ಪಂಚಮುಖಿ ಗಣಪತಿಗೆ ನೂರರ ಸಂಭ್ರಮ

2 years ago

ಬಸವನಗುಡಿ ಕ್ಷೇತ್ರವೆಂದರೆ ಧಾರ್ಮಿಕತೆಯ ತವರು. ಇಲ್ಲಿ ಹಲವಾರು ದೇವಾಲಯಗಳು ಶತಮಾನೋತ್ಸವದ ಹಿರಿತನವನ್ನು ಕಂಡಿರುತ್ತದೆ. ಇಂತಹ ದೇವಾಲಯಗಳ ಸಾಲಿನಲ್ಲಿ ಈಗ ಪಂಚಮುಖಿ ಗಣಪತಿಯ ದೇವಾಲಯವು ಸೇರಲ್ಪಟ್ಟಿರುತ್ತದೆ.

ಹನುಮಂತನಗರದ ಕುಮಾರಸ್ವಾಮಿ ದೇವಾಲಯ ದರ್ಶನ ಮಾಡುವ ಮುನ್ನವೇ ಒಂದು ಕಡೆಯಲ್ಲಿ ಆಂಜನೇಯ ಮತ್ತೊಂದು ಕಡೆಯಲ್ಲಿ ಪಂಚಮುಖಿ ಗಣಪತಿ ದೇವಾಲಯಗಳು ನಿರ್ಮಾಣವಾಗಿರುತ್ತದೆ.

1924ರ ಮೇ ತಿಂಗಳ ಎಂಟನೇ ತಾರೀಕಿನಂದು ಶಂಕರ ಜಯಂತಿಯ ಪವಿತ್ರ ದಿನದಲ್ಲಿ ಸಿದ್ದಾಂತ ಶಿವಶಂಕರ ಶಾಸ್ತ್ರಿಗಳ ನೇತೃತ್ವದಲ್ಲಿ ಪಂಚಮುಖಿ ಗಣಪತಿ ಪ್ರತಿಷ್ಠಾಪನೆಯಾಗಿರುತ್ತದೆ ಸತತ ನೂರು ವರ್ಷದಿಂದ ಅತ್ಯಂತ ಶ್ರದ್ಧೆಯಿಂದ ಪೂಜಾ ಕಾರ್ಯಗಳನ್ನು ಇಲ್ಲಿ ನಡೆಸಿಕೊಂಡು ಬಂದಿರುತ್ತಾರೆ. ಇಲ್ಲಿನ ಪ್ರಧಾನ ಅರ್ಚಕರಾದ ವಿಷ್ಣು ಭಟ್ಟರು ಹಲವಾರು ದಶಕಗಳಿಂದ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾದರಸದಂತೆ ಸದಾ ಕಾಲ ಚಟುವಟಿಕೆಯಿಂದ ಸೇವೆ ಮಾಡುತ್ತಿರುವ ಇವರ ಕಾರ್ಯವೈಖರಿಯು ಸಹ ಭಕ್ತರನ್ನ ಆಕರ್ಷಿಸುತ್ತದೆ. ಪ್ರತಿದಿನ ಬೆಳಗ್ಗೆ 5:30ಕ್ಕೆ ಸರಿಯಾಗಿ ದೇವಾಲಯಕ್ಕೆ ಆಗಮಿಸಿ, ಪಂಚಮುಖಿ ಗಣಪತಿಗೆ ಪ್ರತಿದಿನವೂ ಆಯಾ ಸಂದರ್ಭದಲ್ಲಿ ಪೂಜಾ ವಿಧಿ ವಿಧಾನಗಳನ್ನು ಯಾವುದೇ ಲೋಪವಿಲ್ಲದೆ ನಡೆಸುತ್ತಿದ್ದಾರೆ.

ಪಂಚಮುಖಿ ಗಣಪತಿಗೆ ಪ್ರತಿದಿನವೂ ನೂರಾರು ಭಕ್ತರು ಶ್ರದ್ಧೆಯಿಂದ ನಡೆದುಕೊಳ್ಳುತ್ತಿದ್ದಾರೆ. ಇಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ ಮತ್ತು ಇತರೆ ಹಿಂದೂ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ವಿಶೇಷವಾದಂತಹ ಪೂಜೆ ಅಲಂಕಾರಗಳು ನಡೆಯುತ್ತಿದೆ. ಭಕ್ತರ ಸಹಕಾರದಿಂದ ದೇವಾಲಯಕ್ಕೆ ಸಾಕಷ್ಟು ರೀತಿಯಲ್ಲಿ ಸಹಕಾರ ದೊರೆಯುತ್ತಿದೆ. ದೇವಾಲಯವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದರೂ ಸಹ ಭಕ್ತರ ನೆರವಿನಿಂದಲೇ ವಿಷ್ಣು ಭಟ್ಟರು ಪೂಜಾ ಕಾರ್ಯಗಳನ್ನು ಶತಮಾನೋತ್ಸವದ ಕಾರ್ಯಕ್ರಮವನ್ನು ವಿಧಿ ವಿಧಾನಗಳಲ್ಲಿ ಆಚರಿಸುತ್ತಿದ್ದಾರೆ.

ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ಕುಮಾರಸ್ವಾಮಿ ದೇವಾಲಯ ಮತ್ತು ಶಂಭುಲಿಂಗ ದೇವಾಲಯಗಳು ಇಲ್ಲಿ ಮತ್ತೊಂದು ವಿಶೇಷವಾದಂತಹ ಸ್ಥಳವಾಗಿದೆ. ಕುಮಾರಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷವೂ ಹರೋಹರ ಸಂದರ್ಭದಲ್ಲಿ ಜಾತ್ರೆಯು ನಡೆಯುತ್ತದೆ. ಮೂರು ದಿನದ ಗಳ ಕಾಲ ನಾಡಿನ ಸಾಂಸ್ಕೃತಿಕ ಮತ್ತು ಜನಪದ ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ. ಬೆಂಗಳೂರು ನಗರದಲ್ಲಿಯೇ ಅತ್ಯಂತ ಪವಿತ್ರವಾದ ಕುಮಾರಸ್ವಾಮಿ ದೇವಾಲಯ ಎಂಬ ಪ್ರತೀತಿ ಇರುವ ಈ ದೇವಾಲಯಕ್ಕೆ ಹರೋಹ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ತಮ್ಮ ಆಚರಣೆಗಳನ್ನು ಆಚರಿಸುತ್ತಾರೆ. ಇಲ್ಲಿ ಬರುವ ಪ್ರತಿಯೊಬ್ಬ ಭಕ್ತರು ಮೊದಲು ಪಂಚಮುಖಿ ಗಣಪತಿಯ ದರ್ಶನವನ್ನ ಪಡೆದು ನಂತರ ಕುಮಾರಸ್ವಾಮಿ ದೇವಾಲಯದ ಮೆಟ್ಟಲುಗಳನ್ನು ಹತ್ತುತ್ತಾರೆ.

ಬಸವನಗುಡಿಯ ಪ್ರದೇಶದಲ್ಲಿ ಹನುಮಂತನಗರದ ಭಾಗದಲ್ಲಿ ನೂರು ವರ್ಷಗಳನ್ನು ಪೂರೈಸಿರುವ ಪಂಚಮುಖಿ ಗಣಪತಿಯ ಶತಮಾನೋತ್ಸವ ಕಾರ್ಯಕ್ರಮ ನಿಜಕ್ಕೂ ಸಂತೋಷದ ಸಂಗತಿ. ನೂರು ವರ್ಷಗಳ ಕಾಲ ಲಕ್ಷಾಂತರ ಭಕ್ತರನ್ನು ಆಶೀರ್ವದಿಸಿರುವ ಪಂಚಮುಖಿ ಗಣಪತಿಯ ವಿಗ್ರಹವು ಸಹ ವಿಶೇಷತೆಯಿಂದ ಕೂಡಿದೆ ಪಂಚಮುಖಿ ಗಣಪತಿಯ ವಿಗ್ರಹವು ಕಪ್ಪು ಶಿಲೆಯಿಂದ ಕೆತ್ತಲ್ಪಟ್ಟಿದ್ದು ಅಲಂಕಾರಗಳನ್ನು ಮಾಡಿದ ಸಂದರ್ಭದಲ್ಲಿ ಭಕ್ತಿಭಾವ ತುಂಬಿರುತ್ತದೆ.

ಇಲ್ಲಿನ ಪ್ರಧಾನ ಅರ್ಚಕರಾದ ವಿಷ್ಣು ಭಟ್ಟರು ದೇವಾಲಯದ ಅಭಿವೃದ್ಧಿ ಮತ್ತು ಪೂಜಾ ವಿಧಿ ವಿಧಾನಗಳ ವಿಚಾರದಲ್ಲಿ ತುಂಬಾ ಆಸಕ್ತಿಯಿಂದ ದುಡಿಯುತ್ತಿರುವುದು ದೇವಾಲಯದ ಪ್ರಗತಿಯಲ್ಲಿ ಪ್ರಮುಖವಾದಂತಹ ಅಂಶವಾಗಿರುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply