ಏಕಾಧಿಪತ್ಯದ ಹೇರಿಕೆ ಮತ್ತು ಕಾಶ್ಮಿರದ ಅಸ್ಮಿತೆ

2 years ago

ಸಂಸತ್ತಿನಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಡಿ.21 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು “ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಾಪಸ್ ಪಡೆದಿದ್ದರಿಂದಾಗಿ ಭಯೋತ್ಪಾದಕ ಕೃತ್ಯಗಳು ಗಣನೀಯವಾಗಿ ಕಡಿಮೆಯಾಗಿವೆ” ಎಂದು ಹೇಳುವ ಮೂಲಕ 370 ವಿಧಿಯ ರದ್ದತಿಯನ್ನು ಸಮರ್ಥಿಸಿಕೊಂಡರು.

ಇದಾದ ಮಾರನೆಯ ದಿನವೇ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ದಾತ್ಕರ್ ಮೋರ್ ಎಂಬಲ್ಲಿ ಸೇನಾವಾಹನಗಳ ಮೇಲೆ ಮಟಮಟ ಮಧ್ಯಾಹ್ನ ಭಯೋತ್ಪಾದಕರು ದಾಳಿ ನಡೆಸಿದ್ದು ಐವರು ಯೋಧರು ಹತರಾದರು.

ಕಳೆದ ತಿಂಗಳೂ ಸಹ ಇಬ್ಬರು ಕ್ಯಾಪ್ಟನ್ ಗಳೂ ಸೇರಿದಂತೆ ಐವರು ಯೋಧರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಎಪ್ರೀಲ್ ಮೇ ತಿಂಗಳಲ್ಲಿಯೂ ನಡೆದ ಎರಡು ದಾಳಿಗಳಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಯೋಧರು ಬಲಿಯಾಗಿದ್ದರು.

2019 ರ ಆಗಸ್ಟನಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದ ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನೂ ಅಮಾನತ್ತುಗೊಳಿಸಿ ಕೇಂದ್ರಾಡಳಿತವನ್ನು ಜಾರಿಗೊಳಿಸಿತ್ತು. ಭಯೋತ್ಪಾದನೆಯನ್ನು ನಾಶ ಮಾಡುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಳ್ಳಲಾಗಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಹ ಕೇಂದ್ರದ ಈ ನಿರ್ಧಾರಕ್ಕೆ ಪೂರಕವಾದ ತೀರ್ಪು ಕೊಟ್ಟಿತ್ತು. ಆದರೆ ಆಗಿದ್ದೇನು? ನಾಲ್ಕು ವರ್ಷಗಳೇ ಉರುಳಿದರೂ, ಮಿಲಿಟರಿ ಪಡೆಯ ಸುಪರ್ದಿಯಲ್ಲಿ ಜಮ್ಮು ಕಾಶ್ಮೀರ ಇದ್ದರೂ ಭಯೋತ್ಪಾದನೆ ಕೊನೆಯಾಯಿತೆ? ಭಯೋತ್ಪಾದಕರು ನಾಮಾವಶೇಷವಾದರೆ? ಕಾಶ್ಮೀರದ ಜನತೆಗೆ ನೆಮ್ಮದಿ ದೊರಕಿತೇ?

ಯಾವುದೂ ಆಗಲಿಲ್ಲ. ಹೇಳಿದಂತೆ ನಡೆದುಕೊಳ್ಳಲು ಕೇಂದ್ರ ಸರಕಾರಕ್ಕೂ ಸಾಧ್ಯವಾಗಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಭಯೋತ್ಪಾದನೆ ಹಿಂದಿಗಿಂತಲೂ ಹೆಚ್ಚಾಯಿತು. ದಾಳಿಗೆ ತುತ್ತಾಗಿ ಯೋಧರ ಸಾವು ನೋವುಗಳು ನಿರಂತರವಾದವು. ಜಮ್ಮು ಕಾಶ್ಮೀರದ ಜನರ ಬದುಕು ದಮನೀಯವಾಯಿತು. ಕಾಶ್ಮೀರದ ಪಂಡಿತರ ಬದುಕು ಇನ್ನೂ ದಮನೀಯವಾಯಿತು. ಕಾಶ್ಮೀರದ ಮೇಲೆ ಶತಾಯ ಗತಾಯ ಹಿಡಿತ ಸಾಧಿಸಲೇಬೇಕೆಂಬ ಕೇಂದ್ರ ಸರಕಾರದ ಉದ್ದೇಶ ಈಡೇರದೇ ಹೋಯಿತು.

