ವಿಜಯೇಂದ್ರ ನಾಯಕತ್ವಕ್ಕೆ ಸವಾಲು: ಸಿದ್ದರಾಮಯ್ಯ ಸರ್ಕಾರಕ್ಕೆ ಜವಾಬು

1 year ago

ಫಲಿತಾಂಶ ವಿಶ್ಲೇಷಣೆ: ಆರ್.ಎಚ್.ನಟರಾಜ್, ಹಿರಿಯ ಪತ್ರಕರ್ತ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಆರ್ಥಿಕತೆ ಬಂದ ನಂತರ ನಡೆದ ಮೊದಲ ದೊಡ್ಡ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳು ಕಾಂಗ್ರೆಸ್ಸಿನ ಪಾಲಾಗಿವೆ. ಇದಕ್ಕೂ ಮೊದಲು ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ಅನುಕಂಪದ ಆಧಾರದ ಫಲಿತಾಂಶ ನೀಡಿತ್ತು . ಹೀಗಾಗಿ ಇದು ಅಷ್ಟೊಂದು ಗಮನ ಸೆಳೆದಿರಲಿಲ್ಲ.

ಆದರೆ ಈಗ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆ ಕುತೂಹಲ ಮೂಡಿಸಿತ್ತು. ಬಿಜೆಪಿ ಜೆಡಿಎಸ್ ಮೈತ್ರಿಯೊಂದಿಗೆ ಸ್ಪರ್ಧೆಗಿಳಿದ ಮೊದಲ ವಿಧಾನಸಭೆ ಚುನಾವಣೆ ಇದಾದರೆ, ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರ ಪುತ್ರರು ಚುನಾವಣೆಯ ಅಖಾಡಕ್ಕೆ ಇಳಿಯುವ ಮೂಲಕ ಕುತೂಹಲ ಮೂಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅಕ್ರಮ ಆರೋಪ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ ಆರೋಪ ದೊಡ್ಡ ಪ್ರಮಾಣದಲ್ಲಿ ಮಾಡಲಾಗಿತ್ತು.

ಮತ್ತೊಂದೆಡೆಯಲ್ಲಿ ವಕ್ಫ್ ಆಸ್ತಿ ಒತ್ತುವರಿ ತೆರವು ಹೆಸರಿನಲ್ಲಿ ರೈತರಿಗೆ ನೋಟಿಸು ನೀಡುವ ಮೂಲಕ ಅವರನ್ನು ಭೂರಹಿತರನ್ನಾಗಿ ಮಾಡುವ ಪ್ರಯತ್ನ ನಡೆಸಲಾಗಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣದ ಪರಿಣಾಮ ಹಿಂದು ಸಮುದಾಯದ ರೈತರು ಸಂಕಷ್ಟಕ್ಕೆ ಸಿಲುಕುತಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಮೂಲಕ ಈ ಚುನಾವಣೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ನೀಡುವ ಜನಾದೇಶ ಎಂದು ವ್ಯಾಖ್ಯಾನಿಸಲಾಗಿತ್ತು. ಅದಕ್ಕೆ ಪ್ರಮುಖ ಕಾರಣ ಮೂರು ಕ್ಷೇತ್ರಗಳು ರಾಜ್ಯದ ಮೂರು ವಲಯಗಳನ್ನು ಪ್ರತಿನಿಧಿಸಿದ್ದವು.

ಚನ್ನಪಟ್ಟಣ ಕ್ಷೇತ್ರ ರಾಜ್ಯದ ಹಳೆ ಮೈಸೂರು ಪ್ರಾಂತ್ಯಕ್ಕೆ ಸೇರಿದರೆ, ಸೊಂಡೂರು ಕಲ್ಯಾಣ ಕರ್ನಾಟಕಕ್ಕೆ ಮತ್ತು ಶಿಗ್ಗಾಂವಿ -ಸವಣೂರು ಕ್ಷೇತ್ರ ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರಿದೆ. ಮೂರು ಪ್ರಾಂತ್ಯದ ಜನ ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷದ ಮೈತ್ರಿಕೂಟಕ್ಕೆ ಯಾವ ಸಂದೇಶ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿತ್ತು.

ಚುನಾವಣೆಗು ಮುನ್ನ ನಿವೇಶನ ಹಂಚಿಕೆಯ ಕ್ರಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ವರ್ಗಾವಣೆ ವಿಷಯವನ್ನು ಪ್ರಮುಖವಾಗಿ ಇಟ್ಟುಕೊಂಡ ಬಿಜೆಪಿ ಮತ್ತು ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ಹೀಗಾಗಿ ಚುನಾವಣೆಯ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.

ಇದೀಗ ಹೊರ ಬಂದಿರುವ ಫಲಿತಾಂಶ ಕಾಂಗ್ರೆಸ್ಸಿನ ಉತ್ಸಾಹವನ್ನು ಇಮ್ಮಡಿಗೊಳಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮ ಬಲವನ್ನು ಮತ್ತಷ್ಟು ವೃದ್ಧಿಯಾಗುವಂತೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಗೊಂಡ ಸಮಯದಿಂದ ಹಿಡಿದು ಇಲ್ಲಿಯವರೆಗೆ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಭಿನ್ನರ ವಾದಕ್ಕೆ  ಮತ್ತಷ್ಟು ಬಲತಂದು ಕೊಡಲಿದೆ.

ವಿಜಯೇಂದ್ರ ಅವರನ್ನು ತಮ್ಮ ನಾಯಕ ಅಥವಾ ಪಕ್ಷದ ಅಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಬಹಿರಂಗವಾಗಿಯೇ ಹೇಳುತ್ತಿರುವ ಭಿನ್ನಮತೀಯ ನಾಯಕರು ಇದೀಗ ಅವರ ಬದಲಾವಣೆಗೆ ಆಗ್ರಹಿಸಿ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರದ ಮೇಲೆ ಅಂತಹ ಯಾವುದೇ ದೊಡ್ಡ ಪರಿಣಾಮ ಬೀರದೆ ಹೋದರೂ ಕೂಡ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲಿ ಸಾಕಷ್ಟು ವಿದ್ಯಮಾನಗಳಿಗೆ ಕಾರಣವಾಗಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್ ಜೊತೆ ನಿಂತ ಪರಿಣಾಮ ಮೈತ್ರಿಕೂಟ ಯಶಸ್ವಿಯಾಗಿತ್ತು. ಬಿಜೆಪಿ ದೊಡ್ಡ ಲಾಭಗಳಿಸಿತ್ತು. ಇದು ತನ್ನಿಂದಾಗಿಯೇ ಎಂದು ಪ್ರತಿಪಾದಿಸಿದ ಜೆಡಿಎಸ್ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ನಡೆಸಿತ್ತು.

ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ ಪಿ ಯೋಗೇಶ್ವರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಗೆಲುವು ಸಾಧ್ಯವಾಗಲಿದೆ ಎಂಬ ಸಮೀಕ್ಷೆ ವರದಿಗಳನ್ನು ಇಟ್ಟುಕೊಂಡ ಬಿಜೆಪಿ ನಾಯಕರು ತಮಗೆ ಆ ಕ್ಷೇತ್ರ ಬಿಟ್ಟು ಕೊಡುವಂತೆ ಮಾಡಿದ ಮನವಿಗೆ ಸೊಪ್ಪು ಹಾಕದ ಕುಮಾರಸ್ವಾಮಿ ಈ ಕ್ಷೇತ್ರ ಒಕ್ಕಲಿಗರ ಪ್ರಾಬಲ್ಯ ಹೊಂದಿದ್ದು, ತಮ್ಮ ಕುಟುಂಬಕ್ಕೆ ಸಮುದಾಯದ ಶ್ರೀರಕ್ಷೆ ಇದೆ. ಹೀಗಾಗಿ ಇಲ್ಲಿ ನಾವು ಗೆಲುವು ಸಾಧಿಸುತ್ತೇವೆ ಎಂದು ಹೇಳಿ ಪಟ್ಟು ಹಿಡಿದು ಟಿಕೆಟ್ ಪಡೆದುಕೊಂಡರು.

ಜೆಡಿಎಸ್ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಇಳಿ ವಯಸ್ಸು ಮತ್ತು ಆರೋಗ್ಯವನ್ನು ಲೆಕ್ಕಿಸದೆ ಚುನಾವಣೆ ಪ್ರಚಾರ ಕೈಗೊಂಡರೂ ಕೂಡ ತಮ್ಮ ಮೊಮ್ಮಗನನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಲೋಕಸಭೆ ಚುನಾವಣೆಯ ಲೆಕ್ಕಾಚಾರವೆ ಬೇರೆ ವಿಧಾನಸಭೆ ಚುನಾವಣೆಯ ಲೆಕ್ಕಾಚಾರವೇ ಬೇರೆ ಎಂದು ಈ ಕ್ಷೇತ್ರದ ಮತದಾರ ತೀರ್ಪು ನೀಡಿದ್ದಾರೆ.

ಮತ್ತೊಂದೆಡೆಯಲ್ಲಿ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಕ್ರಮದ ಆರೋಪಗಳ ಸರಣಿಯನ್ನೇ ಹೆಣೆಯಿತು. ಫಲಿತಾಂಶದ ನಂತರ ಸಿದ್ದರಾಮಯ್ಯ ಮಾಜಿಯಾಗಲಿದ್ದಾರೆ ಎಂದು ಪದೇ ಪದೇ ಹೇಳುತ್ತಾ ಸಾಗಿತು. ಇದರ ಜೊತೆಗೆ ವಕ್ಫ್ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿ ಬೀದಿ ಹೋರಾಟ ನಡೆಸಿದ್ದು ಗಮನ ಸೆಳೆಯಿತು.

ವಕ್ಫ್ ವಿರುದ್ಧದ ಹೋರಾಟಕ್ಕೆ ಸೇರಿದ ಜನ ಬಿಜೆಪಿ ನಾಯಕರಿಗೆ ಉತ್ಸಾಹ ಮೂಡುವಂತೆ ಮಾಡಿತ್ತು. ಆದರೆ ಮತ್ತೊಂದೆಡೆಯಲ್ಲಿ ಕರ್ನಾಟಕದ ಜನತೆ ಇಂತಹ ವಿಷಯಗಳ ಮೂಲಕ ಸಮಾಜವನ್ನು ವಿಭಜಿಸುವ ಪ್ರಯತ್ನಕ್ಕೆ ನಾವು ಬೆಂಬಲ ನೀಡುವುದಿಲ್ಲ ಎಂದು ಈ ತೀರ್ಪಿನ ಮೂಲಕ ಮತ್ತೊಮ್ಮೆ ತಮ್ಮ ಸಂದೇಶವನ್ನು ರವಾನಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಇದೇ ರೀತಿಯಲ್ಲಿ ಹಿಜಾಬ್, ಹಲಾಲ್, ಧಾರ್ಮಿಕ ಕ್ಷೇತ್ರಗಳಲ್ಲಿ ಯಾರು ವ್ಯಾಪಾರ ಮಾಡಬೇಕು ಮತ್ತು ಊರಿಗೌಡ ನಂಜೇಗೌಡ ಎಂಬ ವಿಷಯ ಪ್ರತಾಪಿಸಿದ್ದನ್ನು ಒಪ್ಪಿರಲಿಲ್ಲ. ಭಾವನಾತ್ಮಕ ವಿಷಯಗಳು ನಮಗೆ ಬೇಡ ಎಂಬ ಸಂದೇಶವನ್ನು ಅಂದೇ ರವಾನಿಸಿದ್ದರು. ಆದರೂ ಕೂಡ ಭೂಮಿಯ ವಿಷಯವನ್ನು ಇಟ್ಟುಕೊಂಡು ಪ್ರಸ್ತಾಪಿಸಿದ ವಕ್ಫ್ ತನ್ನ ಮತ ಬ್ಯಾಂಕನ್ನು ಗಟ್ಟಿಗೊಳಿಸಲಿದೆ ಎಂದು ಬಿಜೆಪಿ ನಿರೀಕ್ಷಿಸಿತ್ತು. ಆದರೆ ಈ ಬಾರಿಯೂ ಮತದಾರ ಅದಕ್ಕೆ ಮಣೆ ಹಾಕಿಲ್ಲ. ಈ ವಿಷಯ ಅತ್ಯಂತ ಹೆಚ್ಚು ಪ್ರಸ್ತಾಪಗೊಂಡ ಶಿಗ್ಗಾವಿಯಲ್ಲೂ ಇದು ಯಾವುದೇ ಕೆಲಸ ಮಾಡಿಲ್ಲ.

ಮತ್ತೊಂದೆಡೆಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಚುನಾವಣೆಯ ಫಲಿತಾಂಶ ಸಂಚಕಾರ ತಂದೊಡ್ಡಲಿದೆ ಎಂದು ಹೇಳಿದ್ದು ಹಿಂದುಳಿದ ಸಮುದಾಯಗಳು ಅದರಲ್ಲೂ ಕುರುಬ ಸಮುದಾಯದ ಮತದಾರರನ್ನು ಒಂದುಗೂಡಿಸಿತು. ವಕ್ಫ್ ವಿಚಾರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಇದು ಕಾಂಗ್ರೆಸ್ಸಿನ ಮತ ಬ್ಯಾಂಕ್ ಅನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಮಾಡಿದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು. ಈ ಮೂಲಕ ಕಾಂಗ್ರೆಸ್ ಹೆಚ್ಚು ಲಾಭ ಪಡೆಯುವಂತಾಯಿತು.

ಅಭ್ಯರ್ಥಿಗಳ ಆಯ್ಕೆ ವಿಚಾರದಿಂದ ಹಿಡಿದು ಚುನಾವಣೆ ಕಾರ್ಯತಂತ್ರ ಪ್ರಚಾರ ಎಲ್ಲ ವಿಷಯದಲ್ಲೂ ಕಾಂಗ್ರೆಸ್ ಯಾವುದೇ ರೀತಿಯ ಅಪಸ್ವರಕ್ಕೆ ಅವಕಾಶವಿಲ್ಲದೆ ಒಗ್ಗಟ್ಟಿನಿಂದ ಕೆಲಸ ಮಾಡಿತು. ಸಚಿವ ಜಮೀರ್ ಅಹಮದ್ ಖಾನ್ ಅವರು ನಾಲಿಗೆ ಹರಿಬಿಟ್ಟು ಮಾಡಿದ ಟೀಕೆಗೆ ತಕ್ಷಣವೇ ಕ್ಷಮೆಯಾಚಿಸುವಂತೆ ಸೂಚಿಸಿ ಮತಗಳು ಚದುರದಂತೆ ನೋಡಿಕೊಂಡಿತು.

ಆದರೆ ಬಿಜೆಪಿಯಲ್ಲಿ ಆರಂಭದಿಂದಲೂ ಅಪಸ್ವರ ಶಿಗ್ಗಾವಿ ಅಭ್ಯರ್ಥಿ ಆಯ್ಕೆ ಗೊಂದಲ ಮೂಡಿಸಿದರೆ ಸಂಡೂರಿನಲ್ಲಿ ಉಂಟಾದ ಬಿನ್ನಮತ ಶಮನಗೊಳಿಸಲು ಸಾಕಷ್ಟು ಬೆವರು ಹರಿಸಬೇಕಾಯಿತು. ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಯ್ಕೆ. ಹೀಗಾಗಿ ಅಪ್ಪ-ಮಗ ಕುಮಾರಸ್ವಾಮಿಯವರೊಂದಿಗೆ ಸೇರಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿ ಎಂದು ಇತರೆ ಬಿಜೆಪಿ ನಾಯಕರು ಈ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ.

ಜೆಡಿಎಸ್ ಪ್ರಭಾವಿ ನಾಯಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಒಂದಷ್ಟು ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಬಿಜೆಪಿಯಲ್ಲಂತೂ ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ  ತಂದೊಡ್ಡಲಿದೆ.

ಡಿ.ಕೆ.ಶಿವಕುಮಾರ್ ಅವರು ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದರು. ಅಭ್ಯರ್ಥಿಗಳ ಆಯ್ಕೆ, ಸಂಘಟನೆ, ಮೂರೂ ಕ್ಷೇತ್ರ, ಜಿಲ್ಲೆಗಳಲ್ಲಿ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಕೈ ಹಿಡಿದಿವೆ. ಡಿ.ಕೆ.ಶಿವಕುಮಾರ್ಗೆ ಕೂಡ ಈ ಚುನಾವಣೆ ಬಲ ತುಂಬಿದೆ. ಅದರಲ್ಲೂ ಚನ್ನಪಟ್ಟಣದ ಚುನಾವಣೆ ಫಲಿಶಾಂತ ಶಕ್ತಿ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಮತ್ತೊಮ್ಮೆ ಸಾಬೀತಾಗಿದೆ. ಪಕ್ಷದ ಅಹಿಂದ ನಾಯಕರಾಗಿ, ಸರ್ಕಾರವನ್ನು ಒಂದೂವರೆ ವರ್ಷ ಕಾಲ ಮುನ್ನಡೆಸಿ ಗ್ಯಾರಂಟಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಫಲ ಕೊಟ್ಟಿದೆ.

ಆದರೆ ಈ ಫಲಿತಾಂಶ ತನ್ನ ಸರ್ಕಾರಕ್ಕೆ ನೀಡಿದ ಜನಾದೇಶ ಎಂದು ಅತಿಯಾದ ಆತ್ಮವಿಶ್ವಾಸದಿಂದ ಬೀಗುವ ಮೂಲಕ ತಾನು ಮಾಡಿದ್ದೆ ಸರಿ ಎಂದು ಹೊರಟರೆ ಮುಂದಿನ ದಿನಗಳು ಆಡಳಿತಾರೂಢ ಕಾಂಗ್ರೆಸ್ಸಿಗೆ ಅಗ್ನಿಪರೀಕ್ಷೆಯಾಗಲಿವೆ.

Leave a Reply