ಎರಡು ದಶಕದ ಹಿಂದೆ ಅದೊಂದು ದಿನ ನಾನು ಪ್ರಜಾವಾಣಿ ಕಚೇರಿಯ ಒಳಗೆ ಹೋದಾಗ ಕೀಲಿ ಮಣೆಗಳ ಸಣ್ಣಗಿನ ಸದ್ದು, ಮೆಲುದನಿಯಲ್ಲಿ ಅಲ್ಲಲ್ಲಿ ಕೆಲವರ ಮಾತು ಬಿಟ್ಟರೆ ಉಳಿದೆಲ್ಲರೂ ಬಹಳ ಗಂಭೀರವಾಗಿ ತಂತಮ್ಮ ಕೆಲಸದಲ್ಲಿ ತೊಡಗಿದ್ದರು. ಡೆಸ್ಕಿನಲ್ಲಿ ಕುಳಿತಿದ್ದವರೊಬ್ಬರು ನನ್ನತ್ತ ನೋಡಿ ಏನು ಎಂಬಂತೆ ಸನ್ನೆ ಮಾಡಿದರು. ನಾಗೇಶ ಹೆಗಡೆ ಅವರನ್ನು ನೋಡಬೇಕೆಂದೆ. ಅಲ್ಲಿಯೇ ಡೆಸ್ಕಿನ ಬಳಿ ಚದುರಿದಂತೆ ಬಿದ್ದಿದ್ದ ಕುರ್ಚಿಯ ಮೇಲೆ ನನ್ನನ್ನು ಕೂರಲು ಸೂಚಿಸಿದರು. ಕುಳಿತೆ. ತುಸು ಕಾಲದ ನಂತರ ನಾಗೇಶ ಹೆಗಡೆ ಬಂದರು. ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿಸಿದರು. ಸಾರ್… ಕರ್ನಾಟಕ ದರ್ಶನಕ್ಕೆ ಒಂದು ಲೇಖನ ತಂದಿದ್ದೀನಿ ಎಂದು ಲೇಖನ ಮತ್ತು ಫೋಟೋಗಳಿಟ್ಟಿದ್ದ ಕವರ್ ಅವರ ಕೈಗೆ ಕೊಟ್ಟು ಪರಿಚಯಿಸಿಕೊಂಡೆ. ಲೇಖನ ನೋಡುವುದಕ್ಕೂ ಮುನ್ನ ಫೋಟೋಗಳನ್ನು ಗಮನಿಸಿ ‘ದೇವಸ್ಥಾನಗಳ ಬಗ್ಗೆ ಬೇಡ’ ಎಂದವರು, ಆಯ್ತು ಬರೆದಿದ್ದೀರಿ ಬೇರೆ ಎಲ್ಲಾದ್ರೂ ಕೊಡಿ ಅಂದುಬಿಟ್ಟರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
‘ಸಾರ್. ಅದು ಹೊಯ್ಸಳರ ಕಾಲದ ದೇವಾಲಯ. ತರೀಕೆರೆ ತಾಲ್ಲೂಕಿನ ಅಮೃತಾಪುರದಲ್ಲಿದೆ. ಹಿಂದೊಮ್ಮೆ ಮೈಸೂರು ಒಡೆಯರ್ ಅಲ್ಲಿಗೆ ಹೋದಾಗ ಹಚ್ಚಿ ಬಂದ ದೀಪ ಇನ್ನೂ ಉರಿಯುತ್ತಿದೆ. ಊರಿನ ಜನ ಸರತಿಯಂತೆ ದೀಪಕ್ಕೆ ಎಣ್ಣೆ ಹಾಕುತ್ತಾರೆ’ ಹೀಗೆ ನಾನು ಲೇಖನ ಬರೆಯಲು ಕೇಳಿ ತಿಳಿದದ್ದು, ಓದಿ ಕಲಿತದ್ದೆಲ್ಲವನ್ನೂ ಹೇಳುತ್ತಲೇ ಇದ್ದೆ. ನಾಗೇಶ ಹೆಗಡೆ ಕನ್ನಡಕದ ಮರೆಯಲ್ಲಿ ನನ್ನತ್ತ ನೋಡುತ್ತಾ ತಣ್ಣಗೆ ನಕ್ಕು. ಬೇರೆ ಯಾವುದಾದ್ರೂ ಮ್ಯಾಗಜ಼ೇನ್ ಗೆ ಕೊಡಿ ‘ಬರೆದಿದ್ದೀರಿ’ ಎಂದು ಮತ್ತೆ ಹೇಳಿ ಕವರ್ ವಾಪಸ್ ಕೊಟ್ಟರು.
ಕರ್ನಾಟಕ ದರ್ಶನಕ್ಕೆ ಲೇಖನ ಬರೆವುದೆಂದರೆ ಆಗ ನಮ್ಮ ವಾರಗೆಯವರಿಗೆ ಹಬ್ಬ. ಅದಕ್ಕೆ ಕಾರಣಗಳು ಹಲವು. ಮೊದಲನೆಯದು ಪ್ರಜಾವಾಣಿ ಎಂಬ ಬ್ರಾಂಡ್. ಎರಡನೆಯದು ಅದಕ್ಕಿದ್ದ ಓದುಗರು. ಮೂರನೆಯದು (ಕೆಲವೊಮ್ಮೆ ಇದೇ ಮೊದಲನೆಯದು) ಪ್ರಜಾವಾಣಿ ಕೊಡುತ್ತಿದ್ದ ಸಂಭಾವನೆ.
ಆಗ ‘ಕರ್ನಾಟಕ ದರ್ಶನ’ಕ್ಕೆ ಲೇಖನ ಬರೆಯಲೆಂದೇ ನಾನು ವಸ್ತು ವಿಷಯ ಹುಡುಕಿ ತಿಪಟೂರು ಮಾರ್ಗವಾಗಿ ತರೀಕೆರೆ, ಶಿವಮೊಗ್ಗವರೆಗೆ ಬೈಕಿನಲ್ಲಿ ಹೋಗಿದ್ದಾಗ ಮಾಡಿಕೊಂಡು ಬಂದಿದ್ದ ಎರಡು ಸ್ಟೋರಿಗಳ ಪೈಕಿ ಅಮೃತೇಶ್ವರ ದೇವಾಲಯದ್ದೂ ಒಂದು. ಮತ್ತೊಂದು ಡೀ ಅಡಿಕ್ಷನ್ ಸೆಂಟರ್ ಬಗ್ಗೆ. (ಡೀ ಅಡಿಕ್ಷನ್ ಸೆಂಟರ್ ಬಗ್ಗೆ ಲೇಖನ ಕೊಟ್ಟಿದ್ದರೆ ಒಪ್ಪಿಕೊಳ್ಳುತ್ತಿದ್ದರೇನೋ…ಆಗಿನ್ನೂ ಬರೆದಿರಲಿಲ್ಲ).
