ಬಸವಣ್ಣನವರಿಗೆ ಅವಹೇಳನ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

3 hours ago

ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರ

ವಿಷಯ: ಬಸವಣ್ಣನವರಿಗೆ ಅವಹೇಳನ ಮಾಡಿದ ರವಿ ಹಂಜ ಮತ್ತು ಅವರಿಗೆ ವೇದಿಕೆ ಕಲ್ಪಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ

ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಶರಣು ಶರಣಾರ್ಥಿ, ನಿಮ್ಮ ಸರ್ಕಾರದ ಅತ್ಯಂತ ಮಹತ್ವದ ಮತ್ತು ಇಡೀ ರಾಜ್ಯವೇ ಹೆಮ್ಮೆ ಪಡುವಂತಹ ಐತಿಹಾಸಿಕ ನಿರ್ಣಯವೆಂದರೆ, ವಿಶ್ವಗುರು ಬಸವಣ್ಣನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿರುವುದು. ಇದಕ್ಕಾಗಿ ನಾಡಿನ ಸಮಸ್ತ ಬಸವ ಅನುಯಾಯಿಗಳ ಪರವಾಗಿ ನಿಮಗೆ ತುಂಬು ಹೃದಯದ ಅಭಿನಂದನೆಗಳು.

ಆದರೆ ಅತ್ಯಂತ ನೋವಿನ ಮತ್ತು ಆಕ್ರೋಶದ ವಿಷಯವೆಂದರೆ, ನೀವೇ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಅದೇ ಮಹಾತ್ಮ ಬಸವಣ್ಣನವರ ಬಗ್ಗೆ, ಅನಿವಾಸಿ ಭಾರತೀಯರಾದ ರವಿ ಹಂಜ ಎಂಬ ವ್ಯಕ್ತಿಯು ಇತ್ತೀಚೆಗೆ ಅತ್ಯಂತ ನೀಚವಾಗಿ “ಕಳ್ಳ, ಸುಳ್ಳ, ಕೊಲೆಗಾರ” ಎಂದು ಏಕವಚನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಮಾನ್ಯರೇ, ಇದು ಕೇವಲ ಬಸವಣ್ಣನವರಿಗೆ ಮಾಡಿದ ಅವಮಾನವಲ್ಲ, ಇದು ಕರ್ನಾಟಕ ಸರ್ಕಾರದ ಘೋಷಣೆಗೆ, ರಾಜ್ಯದ ಜನರ ಭಾವನೆಗೆ ಮತ್ತು ಸರ್ಕಾರದ ವಿರುದ್ಧವೇ ಮಾಡಿದ ಹೇಳಿಕೆಯಾಗಿದೆ. ಆದುದರಿಂದ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಬಸವ ಅನುಯಾಯಿಗಳ ಸ್ವಾಭಿಮಾನ ಉಳಿಸಲು ತಾವು ಕೂಡಲೇ ಈ ಕೆಳಗಿನ ಕ್ರಮಗಳನ್ನು ಜರುಗಿಸಬೇಕೆಂದು ಈ ಮೂಲಕ ಬಹಿರಂಗವಾಗಿ ಆಗ್ರಹಿಸುತ್ತಿದ್ದೇನೆ.

ನಮ್ಮ ಪ್ರಮುಖ ಬೇಡಿಕೆಗಳು:
1. ರವಿ ಹಂಜ ಎಂಬ ವ್ಯಕ್ತಿಯನ್ನು ತಕ್ಷಣವೇ ಬಂಧಿಸಬೇಕು, ಬಸವಣ್ಣನವರಿಗೆ ಅವಹೇಳನ ಮಾಡಿದ ಪ್ರಕರಣದಲ್ಲಿ ದೇಶದ್ರೋಹದಂತಹ ಕಠಿಣ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು.
2. ಅವರ ವಿವಾದಾತ್ಮಕ “ಬಸವ ಮಂಟಪ” ಕೃತಿಯನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ರಾಜ್ಯಾದ್ಯಂತ ಅದರ ಮಾರಾಟ, ಪ್ರಚಾರವನ್ನು ನಿಷೇಧಿಸಬೇಕು.
3. ಇಂತಹ ಬಸವ ದ್ರೋಹಿಗಳಿಗೆ ಬರೆಯಲು ವೇದಿಕೆ ಕೊಟ್ಟ ವಿಶ್ವೇಶ್ವರ ಭಟ್ ಅವರನ್ನು ಬಂಧಿಸಬೇಕು ಮತ್ತು ಅವರ ವಿಶ್ವವಾಣಿ ಪತ್ರಿಕೆಯ ಪರವಾನಿಗೆಯನ್ನು ರದ್ದುಗೊಳಿಸಬೇಕು.
ಮಾನ್ಯ ಮುಖ್ಯಮಂತ್ರಿಗಳೇ, ಇಲ್ಲದಿದ್ದರೆ ಇಡೀ ರಾಜ್ಯದ ಬಸವ ಅನುಯಾಯಿಗಳು, ಲಿಂಗಾಯತ ಸಮಾಜ ದಂಗೆ ಏಳಬೇಕಾಗುತ್ತದೆ. ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಅದಕ್ಕೆ ಸರ್ಕಾರವೇ ಹೊಣೆಗಾರಿಕೆಯಾಗಬೇಕಾಗುತ್ತದೆ. ಆದುದರಿಂದ ತಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಕಠಿಣ ಕ್ರಮ ಜರುಗಿಸುವಿರಿ ಎಂದು ಭಾವಿಸುತ್ತೇನೆ.

ಶರಣು ಶರಣಾರ್ಥಿಗಳೊಂದಿಗೆ,
ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು
ಅನುಭವ ಮಂಟಪ ಬಳಗ, ದಾವಣಗೆರೆ
ಮೊ: 9945439171

Leave a Reply