ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ನೆಂದೆಣಿಸುವ ಮುನ್ನ..

2 years ago

’ಲಿಂಗಾಯತರ ಬಿಟ್ಟು ಆಳ್ವಿಕೆ ಸಾಧ್ಯವಿಲ್ಲ…’ ಈ ಮಾತು ಹೇಳಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಸಂದರ್ಭ; ದಾವಣಗೆರೆಯಲ್ಲಿ ನಡೆದ ೨೪ನೇ ಅಖಿಲ ವೀರಶೈವ ಲಿಂಗಾಯತ ಮಹಾಸಭೆಯ ವೇದಿಕೆಯಲ್ಲಿ. ಈ ಹೇಳಿಕೆಯನ್ನು ಸಭೆಯ ಯಾರೂ ಖಂಡಿಸಿಲ್ಲವಾದ್ದರಿಂದ ಇದನ್ನು ಬೊಮ್ಮಾಯಿಯವರ ವೈಯಕ್ತಿಕ ಹೇಳಿಕೆಯಂದಲ್ಲದೆ, ಇಡೀ ಮಹಾಸಭೆ ವೇದಿಕೆಯ ಹೇಳಿಕೆ ಎಂದೇ ನಾವು ಪರಿಗಣಿಸಬೇಕಾಗುತ್ತದೆ.

ಬಹುಶಃ ಇದೊಂದು ಹೇಳಿಕೆ ಸಾಕು, ಬಸವಣ್ಣನವರ ಆತ್ಮ ವಿಲವಿಲ ಒದ್ದಾಡಿ ವೇದನೆ ಅನುಭವಿಸಲು! ಅಷ್ಟು ದರ್ಪ ಮತ್ತು ಅಧಿಕಾರಶಾಹಿ ಅಮಲು ಈ ಹೇಳಿಕೆಯೊಳಗೆ ಅಡಗಿದೆ!! ’ಎನಗಿಂತ ಕಿರಿಯರಿಲ್ಲ ಎನ್ನುತ್ತಲೇ ಕಾಯಕ ಮತ್ತು ಸಮಾನತೆಯ ಕ್ರಾಂತಿಗೈದ ಬಸವಣ್ಣನನ್ನು ಇಡೀ ಶರಣ ಸಂಕುಲ ‘ಅಣ್ಣ’ನೆಂದು ಕರೆದು ನೀನೇ ನಮ್ಮ ಹಿರಿಯ ಎಂಬ ಸ್ಥಾನ ಕೊಟ್ಟರು. ಇಂಥಾ ಉದಾತ್ತ ಪ್ರೀತಿ-ಪರಸ್ಪರ ಗೌರವಗಳ ಮೇಲೆ ಕಟ್ಟಿದ ಪರಂಪರೆಯೇ ಲಿಂಗಾಯತ ಚಳವಳಿ. ಆದರೆ ಕಾಲಾನಂತರ ಬಸವಣ್ಣನನ್ನು ದೈವೀಕರಿಸಿ, ಲಿಂಗಾಯತ ಪ್ರತಿರೋಧವನ್ನು ತನ್ನೊಳಗೆ ಆಪೋಷನ ತೆಗೆದುಕೊಂಡ ವೈದಿಕ ವಿಷಕೂಟವು ವಿಶಾಲ ಲಿಂಗಾಯತದ ವ್ಯಾಪ್ತಿಯನ್ನು ಜಾತಿಗೆ ಸಂಕುಚಿತಗೊಳಿಸಿದೆ. ಆ ಹುನ್ನಾರಕ್ಕೆ ಬಲಿಯಾಗಿರುವ ಉತ್ತುಂಗದ ಸಂಕೇತವೇ ಇಂತಹ ದಾರ್ಷ್ಟ್ಯದ ಹೇಳಿಕೆ ಎನ್ನಬಹುದು. ಸ್ವತಃ ಭಂಡಾರಿಯಾಗಿದ್ದರೂ, ಶರಣ ಕ್ರಾಂತಿಯ ಮುಂಚೂಣಿ ಕಾಮ್ರೇಡ್ ಆಗಿದ್ದರೂ ಬಸವಣ್ಣ ಯಾವತ್ತೂ ಯಜಮಾನಿಕೆಯ ದನಿಯಲ್ಲಿ ಯಾರೊಂದಿಗೂ ಸಂವಾದಿಸಿದವರಲ್ಲ. ‘ಇವನಾರವ ಎನಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ, ನಿಮ್ಮ ಮನೆಯ ಮಗನೆಂದೆಣಿಸಯ್ಯಾ ಎಂದು ಎಲ್ಲರೊಳಗೊಂದಾಗಿ ಬೆರೆತ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಬೇಕೆಂಬ ಅರ್ಹ ಘೋಷಣೆಯನ್ನು ಮೊಳಗಿಸಿದ ಸಮಾವೇಶದಲ್ಲೇ, ‘ನಾವಿಲ್ಲದಿದ್ದರೆ ಇಲ್ಲ’ ಎಂಬ ಬೆದರಿಕೆಯನ್ನೂ ಈ ಜನ ಮುಂದೊಡ್ಡುತ್ತಾರೆಂದರೆ ಬಸವಣ್ಣನ ಆತ್ಮ ಸಂಕಟ ಅನುಭವಿಸದೆ ಇನ್ನೇನು?