ನನ್ನ ವಾರಗೆಯ ಅನೇಕರು ಒಂದು ಲೇಖನ ಬರೆಯಲು ಮಾಹಿತಿ ಸಂಗ್ರಹ ಮಾಡುವುದರ ಜೊತೆಗೆ ಖುದ್ದು ನಾವೇ ಫೋಟೋ ತೆಗೆಯುತ್ತಿದ್ದೆವು. ನಾನು ಲೇಖನ ಬರೆಯುವುದಕ್ಕೂ ಮುನ್ನ ಫೋಟೋ ಪ್ರಿಂಟಾಕಿಸುತ್ತಿದ್ದೆ. ಆಕಸ್ಮಾತ್ ನನ್ನ ಕೈಮೀರಿ ಯಾವುದಾದರೂ ಕ್ಲಿಕ್ ಚೆನ್ನಾಗಿ ಬಂದಿದ್ದರೆ, ಅದರ ಬಗ್ಗೆ ಎರಡು ಸಾಲು ಹೆಚ್ಚು ಬರೆಯುವ ಆಶೆಯಿಂದ ಹಾಗೆ ಮಾಡುತ್ತಿದ್ದೆ. (ಗಾಂಧಿ ನಗರದಲ್ಲಿ ಜಿ.ಕೆ.ವೇಲ್ ಸ್ಟುಡಿಯೋದಲ್ಲಿ ನ್ಯೂಸ್ ಫೋಟೋಗ್ರಾಫರ್ ಮೋಹನ್ ಹೆಸರಿನಲ್ಲಿ ಪ್ರಿಂಟಾಕಿಸುತ್ತಿದ್ದೆ. ಅವರ ಹೆಸರಿನಲ್ಲಿ ಬಿಲ್ ಮಾಡಿಸಿದರೆ ಕಡಿಮೆ ಖರ್ಚಿನಲ್ಲಿ ಕೆಲಸ ಆಗುತ್ತಿತ್ತು.) ನಂತರ ಲೇಖನ ಬರೆವುದು. ಮೊದಲು ಬರೆದದ್ದರಲ್ಲಿ ತಿದ್ದಿ, ತೀಡಿ ಮತ್ತೆ ಹೊಸ ಕಾಪಿ ಬರೆವುದು. ಹೀಗೆ ಲೇಖನ ಬರೆವುದೆಂದರೆ ಒಂದು ಪ್ಯಾಕೇಜಿನಂಥ ಕೆಲಸ.
ಇಷ್ಟೆಲ್ಲಾ ಸರ್ಕಸ್ ಮಾಡಿಕೊಂಡು ಹೋದಾಗ ನಾಗೇಶ ಹೆಗಡೆ ನನ್ನ ಲೇಖನ ಚನ್ನಾಗಿಲ್ಲ ಎಂದು ತಿರಸ್ಕರಿಸಿದ್ದರೆ? ಅವರಿಂದಲೇ ಹೇಗೆ ಬರೆದರೆ ಚನ್ನ ಎಂದು ಪುಟ್ಟ ಲೆಕ್ಚರ್ ಕೇಳಬಹುದಿತ್ತು. ಆದರೆ ಅವರು ದೇವಸ್ಥಾನದ ಲೇಖನ ಬೇಡವೆಂದರು. ನನಗೆ ಅವರ ರಿಯಾಕ್ಷನ್ ನಿಂದ ಯಾವ ಮಾಹಿತಿ/ಅಭಿಪ್ರಾಯವೂ ಸಿಗಲಿಲ್ಲ. ಬೇಡವೆಂಬುದೊಂದನ್ನು ಬಿಟ್ಟು. ಅಂದಿನ ಬೇಜಾರನ್ನು ಪ್ರೆಸ್ ಕ್ಲಬ್ಬಿಗೆ ಬಂದು ರಮ್ ಕುಡಿಯುತ್ತಾ ಸಿಗರೇಟಿನ ಹೊಗೆಯಲ್ಲಿ ಕಳೆದೆ. ಮುಂದೊಂದು ದಿನ ಪುರವಣಿಗಳಿಗೆ ಒಂದು ಕಾನ್ಸೆಪ್ಟ್ ಫ್ರೇಮ್ವರ್ಕ್ ಇಟ್ಟುಕೊಂಡಿರುತ್ತಾರೆ. ಕೈಗೆ ಸಿಕ್ಕ ಎಲ್ಲವನ್ನೂ ಪ್ರಕಟಿಸುವುದಿಲ್ಲವೆಂಬುದು ತಿಳಿಯಿತು. ಆದರೂ ಅಂದು ಹೆಗಡೆ ಅವರನ್ನು ಮೆಚ್ಚಿಸಲಾಗದ್ದಿಕ್ಕೆ ಬಹಳ ಕಾಲ ನನಗೆ ಅಸಮಾಧಾನ ಇದ್ದೇ ಇತ್ತು.
