ನ್ಯಾಯಾಲಯದ ಆದೇಶವಿದ್ದರೂ 8 ವರ್ಷಗಳಿಂದ ಉದ್ಯೋಗ ವಂಚನೆ

23 minutes ago

ಅಮರುದ್ದೀನ್ ಶಿರಹಟ್ಟಿ ಅವರಿಗೆ ತಕ್ಷಣ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಿ: ಅಪ್ಸರ್ ಕೊಡ್ಲಿಪೇಟೆ

ದಾವಣಗೆರೆ: ಧಾರವಾಡದ ಅಮರುದ್ದೀನ್ ಶಿರಹಟ್ಟಿ ಅವರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನಗಳಿದ್ದರೂ ಇದುವರೆಗೆ ನೇಮಕಾತಿ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅಮರುದ್ದೀನ್ ಶಿರಹಟ್ಟಿ ಅವರಿಗೆ ತಕ್ಷಣ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಒತ್ತಾಯಿಸಿ ಕರ್ನಾಟಕದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ಅಪ್ಸರ್ ಕೊಡ್ಲಿಪೇಟೆ ಅವರು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ಯಾವುದೇ ಖಾಸಗಿ ಅನುದಾನಿತ ಕಾಲೇಜಿನಲ್ಲಿ ಲಭ್ಯವಿರುವ ಬೋಧಕೇತರ ಖಾಲಿ ಹುದ್ದೆಯಲ್ಲಿ ಅರ್ಹ ಅಭ್ಯರ್ಥಿಯನ್ನು ನೇಮಕ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡಬೇಕೆಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಅಮರುದ್ದೀನ್ ಶಿರಹಟ್ಟಿ ಅವರ ತಂದೆ ಶಮಶುದ್ದೀನ್ ಶಿರಹಟ್ಟಿ ಅವರು ಧಾರವಾಡದ ಜೆ.ಎಸ್.ಎಸ್. ಪದವಿಪೂರ್ವ ವೃತ್ತಿಶಿಕ್ಷಣ ವಿಭಾಗದಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, 11 ಸೆಪ್ಟೆಂಬರ್ 2011ರಂದು ತಮ್ಮ 54ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕುಟುಂಬದ ಅವಲಂಬಿತರಾದ ಪುತ್ರ ಅಮರುದ್ದೀನ್ ಅವರು ಬಿ.ಎ. ಪದವೀಧರರಾಗಿದ್ದು, ಪ್ರಸ್ತುತ ನಿರುದ್ಯೋಗಿಯಾಗಿದ್ದಾರೆ ಎಂದಿದ್ದಾರೆ.

ಈ ಪ್ರಕರಣದಲ್ಲಿ ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ಪೀಠವು W.P. No.106240/201508-03-2018ರ ಆದೇಶದಲ್ಲಿ ನಾಲ್ಕು ತಿಂಗಳೊಳಗಾಗಿ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವಂತೆ ನಿರ್ದೇಶಿಸಿತ್ತು ಎಂದಿದ್ದಾರೆ.

ಇದಲ್ಲದೆ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ನಿರ್ದೇಶಕರ ಕಚೇರಿಯು 30-01-2025 ಮತ್ತು 09-06-2026ರಂದು ಹೊರಡಿಸಿರುವ ಆದೇಶಗಳಲ್ಲಿಯೂ ಅಮರುದ್ದೀನ್ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಸಂಬಂಧ ಧಾರವಾಡ ಜಿಲ್ಲೆಯ ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಲಭ್ಯವಿರುವ ಬೋಧಕೇತರ ಖಾಲಿ ಹುದ್ದೆಗಳ ಕುರಿತು ಪ್ರಸ್ತಾವನೆ ಪಡೆದು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಆದರೆ, ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ನಿರ್ದೇಶನಗಳಿದ್ದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಹಲವು ವರ್ಷಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಅಮರುದ್ದೀನ್ ಅವರು ಇಲಾಖೆಯ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇದರಿಂದ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ.

ನ್ಯಾಯಾಲಯದ ಆದೇಶವಿದ್ದರೂ ಹಾಗೂ ಸಂಬಂಧಪಟ್ಟ ಇಲಾಖೆಯು ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರೂ, ವರ್ಷಗಳ ಕಾಲ ಅಭ್ಯರ್ಥಿಯನ್ನು ಕಾಯಿಸುವುದು ಅತ್ಯಂತ ಅನ್ಯಾಯವಾಗಿದೆ. ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಉದ್ದೇಶವೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡುವುದಾಗಿದೆ. ಹೀಗಿರುವಾಗ ಅರ್ಹ ಅಭ್ಯರ್ಥಿಯನ್ನು ಇನ್ನೂ ವಿಳಂಬ ಮಾಡದೆ ನೇಮಕ ಮಾಡಬೇಕು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ, ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ನಿರ್ದೇಶನಗಳನ್ನು ಪರಿಗಣಿಸಿ, ಧಾರವಾಡ ಜಿಲ್ಲೆಯ ಯಾವುದೇ ಖಾಸಗಿ ಅನುದಾನಿತ ಕಾಲೇಜಿನಲ್ಲಿ ಲಭ್ಯವಿರುವ ಬೋಧಕೇತರ ಹುದ್ದೆಯನ್ನು ಅಮರುದ್ದೀನ್ ಶಿರಹಟ್ಟಿ ಅವರಿಗೆ ಅನುಕಂಪದ ಆಧಾರದ ಮೇಲೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅತೀ ಶೀಘ್ರವಾಗಿ ಆದೇಶ ನೀಡುವಂತೆ ಅವರು ಒತ್ತಾಯಿಸಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಮಟ್ಟದಲ್ಲಿ ತಕ್ಷಣ ಮಧ್ಯಪ್ರವೇಶಿಸಿ, ಹಲವು ವರ್ಷಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ ಅಮರುದ್ದೀನ್ ಶಿರಹಟ್ಟಿ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಮುಖ್ಯಮಂತ್ರಿಗಳು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳಿಗೆ ತಕ್ಷಣ ನಿರ್ದೇಶನ ನೀಡುವ ಮೂಲಕ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

Leave a Reply