ಬೆಂಗಳೂರು: ಜನಸಾಮಾನ್ಯರ, ವಿಶೇಷವಾಗಿ ಮುಗ್ಧ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವ ಆಹಾರ ಕ್ಷೇತ್ರ ಅಥವಾ ಔಷಧ ಕ್ಷೇತ್ರ ಯಾವುದೇ ಅಕ್ರಮ ಜಾಲವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಇಂತಹ ದಂಧೆಕೋರರ ವಿರುದ್ಧ ಸದಾ ಜಾಗೃತರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದರು.
- ನ್ಯಾಯಾಲಯದ ಆದೇಶವಿದ್ದರೂ 8 ವರ್ಷಗಳಿಂದ ಉದ್ಯೋಗ ವಂಚನೆ
- AHO, ADH ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಮುಂದೂಡಿ: ಆರ್ ಅಶೋಕ್
- ಕೃಷ್ಣ ಬೈರೇಗೌಡ ಅವರಿಗೆ ಪ್ರಕಾಶ್ ಕೋನಾಪುರ ಬರೆದ ಪತ್ರ
- ಆಹಾರ, ಔಷಧ ಕ್ಷೇತ್ರದ ಯಾವುದೇ ಅಕ್ರಮ ಜಾಲವನ್ನು ಸರ್ಕಾರ ಸಹಿಸದು: ಯು.ಟಿ.ಖಾದರ್
- ಜಯಚಾಮರಾಜೇಂದ್ರ ಒಡೆಯರ್ ಕೃತಿಗಳಿಗೆ ಭರತನಾಟ್ಯ ಪ್ರಯೋಗ
ಬೆಂಗಳೂರಿನ ಡಾರ್ಕ್ ಸ್ಟೋರ್ ಗಳಲ್ಲಿ ಅವಧಿ ಮುಗಿದ ಮತ್ತು ತಪ್ಪಾಗಿ ಬ್ರಾಂಡ್ ಮಾಡಲಾದ ಉತ್ಪನ್ನಗಳ ವಶಪಡಿಸಿಕೊಂಡು ಕ್ರಮವಹಿಸಿರುವ ಬಗ್ಗೆ ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಒಬ್ಬರು ಪತ್ರಕರ್ತರು ನೀಡಿದ ಪ್ರಮುಖ ಸುಳಿವು ಹಾಗೂ ಪ್ರಮುಖ ದಾಖಲೆಗಳ ಆಧಾರದ ಮೇಲೆ, ನಮ್ಮ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಪ್ರಮುಖ ಇ-ಕಾಮರ್ಸ್ ವೇದಿಕೆಗಳು, ಡಾರ್ಕ್ ಸ್ಟೋರ್‌ಗಳು ಹಾಗೂ ಇತರ ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ ಅಮೆಜಾನ್, ಇನ್‌ಸ್ಟಾಮಾರ್ಟ್, ಸಪ್ತಾ ಬಜಾರ್ ಹಾಗೂ ಲಿಯೋ 7 ಎಂಟರ್‌ಪ್ರೈಸಸ್ ಮುಂತಾದ ಕಡೆಗಳಲ್ಲಿ ಜಪ್ತಿಯಾದ ವಸ್ತುಗಳನ್ನು ಕಂಡಾಗ ಆಘಾತವಾಗುತ್ತದೆ. ಒಟ್ಟಾರೆಯಾಗಿ ಸುಮಾರು ₹3 ಕೋಟಿಗೂ ಅಧಿಕ ಮೌಲ್ಯದ ಅವಧಿ ಮುಗಿದ ಆಹಾರ ಪದಾರ್ಥಗಳು, ತಪ್ಪು ಲೇಬಲ್ ಇದ್ದ ಉತ್ಪನ್ನಗಳು ಹಾಗೂ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಔಷಧಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ಗುರುತರ ನಿಯಮ ಉಲ್ಲಂಘನೆ ಎಸಗಿದ ಲಿಂಗರಾಜಪುರಂನ ಲಿಯೋ 7 ಎಂಟರ್‌ಪ್ರೈಸಸ್ ಹಾಗೂ ಹೊಸಕೋಟೆಯ ಇನ್‌ಸ್ಟಾಮಾರ್ಟ್ ಘಟಕಗಳನ್ನು ತಕ್ಷಣವೇ ಬಂದ್ ಮಾಡಿಸಲಾಗಿದೆ ಎಂದರು.