ಮೊದಲಾದರೆ ರಾಜ್ಯ ಸರಕಾರಗಳು ಮುಸ್ಲಿಂ ಭಯೋತ್ಪಾದಕರಿಗೆ ಪರೋಕ್ಷವಾಗಿ ನೆರವಾಗುತ್ತಾರೆ ಎನ್ನುವ ಆರೋಪವನ್ನು ಮಾಡುತ್ತಿದ್ದ ಕೇಂದ್ರ ಸರಕಾರ ರಾಜ್ಯಾಡಳಿತವನ್ನೇ ತೆಗೆದುಹಾಕಿ ಕೇಂದ್ರಾಡಳಿತ ಜಾರಿಗೊಳಿಸಿತು. ಆ ರಾಜ್ಯದ ನಾಯಕರುಗಳನ್ನು ಗೃಹಬಂಧನದಲ್ಲಿರಿಸಿತು. ಮಿಲಿಟರಿ ದಮನದ ವಿರುದ್ದ ಕಲ್ಲು ತೂರಿ ತಮ್ಮ ಹತಾಶೆ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಾಶ್ಮೀರದ ಜನಸಾಮಾನ್ಯರನ್ನು ದಮನಿಸಲಾಯ್ತು, ಹಲವಾರು ಯುವಕರನ್ನು ಕರಾಳ ಕಾನೂನಿನಡಿ ಬಂಧಿಸಲಾಯ್ತು. ಇಷ್ಟೆಲ್ಲಾ ಕ್ರಮ ಕೈಗೊಂಡ ಮೇಲೆ ಭಯೋತ್ಪಾದನೆ ನಿಲ್ಲಬೇಕಾಗಿತ್ತು. ಭಯೋತ್ಪಾದಕರು ಗಡಿ ದಾಟಿ ಓಡಿ ಹೋಗಬೇಕಿತ್ತು. ಆದರೂ ಯಾಕೆ ಹಾಗಾಗಲಿಲ್ಲ? ಕೇಂದ್ರ ಸರಕಾರದ ಶಾಂತಿ ಸ್ಥಾಪನೆಯ ಉದ್ದೇಶ ಯಾಕೆ ಈಡೇರಲಿಲ್ಲ?