ಬಸವಣ್ಣ ಈಗ ಶರಣಕ್ರಾಂತಿಯ ವಿಚಾರ ರೂಪಿಯಾಗಿ ಉಳಿದುಕೊಂಡಿಲ್ಲ, ಬದಲಿಗೆ ಜಾತಿಯ ರೂಪಕವಾಗಿಯಷ್ಟೇ ಅಣ್ಣನನ್ನು ‘ಬಳಸಿ’ಕೊಳ್ಳಲಾಗುತ್ತಿದೆ. ಜಾತಿಯ ರೂಪಕವೆಂದರೆ, ಮತ್ತೇನೂ ಅಲ್ಲ; ‘ನಮ್ಮಿಂದಲೇ ಎಲ್ಲ; ನಮ್ಮನ್ನು ಬಿಟ್ಟು ಏನೂ ಇಲ್ಲ’ ಎಂಬ ದರ್ಪ ಹಾಗೂ ಯಜಮಾನಿಕೆಯ ಸಂಕೇತವಾಗಿ. ಇಂಥಾ ಒಂದು ಉಸಿರುಗಟ್ಟಿಸುವ ರೂಪಕವಾಗಿ ಬಸವಣ್ಣ ಒಂದು ಕ್ಷಣವಾದರೂ ಇರಲು ಬಯಸುತ್ತಾರಾ?

ಇಲ್ಲಿ ಇನ್ನೂ ಒಂದು ಪ್ರಶ್ನೆಯಿದೆ. ಬಸವಣ್ಣ ಸ್ವತಃ ಎಂದಿಗೂ ಯಜಮಾನಿಕೆಯ ಧೋರಣೆ ತೋರದೆ ಹೋದರೂ, ಇವತ್ತು ಅವರನ್ನು ಜಾತಿಯ ರೂಪಕವಾಗಿ ಒಂದು ಸಮುದಾಯ ಬಳಸಿಕೊಳ್ಳಲು ಮುಂದಾಗುತ್ತಿರುವ ಈ ಕಾಲದಲ್ಲಿ ಧ್ವನಿ ಕಳೆದುಕೊಂಡ ಸಣ್ಣಪುಟ್ಟ ಸಮುದಾಯಗಳು, ಬಸವಣ್ಣನನ್ನು ಹೇಗೆ ಸ್ವೀಕರಿಸಬೇಕು? ಒಂದು ಕಡೆ ಬಸವಣ್ಣನನ್ನು ಅವರ ವಿಚಾರದ ಕಾರಣಕ್ಕೆ ಎಲ್ಲಾ ಶೋಷಿತರ ನಾಯಕನೆಂದು ಸ್ವೀಕರಿಸುವುದು ಸೂಕ್ತ ಎಂಬ ಸದಭಿಪ್ರಾಯವನ್ನು ಒಪ್ಪಬಹುದಾದರೂ; ಆದರೆ ಹಾಗೆ ಸ್ವೀಕರಿಸಿದ ಕೂಡಲೇ, ಅದರ ಫಲವನ್ನು ಹೀಗೆ ರಾಜಕೀಯವಾಗಿ-ಸಾಂಸ್ಕೃತಿಕವಾಗಿ-ಸಾಮಾಜಿಕವಾಗಿ ಬಾಚಿಕೊಳ್ಳುವುದು ಇದೇ ಜಾತಿ ಪ್ರತಿಷ್ಠೆಯ ಅಹಮ್ಮಿಗರು! ಹಾಗಂತ, ಬಸವಣ್ಣನನ್ನು ಮಿಕ್ಕುಳಿದ ಸಮುದಾಯಗಳು ಜಾತಿಯ ಸಂಕೇತವಾಗಿ ಮಾತ್ರ ನೋಡಿದರೆ, ಅವರ ವಿಚಾರಕ್ರಾಂತಿಯಿಂದ ಈ ಸಮಾಜ ವಂಚಿತವಾಗುತ್ತದೆ. ಇದು ಈಗಿರುವ ಸಂದಿಗ್ಧತೆ…

