ಸಿದ್ದಯ್ಯ ಪುರಾಣಿಕ ಜನ್ಮದಿನ

5 years ago

ಶುಭೋದಯ. ಇಂದು ೧೮ನೇ ಜೂನ್ ೨೦೨೧  ಶುಕ್ರವಾರ. ಅಂದರೆ ಶ್ರೀ ಪ್ಲವನಾಮ  ಸಂವತ್ಸರ  ಉತ್ತರಾಯಣ ಗ್ರೀಷ್ಮ  ಋತು  ಜ್ಯೇಷ್ಠ ಮಾಸ ಕೃಷ್ಣ ಪಕ್ಷ ಅಷ್ಟಮೀ ಉತ್ತರಾ ನಕ್ಷತ್ರ. ಸಾಹಿತಿ ಸಿದ್ದಯ್ಯ ಪುರಾಣಿಕ ರ ಜನ್ಮದಿನವಿಂದು.

೧೮-೦೬-೧೯೧೮ ರಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ದ್ಯಾಂಪುರದಲ್ಲಿ ಸಿದ್ದಯ್ಯ ಪುರಾಣಿಕರು ಜನಿಸಿದರು. ಇವರ ಕಾವ್ಯನಾಮ ಕಾವ್ಯಾನಂದ. ಬಾಲ್ಯದಿಂದ ಸಾಹಿತ್ಯವೆನ್ನುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿತ್ತು. ಮುಂದೆ ಶರಣ ಸಾಹಿತ್ಯದಲ್ಲಿ ಸಿದ್ದಯ್ಯ ಪುರಾಣಿಕರು ಮಾಡಿರುವ ಕಾರ್ಯಸಾಧನೆಗಳಿಗೆ ಅಗತ್ಯವಾದ ವಾತಾವರಣ ಮತ್ತು ಸ್ಪೂರ್ತಿಗಳು ಬಾಲ್ಯದಲ್ಲೇ ಅವರಿಗೆ ಒದಗಿದ್ದವೆಂಬುದು ಸ್ಮರಣೀಯ ಅಂಶವಾಗಿದೆ.

ಇವರದು ತುಂಬಾ ಶಿಸ್ತಿನಿಂದ ಕೂಡಿದ ಅಧ್ಯಯನ ಶೀಲ ಪ್ರವೃತ್ತಿ. ವ್ಯಾಯಾಮದಿಂದ ಶರೀರವನ್ನು ದೃಢಗೊಳಿಸುವ ಹಾಗೆಯೇ ಸಾಹಿತ್ಯಾಧ್ಯಾಯನದಿಂದ ಮನಸ್ಸನ್ನು ಶಕ್ತಗೊಳಿಸಿಕೊಂಡವರು. ಏಕಾಗ್ರತೆ ಎನ್ನುವುದು ಅವರಿಗೆ ವರವಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ  ಇವರು ಕವಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದರು. ಆಲಮಟ್ಟಿಯಲ್ಲಿದ್ದಾಗ ಇವರ ಕಾವ್ಯದೇವಿ ಎಂಬ ನೀಳ್ಗವಿತೆ ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಸಾಲುಗಳು ನಿನ್ನಾತ್ಮವಾನಂದ ನನ್ನಾತ್ಮ ಕಾವ್ಯ! ಇಂತೂ ಕಾವ್ಯಾನಂದ ನಾಮ ಸುಶ್ರಾವ್ಯ- ಕವಿ ಸಿದ್ದಯ್ಯ ಪುರಾಣಿಕರು ಕಾವ್ಯಾನಂದರಾದ ರೀತಿ  ಇದು.

ಉದಯಗಿರಿಯ ಹಾವಗಿಸ್ವಾಮಿ ಪೀಠಾಧ್ಯಕ್ಷತೆಯನ್ನು ನಿರಾಕರಿಸಿದರು ಪುರಾಣಿಕರು. ಇವರು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದಾಗ ಕನ್ನಡದ ಕೆಲಸಕ್ಕಾಗಿ ಬಿ. ಎಂ. ಶ್ರೀ., ಎ. ಎನ್. ಮೂರ್ತಿರಾವ್, ಮಾಸ್ತಿ, ವಿ.ಸಿ., ಮೊದಲಾದ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನು ಕರೆಯಿಸಿ ಕನ್ನಡದ ಕಹಳೆಯನ್ನು ಮೊಳಗಿಸಿದ್ದಲ್ಲದೇ ಕನ್ನಡ ವಾತಾವರಣ ನಿರ್ಮಾಣ ಕಾಯಕದಲ್ಲಿ ಪುರಾಣಿಕರು ವಹಿಸಿದ ಪಾತ್ರ ಮಹತ್ವದ್ದು.

ಮಡಿಕೇರಿ, ಬೆಳಗಾವಿ ಜಿಲ್ಲೆಗಳ ಜನರು ನಿವೃತ್ತ ಪುರಾಣಿಕರು ಅಲ್ಲಿ ಮಾಡಿದ ಕೆಲಸದ ಬಗ್ಗೆ ಅಪಾರ ಅಭಿಮಾನದಿಂದ ಮಾತನಾಡುತ್ತಿದುದನ್ನು ಅಪಾರ ಸಂತಸದಿಂದ ನೆನೆಯುತ್ತಿದ್ದರು. ಕನ್ನಡದ ವಿಶ್ವಕೋಶ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಯೋಜನೆ, ಸರ್ಕಾರದಿಂದ ಪ್ರಕಟವಾದ ಸುಲಭಾವೃತ್ತಿಯ ಲೀಲಾವತಿ ಪ್ರಬಂಧ, ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ, ವಚನ ಸಾಹಿತ್ಯ ಸಂಗ್ರಹ, ಸರ್ವಜ್ಞನ ವಚನಗಳಂಥ ಕೃತಿಗಳ ಪ್ರಕಟಣೆಯ ಯೋಜನೆಗಳಲ್ಲಿ ತಾವು ನಿರ್ವಹಿಸಿದ ಪಾತ್ರದ ಬಗ್ಗೆ ಅವರಿಗೆ ತುಂಬ ಅಭಿಮಾನವಿತ್ತು.

ಇವರು ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳು. ಇವರ ಸಾಹಿತ್ಯ ರಾಶಿ ವಿಫುಲವಾಗಿದೆ ಹಾಗೂ ವೈವಿಧ್ಯಮಯವೂ ಆಗಿದೆ. ಶ್ರೀ ಪುರಾಣಿಕರ ಕಾರ್ಯಕ್ಷೇತ್ರ ವಿಸ್ತಾರವಾದದ್ದು. ಕನ್ನಡ ನಿಘಂಟು ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಬಸವ ಸಮಿತಿಯ ಅಧ್ಯಕ್ಷರಾಗಿದ್ದವರು. ಬಸವ ಪಥ ಹಾಗೂ ಬಸವ ಜರ್ನಲ್ ಗಳ ಪ್ರಧಾನ ಸಂಪಾದಕರಾಗಿದ್ದರು. ಕರ್ನಾಟಕ ಜಾನಪದ ಟ್ರಸ್ಟಿನ ಟ್ರಸ್ಟಿಗಳು, ಕನ್ನಡ ಸಂವರ್ಧಕ ಟ್ರಸ್ಟಿನ ಅಧ್ಯಕ್ಷರು, ಬಿ.ಎಂ.ಶ್ರೀ. ಪ್ರತಿಷ್ಠಾನದ ಕಾರ್ಯ ಸಮಿತಿ, ಡಾ.ಸರೋಜಿನಿ ಮಹಿಷಿ ಸಮಿತಿ ಸದಸ್ಯರು.

ಇಷ್ಟೇ ಅಲ್ಲದೆ ಇವರು ಗೋಕಾಕ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದು ಕನ್ನಡದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಲೋಕಸೇವಾ ಆಯೋಗದ ಎದುರು ಕನ್ನಡಕ್ಕಾಗಿ ಉಪವಾಸ ಸತ್ಯಾಗ್ರಹವೇ ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಾಹಿತ್ಯ ರಚನೆ, ಕನ್ನಡದ ಕೆಲಸ, ನಿರಂತರವಾದ ಅಧ್ಯಯನ ಅವರ ಜೀವನದ ಉಸಿರಾಗಿತ್ತು. ಪುರಾಣಿಕರು ಉರ್ದು, ಆಂಗ್ಲ ಭಾಷೆ, ಸಂಸ್ಕೃತಗಳಲ್ಲೂ ಪಾಂಡಿತ್ಯ ಹೊಂದಿದ್ದವರು. ಕನ್ನಡದಲ್ಲಂತೂ ಉತ್ತಮ ವಾಗ್ಮಿಗಳು.

ಗುಲ್ಬರ್ಗದಲ್ಲಿ ನಡೆದ ೫೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಿದ್ದಯ್ಯ ಪುರಾಣಿಕರನ್ನು ಅರಸಿ  ಬಂದಿವೆ. ಕಾವ್ಯ, ಸಂಪಾದನೆ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ನಾಟಕ ಎಲ್ಲವನ್ನೂ ಬರೆದಿದ್ದಾರೆ.

ಕುವೆಂಪುರವರು ಸಿದ್ಧಯ್ಯ ಪುರಾಣಿಕರನ್ನು ಕುರಿತು ಹೀಗೆ ಹೇಳುತ್ತಾರೆ – ಜ್ಞಾನ, ಅಧಿಕಾರ, ವಿನಯ, ಸೌಜನ್ಯ, ಸೃಜನ ಶೀಲತೆಗಳು ಏಕತ್ರ ಸಮಾವೇಶಗೊಳ್ಳುವುದು ತುಂಬಾ ಅಪರೂಪ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದ ವಿಷಯ ಆಗಿದೆ. ಇದಕ್ಕೆ ಅಪರೂಪವಾಗಿ ನಿಂತ ಪ್ರತಿಭಾಶಾಲಿ ಸತ್ಪುರುಷ ವಿರಳ ಪಂಕ್ತಿಯಲ್ಲಿ ನಿಂತಿದ್ದಾರೆ ಶ್ರೀ ಪುರಾಣಿಕರು.

೦೫-೦೯-೧೯೯೪ ರಂದು ನಿಧನರಾದ ವಚನೋದ್ಯಾನದ ಅನುಭಾವಿ ಬಿರುದಾಂಕಿತ, ಕಾವ್ಯಾನಂದ ಕಾವ್ಯ ನಾಮಾಂಕಿತ, ಐಎಎಸ್ ಸ್ಥಾನಾಲಂಕೃತ, ಸಹೃದತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿ‌ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ.ಸಿದ್ದಯ್ಯ ಪುರಾಣಿಕರಿಗೆ ಗೌರವಪೂರ್ವಕವಾದ ಪ್ರಣಾಮಗಳು.

  • ಪ್ರಸನ್ನರಾಮನಗರಂ

One Response

  1. ಡಾ ಸಿದ್ಧಯ್ಯ ಪುರಾಣಿಕ ಅವರು ಕಾವ್ಯಾನಂದ ಕಾವ್ಯ ನಾಮದಿಂದ ಕನ್ನಡವನ್ನು ಶ್ರೀಮಂತಗೊಳಿಸಿದರು. ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಉತ್ತಮ ಲೇಖನ ಪ್ರಕಟವಾಗಿದೆ. ಧನ್ಯವಾದಗಳು

Leave a Reply