ಉತ್ತರ ಕ್ಲಿಷ್ಟಕರವಾದದ್ದೇನೂ ಅಲ್ಲ. “ಎಲ್ಲಿ ದಮನ ಹೆಚ್ಚುತ್ತದೆಯೋ ಅಲ್ಲಿ ದಂಗೆ ತೀವ್ರಗೊಳ್ಳುತ್ತದೆ” ಎನ್ನುವುದನ್ನು ಮನುಕುಲದ ಚರಿತ್ರೆ ಹೇಳುತ್ತದೆ. ಯಾವಾಗ ತಮ್ಮ ನೆಲ ಜಲವನ್ನು ಹೊರಗಿನಿಂದ ಬಂದವರಿಗೆ ಆಕ್ರಮಿಸಿಕೊಳ್ಳಲು ಅವಕಾಶ ಕೊಡಲಾಗಿದೆ ಎಂಬುದು ಕಾಶ್ಮೀರಿಗರಿಗೆ ಮನದಟ್ಟಾಯಿತೋ ಆಗಲೇ ಅಸಹನೆ ಕುದಿಯಲಾರಂಭಿಸಿತು. ಮಿಲಿಟರಿ ಕಾರ್ಯಾಚರಣೆಯ ಹೆಸರಲ್ಲಿ ಪ್ರಭುತ್ವದ ದಮನ ಹೆಚ್ಚಾದಷ್ಟೂ ಕಾಶ್ಮೀರಿ ಯುವಕರ ಮನಸ್ಸಲ್ಲಿ ಆಕ್ರೋಶ ಹೆಚ್ಚತೊಡಗಿತು. ಕಾಶ್ಮೀರದ ಪ್ರವಾಸೋದ್ಯಮ ಕುಂಠಿತಗೊಂಡಿತು. ನಿರುದ್ಯೋಗ ಅತಿಯಾಯಿತು. ಈ ರೀತಿಯ ಸಂದರ್ಭವನ್ನು ಬಳಸಿಕೊಂಡ ಭಯೋತ್ಪಾಕ ಸಂಘಟನೆಗಳು ಕಾಶ್ಮೀರಿ ಯುವಕರ ತಲೆಯಲ್ಲಿ ಸಶಸ್ತ್ರ ಸಂಘರ್ಷದ ಬೀಜಗಳನ್ನು ಬಿತ್ತತೊಡಗಿದರು. ಬದುಕುವ ಸ್ವಾತಂತ್ರ್ಯವನ್ನೇ ಕಳೆದುಕೊಂಡು ನಿರಾಸೆ ಹೊಂದಿದ ಯುವಕರು ಉಗ್ರಸಂಘಟನೆಗಳತ್ತ ಅನಿವಾರ್ಯವಾಗಿ ಆಕರ್ಷಿತರಾದರು. ಸಶಸ್ತ್ರ ತರಬೇತಿ ಪಡೆದುಕೊಂಡರು. ಮಿಲಿಟರಿ ಎಂಬ ದೈತ್ಯ ಶಕ್ತಿಯನ್ನು ನೇರಾನೇರಾ ಎದುರಿಸಲು ಅಸಾಧ್ಯವೆಂದರಿತು ಗೆರಿಲ್ಲಾ ರೀತಿಯ ಹೋಡೆದೊಡುವ ಯುದ್ದ ತಂತ್ರಗಳನ್ನು ಪ್ರಯೋಗಿಸತೊಡಗಿದರು. ಹತಾಶಗೊಂಡ ಕಾಶ್ಮೀರದ ನಿವಾಸಿಗಳ ಕಣ್ಣಲ್ಲಿ ಇಂತಹ ಯುವಕರು ಹೀರೋಗಳಾದರು. ಹೀಗಾಗಿ ಭಯೋತ್ಪಾದನೆ ನಿಯಂತ್ರಣಕ್ಕೆ ಬರುವ ಬದಲು ಹೆಚ್ಚಾಗುತ್ತಲೇ ಹೋಯಿತು. ಮಿಲಿಟರಿ ಕಾರ್ಯಾಚರಣೆಯಲ್ಲಿ ಅನೇಕ ಕಾಶ್ಮೀರಿ ಯುವಕರು ಹತ್ಯೆಗೀಡಾದರೆ, ಭಯೋತ್ಪಾದಕರ ದಾಳಿಗೆ ಒಳಗಾಗಿ ಹಲವಾರು ಯೋಧರೂ ಪ್ರಾಣ ಕಳೆದುಕೊಂಡರು. ಮಾತುಕತೆ ಸಮಾಧಾನ ಸಂಧಾನಗಳ ಮಾರ್ಗವನ್ನು ಬಿಟ್ಟು ದಮನ, ದೌರ್ಜನ್ಯ, ಶಕ್ತಿ ಪ್ರದರ್ಶನಗಳಿಂದ ಶಾಂತಿ ನೆಲೆಸುವಂತೆ ಮಾಡುತ್ತೇವೆ ಎನ್ನುವ ಕೇಂದ್ರ ಸರಕಾರದ ನಿರೀಕ್ಷೆಯೇ ನಿರರ್ಥಕವೆನ್ನುವುದು ಕಾಶ್ಮೀರದಲ್ಲಿ ಸಾಬೀತಾಯಿತು.

ನೋಟ್ ಬ್ಯಾನ್ ಮಾಡಿದರೆ ಆತಂಕವಾದ ಕಡಿಮೆಯಾಗುತ್ತದೆ, ಕಾಶ್ಮೀರಿಗರ ವಿಶೇಷ ಸ್ಥಾನಮಾನ ತೆಗೆದು ಹಾಕಿದರೆ ಭಯೋತ್ಪಾದನೆ ನಿಯಂತ್ರಣಕ್ಕೆ ಬರುತ್ತದೆ. ಚುನಾಯಿತ ಸರಕಾರಗಳನ್ನೇ ಅಮಾನತ್ತು ಮಾಡಿ ಮಿಲಿಟರಿ ಆಡಳಿತ ತಂದರೆ ಭಯೋತ್ಪಾದಕರ ಮೂಲೋತ್ಪಾಟನೆ ಆಗುತ್ತದೆ ಎನ್ನುವುದೆಲ್ಲಾ ಬರೀ ಭ್ರಮೆ. ಇತಿಹಾಸದಿಂದ ಪಾಠ ಕಲಿಯದ ಪ್ರಭುತ್ವ ಮಾತ್ರ ಇಂತಹ ದುಸ್ಸಾಹಸಕ್ಕೆ ಮುಂದಾಗಲು ಸಾಧ್ಯ. ಅದರಿಂದಾಗುವ ದುಷ್ಪರಿಣಾಮಗಳಿಗೆ ಯೋಧರು ಬಲಿಯಾಗುತ್ತಿದ್ದಾರೆ, ಭಯೋತ್ಪಾದಕರಲ್ಲದ ಕಾಶ್ಮೀರಿಗರು ನೆಮ್ಮದಿ ಕಳೆದುಕೊಂಡಿದ್ದಾರೆ. ಅಭಿವೃದ್ದಿ ಎನ್ನುವುದೇ ಕನಸಿನ ಮಾತಾಗುತ್ತದೆ.

ಒಂದು ದೇಶ, ಒಂದು ಸಂವಿಧಾನ ಎನ್ನುವ ಕೇಂದ್ರ ಸರಕಾರದ ಘೋಷಣೆ ಕೇಳಲು ಚೆನ್ನಾಗಿರುತ್ತದೆ. ಆದರೆ ಇದು ಬಹುತ್ವದ ಮೇಲೆ ಏಕಾಧಿಪತ್ಯವನ್ನು ಹೇರುವ ಹುನ್ನಾರವಾಗಿದೆ ಎನ್ನುವ ಸಂದೇಹ ಕಾಶ್ಮೀರಿಗರಿಗೆ ಬಂದಿದೆ. ಕಾಶ್ಮೀರ ಪ್ರಾಂತ್ಯವು ಭಾರತದಲ್ಲಿ ವಿಲೀನವಾಗುವ ಮುನ್ನ ಕೆಲವು ಬೇಡಿಕೆಗಳನ್ನು ಇಟ್ಟಿತ್ತು. ಕಾಶ್ಮೀರದ ಅಸ್ಮಿತೆಯನ್ನು ಉಳಿಸಿಕೊಳ್ಳಲು ತಮ್ಮದೇ ಆದ ಸಂವಿಧಾನವನ್ನು ಹೊಂದಲು ಅವಕಾಶ ಪಡೆದಿತ್ತು. ಅದಕ್ಕೆಂದೇ 370 ಎನ್ನುವ ವಿಶೇಷ ವಿಧಿಯನ್ನು ರೂಪಿಸಿ ಒಪ್ಪಂದ ಪತ್ರಕ್ಕೆ ಆಗಿನ ಕಾಶ್ಮೀರದ ರಾಜ ಸಹಿ ಹಾಕಿದ್ದು. ಅದರಲ್ಲಿದ್ದ ಪ್ರಮುಖ ಅಂಶ ಏನೆಂದರೆ ಕಾಶ್ಮೀರಿಗಳನ್ನು ಹೊರತು ಪಡಿಸಿ ಹೊರಗಿನವರಿಗೆ ಆಸ್ತಿಯನ್ನು ಹೊಂದಲು ಅವಕಾಶ ಇಲ್ಲವೆನ್ನುವುದಾಗಿತ್ತು.

ಯಾವುದೇ ಜನಾಂಗವಿರಲಿ ಅವರ ಬೇರುಗಳು ಆಯಾ ಪರಿಸರದಲ್ಲಿ ಆಳವಾಗಿ ಇಳಿದಿರುತ್ತವೆ. ನೆಲ ಜಲದ ಜೊತೆಗೆ ಅವರ ಸಂಸ್ಕೃತಿ ಮಿಳಿತವಾಗಿರುತ್ತದೆ. ಯಾವಾಗ ಬೇರೆಯವರು ಬಂದು ತಮ್ಮ ನೆಲವನ್ನು ಖರೀದಿಸಿ ತಮ್ಮನ್ನು ನೆಲೆಯಿಲ್ಲದವರನ್ನಾಗಿ ಮಾಡುತ್ತಾರೋ ಎನ್ನುವ ಆತಂಕ ಕಾಡುತ್ತಲೇ ಇರುತ್ತದೆ. ಯಾವಾಗ ಏಕ ರಾಷ್ಟ್ರದ ಹೆಸರಿನಲ್ಲಿ ಬಿಜೆಪಿಯು ಕಾಶ್ಮೀರದ ಹಕ್ಕುಗಳನ್ನು ಮೊಟಕುಗೊಳಿಸಿ, ಹಿಂದೆ ಆಗಿದ್ದ ಒಪ್ಪಂದವನ್ನು ರದ್ದು ಪಡಿಸಿ ಕಾಶ್ಮೀರಿಗರ ಅಸ್ಮಿತೆಯನ್ನೇ ಒಡೆದು ಹಾಕಲು ಬಲವಂತದ ಕ್ರಮ ತೆಗೆದುಕೊಂಡರೋ ಆಗ ಸಹಜವಾಗಿ ಪ್ರತಿರೋಧ ಹೆಚ್ಚಾಯಿತು. ತಮ್ಮ ನೆಲ ಜಲ ಜನರ ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಕಾಶ್ಮೀರದ ಯುವಕರು ಆತಂಕವಾದಿಗಳ ಜೊತೆ ಸೇರಿಕೊಂಡು ಪ್ರಭುತ್ವದ ವಿರುದ್ದ ಸಶಸ್ತ್ರ ದಂಗೆಯನ್ನು ಆರಂಭಿಸಿದರು. ಮಿಲಿಟರಿ ದಮನ ಹೆಚ್ಚಾದಷ್ಟೂ ಭಯೋತ್ಪಾದಕ ಚಟುವಟಿಕೆಗಳೂ ತೀವ್ರಗೊಂಡವು. ಇಡೀ ಜಮ್ಮು ಕಾಶ್ಮೀರ ಪ್ರಾಂತ್ಯ ಈಗ ರಕ್ತಸಿಕ್ತ ನಾಡಾಗಿದೆ. ಅಲ್ಲಿಯ ಜನರು ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ.

ಇದಕ್ಕೆಲ್ಲಾ ಯಾರು ಕಾರಣರು? ಯುವಕರನ್ನು ದಾರಿತಪ್ಪಿಸುತ್ತಿರುವ ಆತಂಕವಾದಿಗಳಾ? ಆತಂಕವಾದಿಗಳಿಗೆ ಬೆಂಬಲ ಪ್ರಚೋದನೆ ಕೊಡುತ್ತಿರುವ ಪಾಕಿಸ್ಥಾನವಾ? ಇಲ್ಲಾ ಹತಾಶೆಯಿಂದಾ ಆತಂಕವಾದದತ್ತ ಆಕರ್ಷಿತರಾಗಿ ಭಯೋತ್ಪಾದನೆಗೆ ತೊಡಗಿರುವ ಕಾಶ್ಮೀರಿ ಯುವಕರಾ? ಅಥವಾ ಕಾಶ್ಮೀರಿಗರ ಅಸ್ಮಿತೆಯನ್ನೇ ಸರ್ವನಾಶ ಮಾಡಿ, ಅವರಿಗೆ ಸಂವಿಧಾನದತ್ತವಾಗಿ ಬಂದ ವಿಶೇಷತೆಯನ್ನು ತೆಗೆದುಹಾಕಿ, ರಾಜ್ಯಾಡಳಿತದ ಹಕ್ಕನ್ನೂ ಕಿತ್ತುಕೊಂಡು ಮಿಲಿಟರಿಯನ್ನು ಹೇರಿದ ಕೇಂದ್ರ ಸರಕಾರವಾ? ಅಥವಾ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದವರ ಇಸ್ಲಾಮೋಪೋಬಿಯಾವಾ?

ಇವೆಲ್ಲವೂ ಒಟ್ಟಾಗಿ ಸೇರಿಯೇ ಭೂಲೋಕದ ಸ್ವರ್ಗವಾಗಿದ್ದ ಕಾಶ್ಮೀರ ಈಗ ನರಕವಾಗಿದೆ. ಉಗ್ರ ರಾಷ್ಟ್ರೀಯವಾದಿಗಳ ಅತಿರೇಕಗಳಿಗೆ ಇಡೀ ಜಮ್ಮು ಕಾಶ್ಮೀರ ಪ್ರಾಂತ್ಯ ನರಳುತ್ತಿದೆ. ಕಾಶ್ಮೀರದ ನೆಲ ಜಲ ಸಂಪನ್ಮೂಲಗಳನ್ನು ಬಂಡವಾಳಶಾಹಿಗಳಿಗೆ, ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳಿಗೆ ಮುಕ್ತವಾಗಿಸುವುದು ಬಿಜೆಪಿ ಸರಕಾರದ ನಿಜವಾದ ಉದ್ದೇಶವಾಗಿದೆ. ತಮ್ಮ ಸಂಪನ್ಮೂಲಗಳನ್ನು ಅನ್ಯರ ಆಕ್ರಮಣಗಳಿಂದ ಕಾಪಾಡಿಕೊಳ್ಳುವುದು ಕಾಶ್ಮೀರಿಗರ ಸಾವು ಬದುಕಿನ ಪ್ರಶ್ನೆಯಾಗಿದೆ. ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವುದು ಪ್ರಭುತ್ವ ಮತ್ತು ಕಾಶ್ಮೀರಿಗರ ನಡುವಿನ ಸಂಘರ್ಷ ಮಾತ್ರವಲ್ಲ, ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಮತ್ತು ಕಾಶ್ಮೀರಿಗರ ಅಸ್ಮಿತೆಯ ರಕ್ಷಣೆಗಳ ನಡುವೆ ಸಂಘರ್ಷ ನಡೆಯುತ್ತಿದೆ. ಸಂಘೀ ಸರಕಾರವನ್ನು ಪೋಷಿಸುತ್ತಿರುವ ಕಾರ್ಪೋರೇಟ್ ದೈತ್ಯರು ಇಡೀ ದೇಶವನ್ನೇ ದೋಚಿದಂತೆ ಕಾಶ್ಮೀರವನ್ನೂ ತಮ್ಮ ವ್ಯಾಪಾರಿ ಹಿತಾಸಕ್ತಿಯ ಆಡಂಬೋಲ ಮಾಡಿಕೊಳ್ಳಲು ಅತ್ಯಾಸಕ್ತರಾಗಿದ್ದಾರೆ. ಅದಕ್ಕೆ ಕಾಶ್ಮೀರಿಗರು ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಂಡವಾಳಿಗರ ಹಿತಾಸಕ್ತಿಗಾಗಿ ಪ್ರಭುತ್ವವು ರಾಷ್ಟ್ರೀಯತೆ ಹೆಸರಲ್ಲಿ ಏನು ಬೇಕಾದರೂ ಮಾಡಲು ಸಿದ್ದವಾಗಿದೆ. ಒಂದು ದೇಶ ಒಂದು ಸಂವಿಧಾನದ ಹೆಸರಲ್ಲಿ ಸಂಘಿ ಸರಕಾರವು ಕಾಶ್ಮೀರವನ್ನು ಬಂಡವಾಳಿಗರ ಲೂಟಿಗೆ ತೆರೆದಿಡುವ ಹುನ್ನಾರ ನಡೆಸುತ್ತಿದೆ. ಇದಕ್ಕಾಗಿ ಮಿಲಿಟರಿ ಶಕ್ತಿಯನ್ನು ಬಳಸಲಾಗುತ್ತಿದೆ. ಅದಕ್ಕೆ ಈ ದೇಶದ ಜನರ ತೆರಿಗೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ಇದೇ ಹಣವನ್ನು ಕಾಶ್ಮೀರದ ಅಭಿವೃದ್ದಿಗೆ ಬಳಸಿದ್ದರೆ, ಅಲ್ಲಿಯ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಉಪಯೋಗಿಸಿದ್ದರೆ, ಅಲ್ಲಿಯ ಜನರ ಬದುಕನ್ನು ಹಸನಾಗಿಸಲು ಖರ್ಚು ಮಾಡಿದ್ದರೆ ಆತಂಕವಾದಿಗಳನ್ನು ಮಟ್ಟ ಹಾಕಬಹುದಾಗಿತ್ತು, ಜಿಹಾದಿಗಳ ಹುಟ್ಟಡಗಿಸಬಹುದಾಗಿತ್ತು, ಭಯೋತ್ಪಾದನೆಯನ್ನು ನಿಯಂತ್ರಿಸಬಹುದಾಗಿತ್ತು.

