ಗೋವಾ ಸಿಎಂ ಹೇಳಿಕೆ ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆಯಲ್ಲ: ಪ್ರಹ್ಲಾದ್ ಜೋಶಿ

9 months ago

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿ ಯೋಜನೆ ಕಾಮಗಾರಿ ವಿಚಾರ ಇದೀಗ ಗೋವಾ ಮತ್ತು ಕರ್ನಾಟಕ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಯೋಜನೆಯ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಗೋವಾ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು, ಮಹದಾಯಿ ಯೋಜನೆಗೆ ಕೇಂದ್ರ ಅನುಮತಿ ನೀಡುವುದಿಲ್ಲ ಎಂಬುದು ಗೋವಾ ಸಿಎಂ ವೈಯಕ್ತಿಕ ಹೇಳಿಕೆ. ಇದು ಕೇಂದ್ರ ಸರ್ಕಾರದ ಅಧಿಕೃತ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಅಲ್ಲಿನ ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿರುವುದು ಅವರ ವೈಯುಕ್ತಿಕ ಅನಿಸಿಕೆಯಾಗಿದೆ. ಕೇಂದ್ರ ಸರ್ಕಾರ ಹಾಗೆ ಹೇಳಿಯೇ ಇಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ನೆಲ, ಜಲ, ಭಾಷೆ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದಿಲ್ಲ. ಮೂರೂ ರಾಜ್ಯಗಳಿಗೆ ಹೊಂದಿಕೆ ಆಗುವಂತೆಯೇ ನಿರ್ಧಾರ ತೆಗೆದುಕೊಳ್ಳಲಿದೆ. ಅದರಲ್ಲೂ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಭಾಗದ ಜನರ ಕುಡಿಯುವ ನೀರಿಗಾಗಿ 40 ಟಿಎಂಸಿ ನೀರನ್ನು ಬಳಸಿಕೊಳ್ಳುವ ಕಳಸಾ-ಬಂಡೂರಿ ಯೋಜನೆ ಈಗಾಗಲೇ ಅನುಷ್ಠಾನಕ್ಕೆ ಸಿದ್ಧಗೊಂಡಿದೆ ಎಂದು ತಿಳಿಸಿದ್ದಾರೆ.

ಕಳಸಾ ಬಂಡೂರಿ ವಿಚಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇನೆ. ಕರ್ನಾಟಕದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಅವರು ನಿಷ್ಪಕ್ಷಪಾತ ನಡೆ ಅನುಸರಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬೇಕಿಲ್ಲ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಸಹ ಮಹದಾಯಿ ವಿಚಾರದಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ‌. ನನ್ನ ಜೊತೆಯೂ ಮಾತುಕತೆ ನಡೆಸಿದ್ದಾರೆ. ಇದರಲ್ಲಿ ಕರ್ನಾಟಕ ರಾಜಕಾರಣ ಮಾಡುತ್ತಿಲ್ಲ. ನಮ್ಮ ರಾಜ್ಯದ ಹಕ್ಕು ಕಾಪಾಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply