ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣ ಲೋಕಾರ್ಪಣೆ

2 hours ago

ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರರಂಗದ ಧ್ರುವತಾರೆ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣವನ್ನು ಭವ್ಯವಾಗಿ ಲೋಕಾರ್ಪಣೆಗೊಳಿಸಲಾಯಿತು.

ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಎಲ್.ಎಸ್. ತೇಜಸ್ವಿ ಸೂರ್ಯ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅ.ನ.ಕೃ ಅವರ ಪುತ್ರ ಗೌತಮ್, ಬಿಜೆಪಿ ನಾಯಕರಾದ ಎನ್.ಆರ್. ರಮೇಶ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಪೂರ್ಣಿಮಾ ರಮೇಶ್ ಅವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಈ ಸುಸಜ್ಜಿತ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.

ಬಡವರು ಸಾಲ ಮಾಡಿ ಮದುವೆ ಮಾಡುವ ದಿನಗಳು ದೂರಾಗಲಿ: ಆರ್. ಅಶೋಕ್

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಬಡವರು ಸಾಲ ಮಾಡಿ ಮದುವೆ ಸಮಾರಂಭಗಳನ್ನು ಮಾಡಬಾರದು ಎಂಬ ಉದಾತ್ತ ಉದ್ದೇಶದಿಂದ ಈ ಹಳೆಯ ಪಾಲಿಕೆ ಕಟ್ಟಡವನ್ನು ತೆರವುಗೊಳಿಸಿ, ಇಂದು ಭವ್ಯವಾದ ಹಾಗೂ ಸುಸಜ್ಜಿತವಾದ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಅಂತರ್ಜಲ ಹೆಚ್ಚಿಸಲು ಮತ್ತು ಪರಿಸರ ರಕ್ಷಣೆಗಾಗಿ ಈಗಾಗಲೇ ಯಡಿಯೂರು ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ನಗರದ ಸಾರ್ವಜನಿಕ ಜವಾಬ್ದಾರಿಯ ಕುರಿತು ಮಾತನಾಡುತ್ತಾ, ಬೆಂಗಳೂರು ಇಂದು ಸಾಕಷ್ಟು ಬದಲಾಗಿದೆ. ರಸ್ತೆ ಮತ್ತು ಕಸದ ಸಮಸ್ಯೆಗೆ ಕೇವಲ ಸರ್ಕಾರವನ್ನೇ ಹೊಣೆ ಮಾಡಲಾಗದು. ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು.

ಬಿಬಿಎಂಪಿ ಚುನಾವಣೆ ತಕ್ಷಣ ನಡೆಸಿ: ತೇಜಸ್ವಿ ಸೂರ್ಯ ಆಗ್ರಹ
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದ ಏಕೀಕರಣದಲ್ಲಿ ಅ.ನ.ಕೃಷ್ಣರಾಯರ ಪಾತ್ರ ಅನನ್ಯವಾದದ್ದು. ಹಾಗೆಯೇ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಪ್ರತಿ ಮನೆಯಲ್ಲೂ ಸ್ಮರಿಸಲಾಗುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಹವಾನಿಯಂತ್ರಿತ ಕಲ್ಯಾಣ ಮಂಟಪ ಹಾಗೂ ಶಾಲಾ ಕಾರ್ಯಕ್ರಮ, ಚಿತ್ರರಂಗದ ಆಡಿಯೋ-ವಿಡಿಯೋ ಬಿಡುಗಡೆಗೆ ಈ ಸಭಾಂಗಣ ಉಪಯುಕ್ತವಾಗಲಿದೆ ಎಂದರು.

ಇದೇ ವೇಳೆ ಬಿಬಿಎಂಪಿ ಚುನಾವಣೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ 6 ವರ್ಷಗಳಿಂದ ಪಾಲಿಕೆ ಚುನಾವಣೆ ನಡೆದಿಲ್ಲ, ಇದು ಬೆಂಗಳೂರು ಹಾಳಾಗಲು ಪ್ರಮುಖ ಕಾರಣ. ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಾಡಿಗೆ ವಿವರ ಮತ್ತು ವಾರ್ಡ್‌ನ ವಿಶೇಷತೆಗಳು: ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್. ರಮೇಶ್ ಅವರು ಈ ಹೈಟೆಕ್ ಸಭಾಂಗಣಗಳ ಬಾಡಿಗೆ ದರ ಹಾಗೂ ಯಡಿಯೂರು ವಾರ್ಡ್‌ನ ಮಾದರಿ ಅಭಿವೃದ್ಧಿಯ ಚಿತ್ರಣವನ್ನು ಹೀಗೆ ಹಂಚಿಕೊಂಡರು:
ಸಭಾಂಗಣದ ವಿವರ
ನಿಗದಿಪಡಿಸಲಾದ ಬಾಡಿಗೆ ದರ
ವಿಶೇಷ ಸೌಲಭ್ಯಗಳು
ಅ.ನ.ಕೃ ಕನ್ವೆನ್ಷನ್ ಸೆಂಟರ್ (ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ)
₹ 75,000
ಸಂಪೂರ್ಣ ಹವಾನಿಯಂತ್ರಿತ (AC), ಸುಸಜ್ಜಿತ ಹೈಟೆಕ್ ವ್ಯವಸ್ಥೆ
ಡಾ. ಪುನೀತ್ ರಾಜ್‌ಕುಮಾರ್ ಆಡಿಟೋರಿಯಂ
₹ 25,000
ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತ

ಕಳೆದ 16 ವರ್ಷಗಳಿಂದ ಯಡಿಯೂರು ವಾರ್ಡ್ ಏಷ್ಯಾದಲ್ಲೇ ಅತ್ಯಂತ ಸುಂದರ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿ ಜನನದಿಂದ ಅಂತ್ಯಸಂಸ್ಕಾರದವರೆಗೆ ಬೇಕಾದ ಮಕ್ಕಳ ಆಸ್ಪತ್ರೆ, ಹೈಟೆಕ್ ಶಿಕ್ಷಣ, ಕ್ರೀಡಾಂಗಣ, ವೈದಿಕ ಭವನ ಹಾಗೂ ಹಸಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಾದರಿ ವಾರ್ಡ್ ಮಾಡಲಾಗಿದೆ ಎಂದು ಎನ್.ಆರ್. ರಮೇಶ್ ಹೇಳಿದರು.

ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ: ಅಶ್ವಿನಿ ಪುನೀತ್ ರಾಜ್‌ಕುಮಾರ್

ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಜನಸಾಮಾನ್ಯರ ಅನುಕೂಲಕ್ಕಾಗಿ ಇಷ್ಟು ಸುಂದರ ಹಾಗೂ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಿಸಿ, ಅತ್ಯಂತ ಕಡಿಮೆ ಬಾಡಿಗೆಗೆ ನೀಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಸುಂದರ ಕಟ್ಟಡದ ನಿರ್ಮಾಣಕ್ಕೆ ಕಾರಣಕರ್ತರಾದ ಎನ್.ಆರ್. ರಮೇಶ್ ಹಾಗೂ ಬಿಬಿಎಂಪಿಗೆ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಹೆಚ್. ಬಸವರಾಜ್, ಸರಳಾ ಮಹೇಶ್, ಗೋವಿಂದರಾಜು ಹಾಗೂ ಸ್ಥಳೀಯ ಮುಖಂಡರು ಮತ್ತು ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply