ಸಮುದ್ರದಲ್ಲಿ ತೇಲಾಡ್ತಾ ಸಾಗೋ ಒಂದು ವಿಲಕ್ಷಣ ಜೀವಿ ಇದೆ. ಅದರ ಹೆಸರು Sea Squirt . ಕನ್ನಡದಲ್ಲಿ ನಾವು ಅದಕ್ಕೆ ʼಸಾಗರ ಪಿಚಕಾರಿʼ ಅನ್ನೋಣ. ಮುಷ್ಟಿಗಾತ್ರದ್ದು. ಅದು ತನ್ನ ಬಾಲ್ಯಾವಸ್ಥೆಯಲ್ಲಿ ಸಮುದ್ರದ ಅಲೆಯಲ್ಲಿ ತನ್ನಷ್ಟಕ್ಕೆ ಈಜ್ತಾ ತೇಲ್ತಾ ಇರ್ತದೆ. ಆಹಾರ ಹುಡುಕ್ತಾ, ವೈರಿಗಳಿಂದ ಬಚಾವಾಗೋ ದಾರಿ ಹುಡುಕ್ತಾ, ತನ್ನ ಶಾಶ್ವತ ವಾಸಕ್ಕೆ ಸೂಕ್ತ ಜಾಗ ಹುಡುಕ್ತಾ, ತೇಲ್ತಾ ಇರ್ತದೆ. ನೋಡೋಕೆ ಒಂಥರಾ ಬಾಲದ ಕಪ್ಪೆ ಅಂದರೆ ಟ್ಯಾಡ್‌ಪೋಲ್ ಥರಾ.
ಅದು ಪ್ರೌಢಾವಸ್ಥೆಗೆ ಬರೋಕೆ ಸ್ವಲ್ಪ ಮುಂಚೆ ತನಗೆ ಸೂಕ್ತವಾದ ಒಂದು ಬಂಡೆನೋ ಅಥವಾ ಕಲ್ಲು ದಿಬ್ಬನೋ ಸಿಕ್ಕಾಗ ಅದಕ್ಕೆ ಅಂಟಿಕೊಳ್ತದೆ. ಲೈಫ್‌ನಲ್ಲಿ ಸೆಟ್ಲ್ ಆಗೋದು ಅಂತೀವಲ್ಲ. ಹಾಗೇ ತನಗೆ ಸರಿಯಾದ ಜಾಗ ಸಿಕ್ಕಾಗ, ಶಾಶ್ವತವಾಗಿ ಅಲ್ಲೇ ಇರ್ತದೆ, ಅದನ್ನ ಬಿಟ್ಟು ಆಚೀಚೆ ಕದಲೋದಿಲ್ಲ.
ಹಾಗೆ ಅಂಟಿಕೊಳ್ಳುತ್ಲೇ ಅದು ತನ್ನ ಮಿದುಳನ್ನು ಮತ್ತು ಅಸ್ಥಿಪಂಜರವನ್ನು ತಾನೇ ಜೀರ್ಣ ಮಾಡ್ಕೊಂಡು ಬಿಡ್ತದೆ! ತನ್ನ ಬದುಕಿಗೆ ಇನ್ನು ಅವೆರಡೂ ಅಗತ್ಯವೇ ಇಲ್ಲ ಅನ್ನೋ ಹಾಗೆ.
ನೀರೊಳಗಿನ ಆ ಬಂಡೆಗೆ ಅಂಟಿಕೊಂಡು, ಸದಾ ಬಾಯಿ ತೆರ್ಕೊಂಡು, ತನ್ ಸಮೀಪ ತೇಲ್ತಾ ಬರೋ ಪೋಷಕ ದ್ರವ್ಯಗಳನ್ನ ಹೀರ್ಕೊತಾ, ತನ್ನ ಮೊಟ್ಟೆಗಳನ್ನ ನೀರಿಗೆ ಆಗಾಗ ತೇಲಿ ಬಿಡ್ತಾ, ಆಗಾಗ ನೀರೊಳಗೇ ಪಿಚಕಾರಿ ಹಾರಿಸ್ತಾ, ಹಾಯಾಗಿ ಬದುಕಿರ್ತದೆ.
ಇದು ಯಾಕೆ ಹೀಗೆ ಮಾಡ್ತದೆ, ತನ್ನ ಮಿದುಳನ್ನು ತಾನೇ ಯಾಕೆ ತ್ಯಾಗ ಮಾಡ್ತದೆ ಅನ್ನೋದರ ಬಗ್ಗೆ ವಿಜ್ಞಾನಿಗಳಲ್ಲಿ ಭಾರೀ ತರ್ಕ, ಜಿಜ್ಞಾಸೆ ನಡೆದಿದೆ. ಜೀವಿಗಳಿಗೆ ಮಿದುಳಿನ ಅಗತ್ಯ ಯಾಕೆ ಬಂತು ಅನ್ನೋ ಪ್ರಶ್ನೆಗೆ ಹೊಸ ಉತ್ತರ ಸಿಕ್ಕಿದೆ.
