2024ರ ಉಪಚುನಾವಣೆ ನಂತರ ಕಾಂಗ್ರೆಸ್ ಸಂಸದರ ಸಂಖ್ಯೆ ಕುಸಿದಿದೆಯೇ?

1 year ago

ಕೇರಳದ ವೈನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದು, ಇದೇ 2024ರ ನವೆಂಬರ್ 23ರಂದು ಫಲಿತಾಂಶ ಘೋಷಣೆಯಾಗಿದೆ. ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಈ ಫಲಿತಾಂಶದ ಕುರಿತು ಕೆಲವು ಸುದ್ದಿಗಳು ಮತ್ತು ಫೋಟೋಗಳು ಹಂಚಿಕೆಯಾಗಿವೆ.

ಸುದ್ದಿ ಮತ್ತು ಪೋಸ್ಟ್ ಗಳಲ್ಲಿರುವುದೇನು?:  ಹಂಚಿಕೆಯಾಗಿರುವ ಸುದ್ದಿ ಮತ್ತು ಪೋಸ್ಟ್ ಗಳ ಪ್ರಕಾರ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ 99 ಲೋಕಸಭಾ ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಕಳೆದುಕೊಂಡಿದ್ದು, ಸದ್ಯದ ಕಾಂಗ್ರೆಸ್ ಸಂಸದರ ಸಂಖ್ಯೆ 99ರಿಂದ 98ಕ್ಕೆ ಕುಸಿದಿದೆ. ಜೊತೆಗೆ ಬಿಜೆಪಿಯ ಸಂಖ್ಯೆ 240ರಿಂದ 241ಕ್ಕೆ ಏರಿಕೆಯಾಗಿದೆ.

ಫ್ಯಾಕ್ಟ್ ಚೆಕ್ ನಂತರ ನಿಜ ಸಂಗತಿ ಏನು?: ಮಾಲ್ಗುಡಿ ಎಕ್ಸ್ ಪ್ರೆಸ್ ಫ್ಯಾಕ್ಟ್ ಚೆಕ್ ವಿಭಾಗದಿಂದ ಸದರಿ ಪೋಸ್ಟ್ ಗಳ ಕುರಿತು ನಿಜ ಸಂಗತಿ ಅರಿಯಲು ಯತ್ನಿಸಲಾಗಿದೆ. ಆದರೆ ಪೋಸ್ಟ್ ನಲ್ಲಿರುವುದು ಸುಳ್ಳು ಸಂಗತಿ ಎಂದು ಬಹಿರಂಗವಾಗಿದೆ. ಏಕೆಂದರೆ, ನಾಂದೇಡ್ ಮತ್ತು ವೈನಾಡು ಲೋಕಸಭಾ ಕ್ಷೇತ್ರಗಳಲ್ಲಿ ಕ್ರಮವಾಗಿ ಕಾಂಗ್ರೆಸ್ ನ ರವೀಂದ್ರ ವಸಂತರಾವ್ ಚವಾಣ್ ಮತ್ತು ಪ್ರಿಯಾಂಕಾ ಗಾಂಧಿ ಗೆಲುವು ದಾಖಲಿಸಿದ್ದಾರೆ.

ವೆಬ್ಸೈಟ್ ನಲ್ಲಿ ಪ್ರಕಟವಾದ ಸುದ್ದಿ

ಅಸಲಿ ಸಂಗತಿಯೇನೆಂದರೆ 2024ರ ಲೋಕಸಭೆ ಚುನಾವಣೆಯಲ್ಲಿ ಕೂಡ ನಾಂದೇಡ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ವಸಂತರಾವ್ ಬಲವಂತರಾವ್ ಚವಾಣ್ 26 ಆಗಸ್ಟ್ 2024ರಂದು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಇದರಿಂದ ಉಪಚುನಾವಣೆ ನಡೆದಿದ್ದು, ಈ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ರವೀಂದ್ರ ವಸಂತರಾವ್ ಚವಾಣ್ ಗೆಲುವು ಸಾಧಿಸಿದ್ದಾರೆ. ಗೆಲುವಿನ ಅಂತರ ಕೇವಲ 1457.

ಕೇಂದ್ರ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ನಲ್ಲಿ ಇರುವ ಮಾಹಿತಿ

ಇನ್ನು ಕೇರಳದ ವೈನಾಡಿನಲ್ಲಿ ರಾಹುಲ್ ಗಾಂಧಿಯವರು ರಾಜೀನಾಮೆ ಸಲ್ಲಿಸಿದ್ದರಿಂದ ನಡೆದ ಉಪಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷದಿಂದ ಪ್ರಿಯಾಂಕಾ ಗಾಂಧಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ತನ್ನ ಎರಡೂ ಕ್ಷೇತ್ರಗಳನ್ನೂ ಉಳಿಸಿಕೊಂಡಿದೆ. ಆದ್ದರಿಂದ 2024ರ ಮುಖ್ಯ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕೇಂದ್ರ ಚುನಾವಣಾ ಆಯೋಗದ ವೆಬ್ಸೈಟ್ ನಲ್ಲಿ ಇರುವ ಅಧಿಕೃತ ಮಾಹಿತಿ

ಆದರೆ ಕೆಲವು ಸುದ್ದಿ ಸಂಸ್ಥೆಗಳು 2024ರ ಉಪಚುನಾವಣೆಯ ನಂತರ ಕಾಂಗ್ರೆಸ್ ಲೋಕಸಭೆಯಲ್ಲಿ ಬಿಜೆಪಿಯ ಸಂಖ್ಯೆ ಹೆಚ್ಚಾಗಿದೆ, ಕಾಂಗ್ರೆಸ್ ಸಂಸದರ ಸಂಖ್ಯೆ  ಕುಸಿದಿದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುತ್ತಿವೆ.

Leave a Reply