ಕಳೆದ ಒಂದು ತಿಂಗಳಿನಿಂದ ಹೋಟೆಲ್‌ಗಳು, ರೆಸ್ಟೋರೆಂಟ್ಗಳು, ಕ್ಲಬ್‌ಗಳು ಹಾಗೂ ಫುಡ್ ಸೆಂಟರ್‌ಗಳ ಮೇಲೆ ಸತತ ಕಣ್ಣಿಟ್ಟು, ಅತ್ಯಂತ ಪಾರದರ್ಶಕತೆ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಆಯುಷ್, ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ವಿಭಾಗದ ಅಧಿಕಾರಿಗಳ ತಂಡದ ಕಾರ್ಯವೈಖರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದರು.
ಸ್ವಲ್ಪವೂ ಪಾಪ ಪ್ರಜ್ಞೆ ಇಲ್ಲದೆ ಇಂತಹ ಅಕ್ರಮಗಳನ್ನು ಸಿಗುವ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ. ಇವರ ಮೇಲೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಿದ್ದು, ಈ ಬಗ್ಗೆ ಕಾನೂನು ಇಲಾಖೆಯೊಂದಿಗೆ ಸೂಕ್ತ ಚರ್ಚೆ ನಡೆಸಲಾಗುವುದು ಎಂದರು.
ಅಷ್ಟೇ ಅಲ್ಲದೆ, ಇಂತಹ ಅಕ್ರಮ ನಡೆಸುವವರ ಲೈಸೆನ್ಸ್ ರದ್ದುಪಡಿಸುವ ಮತ್ತು ಅವರ ಮೇಲೆ ನೇರ ಶಿಕ್ಷಾತ್ಮಕ ಕ್ರಮ ಜರುಗಿಸುವ ಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡುವಂತೆ ಕೇಂದ್ರ ಆರೋಗ್ಯ ಸಚಿವರನ್ನು ಶೀಘ್ರವೇ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ ಎಂದರು.
ಆನ್‌ಲೈನ್‌ನಲ್ಲಿ ಲೇಬಲ್ ಇಲ್ಲದ ಹಾಗೂ ಎಕ್ಸ್‌ಪೈರಿ ದಿನಾಂಕವೇ ಇಲ್ಲದ ಔಷಧಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇವುಗಳಿಗೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನನ್ನದೊಂದು ಆಶಯ ಹಾಗೂ ಮನವಿ, ಇಷ್ಟು ದೊಡ್ಡ ಮಟ್ಟದ ಅವಧಿ ಮೀರಿದ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಮಾರಾಟ ನಡೆಯುತ್ತಿದೆ ಎಂದರೆ ಖಂಡಿತವಾಗಿಯೂ ಸ್ಥಳೀಯರಿಗೆ, ಸಂಘ-ಸಂಸ್ಥೆಗಳಿಗೆ ಅನುಮಾನ ಬಂದಿರುತ್ತದೆ, ಕೆಲವೊಮ್ಮೆ ಅಲ್ಪಸ್ವಲ್ಪ ಮಾಹಿತಿಯು ತಿಳಿದಿರಬಹುದು. ಇಂತಹ ಸಂದರ್ಭದಲ್ಲಿ ದಯವಿಟ್ಟು ‘ನಮಗೇಕೆ ಬೇಕು’ ಎಂದು ಸುಮ್ಮನಿರಬೇಡಿ. ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಇಂತಹ ಅಕ್ರಮಗಳು ಕಂಡುಬಂದಾಗ ಇಲಾಖೆಗೆ ಸಾಥ್ ನೀಡಿ, ನಮ್ಮ ಕ್ಯೂಆರ್/ಬಾರ್ ಕೋಡ್ ಬಳಸಿ ತಕ್ಷಣವೇ ದೂರು ಸಲ್ಲಿಸಿ ಎಂದು ಮನವಿ ಮಾಡಿದರು.
ಅಲ್ಲದೆ, ಇದೊಂದು ನಿರಂತರವಾದಂತಹ ಅಭಿಯಾನವಾಗಿದ್ದು ಅಧಿಕಾರಿಗಳ ಬದ್ಧತೆ ಎಷ್ಟು ಮುಖ್ಯವೋ ಸಾರ್ವಜನಿಕರ ಸಹಭಾಗಿತ್ವ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಇರುತ್ತೆ ಹಾಗಾಗಿ ಈ ನಾಡಿನ ಜನಸಾಮಾನ್ಯರು ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲೇಬೇಕು ಎಂದರು.




