ನಿಮಗೂ ಹೀಗೆ ಆಗಿದೆಯಾ?
(ಓದಲೇಬೇಕಾದ ಗಂಭೀರ ಕಿರುಬರಹ…. ಕೊನೆಯಲ್ಲಂತೂ ನನಗೆ ಕಣ್ಣೀರು ತಡೆಯಲಾಗಲಿಲ್ಲ!!)
ರಾತ್ರಿ ಸುಮಾರು ಹೊತ್ತಿನವರೆಗೆ ನಿದ್ರೆ ಬಂದಿರಲಿಲ್ಲ. ಸಂಜೆ ಆಫೀಸಿಂದ ಹೊರಡುವ ಮುನ್ನ ಗೆಳೆಯ ಕೊಟ್ಟ ವಾರ್ನಿಂಗ್ ಅದಕ್ಕೆ ಕಾರಣ. ಮೂರು ತಿಂಗಳ ಹಿಂದೆ ಅವನಿಂದ ನಾನು ತೆಗೆದುಕೊಂಡಿದ್ದ ಮೂರೂವರೆ ಲಕ್ಷ ರೂಪಾಯಿ ಸಾಲ ನನ್ನ ಕತ್ತು ಹಿಸುಕುತ್ತಿತ್ತು. ಪಾಪಾ.. ಆತ ತುಂಬಾ ಒಳ್ಳೆಯವನು. ಕೇಳಿದ ಕೂಡಲೇ, ಬಡ್ಡಿ-ಅಡಮಾನ-ವಾಯಿದೆ ಅಂತ ಯಾವೊಂದನ್ನೂ ಕೇಳದೆ ಹಣ ಕೊಟ್ಟಿದ್ದ. ಆದರೆ ನನ್ನಿಂದ ಸಾಲ ಪಡೆದವರು ವಾಪಾಸು ಕೊಡದೆ ಇದ್ದುದರಿಂದ ಗೆಳೆಯನ ಸಾಲವನ್ನು ತೀರಿಸಲಾಗದೆ, ಪದೇಪದೇ ಸಬೂಬು ಹೇಳಿಕೊಂಡು ಬಂದಿದ್ದೆ. ಅವನೂ ಇಷ್ಟು ದಿನ ತಾಳ್ಮೆಯಿಂದಿದ್ದು, ನಾಳೆ ಕೊಟ್ಟೇ ತೀರಬೇಕೆಂದು ಕಟುವಾಗಿ ಹೇಳಿಹೋಗಿದ್ದ. ಅದೇ ಚಿಂತೆಯಲ್ಲಿ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿ, ದಣಿದು ಬೆಳಗಿನ ಜಾವ ತುಸು ನಿದ್ರೆಗೆ ಜಾರಿದ್ದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಚಿಂತೆ ಸಾವಿರವಿದ್ದರೂ ಆಫೀಸಿಗೆ ಹೋಗುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಯಾಕೆಂದರೆ ಆದಾಯಕ್ಕೆ ಅಂತ ಇರುವ ಮೂಲ ಅದೊಂದೆ. ನೆಪಕ್ಕೆ ನಿತ್ಯ ಕರ್ಮ ಮುಗಿಸಿ, ಹಳೇ ಲಟಾರಿ ಬೈಕನ್ನೇರಿ ಅನ್ಯಮನಸ್ಕನಾಗಿಯೇ ದಾರಿ ಸವೆಸುತ್ತಾ, ನಮ್ಮ ಮನೆಯ ಮುಂದಿನ ತಿರುವು ತಡಾಯ್ದು ಸ್ವಲ್ಪ ಮುಂದಕ್ಕೆ ಬಂದಿದ್ದೆ. ಹತ್ತಾರು ಖಾಲಿ ಸೈಟುಗಳ ನಿರ್ಜನ ಪ್ರದೇಶ ಅದು. ಪೊದೆಗಳು ದಟ್ಟವಾಗಿ ರಸ್ತೆಯ ಎರಡೂ ಬದಿಗೆ ಬೆಳೆದುಕೊಂಡು, ನಡೆದಾಡುವವರನ್ನು ಬೆದರಿಸುವಂತಿದ್ದವು. ದಿನಾ ಓಡಾಡುವ ರಸ್ತೆ. ಅಭ್ಯಾಸವಾಗಿತ್ತು. ಚಿಂತೆಯಲ್ಲೆ ಗಾಡಿ ಚಲಾಯಿಸಿಕೊಂಡು ಬರುತ್ತಿದ್ದವನಿಗೆ ರಸ್ತೆ ಮೇಲಿನ ದೃಶ್ಯ ದಂಗುಬಡಿಸಿತು.
ಎರಡು ಸಾವಿರ ರೂಪಾಯಿಗಳ ಒಂದಷ್ಟು ನೋಟಿನ ಕಂತೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಗಕ್ಕನೆ ಸ್ಕೂಟರ್ ನಿಲ್ಲಿಸಿ ಸುತ್ತಲೂ ನೋಡಿದೆ. ಯಾರೂ ಇಲ್ಲ. ಎಂಥಾ ಅನಾಹುತದ ಸುಳಿವೂ ಇಲ್ಲ. ಏನು ಮಾಡೋದು? ಕ್ಷಣಕಾಲ ತಬ್ಬಿಬ್ಬು.
ಕಷ್ಟಕಾಲಕ್ಕೆ ಆ ದೇವರೇ ದಾರಿ ತೋರಿಸಿದ್ದಾನೆ ಅಂತ ಎತ್ತಿಕೊಂಡು ಗೆಳೆಯನ ಸಾಲ ತೀರಿಸಿಬಿಡಲಾ? ಅಥವಾ ತೆಗೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಲಾ? ಏನು ಮಾಡೋದು? ಅರ್ಥವಾಗುತ್ತಿಲ್ಲ. ಕೊನೆಗೂ ನನ್ನ ಸ್ವಾರ್ಥವೇ ಗೆದ್ದಿತು. ಇಷ್ಟು ಹಣ, ಹೀಗೆ ಒಂದೇಕಡೆ ಬೇಕಾಬಿಟ್ಟಿಯಾಗಿ ಕಳೆದುಕೊಂಡಿದ್ದಾರೆಂದರೆ, ಅದು ಅವರ ಬೇಜವಾಬ್ದಾರಿತನ. ನನ್ನ ಅದೃಷ್ಟ! ಎತ್ತಿಕೊಂಡೆ ಬಿಡೋಣ ಅಂತ ಬೈಕ್‌ನ ಸ್ಟ್ಯಾಂಡ್ ಹಾಕಿ ಇನ್ನೇನು ಇಳಿಯಬೇಕು ಎನ್ನುವಾಗ ಒಂದು ಅವಘಡ ನಡೆದುಹೋಯ್ತು.
ನನ್ನ ಹೆಂಡ್ತಿ ನಿದ್ರೆಯಿಂದ ನನ್ನನ್ನು ಎಬ್ಬಿಸಿಬಿಡೋದಾ….!!!! ಅವಳು ತುಸು ತಡೆದು ಎಬ್ಬಿಸಿದ್ದರೆ, ಆ ನೋಟಿನ ಕಂತೆಗಳನ್ನೆಲ್ಲ ಎತ್ತಿಕೊಂಡು ಬಿಡುತ್ತಿದ್ದೆ!!! ಕಣ್ಣಿಗೆ ಕಂಡ ಕನಸಿನ ಲಕ್ಷ್ಮಿ ಕೈಗೆ ಬರಲಿಲ್ಲ…..
ಕಥೆ ಮುಗಿಯಲಿಲ್ಲ. ಗೆಳೆಯನ ಸಾಲ ತೀರಿಸುವ ಎಂಥಾ ಅವಕಾಶವನ್ನು ಈಕೆ ತಪ್ಪಿಸಿದಳಲ್ಲಾ, ಅಂತ ಕೊರಗುತ್ತಲೇ ತಲೆಮೇಲೆ ಕೈಹೊತ್ತುಕೊಂಡೆ. ಅದನ್ನು ನೋಡಿದ ನನ್ನವಳು ಗೊಣಗೊತ್ತಾ, “ಹ್ಞಾಂ… ನಿಮ್ಮ ಆಫೀಸ್ ಗೆಳೆಯನಿಂದ ಮೂರುವರೆ ಲಕ್ಷ ಸಾಲ ಪಡೆದ ರೀತಿ ನಿನ್ನೆ ಕನಸು ಕಂಡು ಇಡೀ ದಿನ ಗೋಳಾಡ್ತಾ ಇದ್ದ್ರಿ. ಇವತ್ತೇನು ಕನಸು ಕಂಡ್ರಿ” ಎಂದಳು.
ಒಮ್ಮೆಲೇ ನಿರಾಳನಾದೆ… ಎರಡು ಕನಸು! ನಿಮಗೂ ಹೀಗೇ ಆಗಿದೆಯಾ?
– ಗಿರೀಶ್ ತಾಳಿಕಟ್ಟೆ
(ಸ್ಪಷ್ಟನೆ: ಒಮ್ಮೊಮ್ಮೆ ನಕ್ಕಾಗಲು ಕಣ್ಣೀರು ಬರುತ್ತಲ್ವಾ?)




