ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ 5 ಕೋಟಿ ಅನುದಾನ ಒದಗಿಸಬೇಕು: ಹಂ.ಪ ನಾಗರಾಜಯ್ಯ

2 years ago

ಬೆಂಗಳೂರು: ಸಾಂಸ್ಕೃತಿಕ ಅಕಾಡೆಮಿಗಳಿಗೆ ಆರ್ಥಿಕ ಬೆಂಬಲ ಇಲ್ಲದಿದ್ದರೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಸರ್ಕಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ 5 ಕೋಟಿಯಾದರೂ ಅನುದಾನ ಒದಗಿಸಬೇಕು ಎಂದು ಸಾಹಿತಿ ಹಂ.ಪ ನಾಗರಾಜಯ್ಯ ತಿಳಿಸಿದರು.

ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಕಳತಾವೊರ್ ಮಳಾವ್-01’ (ಸಜ್ಜನರ ಸಲ್ಲಾಪ-01)ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹಿಂದೆ ಕೆರೆಗಳು ಬತ್ತಿ ಹೋಗಿದ್ದರೂ ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು. ಈಗ ಆರ್ಥಿಕ ಸ್ಥಿತಿ ಬತ್ತಿ ಹೋಗಿದ್ದು, ನದಿಗಳು ತುಂಬಿ ಹರಿಯುತ್ತಿದೆ. ಇದರಿಂದಾಗಿ ಹೆಚ್ಚಿನ ಅನುದಾನ ಅಕಾಡೆಮಿಗಳಿಗೆ ದೊರೆಯುತ್ತಿಲ್ಲ. ವಾರ್ಷಿಕ ರೂ. 30 ಲಕ್ಷ ಅನುದಾನ ನೀಡಿದರೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅರ್ಧದಷ್ಟು ಹಣ ಸಿಬ್ಬಂದಿ ವೆಚ್ಚಕ್ಕೆ ಹೋಗಲಿದೆ. ಹೊಸದಾಗಿ ಕಾರ್ಯಕಾರಿ ಸಮಿತಿ ನೇಮಕಗೊಂಡ ಬಳಿಕ ಎಲ್ಲಾ ಅಕಾಡೆಮಿಗಳಿಗೆ 5 ಕೋಟಿ ಅನುದಾನ ಒದಗಿಸಿದರೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಎಲ್ಲಾ ಅಕಾಡೆಮಿಗಳ ಅಧ್ಯಕ್ಷರನ್ನು ಒಳಗೊಂಡ ನಿಯೋಗವು ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಬಂಜಾರ ಭಾಷಿಕರು ಪ್ರಪಂಚದ ಉದ್ದಗಲಕ್ಕೂ ಬಹುಸಂಖ್ಯೆಯಲ್ಲಿ ಹರಡಿದ್ದಾರೆ. ಅವರು ಪ್ರಾದೇಶಿಕ, ಸಾಂಸ್ಕೃತಿಕ ಲಕ್ಷಣವನ್ನು ಮೈಗೂಡಿಸಿಕೊಂಡಿದ್ದಾರೆ. ಬಂಜಾರರಿಗೆ ಸಂಬಂಧಿಸಿದಂತೆ ವಸ್ತು ಸಂಗ್ರಹಾಲಯ ನಿರ್ಮಿಸಬೇಕಿದೆ. ಬಂಜಾರ ಇತಿಹಾಸ ಓದಿದರೆ ರೋಮಾಂಚನವಾಗುತ್ತದೆ. ಬಂಜಾರ ಜನರು ಪ್ರೀತಿ ಹಂಚುವವರು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಜಾವಾಣಿಯ ಕಾರ್ಯನಿರ್ವಾಹಕ, ಸಂಪಾದಕ ರವೀಂದ್ರ ಭಟ್‌, ಬಂಜಾರರ ನ್ಯಾಯ ಪದ್ದತಿಯನ್ನು ತಿಳಿಸುತ್ತಾ ಈ ಸಮುದಾಯದಲ್ಲಿ ಗುರು-ಹಿರಿಯರಿಗೆ ಹಾಗೂ ಅವರ ನ್ಯಾಯ ಪಂಚಾಯ್ತಿಗೆ ಇದ್ದ ಮನ್ನಣೆಯನ್ನು ತಿಳಿಸಿ ಇಂತಹದ್ದು ಪ್ರಸ್ತುತವಾಗಬೇಕು ಎಂದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್ ಗೋವಿಂದಸ್ವಾಮಿ ಮಾತನಾಡಿ, ಬಂಜಾರಾ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಅಕಾಡೆಮಿಯು ಈಗಾಗಲೇ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿಚಾರ ಸಂಕಿರಣ ಹಾಗೂ ಕಸೂತಿ, ವಿವಿಧ ಕಲಾ ಪ್ರಕಾರಗಳ ಕಾರ್ಯಗಾರಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು ಈ ಕಾರ್ಯವು ನಿರಂತರವಾಗಿ ನಡೆಯುತ್ತದೆ ಎಂದರು.

ಜೊತೆಗೆ ನೃತ್ಯ, ಸಂಗೀತ, ಚಿತ್ರಕಲೆ, ಹಚ್ಚೆ, ತೊಗಲುಗೊಂಬೆಕಲೆಯಂತಹ ಕಲಾ ಪ್ರಕಾರಗಳನ್ನು ಯುವಕರಿಗೆ ಕಲಿಸುವಿಕೆಯ ಕಾರ್ಯಾಗಾರದ ಜೊತೆಗೆ ಬಂಜಾರರ ಕಸೂತಿ, ಬಂಜಾರರ ವಿಶಿಷ್ಟ ವಡವೆ ಮಾಲೆಗಳ ನಿರ್ಮಾಣದ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ರಾಜ್ಯಾದಾದ್ಯಂತ ಒದಗಿಸಲಾಗುವುದು ಎಂದರು.

ಹಾಗೆಯೇ ರಾಜ್ಯದಲ್ಲಿ ಬಂಜಾರರ ಮಾದರಿ ತಾಂಡ & ಬಂಜಾರರ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಲು 10 ಎಕರೆ ಜಾಗದ ಅವಶ್ಯಕತೆ ಇದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಬಿ.ನೀಲಮ್ಮ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಎನ್.ಆರ್ ನಾಯಕ್, ಅಕಾಡೆಮಿಯ ಸದಸ್ಯ ಡಾ.ಉತ್ತವರ್ ಮುಡ್, ಸಮಾಜದ ಮುಖಂಡರು ಹಾಗೂ ಇತರ ಸಹ ಸದಸ್ಯರು ಹಾಜರಿದ್ದರು.

Leave a Reply