ಚಕ್ರವರ್ತಿ ಸೂಲಿಬೆಲೆ ಪೋಸ್ಟ್‌ಗೆ ನೆಟ್ಟಿಗರ ಸಖತ್ ತರಾಟೆ!

3 hours ago

ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ ಎಂದು ಪೋಸ್ಟ್ ಮಾಡಿದ್ದ ಬಾಡಿಗೆ ಭಾಷಣಕಾರ!

ಬೆಂಗಳೂರು: ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟರ್‌ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್ ಮತ್ತು ಆಕ್ರೋಶಕ್ಕೆ ಗುರಿಯಾಗಿದೆ.

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೆಪ್ಟೆಂಬರ್ 6 ರಂದು ಆಯೋಜಿಸಿರುವ ‘ತಿರಂಗಾ ಯಾತ್ರೆ’ ಕುರಿತು ಪ್ರಚಾರ ಮಾಡಲು ಸೂಲಿಬೆಲೆ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ “ಇನ್ನು ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ.. ಎದ್ದು ಬನ್ನಿ ತಿರಂಗಾ ಯಾತ್ರೆಗೆ ಜೊತೆಯಾಗಿ” ಎಂದು ಭಾವನಾತ್ಮಕ ಕರೆ ನೀಡಲಾಗಿತ್ತು. ಆದರೆ ಈ ಸಾಲುಗಳನ್ನೇ ಅಸ್ತ್ರವಾಗಿಸಿಕೊಂಡ ನೆಟ್ಟಿಗರು, ಕಮೆಂಟ್ ಬಾಕ್ಸ್‌ನಲ್ಲಿ ಸೂಲಿಬೆಲೆ ಮತ್ತು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರ ವ್ಯಂಗ್ಯ ಮತ್ತು ತರಾಟೆ: ಕಾರ್ಪೊರೇಟ್ ಲೂಟಿ ವಿರುದ್ಧ ವಾಗ್ದಾಳಿ: ‘ಹೌದಣ್ಣ, ಇನ್ನು ಮಲಗಿದರೆ ಏಳುವಾಗ ಭಾರತ ಅಂಬಾನಿ ಮತ್ತು ಅದಾನಿ ಪಾಲಾಗಿರುತ್ತೆ’ ಎಂದು ಮಹಮ್ಮದ್ ಶಕೀಲ್ ವ್ಯಂಗ್ಯವಾಡಿದರೆ, ‘ಆಗಲೇ ಬ್ಯಾಂಕ್, ವಿಮಾನ, ರೈಲ್ವೆ ಮಾರಿರುವಾಗ ನೀವು ಎಚ್ಚರಗೊಂಡರೆ ಭಾರತ ಸಂಪೂರ್ಣ ಮುಳುಗುವುದು ಖಂಡಿತ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರದ ನೀತಿಗಳಿಗೆ ತಿವಿತ: ‘2014ರಿಂದ ಭಾರತ ಜಾತಿ, ಧರ್ಮದ ಅಮಲಿನಲ್ಲಿ ನಿದ್ದೆ ಮಾಡುತ್ತಿದೆ’, ’12 ವರ್ಷಗಳಿಂದ ಜನರಿಗೆ ಕೋಮುವಾದದ ಹೊದಿಕೆ ಹೊದಿಸಿ ನಿದ್ದೆ ಮಾಡಿಸಿ ಸಾರ್ವಜನಿಕರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ’ ಎಂದು ಸಿದ್ದಯ್ಯ ಚಿಕ್ಕಮಾದೇಗೌಡ ಎಂಬುವವರು ಆಕ್ರೋಶ ಹೊರಹಾಕಿದ್ದಾರೆ.

ಧ್ವಜದ ಗೌರವದ ಪ್ರಶ್ನೆ: ‘ತಿರಂಗಾ ಧ್ವಜಕ್ಕೆ ಎಂದೂ ಗೌರವ ನೀಡದ ಸಂಘ ಪರಿವಾರದವರು ಈಗ ತಿರಂಗಾ ಯಾತ್ರೆ ಮಾಡುವುದು ಯಾಕೆ? ಬುಲೆಟ್ ಟ್ರೈನ್ ಎಲ್ಲಿವರೆಗೆ ಬಂತು?’ ಎಂದು ಸುರೇಶ್ ಎಂಬ ಬಳಕೆದಾರರು ಪ್ರಶ್ನಿಸಿದ್ದಾರೆ.

ಅಸ್ತಿತ್ವದ ಪಾಠ: ‘ನೀನು ಹುಟ್ಟುವುದಕ್ಕಿಂತ ಮುಂಚೆಯೂ ಭಾರತ ಇತ್ತು, ನಿನ್ನ ನಂತರವೂ ಇರುತ್ತದೆ; ಜಾತಿ ಬೆಂಕಿ ಹಚ್ಚಿ ನೀವೇನೂ ಮಾಡಲು ಸಾಧ್ಯವಿಲ್ಲ’ ಎಂದು ನಜ್ಜು ನಾರ್ವೆ ಕಿಡಿಕಾರಿದ್ದಾರೆ.

ಒಟ್ಟಾರೆಯಾಗಿ, ಜನರಲ್ಲಿ ಭಾವನಾತ್ಮಕ ಅಲೆ ಎಬ್ಬಿಸಿ ಕಾರ್ಯಕ್ರಮಕ್ಕೆ ಜನ ಸೇರಿಸಲು ಹೂಡಿದ “ಭಾರತ ಉಳಿಯಲ್ಲ” ಎಂಬ ತಂತ್ರವೇ ಇದೀಗ ಸೂಲಿಬೆಲೆಯವರ ವಿರುದ್ಧ ತಿರುಗುಬಾಣವಾಗಿದ್ದು, ಕಮೆಂಟ್ ಬಾಕ್ಸ್ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿಯುವ ವೇದಿಕೆಯಾಗಿ ಮಾರ್ಪಟ್ಟಿದೆ.

Leave a Reply