ಬಸವಣ್ಣನವರಿಗೆ ಈ ನಾಡಿನ ಸಾಂಸ್ಕೃತಿಕ ನಾಯಕನಾಗುವ ಎಲ್ಲಾ ಅರ್ಹತೆ ಇದೆ ಮತ್ತು ಅವರು ಸೂಕ್ತವೂ ಹೌದು. ಆದರೆ, ಅವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಣೆ ಮಾಡಿ ಎಂದು ಆಗ್ರಹಿಸುತ್ತಿರುವ ಜಾತಿ ಜನರಿಗೆ, ಹೀಗೆ ಆಗ್ರಹಿಸುವ ನೈತಿಕತೆ ಇದೆಯಾ? ಎಂಬುದು ನಮಗೆ ಮುಖ್ಯ ಪ್ರಶ್ನೆಯಾಗಬೇಕಿದೆ. ಯಾಕೆಂದರೆ ನಾವು ತಲುಪುವ ಗುರಿ ಮಾತ್ರವಲ್ಲ, ಸಾಗುವ ದಾರಿಯೂ ಶುದ್ಧವಾಗಿರಬೇಕಾಗುತ್ತದೆ. ಬಸವಣ್ಣನವರನ್ನು ಅವರ ವೈಚಾರಿಕ ಕ್ರಾಂತಿಯಿಂದ ಸಂಪೂರ್ಣ ಪ್ರತ್ಯೇಕಿಸಿ, ಕೇವಲ ಜಾತಿಯ ಲಾಂಛನವಾಗಿಯಷ್ಟೇ ಸ್ವೀಕರಿಸಿರುವ ಸಮುದಾಯ ತನ್ನ ’ಅಹಮ್ಮಿಕೆ, ಅಧಿಕಾರದ ಹಕ್ಕು ಪ್ರತಿಷ್ಠಾಪನೆಯ’ ಧ್ವನಿಯಲ್ಲಿ ಹೀಗೆ ಆಗ್ರಹಿಸಿದಾಗ, ನಾವು ಬಸವಣ್ಣನವರಿಗಿಂತ ಹೆಚ್ಚಾಗಿ ಆ ಧ್ವನಿಯ ಹಿಂದಿರುವ ಯಜಮಾನಿಕೆಯನ್ನೂ ಪರಿಗಣಿಸಬೇಕಾಗುತ್ತದೆ. ಇಂತಹ ಅಹಮ್ಮಿಕೆ ಮತ್ತು ಯಜಮಾನಿಕೆಯನ್ನು ತೊರೆಯದ ಹೊರತು ಆ ಆಗ್ರಹಕ್ಕೆ ನೈತಿಕತೆ ಬಾರದು. ನೈತಿಕತೆಯಿಲ್ಲದ ಆಗ್ರಹದಿಂದಾಗಿ, ಅರ್ಹತೆಯಿದ್ದರೂ ನಾವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಸ್ವೀಕರಿಸಲು ಹಿಂದೇಟು ಹಾಕಬೇಕಾಗುತ್ತದೆ. ಬಸವಣ್ಣನವರಿಗೆ ಈಗ ಲೇಪಿಸಿರುವ ‘ಜಾತಿ ರೂಪಕ’ದ ಅಪವಾದವನ್ನು ತೊಡೆದುಹಾಕಿ, ಅವರ ಮೂಲ ವೈಚಾರಿಕ ಚಿಂತನೆಗಳ ಪ್ರತಿರೂಪವಾಗಿ ಅವರನ್ನು ಮರುಸ್ಥಾಪಿಸಿದ ನಂತರವಷ್ಟೇ ‘ಲಿಂಗಾಯತ ಧರ್ಮೀಯ’ರಿಗೆ ಆಗ್ರಹಿಸುವ ನೈತಿಕತೆ ದಕ್ಕಲಿದೆ. ನಿಜ ಹೇಳಬೇಕೆಂದರೆ, ಬಸವಣ್ಣನವರಿಗೆ ಅಂತಹದ್ದೊಂದು ಪರಿಶುದ್ಧ ಬಿಡುಗಡೆ ಸಿಕ್ಕ ಮರುಕ್ಷಣವೇ ಆಗ್ರಹದ ಯಾವ ಅವಶ್ಯಕತೆಯೂ ಇಲ್ಲದೆ ಅವರನ್ನು ಈ ನಾಡಿನ ಎಲ್ಲ ಸಮುದಾಯಗಳು ಒಕ್ಕೊರಲಿನಿಂದ ‘ಸಾಂಸ್ಕೃತಿಕ-ಸಾಮಾಜಿಕ ನಾಯಕ’ನೆಂದು ಸ್ವೀಕರಿಸುತ್ತವೆ. ಹನ್ನೆರಡನೆ ಶತಮಾನದಲ್ಲೇ ಜನ ಹೀಗೆ ಸ್ವೀಕರಿಸಿಯಾಗಿದೆ. ಸರ್ಕಾರ, ಹೆಚ್ಚೆಂದರೆ ಅದಕ್ಕೆ ಕಾಗದಪತ್ರಗಳ ವ್ಯವಹಾರ ಪೂರೈಸಬಹುದಷ್ಟೆ.

ಇದು ಕೇವಲ ಬಸವಣ್ಣನವರು ಅಥವಾ ಲಿಂಗಾಯತ ‘ಜಾತಿ ಸಮುದಾಯ’ಕ್ಕೆ ಮಾತ್ರ ಸೀಮಿತವಾದುದಲ್ಲ. ಚರಿತ್ರೆಯ ಬಹುಪಾಲು ಎಲ್ಲಾ ವೈಚಾರಿಕ ಹರಿಕಾರರಿಗೂ ಮತ್ತು ಅವರನ್ನು ತಮ್ಮ ಸಮುದಾಯಕ್ಕೆ ಸೀಮಿತವಾಗಿಸಿಕೊಂಡ ಜಾತಿಗಳಿಗೂ ಇದು ಅನ್ವಯವಾಗುತ್ತದೆ. ಕುರುಬರಿಂದ ಕನಕ ಕವಿಗೆ, ಬಿಲ್ಲವರಿಂದ ನಾರಾಯಣ ಗುರುಗಳಿಗೆ, ಒಕ್ಕಲಿಗರಿಂದ ಕುವೆಂಪು ಮಹಾಕವಿಗೆ, ಲಾಸ್ಟ್ ಬಟ್ ದಿ ನಾಟ್ ಲೀಸ್ಟ್ ಪಟ್ಟಭದ್ರ ಹಿತಾಸಕ್ತಿಗಳಿಂದ ಬಾಬಾಸಾಹೇಬರಿಗೂ ತುರ್ತಾಗಿ ಬಿಡುಗಡೆ ಸಿಗಬೇಕಿದೆ. ಯಾಕೆಂದರೆ ಇವರ್ಯಾಾರೂ ತಮ್ಮ ಚಿಂತನೆಗಳನ್ನು ಒಂದು ಜಾತಿಗೆ ಸೀಮಿತವಾಗಿಸಿಕೊಂಡು ಬದುಕಿದವರಲ್ಲ. ಎಲ್ಲಾ ಜಾತಿ, ಎಲ್ಲಾ ವರ್ಗ, ಎಲ್ಲಾ ಶ್ರೇಣಿಯಲ್ಲಿರುವ ಶೋಷಣೆ-ಮೌಢ್ಯ-ಅಂಧಕಾರಗಳ ವಿರುದ್ಧ ತಮ್ಮ ವೈಚಾರಿಕ ಚಿಂತನೆಗಳನ್ನು ಹರಿಬಿಟ್ಟವರು. ವಿಶಾಲ ಸಾಗರವನ್ನು ಒಂದು ಚಿಕ್ಕ ಬಿಂದಿಗೆಯಲ್ಲಿ ಬಂಧಿಸಿಡುತ್ತೇವೆ ಎನ್ನುವುದು ಎಂಥಾ ಮುಠ್ಠಾಳತನವೋ, ಈ ವಿಚಾರವಂತರನ್ನು ಜಾತಿಗೆ ಆನಿಸಿಕೊಂಡು ನೋಡುವುದೂ ಅಷ್ಟೇ ಮುಠ್ಠಾಳತನ. ಆದರೆ ಅಂತಹ ಪ್ರಯತ್ನದಲ್ಲಿ ನಾವಿದ್ದೇವೆ. ಜಾತಿಯ ಬಿಂದಿಗೆಯಲ್ಲಿ ಅವರ ಒಟ್ಟಾರೆ ಸಾರದ ಒಂದಷ್ಟು ಅಂಶವನ್ನು ತುಂಬಿಟ್ಟುಕೊಂಡು, ಅದಿಷ್ಟು ಮಾತ್ರವೇ ಅವರ ಇರುವು ಎಂದು ನಮಗೆ ನಾವೇ ವಂಚಿಸಿಕೊಳ್ಳುತ್ತಿದ್ದೇವೆ. ಆ ಬಿಂದಿಗೆಯ ಹೊರತಾಗಿ ವಿಶಾಲ ಸಾಗರ ರೂಪದಲ್ಲಿ ಅವರ ಅಸ್ತಿತ್ವವಿದ್ದರೂ, ಅದನ್ನು ಗುರುತಿಸಬೇಕಾದ ನಮ್ಮ ನೋಟಗಳನ್ನು ಬಿಂದಿಗೆಯೊಳಗಿನ ಸಾರಕ್ಕಷ್ಟೇ ಸೀಮಿತವಾಗಿಸಿಕೊಂಡಿದ್ದೇವೆ. ಹಾಗಾಗಿ ಆ ಸಾಗರ ನಮ್ಮ ಅರಿವಿಗೆ ನಿಲುಕುತ್ತಿಲ್ಲ. ಆ ಕುಬ್ಜ ಬಿಂದಿಗೆಯೊಳಗಿನ ಸಾರಕ್ಕೆ ಮುಕ್ತಿ ಕೊಡುವುದರಿಂದ ವಿಶಾಲ ಸಾಗರಕ್ಕೆ ನಾವೇನೊ ದೊಡ್ಡ ಉಪಕಾರ ಮಾಡಿದಂತಾಗುವುದಿಲ್ಲ; ನಮ್ಮ ಬಳಿಯಿರುವ ಒಂದು ಬಿಂದಿಗೆಯಷ್ಟು ತನ್ನ ಸಾರ ಕಳೆದುಕೊಂಡ ನಂತರವೂ ಅದು ಅವತ್ತಿಗೂ ಇವತ್ತಿಗೂ ಯಾವತ್ತಿಗೂ ಸಾಗರವಾಗಿಯೇ ಇರುತ್ತದೆ. ಆದರೆ ಅಂತಹ ಬಿಡುಗಡೆಯಿಂದ ನಮ್ಮ ನೋಟಗಳು ವಿಸ್ತಾರಗೊಳ್ಳುತ್ತವೆ, ಸಾಗರದ ವಿಶಾಲ ದರ್ಶನವಾಗುತ್ತದೆ. ಎಲ್ಲರ ಸಾಗರವಾಗುತ್ತದೆ. ಈಗ ತುರ್ತಾಗಿ ಆಗಬೇಕಿರುವುದು ಇದೇ!

ಬಸವಣ್ಣನವರು ಹೀಗೆ ಎಲ್ಲರ ಸಾಗರವಾಗದೆ, ಕೇವಲ ಕುಬ್ಜ ಬಿಂದಿಗೆಯೊಳಗೆ ಬಂಧಿಯಾಗಿರುವ ಸಂದರ್ಭದಲ್ಲಿ ‘ನಾವಿಲ್ಲದೆ ಏನೂ ಇಲ್ಲ ಎಂಬ ಯಜಮಾನಿಕೆಯ ಧ್ವನಿಯೊಂದಿಗೆ ಆ ಬಿಂದಿಗೆಯನ್ನು ಎಲ್ಲರ ತಲೆಯ ಮೇಲೆ ’ಹೇರಲು’ ಬರುವುದನ್ನು ಬಸವಣ್ಣನವರಿಗೆ ಸಿಗುವ ಗೌರವ ಎಂದು ನಾವು ಭಾವಿಸಬಾರದು; ಯಾಕೆಂದರೆ ಅದು ಅವರಿಗೆ ಮಾಡುವ ಅವಮಾನವಾಗಿರುತ್ತದೆ.

  • ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು

Leave a Reply