ನಟ ಕಮಲ ಹಾಸನ್ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ

11 months ago

ಬೆಂಗಳೂರು: ದ್ರಾವಿಡ ಭಾಷೆ ಕನ್ನಡ ತಮಿಳಿನಿಂದ ಹುಟ್ಟಿರುವುದು. ಕನ್ನಡ ತಮಿಳಿನ ಮುಂದೆ ತಲೆಬಾಗಲೇಬೇಕು ಎಂದು ಹೇಳಿರುವ ನಟ ಕಮಲ ಹಾಸನ್ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಮಲ ಹಾಸನ್ ಅವರ ಈ ಹೇಳಿಕೆ ಅತ್ಯಂತ ಅಕ್ಷಮ್ಯ ಎಂದು ಟೀಕಿಸಿರುವ ಸಿಎಂ ಸಿದ್ದರಾಮಯ್ಯ, ಕನ್ನಡಕ್ಕೆ ದೀರ್ಘ ಕಾಲದ ಇತಿಹಾಸವಿದೆ. ಪಾಪ ಕಮಲ್ ಹಾಸನ್ ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಈ ಹೇಳಿಕೆಯನ್ನು ಖಂಡಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ, ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎನ್ನುವ ನಿರರ್ಥಕ ಮಾತುಗಳಿಂದ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.

ಇಂತಹ ಧಕ್ಕೆ ಉಂಟು ಮಾಡಿರುವ ಕಮಲ್ ಹಾಸನ್ ಅವರು ರಾಹುಲ್ ಗಾಂಧಿ ಅವರಿಗೆ ಮತ್ತು ಅವರ ಮಿತ್ರ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಪರಮಾಪ್ತರು ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಗಾಂಧಿ ಹಾಗೂ ಸ್ಟಾಲಿನ್ ಅವರ ಮೂಲಕ ಕಮಲ್ ಹಾಸನ್ ಅವರ ಕಿವಿ ಹಿಂಡಿಸಿ ಇನ್ನೆಂದೂ ಕನ್ನಡ ನಾಡು-ನುಡಿಯ ತಂಟೆಗೆ ಬರದಂತೆ ಎಚ್ಚರಿಕೆ ಕೊಡಿಸಬಹುದೇ? ಅಥವಾ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಕ್ಕಿಂತ ಹೈಕಮಾಂಡ್ ಭಕ್ತಿ ಹಾಗು ರಾಜಕೀಯ ಮೈತ್ರಿಯೇ ದೊಡ್ಡದೇ? ಎಂದು ಪ್ರಶ್ನಿಸಿದ್ದಾರೆ

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್ ಹಾಸನ್ ತಮ್ಮ ತಮಿಳು ಭಾಷೆಯನ್ನು ವೈಭವವೀಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ ಎಂದಿದ್ದಾರೆ.

ಕನ್ನಡವನ್ನು ಅವಹೇಳನ ಮಾಡುವ ಮುನ್ನ ಕನ್ನಡ ಚಿತ್ರಗಳಲ್ಲೂ ನಟಿಸಿರುವ ಕಮಲ್ ಹಾಸನ್ ಕನ್ನಡ, ಕನ್ನಡಿಗರ ಋಣ ತಮ್ಮ ಮೇಲಿದೆ ಎಂಬ ಔದಾರ್ಯತೆಯನ್ನು ಮರೆತಿದ್ದು ಅವರ ಉಪಕಾರ ಸ್ಮರಣೆಯಿಲ್ಲದ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ ಎಂದಿದ್ದಾರೆ.

ಕಮಲಹಾಸನ್ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಈ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ

ಮತ್ತೊಂದೆಡೆ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯ ಅಖಾಡಕ್ಕೆ ಧುಮುಕಿವೆ. ರಾಜ್ಯದ ಹಲವಡೆ ಕಮಲ ಹಾಸನ್ ಅಭಿನಯದ ಚಿತ್ರದ ಪೋಸ್ಟರ್ಗಳನ್ನು ಹರಿದು ಹಾಕುವ ಮೂಲಕ  ಪ್ರತಿಭಟನೆ ನಡೆಸಿದ್ದಾರೆ.

ಕನ್ನಡ ರಕ್ಷಣಾ ವೇದಿಕೆ ಸದಸ್ಯರು ರಾಜ್ಯದಲ್ಲಿ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು, ನಿಷೇಧಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ‘ಥಗ್ ಲೈಫ್’ ಚಿತ್ರದ ಪೋಸ್ಟರ್ಗಳನ್ನು ಹರಿದು ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

Leave a Reply