ಯಾವುದೇ ಭಯೋತ್ಪಾದಕ ಸಂಘಟನೆ ಸ್ಥಳೀಯ ಜನರ ಬೆಂಬಲವಿಲ್ಲದೇ ನೆಲೆ ಸ್ಥಾಪಿಸಲಾಗದು. ಕಾಶ್ಮೀರವನ್ನು ಸುಭೀಕ್ಷೆಗೊಳಿಸಿದ್ದರೆ, ಅಲ್ಲಿಯ ನಿವಾಸಿಗಳಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿದ್ದರೆ ಆ ಎಲ್ಲಾ ಜನರ ಬೆಂಬಲ ಭಾರತದ ಪರವಾಗಿರುತ್ತಿತ್ತು. ಆದರೆ ಈಗ ಅಲ್ಲಿ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದ್ದು ಮಿಲಿಟರಿ ದಮನ ಹೆಚ್ಚಾದಷ್ಟೂ ಬಹುತೇಕ ಕಾಶ್ಮೀರಿಗರು ಭಾರತದ ವಿರೋಧಿಗಳಾಗಿದ್ದಾರೆ. ಭಯೋತ್ಪಾದಕರ ಪರವಾಗಿದ್ದಾರೆ. ಈ ಪಲ್ಲಟಕ್ಕೆ ಬಿಜೆಪಿಯ ಕೇಂದ್ರ ಸರಕಾರವೇ ಕಾರಣವಾಗಿದೆ. ಕಾಶ್ಮೀರಿಗರನ್ನು ಬಲವಂತವಾಗಿ ಹತ್ತಿಕ್ಕಿದಷ್ಟೂ ಭಯೋತ್ಪಾದನೆ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ. ಇದು ಈ ದೇಶದ ಅರ್ಥ ವ್ಯವಸ್ಥೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬಡ ಮಧ್ಯಮ ವರ್ಗದ ಯೋಧರ ಮಾರಣಹೋಮ ಆಗಾಗ ನಡೆಯುತ್ತಲೇ ಇರುತ್ತದೆ. ನಮ್ಮ ಭವ್ಯ ಭಾರತದ ಒಂದು ಪ್ರಮುಖ ಅಂಗ ಸದಾ ಸಂಘರ್ಷಕ್ಕೆ ಒಳಗಾಗಿ ರಕ್ತಸಿಕ್ತವಾಗುತ್ತದೆ.

ಇದೆಲ್ಲದಕ್ಕೂ ಮೂಲ ಕಾರಣ ಕಾರ್ಪೋರೇಟ್ ಬಂಡವಾಳಿಗರ ದುರಾಸೆ ಹಾಗೂ ಹಿಂದುತ್ವವಾದಿ ಸಂಘಿ ಸರಕಾರದ ಹಿಂದೂರಾಷ್ಟ್ರ ಸ್ಥಾಪನೆಯ ಮಹದಾಸೆ. ಇವೆರಡಕ್ಕೂ ಜಮ್ಮು ಕಾಶ್ಮೀರ ಸವಾಲಾಗಿದೆ. ಬಹುತ್ವವನ್ನು ನಾಶಪಡಿಸಿ ಏಕತ್ವವನ್ನು ಸ್ಥಾಪಿಸುವ ಯಾವುದೇ ಪ್ರಯತ್ನಗಳಿದ್ದರೂ ಈ ದೇಶವಾಸಿಗಳ ಪ್ರತಿರೋಧವನ್ನು ಎದುರಿಸಲೇಬೇಕಿದೆ. ಈ ದೇಶದ ಜನರ ಹಿತಾಸಕ್ತಿಗಾಗಿ ಬಹುತ್ವವನ್ನು ಕಾಪಾಡಿಕೊಳ್ಳಲೇಬೇಕಿದೆ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply