ನೆಹರುರವರನ್ನು ಟೀಕಿಸುವವರು ಕಣ್ತೆರೆದು ನೋಡಿ

1 year ago

ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಮಹಾತ್ಮ ಗಾಂಧೀಜಿ ಮತ್ತು ಜವಾಹರ ಲಾಲ್ ನೆಹರುರವರ ಬಗ್ಗೆ ಕೆಟ್ಟ ಭಾವನೆಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವಂತಹ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಇದಕ್ಕೆ ಇಂತಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರ ಸಹಮತವಿದೆ.

ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಮಹಾತ್ಮ ಗಾಂಧೀಜಿ ಯರವರ ಪ್ರಭಾವಕ್ಕೆ ಒಳಗಾಗಿ ಸರಳ ಜೀವನವನ್ನು ನಡೆಸಿದಂತಹ ನೆಹರುರವರ ವಿಚಾರಗಳು ಏಕೆ ನೆನಪಿಗೆ ಬರುವುದಿಲ್ಲ?

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹಲವಾರು ವರ್ಷಗಳ ಕಾಲ ಸೆರೆಮನೆ ವಾಸವನ್ನು ಅನುಭವಿಸಿ ಅಲ್ಲಿ ಶ್ರೇಷ್ಠವಾದಂತಹ ಕೃತಿಗಳನ್ನು ರಚಿಸಿದಂತಹ ಇವರ ಪಾಂಡಿತ್ಯದ ಬಗ್ಗೆ ಯಾಕೆ ಯಾರೂ ಮಾತನಾಡುವುದಿಲ್ಲ.

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶ ಎದುರಿಸುತ್ತಿದ್ದಂತಹ ನಿರುದ್ಯೋಗ ಹಾಗೂ ಅನಕ್ಷರತೆ ಇವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅವರು ಕೈಗೊಂಡಂತಹ ಕ್ರಾಂತಿಕಾರಿ ಕಾರ್ಯಕ್ರಮಗಳ ಬಗ್ಗೆ ಯಾರೂ ಪ್ರಸ್ತಾಪಿಸುವುದಿಲ್ಲ. ದೇಶದಲ್ಲಿ ಕೈಗಾರಿಕೆಗಳನ್ನ ಸ್ಥಾಪಿಸಿ ಕೈಗಾರಿಕಾ ಕ್ರಾಂತಿಯನ್ನು ಮಾಡಿದರು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಉನ್ನತ ಅಧ್ಯಯನಕ್ಕಾಗಿ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಹಲವಾರು ಪ್ರಕಾರದಲ್ಲಿ  ಸಂಸ್ಥೆಗಳನ್ನು ಸ್ಥಾಪಿಸಿದಂತಹ ವಿಚಾರಗಳು ಯಾರೂ ಮಾತನಾಡುವುದಿಲ್ಲ.

ಅಣೆಕಟ್ಟುಗಳನ್ನು ಕಟ್ಟಿ, ವಿದ್ಯುತ್ ಸ್ಥಾವರಗಳನ್ನ ಸ್ಥಾಪಿಸಿ, ಕೃಷಿಗೆ ಉತ್ತೇಜನವನ್ನು ಕೊಟ್ಟು, ಕೈಗಾರಿಕೆಗೆ ಬೇಕಾದಂತಹ ಸೌಕರ್ಯ, ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಂತಹ ವಿಚಾರಗಳು, ಏಕೆ ಪ್ರಸ್ತಾಪ ಮಾಡುವುದಿಲ್ಲ.

ಪಂಚವಾರ್ಷಿಕ ಯೋಜನೆಗಳ ಮೂಲಕ, ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದಂತಹ ಇವರ ದೂರದೃಷ್ಟಿತ್ವದ ನಿರ್ಧಾರಗಳನ್ನು, ಯಾರೂ ಮಾತನಾಡುವುದಿಲ್ಲ.

ಅಂದು ನೆಹರುರವರು ಹಲವಾರು ಸಾರ್ವಜನಿಕ ಉದ್ದಿಮೆಗಳನ್ನ ಸ್ಥಾಪಿಸಿ ಲಕ್ಷಾಂತರ ಮಂದಿಗೆ ಉದ್ಯೋಗವನ್ನು ಕಲ್ಪಿಸಿ, ನಿರುದ್ಯೋಗ ಸಮಸ್ಯೆಗೆ ಕಡಿವಾಣವನ್ನ ಹಾಕಿದಂತಹ ವಿಚಾರ ಏಕೆ ಯಾರೂ ಮಾತನಾಡುವುದಿಲ್ಲ .

ಕೈಗಾರಿಕೆಗಳು, ಅಣೆಕಟ್ಟುಗಳು, ಶಿಕ್ಷಣ ಸಂಸ್ಥೆಗಳು, ನಿಜವಾದಂತಹ ದೇವಾಲಯಗಳು ಎಂಬ ಭಾವನೆಯಿಂದ ದುಡಿದಂತಹ ನೆಹರುರವರ ಪ್ರಗತಿಪರ ವೈಜ್ಞಾನಿಕ ಚಿಂತನೆಗಳ, ಬಗ್ಗೆ ಯಾರೂ ಮಾತನಾಡುವುದಿಲ್ಲ.

ದೇಶದಲ್ಲಿ ಅನೇಕ ರೀತಿಯ ಮೂಢನಂಬಿಕೆಗಳು, ಮೌಡ್ಯಗಳು, ಜನರ ಬದುಕನ್ನ ಕಿತ್ತು ತಿನ್ನುತ್ತಿತ್ತು. ಇಂತಹ ಸಂದರ್ಭದಲ್ಲಿ ವೈಜ್ಞಾನಿಕವಾದಂತಹ ಆಲೋಚನೆಗಳ, ಮೂಲಕ ಸ್ಪಷ್ಟವಾದಂತಹ ಯೋಜನೆಗಳನ್ನ ರೂಪಿಸಿ, ಕೊಟ್ಟಂತಹ ನೆಹರೂರವರ ಚಿಂತನೆಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ .

ನೆಹರುರವರ ಜಾತ್ಯತೀತ, ಪ್ರಗತಿಪರ, ಸಾಮಾಜಿಕ ನ್ಯಾಯದ ವ್ಯವಸ್ಥೆಯ, ಬಗ್ಗೆ ಯಾರು ಸಹ ಸರಿಯಾದ ರೀತಿಯಲ್ಲಿ ವ್ಯಾಖ್ಯಾನವನ ಮಾಡುವ ಪ್ರಯತ್ನವನ್ನು ಮಾಡುವುದಿಲ್ಲ.

ದೇಶದ ಸಮಗ್ರತೆಗಾಗಿ ಮತ್ತು ಐಕ್ಯತೆಗಾಗಿ, ಸಂವಿಧಾನದ ಆಶಯಗಳ ಅನುಗುಣವಾಗಿ ನಡೆದುಕೊಂಡಂತಹ ರೀತಿ, ವಿರೋಧ ಪಕ್ಷದ ನಾಯಕರ ವಿಚಾರದಲ್ಲಿ ತೋರಿಸುತ್ತಿದಂತಹ ಗೌರವ, ಪ್ರಜಾಪ್ರಭುತ್ವವನ್ನ ಪ್ರೀತಿಸುವ ನಿಟ್ಟಿನಲ್ಲಿ ಅವರಿಗೆ ಇದ್ದ ಕಾಳಜಿ ಇವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ .

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ಪ್ರದರ್ಶಿಸಿದ ಪ್ರಬುದ್ಧತೆ, ಹಾಗೂ ವಿದೇಶಗಳೊಂದಿಗೆ ಬಾಂಧವ್ಯವನ್ನು ಸುಧಾರಿಸುವಲ್ಲಿ ಅನುಸರಿಸಿದ ಮಾರ್ಗ, ವಿಶೇಷವಾಗಿ ಅಲಿಪ್ತ ನೀತಿಯ ಮೂಲಕ ನಮ್ಮದೇ ಆದಂತಹ ವಿದೇಶಾಂಗ ನೀತಿಯನ್ನ ತೋರಿಸಿಕೊಟ್ಟಂತಹ ಇವರ ಬಗ್ಗೆ ಯಾರೂ ಮಾತನಾಡುವುದಿಲ್ಲ.

ಒಬ್ಬ ಪ್ರಧಾನಿಯಾಗಿ ದೇಶದ ಜನರ ಬದುಕಿನ ವಿಚಾರದಲ್ಲಿ ಶ್ರದ್ಧೆಯಿಂದ ಮತ್ತು ಪ್ರಾಮಾಣಿಕತೆಯಿಂದ ಯೋಜನೆಗಳನ್ನು ರೂಪಿಸಿ, ಸ್ವತಂತ್ರ ಬಂದ ಕೆಲವೇ ವರ್ಷದಲ್ಲಿ ಭಾರತವನ್ನ ವಿಶ್ವಮಟ್ಟದಲ್ಲಿ ಗೌರವದಿಂದ ಕಾಣುವಂತೆ ಕಟ್ಟಿದಂತಹ ನೆಹರುರವರ ಆಡಳಿತ ವೈಖರಿ ಬಗ್ಗೆ ಯಾರೂ ಮಾತನಾಡುವುದಿಲ್ಲ .

ಕೇವಲ ರಾಜಕೀಯ ಕಾರಣಗಳಿಗಾಗಿ, ಸ್ವಾರ್ಥಕ್ಕಾಗಿ, ನೆಹರುರವರ ವಿಚಾರಧಾರೆಗಳನ್ನು ತಪ್ಪಾಗಿ ಅರ್ಥೈಸುತ್ತ, ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತ, ಅವರ ಎಲ್ಲ ಸೇವೆ, ಸಾಧನೆಗಳನ್ನ ಶೂನ್ಯ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ. ಚರಿತ್ರೆಯನ್ನು ಅರಿಯದ, ಅಧ್ಯಯನವನ್ನು ಮಾಡದ, ಪೂರ್ವಗ್ರಹ ಪೀಡಿತ ಜನರ ಮಾತುಗಳನ್ನೆ ಸತ್ಯವೆಂದು ನಂಬುವ ರೀತಿಯಲ್ಲಿ ಪ್ರಚಾರವನ್ನು ನೀಡುತ್ತಾ, ಇಂತಹ ವಿಚಾರಗಳನ್ನು  ಮುಗ್ಧ ಜನರ ಮನಸ್ಸಿನಲ್ಲಿ ತುಂಬುತ್ತಿರುವುದು ಸಹ ಮತ್ತೊಂದು ಅಪಾಯಕಾರಿ ಸಂಗತಿಯಾಗಿದೆ.

ನೆಹರುರವರ ಹುಟ್ಟುಹಬ್ಬದ ದಿನದಂದು ಅವರ ಭಾವಚಿತ್ರಗಳನ್ನ ಪ್ರದರ್ಶಿಸಿದರೆ ಸಾಲದು, ಅವರ ಭಾವಚಿತ್ರಗಳಿಗೆ ಪುಷ್ಪವನ್ನು ಅರ್ಪಿಸಿ ಮಾಧ್ಯಮಗಳಲ್ಲಿ ಪ್ರಚಾರವನ್ನು ಪಡೆದುಕೊಂಡರೆ ಸಾಲದು, ನೆಹರೂರವರ ವಿಚಾರವನ್ನು ಅವರ ಪ್ರಗತಿಪರ ನಿಲುವುಗಳನ್ನ ಜನರಿಗೆ ತಿಳಿಸುವಂತಹ ವ್ಯವಸ್ಥೆಯು ಆಗಬೇಕಾಗಿದೆ, ಜನರಿಗೆ ಸತ್ಯವನ್ನ ಮುಟ್ಟಿಸುವ ನಿಟ್ಟಿನಲ್ಲಿ ಪರ್ಯಾಯವಾದ  ವ್ಯವಸ್ಥೆಗಳನ್ನು ನಿರ್ಮಾಣ ಮಾಡದಿದ್ದರೆ, ನೆಹರು ವಿರೋಧಿಗಳು ಹೇಳುತ್ತಿರುವುದೇ ಸತ್ಯ ಎನ್ನುವ ಭಾವನೆ ಜನರ ಮನಸ್ಸಿನಲ್ಲಿ ಮೂಡುತ್ತದೆ.

ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ವಿಚಾರದಲ್ಲಿ ಉತ್ತಮ ಬಾಂಧವ್ಯಕ್ಕಾಗಿ ಯೋಜನಾ ಆಯೋಗದ ರಚನೆ, ಆ ಮೂಲಕ ರಾಜ್ಯ ಸರ್ಕಾರಗಳ ಯೋಜನೆಗಳು ಕೇಂದ್ರ ಸರಕಾರದಿಂದ ದೊರೆಯಬೇಕಾದಂತಹ ನೆರವುಗಳು ಇವುಗಳ ವಿಚಾರದಲ್ಲಿ ಚರ್ಚಿಸುವ ಸಲುವಾಗಿ ಸ್ಥಾಪಿಸಲ್ಪಟ್ಟಂತಹ ಯೋಜನಾ ಆಯೋಗ, ಇಂದು ನೀತಿ ಆಯೋಗವಾಗಿ ಬದಲಾಗಿ, ತನ್ನ ಮೂಲ ಆಶಯಗಳನ್ನೇ ಕಳೆದುಕೊಂಡಿದೆ. ಅದೊಂದು ಕೇವಲ ಅಧಿಕಾರ ಶಾಹಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply