ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಅನುಮೋದನೆ: ಎಂ ಬಿ ಪಾಟೀಲ್

12 months ago

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ವಿಜಯಪುರ ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗಿರುವ 14-15 ಗಂಟೆಗಳಿಂದ ಕನಿಷ್ಠ 10 ಗಂಟೆಗಳಿಗೆ ಇಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದರು.

ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಸಂಬಂಧಿಸಿದ ಇಲಾಖೆಗಳು ಮತ್ತು ನೈರುತ್ಯ ರೈಲ್ವೆಯ ಉನ್ನತಾಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ. ಆದರೆ, ಮಮ್ಮಿಗಟ್ಟಿ ಬಳಿ ಮಾರ್ಗ ಬದಲಾವಣೆಗೆ ಒತ್ತಡ ಬರುತ್ತಿದೆ. ಹೀಗಾಗಿ ಭೂಸ್ವಾಧೀನ ತಡವಾಗುತ್ತಿದೆ. ಈ ಕುರಿತು ಸದ್ಯದಲ್ಲೇ ಸ್ಥಳೀಯರೊಂದಿಗೆ ಸಭೆ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಅಡಚಣೆ ನಿವಾರಿಸುವಂತೆ ಸಲಹೆ‌ ನೀಡಿದರು.
ಬಾಗಲಕೋಟೆ-ಕುಡಚಿ ಯೋಜನೆಯಲ್ಲೂ ಖಜ್ಜಿದೋಣಿ-ಲೋಕಾಪುರ ನಡುವೆ ಜಮೀನು ಕಳೆದುಕೊಂಡಿರುವ ರೈತರು ಹೆಚ್ಚಿನ ಪರಿಹಾರ ಕೇಳುತ್ತಿದ್ದು, ಕೆಲಸ ಮಾಡಲು ಬಿಡುತ್ತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಜತೆ ದೂರವಾಣಿ ಮೂಲಕ ಮಾತನಾಡಿ, ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯಾದವಾಡ ಸಮೀಪ ಕೂಡ 7 ಎಕರೆ ಸ್ವಾಧೀನ ಒಂದು ವರ್ಷದಿಂದ ಹಾಗೆಯೇ ಇದೆ. ಈ ಸಂಬಂಧ ಚಿಕ್ಕೋಡಿ ಉಪವಿಭಾಗಾಧಿಕಾರಿ ಜತೆ ಸಚಿವರು ಮಾತನಾಡಿ ಶೀಘ್ರ ಹಸ್ತಾಂತರ ಮಾಡುವಂತೆ ಸಲಹೆ ನೀಡಿದರು.

ಗದಗ- ಕುಡಚಿ ನಡುವಿನ ಮಾರ್ಗಕ್ಕೆ ಅಗತ್ಯವಿರುವ 148 ಎಕರೆ ಜಮೀನನನ್ನು 3 ತಿಂಗಳಲ್ಲಿ ಕೊಡಲಾಗುವುದು. ಇದರ ಜತೆಗೆ ಈ ಯೋಜನೆಗೆ ಇನ್ನೂ 100 ಎಕರೆ ಅಗತ್ಯವಿದೆ. ಈ ಜಮೀನಿಗೆ ಈಗಾಗಲೇ ಪರಿಹಾರ ಕೊಡಲಾಗಿದೆ. ಆದರೂ ಕೆಲವರು ಕೋರ್ಟಿಗೆ ಹೋಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.

ಕುಷ್ಟಗಿ-ಜಿಮಲಾಪುರ ಯೋಜನೆಗೆ ಬೇಕಿರುವ 47 ಎಕರೆಯನ್ನು ಆದಷ್ಟು ಬೇಗ ಒದಗಿಸಲಾಗುವುದು. ಈ ಭಾಗದಲ್ಲಿ ಲಿಂಗನಬಂಡ-ಕುಷ್ಟಗಿ ನಡುವೆ ರೈಲು ಓಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಹುಬ್ಭಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮೊದಲ ಹಂತದ ಅನುಮೋದನೆ ಸಿಕ್ಕಿದ್ದು, ಮತ್ತೊಂದು ಒಪ್ಪಿಗೆ ಇನ್ನೊಂದು ತಿಂಗಳಲ್ಲಿ ಸಿಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಈ ಮಾರ್ಗದಲ್ಲಿ ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಜಂಟಿಯಾಗಿ ಜಾಗ ಸ್ವಾಧೀನ ಮಾಡಿಕೊಂಡು, ಯೋಜನೆ ಜಾರಿ ಮಾಡಿದರೆ ಉಪಯುಕ್ತವೆಂಬ ಚಿಂತನೆ ನಡೆದಿದೆ ಎಂದರು.

ಬೆಂಗಳೂರು- ವಿಜಯಪುರ ನಡುವೆ ಸಂಚರಿಸುವ ಕೆಲವೊಂದಿಷ್ಟು ರೈಲುಗಳನ್ನಾದರೂ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗದ ಮೂಲಕ ಸಂಚರಿಸುವಂತೆ ಮಾಡಿದರೆ ಆ ಭಾಗದ ಜನರಿಗೆ ಹೆಚ್ಚಿನ‌ ಅನುಕೂಲ ಆಗುತ್ತದೆ ಎಂದು ಅಂಕಿ ಸಂಖ್ಯೆ ಸಮೇತ ರೈಲ್ವೆ ಅಧಿಕಾರಿಗಳಿಗೆ ವಿವರಿಸಿದರು.

ಬೆಂಗಳೂರು-ವಿಜಯಪುರ ನಡುವೆ 712 ಕಿ.ಮೀ. (ರೈಲ್ವೆ ದೂರ) ಅಂತರವಿದ್ದು, ಕೆಲವೊಮ್ಮೆ ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದ್ದು, ತ್ರಾಸದಾಯಕವಾಗಿದೆ. ಬೆಂಗಳೂರಿನಿಂದ ವಿಜಯಪುರ, ಬಾಗಲಕೋಟೆ ಕಡೆಗೆ ಹೋಗುವ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ರೈಲು ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಹೋಗಬೇಕಾಗಿವೆ. ಜತೆಗೆ ಗದಗದಲ್ಲಿ ಕೂಡ ಎಂಜಿನ್ ಬದಲಾವಣೆಗೆ ನಿಲ್ಲಬೇಕಾಗಿದ್ದು, ಇದರಿಂದ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ರೈಲುಗಳು ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲೇ (ಹುಬ್ಭಳ್ಳಿ ಬೈಪಾಸ್) ಗದಗದ ಕಡೆಗೆ ತಿರುವು ಪಡೆದುಕೊಂಡು ಸಂಚರಿಸಬೇಕು ಎಂದು ಸಲಹೆ ನೀಡಿದರು

ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ ಬೇಕಾದ ಭೂಸ್ವಾಧೀನ ಬಹುತೇಕ ಮುಗಿದಿದ್ದು, ಇನ್ನು 95 ಎಕರೆ ಜಮೀನು ಅಗತ್ಯವಿದೆ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 37 ಎಕರೆ ಮತ್ತು ತುಮಕೂರು ಜಿಲ್ಲೆಯ ಸರಹದ್ದಿನಲ್ಲಿ 58.3 ಎಕರೆ ಭೂಮಿ ಸ್ವಾಧೀನ ಬಾಕಿ ಇದೆ. ಇದಕ್ಕೆ ಹಣಕಾಸು ಇಲಾಖೆಯ ಮುಂದೆ 45 ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ. ಈ ಪ್ರಕ್ರಿಯೆ 3-4 ತಿಂಗಳಲ್ಲಿ ಮುಗಿಯಬೇಕು ಎಂದರು.

ತುಮಕೂರು-ರಾಯದುರ್ಗ ಯೋಜನೆಗೆ ಭೂಸ್ವಾಧೀನ ಬಹುತೇಕ ಮುಗಿದಿದ್ದು, ಇನ್ನು 17 ಎಕರೆ ಮಾತ್ರ ಬಾಕಿ ಇದೆ. ಇನ್ನೊಂದು ತಿಂಗಳಲ್ಲಿ ಜಮೀನು ಹಸ್ತಾಂತರ ಆಗಬೇಕು ಎಂದರು.

Leave a Reply