**
ಅದೊಮ್ಮೆ ಹಂದಿ ಜ್ವರ ರಾಜ್ಯದೆಲ್ಲೆಡೆ ಹರಡಿತ್ತು. ಕಾಯಿಲೆಯ ಸುತ್ತ ಅನೇಕ ಕಟ್ಟುಕತೆಗಳು ಹುಟ್ಟಿಕೊಂಡಿದ್ದವು. ಆಗ ಪ್ರಜಾವಾಣಿ ಎಡಿಟ್ ಪೇಜ್ ನಲ್ಲಿ ನಾಗೇಶ ಹೆಗಡೆ ಹಂದಿ ರೋಗದ ಕುರಿತು ಸವಿಸ್ತಾರವಾದ ಲೇಖನ ಬರೆದಿದ್ದರು. ಅದರ ಬಗ್ಗೆ ಹಬ್ಬಿದ್ದ ವದಂತಿಗಳ ಬಗ್ಗೆ ನಿಖರ ಮಾಹಿತಿ ನೀಡಿದ್ದರು. ಹಂದಿ ಜ್ವರದ ಬಗ್ಗೆ ಅನೇಕ ಪ್ರಶ್ನೆಗಳನ್ನಿಟ್ಟುಕೊಂಡಿದ್ದ ನನಗೂ ಅದನ್ನು ಓದಿದ ಮೇಲೆ ನಿರಾಳವಾಯಿತು. ಕೂಡಲೇ ನಾಗೇಶ ಹೆಗಡೆ ಅವರಿಗೆ ಫೋನ್ ಮಾಡಿ ಸಾರ್ ಆ ಲೇಖನ ನನಗೆ ಕಳಿಸಿ ಒಂದಷ್ಟು ಲೀಫ್ಲೆಟ್ ಮಾಡೋಣ ಎಂದೆ.
ಅಚ್ಚಾಗದೇ ಉಳಿದಿದ್ದ ಇನ್ನಷ್ಟು ಮಾಹಿತಿ ಸೇರಿಸಿ ಮೈಲ್ ಮಾಡಿದರು. ಅದನ್ನು ಡಿಸೈನ್ ಮಾಡಿಸಿ ಒಂದು ಸಾವಿರ ಪ್ರತಿಗಳನ್ನು ಪ್ರಿಂಟ್ ಮಾಡಿಸಿದೆ. ಬೆಂಗಳೂರಿನ ಪ್ರಮುಖರಸ್ತೆ ಬದಿಗಳಲ್ಲಿ, ಸಿಗ್ನಲ್ ನಲ್ಲಿ ಮತ್ತು ಬಸ್ ಸ್ಟಾಂಡ್ ನಲ್ಲಿ ಅವುಗಳನ್ನು ಹಂಚಿದೆ.
ಆಗ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. ಬಳ್ಳಾರಿಯಲ್ಲಿ ನನ್ನ ಹಿರಿಯ ಸ್ನೇಹಿತ ರಂಗನಾಥ್ ವಾರ್ತಾಧಿಕಾರಿಯಾಗಿದ್ದರು. ನನ್ನ ಈ ಕಾಳಜಿಯ ಕೆಲಸವನ್ನು ತಿಳಿದ ರಂಗನಾಥ್ ಸಚಿವರ ಗಮನಕ್ಕೆ ಅದನ್ನು ತಂದು ಅಂಥವೇ ಇನ್ನಷ್ಟು ಪ್ರಚಾರ ಸಾಮಗ್ರಿ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. ನಾನು ನಾಗೇಶ ಹೆಗಡೆ ಅವರಿಗೆ ಮಾಹಿತಿ ಮುಟ್ಟಿಸಿದೆ. ಆರೋಗ್ಯ ಇಲಾಖೆಯಲ್ಲಿ ಅವರದ್ದೇ ಐ.ಇ.ಸಿ ಸೆಕ್ಷನ್ ಇರುತ್ತೆ. ಅದರಲ್ಲಿ ಎಕ್ಸ್ ಪರ್ಟ್ಸ್ ಕೆಲಸ ಮಾಡ್ತಾರೆ. ನಮಗೂ ಕರೆದರೆ ಹೋಗೋಣ ಬಿಡಿ ಎಂದರು. ನಾನು ಇನ್ನಷ್ಟು ಕೆಲಸ ಮಾಡಬಹುದೆಂದು ಉತ್ಸುಕನಾಗಿದ್ದೆ. ಸರ್ಕಾರದಿಂದ ಬುಲಾವ್ ಬರಲೇ ಇಲ್ಲ. ಸುಮ್ಮನಾದೆ.
**
ಕೃಷಿ ಕುರಿತಾಗಿ ನಾನು ಬರೆದಿದ್ದ ಲೇಖನಗಳಲ್ಲಿ ಆಯ್ದ ಕೆಲವನ್ನು ಒಟ್ಟು ಮಾಡಿ ಒಂದು ಪುಸ್ತಕ ಮಾಡಲು ತಯಾರಿ ನಡೆಸಿದೆ. ಮುನ್ನುಡಿಗಾಗಿ ನಾಗೇಶ ಹೆಗಡೆ ಅವರನ್ನು ಕೋರಿದೆ. ಅವರು ಬಹಳ ಅಭಿಮಾನದಿಂದ ಮುನ್ನುಡಿ ಬರೆದುಕೊಟ್ಟರು. ಪುಸ್ತಕದ ಶೀರ್ಷಿಕೆಗೆಗಾಗಿ ಯೋಚಿಸುತ್ತಿದ್ದೆ. ಹಾಗೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದ ಹಾಗೆ ಹೆಗಡೆ ಅವರ ಮುನ್ನುಡಿಯಲ್ಲಿಯೇ ಶೀರ್ಷಿಕೆಯೂ ಸಿಕ್ಕಿತು. “ಕೃಷಿ ಕುಸಿತದ ಕಥನಗಳು” ಪುಸ್ತಕದ ಶೀರ್ಷಿಕೆ. ಅದು ನನ್ನ ಮೊದಲ ಪುಸ್ತಕ.
ತುಸು ಕಾಲದ ನಂತರ ಅಂತಾರಾಷ್ಟೀಯ ಖ್ಯಾತಿಯ ಕೃಷಿ ಮತ್ತು ಆಹಾರ ನೀತಿಗಳ ತಜ್ಞರಾದ ದೇವಿಂದರ್ ಶರ್ಮಾ ಅವರ ಆಯ್ದ ಇಂಗ್ಲೀಷ್ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ಪುಸ್ತಕ ಮಾಡಲು ಯೋಚಿಸಿದಾಗ ಮತ್ತೆ ಹೆಗಡೆ ಅವರಿಗೇ ಮುನ್ನುಡಿಗಾಗಿ ಕಳುಹಿಸಿದೆ. ‘ಬೇರೆ ಯಾರಾತ್ರಾದ್ರೂ ಬರೆಸಿ, ಪ್ರತೀ ಸಾರಿ ನಾನೇ ಯಾಕೆ ಬರೀಬೇಕು’ ಅಂದರು. ಅದೆಲ್ಲಾ ಸಾಧ್ಯವಿಲ್ಲ ನೀವೇ ಬರೀಬೇಕೆಂದು ಒತ್ತಾಯಿಸಿದೆ. ಬರೆದರು. ಮುನ್ನುಡಿಯಲ್ಲಿ “ಇದು ಕನ್ನಡದ ಭಾಗ್ಯವೆನ್ನಬೇಕು” ಎಂದರು. ಪ್ರಾಯಶಃ ನಾನು ಆಯ್ದುಕೊಂಡಿದ್ದ ಲೇಖನಗಳು ಮತ್ತು ನನ್ನ ಅನುವಾದ ಶೈಲಿಯನ್ನು ಮೆಚ್ಚಿ ನಾಗೇಶ ಹೆಗಡೆ ಅವರು ನನಗೆ ಕೊಟ್ಟ ನೊಬೆಲ್ ಅದು.
**
ಕೃಷಿ ಕುರಿತಾದ “ಕೃಷಿ ಸಮಯ” ಮಾಸಪತ್ರಿಕೆ ಮಾಡುವಾಗ ಆಗಾಗ ನಾಗೇಶ ಹೆಗಡೆ ಅವರನ್ನು ಲೇಖನ ಕೋರಿ ಪೀಡಿಸುತ್ತಿದ್ದೆ. ಸಮಯವಿಲ್ಲವೆಂದು ಗೊಣಗಿದರೂ, ಯಾವತ್ತಿಗೂ ಇಲ್ಲವೆಂದಿಲ್ಲ. ಒಮ್ಮೆ ಸಾರ್ ನಿಮಗೆ ಸಂಭಾವನೆ ಕೊಡಬೇಕು ಅಕೌಂಟ್ ಡೀಟೇಲ್ಸ್ ಕಳಿಸಿ ಎಂದೆ. ನನ್ನ ಹಣೆಬರಹ ಗೊತ್ತಿದ್ದ (ಪತ್ರಿಕೆ ಮಾಡಲು ನನಗಿದ್ದ ಹಣಕಾಸಿನ ಮುಗ್ಗಟ್ಟು) ಅವರು, ಇಲ್ಲ ಬೇಡ ನನಗೆ ರೆಗ್ಯುಲರ್ ಆಗಿ ಪಿಡಿಎಫ್ ಕಾಪಿ ಕಳಿಸಿ ಸಾಕು. ಅದರ ಚಂದಾಗೆ ನನ್ನ ಸಂಭಾವನೆ ಜಮಾ ಮಾಡಿಕೊಳ್ಳಿ ಎಂದರು. ಅಲ್ಲದೆ ಯಾವ ಮುಖ್ಯವಾಹಿನಿಯ ಪತ್ರಿಕೆಗೂ ಕಡಿಮೆ ಇಲ್ಲವೆಂಬಂತೆ ಪತ್ರಿಕೆ ತರುತ್ತಿದ್ದೀರಿ. ಚನ್ನಾಗಿದೆ ಎಂದು ಪ್ರಶಂಸೆ ನೀಡಿದ್ದರು.
**
ಕೃಷಿ, ಪರಿಸರ, ವಿಜ್ಞಾನ ವಿಷಯಗಳಲ್ಲಿ ಯಾವುದೇ ಅನುಮಾನಗಳಿಗೆ, ಪ್ರಶ್ನೆಗಳಿಗೆ ನಾನು ಗೂಗಲ್ ಗಿಂತ ಹೆಚ್ಚಿಗೆ ನಾಗೇಶ ಹೆಗಡೆ ಅವರನ್ನೇ ಆಶ್ರಹಿಸುವುದು. ಹಾಗಾಗಿ ಅವರು ನನ್ನಂಥವರಿಗೆ ಗೂಗಲ್ +. ಹೆಗಡೆ ಅವರಷ್ಟು ಸುದೀರ್ಘ ಕಾಲ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವವರು ಕನ್ನಡ ಪತ್ರಿಕೋದ್ಯಮದಲ್ಲಿ ಇನ್ನೊಬ್ಬರಿರಲಿಕ್ಕಿಲ್ಲ. ನಿರಂತರ ಬರೆಯುತ್ತಲೇ ಇರುತ್ತಾರೆ.
