ಕೋಟ್ಯಂತರ ರೂ. ಅಕ್ರಮದ ಸಮಗ್ರ ತನಿಖೆಗೆ ಅಪ್ಸರ್ ಕೊಡ್ಲಿಪೇಟೆ ಆಗ್ರಹ

5 minutes ago

ಪತ್ರಿಕಾ ವರದಿಗಳ ಬೆನ್ನಲ್ಲೇ ಆರೋಪಿಗಳ ಬಂಧನ
ಹಗರಣದ ಹಿಂದಿರುವ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳ ಪಾತ್ರವೂ ಬಹಿರಂಗವಾಗಲಿ

3 ಹುದ್ದೆಗಳಿಗೆ 7 ಮಂದಿ ನೇಮಕ? ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿಯಲ್ಲೂ ಗೋಲ್‌ಮಾಲ್ ಆಗಿರುವುದು ಆಡಿಟ್‌ನಲ್ಲಿ ಬಯಲಾಗಿರುವುದು ದುರಂತವೇ ಸರಿ

ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮ ಮತ್ತು ವಂಚನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಸಾರ್ವಜನಿಕರ ಗಮನ ಸೆಳೆದಿವೆ. ಪತ್ರಿಕಾ ವರದಿಗಳ ಬೆನ್ನಲ್ಲೇ ಪ್ರಕರಣದ ತನಿಖೆ ಚುರುಕುಗೊಂಡು ಆರೋಪಿಗಳ ಬಂಧನವಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ, ಈ ಪ್ರಕರಣವನ್ನು ಕೇವಲ ಕೆಲ ವ್ಯಕ್ತಿಗಳ ವಿರುದ್ಧದ ವಂಚನೆ ಪ್ರಕರಣವೆಂದು ಪರಿಗಣಿಸಿ ಮುಕ್ತಾಯಗೊಳಿಸಬಾರದು. ನಗರಾಭಿವೃದ್ಧಿ ಪ್ರಾಧಿಕಾರದಂತಹ ಪ್ರಮುಖ ಸರ್ಕಾರಿ ಸಂಸ್ಥೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಕ್ರಮ ನಡೆಯಲು ಅಧಿಕಾರಿಗಳ ಕರ್ತವ್ಯಲೋಪ, ದಾಖಲೆಗಳ ನಿರ್ವಹಣೆಯಲ್ಲಿನ ಲೋಪ, ಅಧಿಕಾರ ದುರುಪಯೋಗ ಹಾಗೂ ರಾಜಕೀಯ ಅಥವಾ ಇತರ ಪ್ರಭಾವಿಗಳ ಹಸ್ತಕ್ಷೇಪ ಇದೆಯೇ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕು ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ಹುದ್ದೆಗಳಿಗೆ 7 ಮಂದಿ ನೇಮಕಾತಿ ಆಗಿದೆ. ಆಡಿಟ್‌ನಲ್ಲಿ ಗಂಭೀರ ಪ್ರಶ್ನೆ ಎದ್ದಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ನೇಮಕಾತಿ ಪ್ರಕ್ರಿಯೆಯಲ್ಲೂ ಗಂಭೀರ ಅಕ್ರಮ ನಡೆದಿರುವ ಆರೋಪಗಳು ಕೇಳಿಬರುತ್ತಿವೆ. ಕೇವಲ 3 ಹುದ್ದೆಗಳಿಗೆ 7 ಮಂದಿಯನ್ನು ಭರ್ತಿ ಮಾಡಿರುವುದೇ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಈ ನೇಮಕಾತಿಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆಯೇ, ಹುದ್ದೆಗಳ ಮಂಜೂರಾತಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗವಾಗಿದೆಯೇ ಹಾಗೂ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ನಿರ್ದಿಷ್ಟ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆಯೇ ಎಂಬುದನ್ನು ಆಡಿಟ್ ವರದಿ ಆಧರಿಸಿ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ನೇಮಕಾತಿಯಲ್ಲಿನ ಈ ಗೋಲ್‌ಮಾಲ್‌ಗೆ ಸಂಬಂಧಿಸಿದಂತೆ ಯಾರು ನಿರ್ಧಾರ ಕೈಗೊಂಡರು, ಯಾವ ನಿಯಮದಡಿ ನೇಮಕಾತಿ ಮಾಡಲಾಯಿತು, ಹೆಚ್ಚುವರಿ ನೇಮಕಾತಿಗೆ ಅನುಮತಿ ನೀಡಿದವರು ಯಾರು ಹಾಗೂ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಆರ್ಥಿಕ ಹೊರೆ ಬಿದ್ದಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇತರ ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ತಪ್ಪಾಗಿ ನೇಮಕಗೊಂಡಿದ್ದರೆ ಅದರ ಕಾನೂನುಬದ್ಧತೆಯನ್ನೂ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಹಗರಣದ ಸಂಪೂರ್ಣ ಜಾಲ ಬಯಲಾಗಲಿ: ನಿವೇಶನಗಳ ಹಂಚಿಕೆ, ದಾಖಲೆಗಳ ಸೃಷ್ಟಿ ಅಥವಾ ನಕಲು, ಹಣಕಾಸಿನ ವ್ಯವಹಾರಗಳು, ನೇಮಕಾತಿ ಪ್ರಕ್ರಿಯೆ ಹಾಗೂ ಪ್ರಾಧಿಕಾರದ ಅಧಿಕೃತ ದಾಖಲೆಗಳ ದುರುಪಯೋಗದಂತಹ ಅಕ್ರಮಗಳು ನಡೆದಿದ್ದರೆ, ಅವುಗಳ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖಾ ಸಂಸ್ಥೆಗಳು ಪತ್ತೆಹಚ್ಚಬೇಕು ಎಂದರು.

ಅಕ್ರಮದಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಮುಂದೆ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಕೆಳಮಟ್ಟದ ಆರೋಪಿಗಳನ್ನು ಮಾತ್ರ ಬಂಧಿಸಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬದಲು, ಇದರ ಹಿಂದೆ ಇರುವ ಸಂಪೂರ್ಣ ಜಾಲವನ್ನು ತನಿಖೆಗೊಳಪಡಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಆಗ್ರಹಗಳು:

1. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮದ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು.

2. ಪ್ರಾಧಿಕಾರದ ಕಳೆದ ಹಲವು ವರ್ಷಗಳ ನಿವೇಶನ ಹಂಚಿಕೆ, ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ವಿಶೇಷ ಆಡಿಟ್ ನಡೆಸಬೇಕು.

3. 3 ಹುದ್ದೆಗಳಿಗೆ 7 ಮಂದಿಯ ನೇಮಕಾತಿ ನಡೆದಿದೆ ಎನ್ನಲಾಗುತ್ತಿರುವ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಸಿ, ನೇಮಕಾತಿಯ ಸಂಪೂರ್ಣ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು.

4. ನಕಲಿ ದಾಖಲೆಗಳು, ಸಹಿ ಅಥವಾ ಅಧಿಕೃತ ದಾಖಲೆಗಳ ದುರುಪಯೋಗ ನಡೆದಿದ್ದರೆ, ಅದರ ಹಿಂದೆ ಇರುವ ಎಲ್ಲಾ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು.

5. ಅಧಿಕಾರಿಗಳ ಕರ್ತವ್ಯಲೋಪ ಅಥವಾ ಅಕ್ರಮದಲ್ಲಿ ಶಾಮೀಲಾತಿ ಸಾಬೀತಾದರೆ, ಅಂತಹ ಅಧಿಕಾರಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

6. ಹಗರಣದಿಂದ ಸರ್ಕಾರಕ್ಕೆ ಅಥವಾ ಸಾರ್ವಜನಿಕರಿಗೆ ನಷ್ಟವಾಗಿದ್ದರೆ, ಆ ನಷ್ಟದ ಮೊತ್ತವನ್ನು ತಪ್ಪಿತಸ್ಥರಿಂದಲೇ ವಸೂಲಿ ಮಾಡಬೇಕು.

7. ಅಕ್ರಮವಾಗಿ ಹಂಚಿಕೆಯಾಗಿರುವ ನಿವೇಶನಗಳು ಅಥವಾ ಇತರ ಆಸ್ತಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು.

8. ತನಿಖೆಯ ಪ್ರಗತಿ ಹಾಗೂ ಪ್ರಮುಖ ಅಂಶಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ಬಹಿರಂಗಪಡಿಸಬೇಕು.

9. ಪ್ರಕರಣದ ತನಿಖೆಯಲ್ಲಿ ಯಾವುದೇ ರಾಜಕೀಯ ಅಥವಾ ಅಧಿಕಾರದ ಒತ್ತಡಕ್ಕೆ ಅವಕಾಶ ನೀಡದೆ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.

KKRDB ಅನುದಾನವನ್ನು ಸರ್ಕಾರಿ ಶಾಲೆಯ ಸ್ವಂತ ಕಟ್ಟಡಕ್ಕೆ ಬಳಸಬೇಕು

ಕೊಪ್ಪಳ ನಗರದ ಸರ್ದಾರ್ ಗಲ್ಲಿಯಲ್ಲಿ 2016ರಲ್ಲಿ ಆರಂಭಗೊಂಡಿರುವ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಗೆ ಇದುವರೆಗೆ ಸ್ವಂತ ಕಟ್ಟಡ ಹಾಗೂ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸದಿರುವುದು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ ಎಂದರು.

ಈ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅನುದಾನವನ್ನು ಬಳಸಿಕೊಂಡು ತಕ್ಷಣವೇ ಶಾಲೆಯ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಈ ಪ್ರಮುಖ ವಿಚಾರವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷಿಸಬಾರದು ಎಂದರು.

ಪ್ರಮುಖ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಕುರಿತು ವಿಶೇಷ ತನಿಖೆಗೆ ಆಗ್ರಹ: ಕೊಪ್ಪಳ ನಗರದ ಪ್ರಮುಖ ಇಲಾಖೆಗಳಾದ ನಗರಸಭೆ (CMC), ಲೋಕೋಪಯೋಗಿ ಇಲಾಖೆ (PWD), ಸಣ್ಣ ನೀರಾವರಿ (MI), ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (KRIDL) ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ (PRED) ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳು, ಟೆಂಡರ್‌ಗಳು, ಅನುದಾನ ಬಳಕೆ ಹಾಗೂ ಹಣಕಾಸಿನ ವ್ಯವಹಾರಗಳ ಕುರಿತು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಇಲಾಖೆಗಳಲ್ಲಿನ ಆರೋಪಗಳ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿ ಸಮಗ್ರ ತನಿಖೆಗೆ ಆದೇಶಿಸಬೇಕು. ಮಾಧ್ಯಮ ವರದಿಗಳಿಂದ ಪ್ರಕರಣ ಬೆಳಕಿಗೆ ಬಂದಿದ್ದು ಸ್ವಾಗತಾರ್ಹ ಎಂದರು.

ವರದಿ ಪ್ರಕಟವಾದ ನಂತರ ತನಿಖೆ ಚುರುಕುಗೊಂಡಿರುವುದು ಮಾಧ್ಯಮಗಳ ಜವಾಬ್ದಾರಿಯುತ ಪಾತ್ರವನ್ನು ತೋರಿಸುತ್ತದೆ. ಆದರೆ ಮಾಧ್ಯಮ ವರದಿಗಳ ಮೂಲಕ ಪ್ರಕರಣ ಬೆಳಕಿಗೆ ಬಂದಿರುವುದಷ್ಟೇ ಸಾಕಾಗುವುದಿಲ್ಲ. ಹಗರಣದ ಸಂಪೂರ್ಣ ಸತ್ಯ ಹೊರಬರಬೇಕು, ತಪ್ಪಿತಸ್ಥರು ಕಾನೂನಿನ ಮುಂದೆ ಶಿಕ್ಷೆಗೆ ಒಳಗಾಗಬೇಕು ಹಾಗೂ ಸಾರ್ವಜನಿಕರ ಹಣ ಮತ್ತು ಆಸ್ತಿಗೆ ನ್ಯಾಯ ದೊರೆಯಬೇಕು ಎಂದರು.

ಸರ್ಕಾರದ ಹಣ ಮತ್ತು ಸಾರ್ವಜನಿಕ ಆಸ್ತಿಯ ದುರುಪಯೋಗ ಯಾವುದೇ ಕಾರಣಕ್ಕೂ ಸಹಿಸುವಂತಿಲ್ಲ. ಅಧಿಕಾರಿಗಳು ಮತ್ತು ರಾಜಕೀಯ ಪ್ರಭಾವಿಗಳು ಯಾರೇ ಆಗಿದ್ದರೂ, ಅಕ್ರಮದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಸಾಬೀತಾದರೆ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Leave a Reply