ಅಲೆಮಾರಿ ಬುಡಕಟ್ಟುಗಳ ಕಲೆಗಳ ಉಳಿವಿಗೆ ಪಠ್ಯವಾಗಿಸುವ ಅಗತ್ಯವಿದೆ: ಡಾ.ಎ.ಆರ್.ಗೋವಿಂದ ಸ್ವಾಮಿ

2 years ago

ಬೆಂಗಳೂರು: ಈ ನಾಡಿನ ನಶಿಸಿ ಹೋಗುತ್ತಿರುವ ನೂರಾರು ತಳ ಸಮುದಾಯಗಳ ಶ್ರೀಮಂತ ಸಂಸ್ಕೃತಿಯು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಅಲೆಮಾರಿ ಬುಡಕಟ್ಟುಗಳ ಎಲ್ಲಾ ಕಲೆಗಳನ್ನು ಪಠ್ಯ ಪುಸ್ತಕ ರೂಪದಲ್ಲಿ ತಂದು ವಿಶ್ವ ವಿದ್ಯಾಲಯಗಳಲ್ಲಿ ಪಠ್ಯವಾಗಿಸುವ ಅಗತ್ಯವಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದ ಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು, ನಳಂದ ನ್ಯಾಷನಲ್‌ ಕಾಲೇಜ್ ಮತ್ತು ಸಮೃದ್ಧಿ ಸೇವಾ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ‘ತೊಗಲು ಗೊಂಬೆ ಕಲೆ ಮತ್ತು ಬಂಜಾರ ಹಚ್ಚೆ ಹಾಗೂ ಹಚ್ಚೆಪದಗಳ ಕುರಿತ ಕಾರ್ಯಾ ಗಾರ, ಸಂವಾದ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ತೊಗಲು ಗೊಂಬೆ ಮತ್ತು ಹಚ್ಚೆಗೆ ಅವಿನಾಭಾವ ಸಂಬಂಧಇದೆ .“ಘಾಲೇನ್ ಆವಚ ಕಾಡೇನ ಆಯೋನಿ” ಎಂಬ ಬಂಜಾರ ಗಾದೆ ಇದೆ. ಅಂದರೆ “ಹಚ್ಚೆಯು ಹಾಕಲಿಕ್ಕೆ ಬರುತ್ತೆ ತೆಗೆಯಲಿಕ್ಕೆ ಬರಲ್ಲಾ” ಒಮ್ಮೆ ಹಚ್ಚೆ ಮೈಮೇಲೆ ಹಾಕಿದ ಮೇಲೆ ಅದು ಸಾಯುವವರೆಗೆ ಇರುತ್ತದೆ ಹಾಗೂ ಹಚ್ಚೆಯನ್ನು ಮುತೈದೆಯ ಸಂಕೇತವಾಗಿ, ಆರೋಗ್ಯದ ಸಂಕೇತವಾಗಿ ವಿಕಾರಗೊಳಿಸಿಕೊಳ್ಳಲು ಬುಡಕಟ್ಟು ಜನಾಂಗಗಳಲ್ಲಿ ಬಳಸುತ್ತಾರೆ. ಅಂದಿನ ಕಾಲದಲ್ಲಿ ಹಚ್ಚೆಯನ್ನು ಹಾಕಲು ಬಳಸುತ್ತಿದ್ದ ಬಣ್ಣವನ್ನು ಪರಿಸರದಲ್ಲಿ ಸಿಗುವ ಹೂವು ಎಲೆಗಳಿಂದ ತಯಾರಿಸುತ್ತಿದ್ದರು. ಆದರೆ ಇಂದು ಕೆಮಿಕಲ್‌ ನಿಂದ ತಯಾರಿಸುವ ಟ್ಯಾಟುಗಳನ್ನು ಬಳಸುತ್ತಿದ್ದಾರೆ. ಇದು ಅನೇಕ ರೋಗಗಳಿಗೆ ಕಾರಣವಾಗುತ್ತಿದೆ ಎಂದರು.

ಬಂಜಾರರ ಕಸೂತಿ ಹಾಗೂ ಇತರೆ ಕಲೆಗಳು ವಿಶ್ವದಲ್ಲಿಯೇ ಶ್ರೀಮಂತವಾಗಿದ್ದು, ಇದರಿಂದ ಸಮಾಜದ ಯುವಕರಿಗೆ ತರಬೇತಿಯನ್ನು ನೀಡುವ ಕೆಲಸವನ್ನುಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಕಲಾ ಕಾಲೇಜಿನ 200 ಮಕ್ಕಳಿಗೆ ಇದರಿಂದ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದರು.

ವಿವಿಧ ಕಲೆಗಳನ್ನು ಹಾಗೂ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ಕಲಿಸುವುದರಿಂದ ಸ್ವಯಂಉದ್ಯೋಗ ಸೃಷ್ಟಿ ಸಾಧ್ಯ, ಸರ್ಕಾರ ಇಂದು ಎಲ್ಲರಿಗೂ ಸರಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ, ಸರ್ಕಾರ ಅಕಾಡೆಮಿ ಮೂಲಕ ಇಂತಹ ಉತ್ತಮ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸಾಂಸ್ಕೃತಿಕ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಬಂಜಾರ ಸಮುದಾಯ ಹಚ್ಚೆ ಮತ್ತು ತೊಗಲುಗೊಂಬೆಯಾಟವನ್ನು ನೃತ್ಯ ಹಾಗೂ ವೇಷ ಭೂಷಣವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೆಯ್ದಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ನಳಂದ ನ್ಯಾಷನಲ್‌ ಕಾಲೇಜಿನ ಪ್ರಾಂಶುಪಾಲರಾದ ನಾಗರತ್ನಮ್ಮ, ತೊಗಲುಗೊಂಬೆ ಮತ್ತು ಹಚ್ಚೆ ನಾಡಿನ ಸಂಸ್ಕೃತಿಯನ್ನು ಸಾರುವ ಅಲೆಮಾರಿ ಹಾಗೂ ಬಂಜಾರ ಬುಡಕಟ್ಟುಗಳ ಜನರ ಕಲೆ ಎಂದು ಶ್ಲಾಘಿಸಿದರು. ಸಮೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಬಿ.ಹೆಚ್ ಮಂಜುನಾಥ್, ಮಹಾತೇಶ್‌ಎನ್.ಎಸ್, ಸುಡುಗಾಡು ಸಿದ್ದರು ಸಮುದಾಯದ ಅಧ್ಯಕ್ಷ ಲೋಹಿತಾಕ್ಷ, ಅಲೆಮಾರಿ ಸಮುದಾಯದ ಅಧ್ಯಕ್ಷ ಆದರ್ಶ ಯಲ್ಲಪ್ಪ, ಬಂಜಾರ ಸಂಸ್ಕೃತಿ ಮತ್ತು ಭಾಷಾಅಕಾಡೆಮಿಯ ಸದಸ್ಯರಾದಡಾ. ಉತ್ತಮ, ಕೆ.ಹೆಚ್ ಶ್ರೀಮೊತಿಲಾಲ್ ಚೌಹಾನ್, ಗಿರೀಶ್ ಹಾಗೂ ನಳಂದ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

Leave a Reply