ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿ: ಅಪ್ಸರ್ ಕೊಡ್ಲಿಪೇಟೆ

12 months ago

ಚಾಮರಾಜನಗರ: ವಕ್ಫ್ ತಿದ್ದುಪಡಿ ಕಾನೂನು ಹೇಗೆ ಸಂವಿಧಾನ ವಿರೋಧಿಯಾಗಿದೆ ಎಂಬುವುದರ ಕುರಿತು ಅರಿವು ಮೂಡಿಸುವ ಸಲುವಾಗಿ SDPI ಜಿಲ್ಲಾ ಸಮಿತಿ ವತಿಯಿಂದ ಜಾಗೃತಿ ಸಭೆ ಆಯೋಜಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ವಖ್ಫ್  ತಿದ್ದುಪಡಿ ಕಾನೂನು ಸ್ವೀಕಾರ್ಹವಲ್ಲ – ವಖ್ಫ್ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕು. ಈ ಕರಾಳ ಕಾನೂನು ಮುಸ್ಲಿಂ ವಿರೋಧಿ ಮಾತ್ರವಲ್ಲದೇ, ಸಂವಿಧಾನ ವಿರೋಧಿ ಸಹ ಆಗಿದೆ ಎಂದರು.

20 ಕೋಟಿ ಮುಸ್ಲಿಮರ ಹಿತಾಸಕ್ತಿಗೆ ವಿರುದ್ಧವಾಗಿ, ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ, ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಸಂಖ್ಯಾಬಲದ ಆಧಾರದ ಮೇರೆಗೆ ವಖ್ಫ್ ತಿದ್ದುಪಡಿ ಎಂಬ ನೆಪವೊಡ್ಡಿ ಈ ಕರಾಳ ಕಾನೂನನ್ನು ಬಲವಂತವಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದರು.

ಎಸ್‌.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಮ್. ಕೆ. ಫೈಝಿ ರವರ ಬಂಧನ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ನಡೆದ ಆಂದೋಲನವನ್ನು ಹಿಮ್ಮೆಟ್ಟಿಸುವ ಷಡ್ಯಂತ್ರದ ಭಾಗವಾಗಿದೆ. ಬಿಜೆಪಿ ನೇತೃತ್ವದ ಮೋದಿ ಸರಕಾರ ED, NIA  ಮತ್ತು ಇನ್ನಿತರ ತನಿಖಾ ಏಜನ್ಸಿಗಳ ಮೂಲಕ ನಮ್ಮನ್ನು ಈ ಉದ್ದೇಶಿತ ಹೋರಾಟದಿಂದ ಒಂದು ಇಂಚನ್ನು ಸಹ ಹಿಂದೆ ಸರಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ ಎಂದರು.

ಈ ದಬ್ಬಾಳಿಕೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಸಮುದಾಯದ ಎಲ್ಲಾ ಸಂಘಟನೆಗಳು, ಸಂಸ್ಥೆಗಳು, ಸಮಾನ ಮನಸ್ಕರ  ವಿವಿಧ ರಾಜಕೀಯ ಪಕ್ಷಗಳ ನಾಯಕರು ಸೇರಿ ಒಗಟ್ಟಿನೊಂದಿಗೆ ಈ ಹೋರಾಟವನ್ನು ಮುನ್ನಡೆಸ ಬೇಕಿದೆ ಎಂದು ಕರೆ ನೀಡಿದರು.

ಈ ಕಾಯ್ದೆ ವಿರುದ್ಧ ಎಸ್‌ಡಿಪಿಐ ಸುಪ್ರೀಂ ಕೋರ್ಟಿಗೆ ತನ್ನ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಈ ಮಸೂದೆ ಭಾರತೀಯ ಸಂವಿಧಾನದ ಮೂಲ ಸಿದ್ಧಾಂತಗಳ ಮೇಲೆ ನೇರ ದಾಳಿ. ವಿಶೇಷವಾಗಿ ಬಿ.ಆರ್. ಅಂಬೇಡ್ಕರ್ ಕನಸು ಕಂಡ ಸಮಾನತೆ, ಫೆಡರಲಿಸಂ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ವಿರುದ್ಧದ ದಾಳಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕಾಯ್ದೆ ಹಲವು ಪ್ರಮುಖ ಸಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಧಾರ್ಮಿಕ ಹಾಗೂ ಅಲ್ಪಸಂಖ್ಯಾತ ಸಂಸ್ಥೆಗಳ ಸ್ವಾಯತ್ತತೆಯ ಮೇಲೆ ಭಯಾನಕ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಈ ಕರಾಳ ಮಸೂದೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಒದಗಿಸಲಾಗಿರುವ ಹಕ್ಕುಗಳನ್ನು ಕಸಿದು ಕೊಳ್ಳುವ ಕೆಲವು ನಿರ್ದಿಷ್ಟ ವಿಧಿಗಳ ಕುರಿತು ವಿಷಯ ಪ್ರಸ್ತಾಪಿಸಿದರು.

ಸೌಹಾರ್ದತೆ ಮತ್ತು ಪ್ರಜಾಸತ್ತೆಯ ಪರ ನಿಂತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಪಕ್ಷ ಈ ಮಸೂದೆಯನ್ನು ವಿರೋಧಿಸಲೇ ಬೇಕು ಎಂದು ಹೇಳಿದರು.

ಎಲ್ಲಿಯವರೆಗೂ ವಖ್ಫ್ ತಿದ್ದುಪಡಿ ಕರಾಳ ಕಾನೂನು ಸಂಪೂರ್ಣವಾಗಿ ಹಿಂಪಡೆಯುವುದಿಲ್ಲ ಅಲ್ಲಿಯವರೆಗೂ ವಿವಿಧ ರಾಜಕೀಯ ನಾಯಕರು,  ಸಂಘ ಸಂಸ್ಥೆಗಳನ್ನು ಸೇರಿಸಿ ಕೊಂಡು SDPI ನಿರಂತರವಾಗಿ ಹೋರಾಟ ಮಾಡಲಾಗುವುದು. ಈ ಒಂದು ಹೋರಾಟಕ್ಕೆ ಸಮಸ್ತ ಪ್ರಜ್ಞವಂತ ನಾಗರೀಕರು ಸಹಕರಿಸ ಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಸೈಯದ್ ಅಕ್ರಮ್, ಚಾಮರಾಜನಗರ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯರಾದ ಖಲೀಲ್ ಉಲ್ಲಾ, ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರಾದ ಸಿ. ಕೆ. ನಯಾಜ್ ನಗರಸಭಾ ಸದಸ್ಯರಾದ ಅಮೀಕ್ ಅಪ್ಸರ್, ನಗರ ಘಟಕದ ಅಧ್ಯಕ್ಷ ಮಜರ್ ಖಾನ್ ಮೊದಲಾದವರು ಹಾಜರಿದ್ದರು.

Leave a Reply