ಸಾಗರ ಪಿಚಕಾರಿಯ ಮಿದುಳು ಅಂಥ ದೊಡ್ಡದೇನಲ್ಲ. ನಮ್ಮ ಮಿದುಳಲ್ಲಿ ಶತಕೋಟಿಗಟ್ಟಲೆ ನರಕೋಶ ಇದ್ದರೆ ಅದರ ಮಿದುಳಲ್ಲಿ ಬರೀ 177 ನರಕೋಶ ಇವೆ. ಅದರ ಅಸ್ಥಿಪಂಜರವೂ ಅಷ್ಟೆ, ತೀರಾ ನೆಪಮಾತ್ರಕ್ಕೆ ಎಂಬಂತೆ ಸಪೂರಾಗಿ ಇದೆ.
ಆದರೆ ಒಮ್ಮೆ ಬಂಡೆಗೆ ಅಥವಾ ಹಡಗಿನ ತಳಕ್ಕೆ ಅಥವಾ ದಿಬ್ಬಕ್ಕೆ ಅಂಟಿಕೊಂಡ ನಂತರ ಆ ಮಿದುಳೂ ಇಲ್ಲ; ಆ ಅಸ್ಥಿಪಂಜರನೂ ಇಲ್ಲ. ಅವೆರಡೂ ಇನ್ನು ತನಗೆ ಬೇಕಾಗಿಯೇ ಇಲ್ಲ ಅಂತ ಅದು ನಿರ್ಧಾರ ಮಾಡ್ತದೆ.
ವಿಷಯ ಏನು ಅಂದರೆ, ನಮಗೆ ಮಿದುಳು ಇರೋದೇ ಮುಖ್ಯವಾಗಿ ಓಡಾಟಕ್ಕೆ, ಅಥವಾ ಚಲನವಲನಕ್ಕೆ ಅಂತ ಡಾ. ಡೇನಿಯಲ್ ವೊಲ್‌ಪರ್ಟ್ ಅನ್ನೋ ವಿಜ್ಞಾನಿ ಹೇಳ್ತಾರೆ.
ನಿಜಕ್ಕೂ ಹೌದಾ? ಬರೀ ಚಲನವಲನಕ್ಕೆ ಅಂತಾನೇ ಮಿದುಳು ವಿಕಾಸ ಆಗಿದೆಯಾ? ಆಲೋಚನೆ ಮಾಡೋದಕ್ಕೆ ಅಲ್ಲವಾ?
ನಾವೇ ತುಸು ಆಲೋಚನೆ ಮಾಡೋಣ.
ಯಾವುದೇ ಜೀವಿ ತಾನಿದ್ದ ತಾಣದಿಂದ ತನ್ನ ಇಚ್ಛೆಯಂತೆ ಬೇರೆ ಕಡೆ ಚಲಿಸುವ ಕ್ರಿಯೆ ಇದೆಯಲ್ಲ, ಅದು ಜೀವ ವಿಕಾಸದ ಚರಿತ್ರೆಯಲ್ಲೇ ಬಹುದೊಡ್ಡ ಹೆಜ್ಜೆ- ತುಂಬ ಮಹತ್ವದ ಹೆಜ್ಜೆ. ನಿಜಕ್ಕೂ ಅದನ್ನ ʼಹನುಮ ಲಂಘನʼ ಎನ್ನಬಹುದು.
ಒಂದು ನಿಶ್ಚಲ ಜೀವಿಗೆ ಚಲನಶಕ್ತಿ ಬರಬೇಕು ಅಂದರೆ, ಸ್ನಾಯುಗಳು ಇರಬೇಕು, ಸ್ನಾಯು ಇರಬೇಕು ಅಂದರೆ ಅದಕ್ಕೆ ಚಾಲನೆ ಕೊಡೋಕೆ ನರಕೋಶಗಳು ಇರಬೇಕು;
ನರಕೋಶ ಇರಬೇಕು ಅಂದರೆ ಅದಕ್ಕೊಂದು ಕೇಂದ್ರೀಯ ವ್ಯವಸ್ಥೆ ಇರಬೇಕು. ಅರ್ಥಾತ್ ಮಿದುಳು ಅನ್ನೋದು ಇರಲೇಬೇಕು. ಅಂದರೆ ಚಲನೆಗೆ ಮಿದುಳು ಬೇಕೇ ಬೇಕು.
ಚಲನೆ ಅಂದರೆ ಇಲ್ಲಿ ಬರೀ ಆಹಾರ ಹುಡುಕೋ ಓಡಾಟ, ಈಜಾಟ ಅಲ್ಲ; ವೈರಿಗಳಿಂದ ಬಚಾವಾಗೋ ಧಾವಂತ ಮಾತ್ರ ಅಲ್ಲ. ನಿಂತಲ್ಲೇ ದೊಡ್ಡದಾಗಿ ಕಣ್ಣು ಬಿಡೋದು, ಬಣ್ಣ ಬದಲಾಯಿಸೋದು, ಗೋಣು ಹಾಕೋದು… ಎಲ್ಲ ರೀತಿಯ ಸಂವಹನಕ್ಕೂ ಸ್ನಾಯುವಿನ ಚಲನೆ ಬೇಕೇಬೇಕು. ಅಂದರೆ ಮಿದುಳು ಬೇಕೇ ಬೇಕು.
ನೀವೊಂದು ಹುಲ್ಲಿನ ಎಸಳಾಗಿ ಅಥವಾ ಮಲ್ಲಿಗೆ ಬಳ್ಳಿಯಾಗಿ ಅಥವಾ ಮರವಾಗಿ ನಿಂತಲ್ಲೇ ನಿಂತರೆ, ನಿಮಗೆ ಮಿದುಳು ಬೇಡ. ನಿಮ್ಮ ಪಾಲಿಗೆ ಬಂದಿದ್ದಷ್ಟಕ್ಕೇ ನೀವು ತೃಪ್ತರಾದರೆ ನಿಮಗೆ ಮಿದುಳು ಬೇಡವೇ ಬೇಡ. ಯಾಕೆ ಬೇಕು?
ನಾವೀಗ ಯೋಚನೆ ಮಾಡಬೇಕು. ಯೋಗಿಗಳು, ಸಾಧುಗಳು ಧ್ಯಾನಸ್ಥ ಸ್ಥಿತಿಗೆ ಬರಬೇಕು ಅಂತ ಯಾಕೆ ನಿಶ್ಚಲವಾಗಿ ಕೂರುತ್ತಾರೆ? ಮಿದುಳನ್ನು ಮತ್ತು ಬೆನ್ನೆಲುಬನ್ನು ನಿಷ್ಕ್ರಿಯಗೊಳಿಸಿ ಕೂತರೆ ನಮಗೆ ಏನು ಅನುಭವ ಆಗ್ತದೆ? ಅಪರಾಧಿಗಳಿಗೆ ಯಾಕೆ ಜೈಲು ಶಿಕ್ಷೆ ಕೊಟ್ಟು ಮೂಲೆಗೆ ಕೂರಿಸುತ್ತಾರೆ? ತುಂಟ ಮಗುವಿಗೆ ‘ಕೂತಲ್ಲೇ ಕೂರು!ʼ ಅಂತ ಯಾಕೆ ಶಿಕ್ಷೆ ಕೊಡ್ತಾರೆ?
*
[ಇದು ಈ ದಿನ ಆಕಾಶವಾಣಿಯ ʼನಿತ್ಯ ವಿಜ್ಞಾನʼ ದಲ್ಲಿ ಪ್ರಸಾರವಾದ ನನ್ನ ಕಿರು ಉಪನ್ಯಾಸ.]
*
ಅಂದ ಹಾಗೆ, ಬಾಲ್ಯಾವಸ್ಥೆ ಕಳೆದ ನಂತರ ಮುಂದಿನ ಜೀವಮಾನವಿಡೀ ಒಂದೇ ಸಿದ್ಧಾಂತಕ್ಕೆ ಅಂಟಿಕೊಂಡು ಕೂರುವವರಿಗೂ ಈ ಪಿಚಕಾರಿಯನ್ನು ರೂಪಕವಾಗಿ ಕೊಡಬಹುದು. ಅಂಥವರು ತಮ್ಮ ಮಿದುಳನ್ನೂ ಬೆನ್ನೆಲುಬನ್ನೂ ಕಳೆದುಕೊಂಡಿರುತ್ತಾರೆಯೇ ಎಂಬ ಸಂಗತಿಯನ್ನು ಇಲ್ಲಿ ಚರ್ಚಿಸಿಲ್ಲ ಮತ್ತೆ!
– ನಾಗೇಶ್ ಹೆಗಡೆ, ಬರಹಗಾರರು
ಕೃಪೆ: ನಾಗೇಶ್ ಹೆಗಡೆ ಫೇಸ್ ಬುಕ್ ಬರಹ