ಪತ್ರಕರ್ತರಾದ ನಾವೇ ಕೆಲವು ಮಂದಿ ಸೇರಿ ನಾಗೇಶ ಹೆಗಡೆ ಅವರ ಕುರಿತಾದ ಅಭಿನಂದನಾ ಗ್ರಂಥ ತರುವ ಕೆಲಸ ಮಾಡಬೇಕಿತ್ತು. ಅವರು ಇನ್ನೂ ರಿಟೈರ್ ಆಗಿಲ್ಲವೆಂದೋ…! ವಿಶ್ರಾಂತ ಜೀವನವನ್ನು ಆಯ್ಕೆ ಮಾಡಿಕೊಂಡಿಲ್ಲವೆಂದೋ…! ಅಥವಾ ಇನ್ನೂ ಬೇಕಾದಷ್ಟು ಸಮಯ ಇದೆ ಎಂದೋ…! ಅಭಿನಂದನೆ ಮಾಡಬೇಕೆಂದು ನಮಗ್ಯಾರಿಗೂ ಹೊಳೆಯಲೇ ಇಲ್ಲ. ನಮ್ಮ ಇಂದ್ರಿಯಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೆಂದರೂ ಆದೀತು… ಒಟ್ಟಿನಲ್ಲಿ ಆ ಕೆಲಸ ನಾವು ಮಾಡಲಾಗಲಿಲ್ಲ.
ಇರಲಿ ನಮ್ಮದೇ ಕೆಲಸವನ್ನು ಗುರುರಾಜ್ ದಾವಣಗೆರೆ ಅವರು ಮಾಡಲು ಮುಂದಾಗಿದ್ದಾರೆ. ಅವರಿಗೆ ಅತ್ಯಂತ ಅಭಿಮಾನದಿಂದ ಗೌರವ ಸಲ್ಲಿಸುತ್ತಾ ನಾಗೇಶ ಹೆಗಡೆ ಅವರೊಂದಿಗಿನ ಒಡನಾಟದ ಒಂದಿಷ್ಟು ನೆನಪುಗಳನ್ನು ದಾಖಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ನಾಗೇಶ ಹೆಗಡೆ ಅವರು ಇನ್ನೂ ಹೆಚ್ಚು ಕಾಲ ನಮ್ಮ ನಡುವೆ ಬರೆಯುತ್ತಾ, ನಮ್ಮೊಳಗೆ ಹೊಸ ಹೊಳಹುಗಳನ್ನು ಹುಟ್ಟುಹಾಕುತ್ತಾ ಇರಲಿ ಎಂದು ಈ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತೇನೆ.
ಮರೆತ ಮಾತು: ಅದೊಮ್ಮೆ ಪ್ರೆಸ್ ಕ್ಲಬ್ ಆವರಣದಲ್ಲಿ ‘ವೈನ್ ಮೇಳ’ ಆಯೋಜಿಸಲಾಗಿತ್ತು. ನಾವೋ ಕಪಿಗಳು! ಕೈಗೆ ಸಿಕ್ಕಿದ್ದೆಲ್ಲಾ ಕುಡಿದು ಲೋಡ್ ಲಾರಿ ಓಡಾಡಿದ ಹಾಗೆ ಓಡಾಡುತ್ತಿದ್ದೆವು. ಎದುರಿಗೆ ಒಂದು ಗಾಬ್ಲೆಟ್ ಹಿಡಿದು ಮೆಲ್ಲಗೆ ಬರುತ್ತಿದ್ದ ಹೆಗಡೆ ಅವರತ್ತ ನೋಡಿ. ಸಾರ್ ನಮಸ್ಕಾರ ಎಂದೆ. ನನ್ನ ಅವತಾರ ನೋಡಿ. ಇನ್ನೂ ೨೦೦ ವರ್ಷ ಭಾರತೀಯರಿಗೆ ವೈನ್ ಕುಡಿಯೋದು ಬರೋಲ್ಲ ಎಂದರು… ಹೌದ್ಸಾ… ಹೌದ್ಸಾ… ಎಂದು ಅಲ್ಲಿಂದ ಮರೆಯಾದೆ.
– ನಾಗೇಶ್ ಕೆ.ಎನ್., ಹಿರಿಯ ಪತ್ರಕರ್ತರು



