ಬೆಂಗಳೂರು: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿ ಯೋಜನೆ ಕಾಮಗಾರಿಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿರುವುದಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಗೋವಾ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರ ಮಹಾದಾಯಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲವೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಭೂಪೇಂದ್ರ ಯಾದವರವರು ತಮಗೆ ತಿಳಿಸಿದ್ದಾರೆಂದು ಅವರು ಹೇಳಿರುವುದು ತಮಗೆ ಆಘಾತ ತಂದಿದೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿಗಳು ಅಲ್ಲಿನ ವಿಧಾನಸಭೆಯಲ್ಲಿ ಅಧಿಕೃತ ಹೇಳಿಕೆ ನೀಡಿರುವುದು ಕರ್ನಾಟಕಕ್ಕೆ ಆಘಾತ ತಂದಿದೆ ಎಂದರು.
ಮಹಾದಾಯಿ ಜಲವಿವಾದದ ಬಗ್ಗೆ ನ್ಯಾಯಾಧೀಕರಣ ರಚನೆಯಾಗಿ ಅದು ಅಂತಿಮ ತೀರ್ಪು ನೀಡಿ, ಆ ತೀರ್ಪು ಕೇಂದ್ರ ಸರ್ಕಾರದ ಗೆಜೆಟ್ನಲ್ಲಿ ಪ್ರಕಟಣೆಯಾಗಿ ನ್ಯಾಯಾಧಿಕರಣದ ಐತೀರ್ಪು ಜಾರಿಗೆ ಬಂದಿದೆ. ಹೀಗಿದ್ದು ಕೇಂದ್ರ ಮಂತ್ರಿಗಳು ಗೋವಾ ಸರ್ಕಾರಕ್ಕೆ ಯಾವ ಆಧಾರದಲ್ಲಿ ಭರವಸೆ ನೀಡಿದ್ದಾರೆ ಎಂದು ಕೇಳಿದರು.
ಕರ್ನಾಟಕ ನ್ಯಾಯಮಂಡಳಿ ಮುಂದೆ ಕಳಸಾ-ಬಂಡೂರಿ ಯೋಜನೆಗೆ 7.56 ಟಿ.ಎಮ್.ಸಿ ಅಡಿ ನೀರನ್ನು ಮಲಪ್ರಭಾ ಕಣಿವೆಗೆ ತಿರುಗಿಸಿಕೊಳ್ಳಲು ತನ್ನ ಕೋರಿಕೆ ಸಲ್ಲಿಸಿತ್ತು. ಇದರಲ್ಲಿ 3.90 ಟಿ.ಎಮ್.ಸಿ ನೀರನ್ನು ಕರ್ನಾಟಕದ ಪಾಲಿಗೆ ಹಂಚಿಕೆ ಮಾಡಿದೆ. ಅಂತರ್ ಕಣಿವೆ ತಿರುಗಿಸುವಿಕೆಯನ್ನು ಕರ್ನಾಟಕದ ಕಡೆಯಿಂದ ಮಾಡಿಕೊಳ್ಳಲು ನ್ಯಾಯಾಧೀಕರಣ ಒಪ್ಪಿದೆ ಎಂದರು.
ಈ ಯೋಜನೆ ಜಾರಿಗೊಳಿಸಲು ಪ್ರಸ್ತಾವನೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಮಂಜೂರಿಗಾಗಿ ಅರ್ಜಿ ಸಲ್ಲಿಸಿತ್ತು. ಆದರೆ ಗೋವಾ 10.6 ಹೆಕ್ಟೇರ್ ಅರಣ್ಯ ಭೂಮಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಕಾಯ್ದಿಟ್ಟ ಪ್ರದೇಶದಲ್ಲಿ ಬರುತ್ತದೆ ಎಂದು ಆಕ್ಷೇಪಿಸಲು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ದಿನಾಂಕ 23.01.2024ರಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಈ ಅರಣ್ಯ ಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿದೆ ಎಂದರು.
ಇದಾದ ನಂತರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮುಂದೆ 77ನೇ, 79ನೇ ಮತ್ತು 80ನೇ ಸಭೆಗಳಲ್ಲಿ ಈ ವಿಷಯವನ್ನು ನಿರ್ಣಯ ಮಾಡದೇ ವೃಥಾ ಕಾಲಹರಣ ಮುಂದೂಡುತ್ತಾ ಬಂದಿದೆ. ಸರ್ವೋಚ್ಛ ನ್ಯಾಯಾಲಯವು ಕರ್ನಾಟಕದ ಮಹಾದಾಯಿ ಯೋಜನೆಗೆ ತಡೆಹಿಡಿಯಬೇಕೆಂಬುವ ಯಾವುದೇ ಆದೇಶ ನೀಡಿಲ್ಲ ಎಂದರು.
ಜೊತೆಗೆ 29.12.2022 ರಂದು ಕೇಂದ್ರ ಜಲ ಆಯೋಗವು ಕಳಸಾ ಮತ್ತು ಬಂಡೋರಿ ಯೋಜನೆಗಳ ಪರಿಷ್ಕೃತ ವಿವರವಾದ ಯೋಜನಾ ವರದಿಗಳಿಗೆ ಅನುಮೋದನೆ ನೀಡಿದೆ. ದಿನಾಂಕ 19.04.2023ರಂದು ಸರ್ವೋಚ್ಛ ನ್ಯಾಯಾಲಯ ಗೋವಾದ ಮೂಲದಾವೆಯ ಮೇಲಿನ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡಿ, ಕಳಸಾ ಯೋಜನೆಗೆ ತಡೆಯೊಡ್ಡುವಂತೆ ಕರ್ನಾಟಕದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿದ್ದ ಗೋವಾದ ಪ್ರಾರ್ಥನೆಯನ್ನು ವಜಾ ಮಾಡಿದೆ ಎಂದರು.
ನ್ಯಾಯಾಂಗದ ಯಾವುದೇ ಅಡೆತಡೆ ಇಲ್ಲದಿದ್ದರೂ ಕರ್ನಾಟಕದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಾ ಕರ್ನಾಟಕದ ನ್ಯಾಯಯುತವಾದ ಮತ್ತು ಕಾನೂನುಬದ್ಧವಾದ ಹಾಗೂ ಸಂವಿಧಾನಾತ್ಮಕ ರಕ್ಷಣೆ ಹೊಂದಿರುವ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ವೃಥಾ ಅಡ್ಡಿ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಅನ್ಯಾಯಗೊಳಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಂಗದಿಂದ ಯಾವುದೇ ಅಡೆತಡೆಯಿಲ್ಲದ ಯೋಜನೆಗಳನ್ನು ಮತ್ತು ಕಾನೂನು ಬದ್ಧವಾಗಿ ಅಂತರ್ರಾಜ್ಯ ಜಲವಿವಾದ ಕಾಯ್ದೆಯಡಿಯಲ್ಲಿ ನ್ಯಾಯಾಧಿಕರಣದಿಂದ ಇತ್ಯರ್ಥಗೊಂಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತಾನು ನೀಡಬೇಕಾದ ಮಂಜೂರಾತಿಗಳನ್ನು ತಕ್ಷಣ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಉತ್ತರ ಕರ್ನಾಟಕ ಜನರ ಹಾಗೂ ರೈತರ ಹಿತ ಗಮನಿಸಿ, ಕೇಂದ್ರ ಸರ್ಕಾರ ತಕ್ಷಣ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.




