ಮಸೀದಿ-ಮೆರವಣಿಗೆಗಳ ನಡುವೆ
ಒಂದು ಕಲ್ಲಿನ ಕಥೆ
ಕಾಲ ಯಾವುದೆಂಬುದು ಗೊತ್ತಿಲ್ಲ
ಕಾಲದ ಹಂಗೂ ನನಗಿಲ್ಲ
ಎಡವುವ ಕಾಲಿಗೆ ತಡೆಯಾಗಿ
ರಸ್ತೆಯ ಬದಿಯಲ್ಲೆಲ್ಲೋ ಬಿದ್ದಿರುವ
ಕ್ಷುಲ್ಲಕ ಕಲ್ಲು ನಾನು
ದೃಷ್ಟಿಯೆಲ್ಲೋ ನೆಟ್ಟು ಎಡವಿ, ಮುಗ್ಗರಿಸಿ
ಹಿಡಿಶಾಪ ಹಾಕಿದವರಿಗೆ ಲೆಕ್ಕವಿಲ್ಲ.
ಆ ಶಾಪಗಳಿಗೆ ಬೇಸರವೂ ಎನಗಿಲ್ಲ;
ಕದಲಲೊಲ್ಲದ ಕಲ್ಲಾಗಿರುವೆ ನಾನು,
ಇದಕೂ ಮಿಗಿಲು ಶಾಪವುಂಟೆ?
ನನ್ನೆಣಿಕೆ ತಪ್ಪಾಗಿ
ಕಲ್ಲಾದ ನಾನೂ ಪಾಪಪ್ರಜ್ಞೆಯಲಿ
ಬೇಯುವ ಕಾಲ ಕೊನೆಗು ಬಂದೇಬಂತು..
ಡೋಲು, ವಾದ್ಯ, ವಾಲಗ, ವಿಜೃಂಭಣೆ..
ಭಗವಂತನಂತೆ… ಭವ್ಯ ಪೂಜೆಯಂತೆ…
ಆರತಿಯಂತೆ.. ಅನ್ನಸಂತರ್ಪಣೆಯಂತೆ…
ಕೊನೆಗೆ ನೀರಿಗೆಸೆದು ಭಕ್ತಿಭಾವ ಸಮರ್ಪಣೆಯಂತೆ
ಅವರು ಭಕ್ತರಂತೆ…
ಕೇಕೆ-ಕುಣಿತದ ಉನ್ಮಾದದ ತೊತ್ತುಗಳಂತೆ
ಯಾರಾದರೇನಂತೆ?
ಯಕಶ್ಚಿತ್ ಕಲ್ಲಾದ ಎನಗೆ ಯಾಕೆ ಆ ಚಿಂತೆ?
ತುಳಿದು, ಮೆಟ್ಟಿ, ಎಡವಿ ಎಲ್ಲರಂತೆ
ಮುಂದೆ ಸಾಗುವರಂತೆ!
ಆದರೆ, ಜಂಗುಳಿಯ ನಡುವಿಂದ
ಕಂಕಣದ ಕೈಯೊಂದು ಹಿಡಿದೆತ್ತಿತು ಎನ್ನ
ಬೀದಿಯ ಬಂಧನವ ಕಳೆವಂತೆ!
ಯಾಕಂತೆ?
ಕ್ಷಣಮಾತ್ರದಲಿ ತೂರಿತಾ ಕೈ ಎನ್ನ
ಆ ದಿಕ್ಕಿಗಂತೆ!
’ಪತ್ಥರ್! ಪತ್ಥರ್!! ಪತ್ಥರ್!!!’
ಕೂಗಿದರು, ಅಬ್ಬರಿಸಿದರು, ಅರಚಾಡಿದರು
ಗದ್ದಲವೆಬ್ಬಿಸಿ, ಬಡಿದಾಡಿ
ರಣಾಂಗಣ ಸೃಷ್ಟಿ ಮಾಡಿದರು
ಕಾರಣ, ನಾ ಬಿದ್ದ ಜಾಗ
ಮಸೀದಿಯಂತೆ!!
ಹರಿದ ನೆತ್ತರ ಕೋಡಿಯಲಿ
ಹೆಣವಾದವು ದೇಹಗಳು
ಅನಾಥವಾದವು ಕುಟುಂಬಗಳು
ಸುಟ್ಟು ಭಸ್ಮವಾದವು ಬದುಕಿನ ಬಂಡಿಗಳು
ಆದರೂ ನಡುಬೀದಿಯಲಿ
ನಿಶ್ಚಲವಾಗಿದ್ದ ಭಗವಂತ,
ಮಸೀದಿ ಅಂಗಳದ ಒಂದು ಮೂಲೆಹಿಡಿದ
ಥೇಟು ನನ್ನಂತೆ!
ಕಾಲ ಉರುಳಿ, ಗದ್ದುಗೆಗಳು ಹೊರಳಿ
ತಲೆಮಾರುಗಳು ತರಗೆಲೆಗಳಾಗಿ
ಬೆಳೆದವು ಸಮಾಧಿಗಳು
ಮೊಳೆತವು ಗೋರಿಗಳು
ನಿತ್ಯ ನಿರಂತರ ನೇಸರನ ಸಾಕ್ಷಿಯಲಿ
ಹೊಸ ನೀರು ಉಕ್ಕಿತು ಹಳೇನೀರಿನ ಜಾಡಿನಲಿ
ನಾನು ಮಾತ್ರ ಮಸೀದಿಯ ಒಂದು ಮೂಲೆಯಲಿ…
ಅಂದು, ಅತ್ತರಿನ ಕೈಯೊಂದು
ಮಸೀದಿಯ ಮೂಲೆಯಿಂದ
ತಡವರಿಸಿ, ಹಿಡಿದೆತ್ತಿ ಎನ್ನನು
ಕತ್ತಲನು ಸೀಳ್ವಂತೆ ಎತ್ತಲೋ ತೂರಿದಾಗ
ಹೋಗಿ ಬಿದ್ದದ್ದು ನಾನು
ಭಗವಂತನ ಮೆರವಣಿಗೆಯಂತೆ…
ಕಲ್ಲು! ಕಲ್ಲು!! ಕಲ್ಲು!!!
ಮತ್ತೆ ಕೂಗು, ಮತ್ತೆ ಅಬ್ಬರ, ಮತ್ತೆ ಅರಚಾಟ
ಯಥಾ ಪ್ರಕಾರ ಗದ್ದಲ, ಬಡಿದಾಟ
ನೆತ್ತರ ಕೋಡಿ, ಹೆಣಗಳ ರಾಶಿ, ಬೆಂಕಿ ಭಸ್ಮ!
ಎನ್ನವರಿಲ್ಲದ, ತನ್ನವರಿಲ್ಲದ
ಮಡದಿ, ಮಕ್ಕಳು, ಮುದಿ ಅಪ್ಪ-ಅಮ್ಮನ
ಗೊಡವೆಯೂ ಇಲ್ಲದ ಕ್ಷುಲ್ಲಕ ಕಲ್ಲು ನಾನು;
ನನ್ನಿಂದ ಯಾಕೆ ಮತ್ತೆಮತ್ತೆ ಈ ಸಾವುನೋವು?
ಎನ್ನೀ ಪ್ರಶ್ನೆಗೆ ಭಗವಂತ ಉತ್ತರವಾಗಲಿಲ್ಲ,
ಇದ್ದಷ್ಟು ದಿನ ಮಸೀದಿಯೂ ಜವಾಬು ಕೊಡಲಿಲ್ಲ!
ಹೇಗೆ ಹಗುರಾಗಲಿ ನಾನು,
ಕಣ್ಣೀರು ಕೂಡಾ ಇರದ ನತದೃಷ್ಟ ಕಲ್ಲು ನಾನು!!
– ಮಾಚಯ್ಯ ಎಂ ಹಿಪ್ಪರಗಿ




