ತ್ರಿವರ್ಣ ಧ್ವಜ, ರಾಷ್ಟ್ರಗೀತೆಗೆ ಗೌರವ ನೀಡದವರಿಂದ ದೇಶಭಕ್ತಿಯ ಪಾಠ!

4 months ago

ಬಿಜೆಪಿಯ ನಾಯಕರು ದೇಶಪ್ರೇಮವನ್ನು ಮತ್ತು ರಾಷ್ಟ್ರ ರಕ್ಷಣೆಯನ್ನು ಗುತ್ತಿಗೆ ತೆಗೆದುಕೊಂಡವರ ರೀತಿ ಮಾತನಾಡುತ್ತಾರೆ. ತಮ್ಮನ್ನು ಬಿಟ್ಟರೆ ದೇಶದಲ್ಲಿ ಯಾರೂ ರಾಷ್ಟ್ರಭಕ್ತರು ಇಲ್ಲ ಎನ್ನುವ ರೀತಿಯಲ್ಲಿ ತಮ್ಮನ್ನು ತಾವೇ ಬಿಂಬಿಸಿಕೊಳ್ಳುತ್ತಾರೆ. ದುರಂತವೆಂದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ನಂತರ ಇವರ ಸಂಸ್ಥೆಗಳ ಮೇಲೆ ರಾಷ್ಟ್ರಧ್ವಜವನ್ನ ಅದೂ ಕಾರ್ಯಕರ್ತರ ಬಲವಂತದಿಂದ ಹಾರಿಸಿದ ಮೇಲೆ ನ್ಯಾಯಾಲಯಗಳಲ್ಲಿ ಮೊಕದ್ದಮ್ಮೆಗಳಾಗಿ ಅಂತಿಮವಾದ ತೀರ್ಪು ಬಂದ ಮೇಲೆ ಈಗ ಜನವರಿ 26 ಮತ್ತು ಆಗಸ್ಟ್ 15 ರಂದು ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಾರೆ.

ಇದೇ ರೀತಿಯಲ್ಲಿ ನಮ್ಮ ರಾಷ್ಟ್ರಗೀತೆಯಾದ ರವೀಂದ್ರನಾಥ ಠಾಕೂರ್ ಜನಮನ ಗಣ ಈ ಗೀತೆಯನ್ನು ಸಹ ಇವರು ಹಲವಾರು ದಶಕಗಳ ಕಾಲ ಹೇಳಿರಲಿಲ್ಲ. ಈಗ ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರ ರಕ್ಷಣೆಯ ಬಗ್ಗೆ ಅತಿ ಹೆಚ್ಚಾಗಿ ಮಾತನಾಡುತ್ತಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಯಾವುದೇ ರೀತಿಯ ಪಾತ್ರವನ್ನು ವಹಿಸದವರು, ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಳಲ್ಲಿ ಪಾಲ್ಗೊಂಡು ವಂದೇ ಮಾತರಂ ಗೀತೆಯನ್ನು ಪಠಿಸದವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ಮುಸ್ಲಿಂ ಲೀಗ್ ಜೊತೆಯಲ್ಲಿ ಅನೇಕ ರಾಜ್ಯಗಳಲ್ಲಿ ಮತ್ತು ಪ್ರಾಂತ್ಯದಲ್ಲಿ ಹಿಂದೂ ಮಹಾಸಭಾ ಸೇರಿಕೊಂಡು ಸರ್ಕಾರವನ್ನ ರಚಿಸಿದವರು ಈಗ ಬುದ್ಧಿ ಮಾತನ್ನು ಹೇಳಲು ಬರುತ್ತಿದ್ದಾರೆ.

ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಆ ಒಂದು ಚಳವಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪರೋಕ್ಷವಾಗಿ ಬ್ರಿಟಿಷರೊಂದಿಗೆ ಕೈಜೋಡಿಸಿದವರು ಪಾಠ ಮಾಡಲು ಬರುತ್ತಿದ್ದಾರೆ.

ದೇಶಕ್ಕಾಗಿ ಹೋರಾಟವನ್ನು ಮಾಡಿ ತಮ್ಮ ಪ್ರಾಣವನ್ನು ಅರ್ಪಿಸಿದಂತಹ ಭಗತ್ ಸಿಂಗ್, ಸುಖದೇವ್, ರಾಜಗುರು, ಅಶ್ರಫುಲ್ಲಾ ಖಾನ್, ರಾಮ್ ಪ್ರಸಾದ್ ಬಿಸ್ಮಿಲ್ಲಾ, ಕುದಿ ರಾಮ್ ಬೋಸ್  ಇವರು ಯಾರು ಸಹ ಇಂದು ದೇಶಭಕ್ತಿಯ ಪಾಠವನ್ನು ಮಾಡುತ್ತಿರುವ ಸಂಘಟನೆಯ ಅಭಿಮಾನಿಗಳು ಅಲ್ಲ ಅನುಯಾಯಿಗಳು ಆಗಿರಲಿಲ್ಲ.

ಈ ದೇಶಕ್ಕೆ ತ್ರಿವರ್ಣ ಧ್ವಜವನ್ನು ನೀಡಿದವರು ಕಾಂಗ್ರೆಸ್ಸಿನವರು. ರಾಷ್ಟ್ರಗೀತೆಯನ್ನು ರವೀಂದ್ರನಾಥ ಟಾಗೋರ್ ಮೂಲಕ ಕೊಟ್ಟವರು ಕಾಂಗ್ರೆಸ್ಸಿನವರು. ವಂದೇ ಮಾತರಂ ಪವಿತ್ರವಾದ ಗೀತೆಯನ್ನು ಕಾಂಗ್ರೆಸ್ಸಿನ ಪ್ರತಿಯೊಂದು ಸಭೆಗಳಲ್ಲಿ ಹೇಳುವುದರ ಮೂಲಕ ದೇಶ ಪ್ರೇಮವನ್ನು ಮೆರೆದವರು ಇಂದಿಗೂ ಪ್ರತಿಯೊಂದು ಸಭೆಗಳಲ್ಲಿ ವಂದೇ ಮಾತರಂ ಗೀತೆಯನ್ನು ಹೇಳುವುದರ ಮೂಲಕವೇ ಸಭೆಗಳನ್ನು ನಡೆಸುತ್ತಿರುವುದು ಕಾಂಗ್ರೆಸ್ ಪಕ್ಷ. ಈ ಹಿನ್ನೆಲೆಯಲ್ಲಿ ಬಿಜೆಪಿಯವರ ಉಪದೇಶ ಪಾಠ ಬೇಕಿಲ್ಲ. 

11 ವರ್ಷದಿಂದ ಸುಳ್ಳುಗಳನ್ನು ಹೇಳುತ್ತಾ, ಪ್ರತಿಯೊಂದು ವಿಚಾರಕ್ಕೂ ಧರ್ಮವನ್ನ ಬೆರೆಸುತ್ತಾ ನೆಹರುರವರ ವಿಚಾರವನ್ನು ಪ್ರಸ್ತಾಪಿಸುತ್ತ ಜ್ವಲಂತ ಸಮಸ್ಯೆಗಳ ಚರ್ಚೆಯಾಗದಂತೆ ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿಯವರಿಗೆ ಇತಿಹಾಸದ ಪುಟಗಳನ್ನು ಸುಳ್ಳು ಸಂಗತಿಗಳೊಂದಿಗೆ ಪ್ರಚಾರ ಮಾಡುವಂತಹ ಬುದ್ಧಿ ಇರುವುದರಿಂದ ಪದೇಪದೇ ಇಲ್ಲಸಲ್ಲದ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಿದವರು ವಿಶ್ವಕವಿ ರವೀಂದ್ರನಾಥ ಟಾಗೂರರು. ಗೀತೆಯ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿದವರು ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಾಯಿ ಪಟೇಲ್, ಆಚಾರ್ಯ ಕೃಪಲಾನಿ, ಮಹಾತ್ಮ ಗಾಂಧೀಜಿ, ಇವರೊಂದಿಗೆ ನೆಹರುರವರು ಇದ್ದರೂ ಅಷ್ಟೇ, ಆದರೆ ನಮ್ಮ ಪ್ರಧಾನಿಗಳಿಗೆ ನೆಹರುರವರು ಮಾತ್ರವೇ ನೆನಪಾಗುತ್ತಾರೆ.

ನೆಹರುರವರ ಬಗ್ಗೆ ಟೀಕಿಸುವುದನ್ನು ಬಿಟ್ಟು ನೆಹರೂರವರ ರೀತಿಯಲ್ಲಿ ದೂರದೃಷ್ಟಿತ್ವ ಇದ್ದರೆ, ಮುಂದಾಲೋಚನೆಯ ಚಿಂತನೆಗಳಿದ್ದರೆ, ಅವರ ರೀತಿಯಲ್ಲಿ ವೈಜ್ಞಾನಿಕವಾದ ಮತ್ತು ಸಂಶೋಧನಾತ್ಮಕವಾದ ಹಾಗೂ ಉದ್ಯೋಗವನ್ನ ಸೃಷ್ಟಿಸುವ ಜನರ ಬದುಕನ್ನು ಕಟ್ಟಿಕೊಡುವ ಪ್ರಗತಿಪರವಾದ ಮತ್ತು ಗಟ್ಟಿಯಾದಂತಹ ಸಂಸ್ಥೆಗಳನ್ನು ಇಲ್ಲವೇ ಯೋಜನೆಗಳನ್ನು ರೂಪಿಸಿ, ಅವರಿಗಿಂತ ನೀವು ಹೆಚ್ಚು ಎಂದು ಮುಂದಿನ ದಿನದಲ್ಲಿ ಇತಿಹಾಸ ನಿಮ್ಮನ್ನು ನೆನಪು ಮಾಡಿಕೊಳ್ಳುವಂತೆ ಆಡಳಿತವನ್ನು ಮುಂದಾದರೂ ನಡೆಸಿ.

11 ವರ್ಷಗಳಾದರೂ ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸತ್ತು ಸ್ವರ್ಗ ಸೇರಿರುವ ನೆಹರು,ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಇವರುಗಳ ಹೆಸರನ್ನು ಪದೇಪದೇ ಪ್ರಸ್ತಾಪಿಸುತ್ತಾ ಇನ್ನೆಷ್ಟು ದ್ವೇಷದ, ನಿಂದನೆಯ ಮಾತುಗಳನ್ನಾಡುತ್ತೀರಿ?

ದೇಶವನ್ನ ವಿಭಜಿಸಿದರು ಎಂದು ದೂಷಿಸುವ ನೀವು ಮಾಡುತ್ತಿರುವುದಾದರೂ ಏನು? ಭಾರತ ದೇಶದಲ್ಲಿ ಧರ್ಮ, ಧರ್ಮಗಳ ನಡುವೆ ಅವಿಶ್ವಾಸವನ್ನ ಮತ್ತು ಅಪನಂಬಿಕೆಯ ವಾತಾವರಣವನ್ನು ಉಂಟು ಮಾಡಿ ಶತಶತಮಾನಗಳಿಂದ ಇಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ಅಪನಂಬಿಕೆ ಬರುವ ರೀತಿಯಲ್ಲಿ ವಿಚಾರಗಳನ್ನ ಪ್ರಚಾರ ಮಾಡುತ್ತಿದ್ದೀರಿ. ನಿಮ್ಮ ನಡವಳಿಕೆ ಮತ್ತು ಪ್ರಚೋದನೆಗಳಿಂದ ಭಾವೈಕ್ಯತೆ ಭಾವನೆಗಳಿಗೆ ಧಕ್ಕೆಯಾಗುತ್ತಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply