ಮೈಸೂರು: ಸದಾ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುವ ಮೂಲಕ ಸುದ್ದಿಯಾಗುವ ಮೈಸೂರು – ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ ಸಿಂಹ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಯದಲ್ಲಿ ನಾಗರೀಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಯೋಧ್ಯೆ ರಾಮ ವಿಗ್ರಹ ಕೆತ್ತನೆಗೆ ಶಿಲೆ ಸಿಕ್ಕ ಮೈಸೂರು ತಾಲೂಕು ಹಾರೋಹಳ್ಳಿಯ ರೈತರಾದ ರಾಮದಾಸ್ ಎಂಬುವರ ಜಮೀನಿನಲ್ಲಿ ರಾಮ ಮಂದಿರ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಾಯಿತು. ದೇವಾಲಯ ನಿರ್ಮಾಣಕ್ಕಾಗಿ ಪೂಜೆ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಸದ ಪ್ರತಾಪ ಸಿಂಹ ತಮ್ಮ ಬೆಂಬಲಿಗರಾದ ಕೆಲವರೊಂದಿಗೆ ಸ್ಥಳಕ್ಕೆ ಆಗಮಿಸಿದರು.
ಸ್ಥಳಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಸ್ಥಳೀಯ ಗ್ರಾಮಸ್ಥರು ಮತ್ತು ದಲಿತರು ಘೇರಾವ್ ಮಾಡಿ ಪೂಜೆಗೆ ಅವಕಾಶ ಕಲ್ಪಿಸದೆ ವಾಪಸ್ ಕಳುಹಿಸಿದರು.
ಪೂಜಾ ಸ್ಥಳಕ್ಕೆ ಪ್ರತಾಪ ಸಿಂಹ ಆಗಮಿಸಿದಾಗ, ಸಮಾಜದ ಸಾಮರಸ್ಯವನ್ನು ಹಾಳುಮಾಡುವ ನೀವು ದಲಿತರ ಜಮೀನಿನಲ್ಲಿ ಆಯೋಜಿಸಿರುವ ರಾಮನ ಪೂಜೆಯಲ್ಲಿ ಭಾಗವಹಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾರೋಹಳ್ಳಿ ಗ್ರಾಮದಲ್ಲಿ ಎಲ್ಲಾ ಜಾತಿ ಜನಾಂಗದವರು ಸಾಮರಸ್ಯದಿಂದ ಇದ್ದೇವೆ. ಅದನ್ನು ಕದಡುವ ಕೆಲಸ ಮಾಡಬೇಡಿ ಎಂದು ಸಂಸದರ ವಿರುದ್ಧ ಕಿಡಿಕಾರಿದರು.
ಆದರೂ ಇದನ್ನು ಲೆಕ್ಕಿಸದೆ ಸಂಸದ ಪ್ರತಾಪ್ ಸಿಂಹ ಪೂಜಾ ಸ್ಥಳಕ್ಕೆ ಧಾವಿಸಿ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂದಾದರು. ಇದಕ್ಕೆ ಅಡ್ಡಿಪಡಿಸಿದ ಸ್ಥಳೀಯರು, ಪ್ರತಾಪ್ ಸಿಂಹ ಅವರಿಗೆ ಧಿಕ್ಕಾರ ಕೂಗಿದರು. ಘೇರಾವ್ ಹಾಕಿದರು. ಪೂಜಾ ಕಾರ್ಯಕ್ರಮಕ್ಕೆ ಬರದಂತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮರು ಮಾತನಾಡದ ಸಂಸದ ಪ್ರತಾಪಸಿಂಹ ಸ್ಥಳದಿಂದ ಕಾರಿನಲ್ಲಿ ತೆರಳಿದರು.
ಇದಾದ ನಂತರ ಘಟನೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ, ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಚಾಮುಂಡಿ ತಾಯಿಯ ಭಕ್ತರು ಕೋಟ್ಯಾಂತರ ಮಂದಿ ಇದ್ದಾರೆ. ನಾನು ಚಾಮುಂಡಿಯ ಭಕ್ತ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆ ಏನೇನೋ ನಡೆಯುತ್ತೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದರು.




