ ಕೋರುತ್ತಾ ‘ಹಿಂದ್ ಸ್ವರಾಜ್ ಮತ್ತು ನಮ್ಮೂರು’ ಟಿಪ್ಪಣಿಯಿಂದ ಒಂದು ತುಣುಕನ್ನು ಇಲ್ಲಿ ನೀಡಿದ್ದೇನೆ:

ಅಂದು ಬಳ್ಳಾರಿಯಿಂದ ಆಕ್ಸಿಡೆಂಟ್ ಮತ್ತು ಬೆಂಗಳೂರಿನಿಂದ ಸೂಸೈಡ್ ಎನ್ನುವಂತಹ ಸ್ಲಗ್ಗಿನಿಂದ ಪೀಡುಗಳು ಬಂದಿದ್ದವು. ಸೀನಿಯರೊಬ್ಬ ಆಕ್ಸಿಡೆಂಟ್ ಪ್ಯಾಕೇಜ್ ಮಾಡಿದ. ನಾನು ಸೂಸೈಡ್ ಪ್ಯಾಕೇಜ್ ಮಾಡಿದೆ. ಆಕ್ಸಿಡೆಂಟ್ ಅಗ್ರ ರಾಷ್ಟ್ರೀಯ ವಾರ್ತೆಯ ಮುಖ್ಯಾಂಶಗಳಲ್ಲಿ ಮೂರನೆಯ ಸ್ಥಾನವನ್ನೂ ಗಿಟ್ಟಿಸಿಕೊಂಡಿತ್ತು. ಹೆಡ್ ಲೈನ್ಸ್ ಮಾಡುತ್ತಿದ್ದ ನನಗೆ ಆಕ್ಸಿಡೆಂಟ್ ಪ್ಯಾಕೇಜು ಮಾಡಿದ್ದ ಅವನು ‘ಲಾರಿಯ ನಂಬರ್ ಪ್ಲೇಟನ್ನು ಹಾಕು. ಜನ ಕುತೂಹಲಕ್ಕಾಗಿ ಇದು ಯಾವ ಊರಿನ ಲಾರಿಯೆಂದು ನೋಡಲು ಕಾತರಿಸುತ್ತಾರೆ. ಇದರಿಂದ ನಮ್ಮ ಟಿಆರ್‌ಪಿ ರೇಟೂ ಹೆಚ್ಚುತ್ತದೆ’ ಎಂದು ಹೇಳಿದ. ಆ ಪ್ಯಾಕೇಜಿನಲ್ಲಿ ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸ್ಲೇಟು, ಪುಸ್ತಿಕೆಗಳ ಚೀಲವ ಹೊತ್ತು ಸ್ಕೂಲಿಗೆ ಹೋಗುತ್ತಿದ್ದ ಮೂವರು ಪುಟ್ಟ ಕಂದಮ್ಮಗಳು ಲಾರಿಯ ಚಕ್ರಕ್ಕೆ ಸಿಲುಕಿ ನಜ್ಜುಗುಜ್ಜಾಗಿರುವ ದಾರುಣ ದೃಶ್ಯಗಳಿದ್ದವು. ಗ್ರಾಮದ ಮೆಹಬೂಬ್ ಸಾಬ್ ಅವರ ಪುತ್ರಿಯರಾದ ಏಳು ವರ್ಷದ ಸಾಜಿಯಾ ಅಂಜುಮ್ ಮತ್ತು ಆರು ವರ್ಷದ ನಾಜಿಯಾ ಅಂಜುಮ್ ಹಾಗು ಇಕ್ಬಾಲ್ ಅವರ ಪುತ್ರಿ ಶಬಾನಾ ಬೇಗಂ ಜಗತ್ತಿಗೆ ಇನ್ನೂ ಕಣ್ಣು ತೆರೆದುಕೊಳ್ಳುವಷ್ಟರಲ್ಲೇ ಎರಗಿದ ಈ ಸಾವಿಗೆ ಬಲಿಯಾಗಿದ್ದರು. ಇವರ ತಂದೆ ಇಕ್ಬಾಲ್ ಹೋದ ವರ್ಷವಷ್ಟೇ ಇದೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಜಗತ್ತಿನಲ್ಲಿ ನಡೆಯುವ ಸಾಮಾನ್ಯ ಅವಘಡಗಳಂತೆ ಇದೂ ಕೂಡ ನಡೆದು ಹೋಗಿತ್ತು ಎಂದು ಅಷ್ಟು ಸುಲಭವಾಗಿ ಹೇಳಿಬಿಡಲು ಸಾಧ್ಯವಾಗುತ್ತಿರಲಿಲ್ಲ. ಮಗುವಿನ ಪುಸ್ತಿಕೆಗಳ ಚೀಲದಿಂದ ಗುಟ್ಟಿನ ತನ್ನ ಪುಟ್ಟ ಕನಸಿನ ಲೋಕ ಹೊರಬಿದ್ದು ಚೆಲ್ಲಾಪಿಲ್ಲಿಯಾಗಿ ಈ ನಿರ್ದಾಕ್ಷಿಣ್ಯ ಲೋಕದೆದರು ಬೆತ್ತಲಾಗಿತ್ತು. ತಿದ್ದಿತೀಡಿ ಅಭ್ಯಾಸ ಮಾಡಿ ಸ್ಲೇಟಿನಲ್ಲಿ ಬರೆಸಿದ್ದ ಕನ್ನಡದ ಮೂರು ಪದಗಳ ಮೇಲೆ ಮೂಕ ಮಕ್ಕಳ ರಕ್ತ ತೊಟ್ಟಿಕ್ಕಿದ್ದ ಕಲೆಗಳು. ಸಣ್ಣ ಜುಟ್ಟಿಗೆ ಮುಡಿದಿದ್ದ ಚೆಂಡು ಹೂವಿನ ಪಕಳೆಗಳು ಉದುರಿ ಪುಡಿಯಾಗಿದ್ದವು. ಲಾರಿಯ ಚಕ್ರ ಮಗುವಿನ ಬೆನ್ನ ಮೇಲೆ ನಿಂತಿತ್ತು. ಆ ಮಗುವಿನ ಮುಗ್ಧ ಕಣ್ಣು ಈ ಜಗತ್ತಿಗೂ ತನಗೂ ಇನ್ನೂ ತುಂಬಾ ನಂಟಿತ್ತು ಎಂಬ ನಿರೀಕ್ಷೆಯಲ್ಲಿಯೇ ದಿಟ್ಟಿಸಿ ನೊಡುತ್ತಿತ್ತು...

– ಮಂಜುನಾಥ್ ಲತಾ

Leave a Reply