ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ

6 days ago

3 ವರ್ಷದ ಅಧ್ಯಕ್ಷ ಅವಧಿ 6 ವರ್ಷವಾದ ಕತೆ!

ಕನ್ನಡ ಸಾಹಿತ್ಯ ಪರಿಷತ್ತು ಇಂದಿನ ಈ ದುಸ್ಥಿತಿಗೆ ಬರಲು ಹಿಂದಿನ ಅಧ್ಯಕ್ಷ  ಮಾನ್ಯ ಮನು ಬಳಿಗಾರ್ ಕಾರಣ. ಆತನ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಅದರ ಪಾಡಿಗೆ ಅದು ನಡಕೊಂಡು ಹೋಗ್ತಿತ್ತು. ಈಯಪ್ಪ ಎಲ್ಲೋ ದ.ಕ. ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ಹಿಗ್ಗಿಸಿಕೊಂಡ! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಂಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ಬರೋಬ್ಬರಿ 6 ವರ್ಷ ಪೂರೈಸಿದ! ಅಲ್ಲಿಗೆ ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು.

ಆದರೆ, ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ! ಎಂಬ ಭಾವನೆಯಿಂದ ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರ ನಿಂತರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ಹೇಳಿ ಜಾಗ ಖಾಲಿ ಮಾಡಿದರು.

ನಾಲ್ವಡಿ ಫೋಟೋಗೆ ಕತ್ತರಿ!: ಈ RSS ವಟು ಜೋಶಿ ಬರಿ ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಬಂದವನು ಏನೆಲ್ಲಾ ಸರ್ವಾಧಿಕಾರದ ಆಟ ಆಡಿದ ಅಂತ ನೋಡಿದೆವು…! ಈತನಿಗೆ ಸಾಹಿತ್ಯದ ಗಂಧಗಾಳಿ ಇಲ್ಲದೆ ಯಾವ ಸಾಹಿತಿಗೂ ಗೌರವ ಕೊಡದೆ, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಏನೆಲ್ಲ ಭ್ರಷ್ಟಾಚಾರ ಮಾಡಿದ, ತನ್ನಿಷ್ಟದಂತೆ ಏನೇನು ಬೈಲಾ ತಿದ್ದುಪಡಿ ಮಾಡಿದ? ಸಚಿವ ದರ್ಜೆ ಸ್ಥಾನಮಾನ ಅಂತ ಎಷ್ಟೊಂದು ಮೆರೆದ? ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಹೋರಾಟಗಾರರಾದ ನಮಗೆಲ್ಲ ಎಷ್ಟೊಂದು ಲಾಯರ್ ನೋಟೀಸು ನೀಡಿದ? ಕೆಲವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ. ಇದು ಅವನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು.

ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿಯೇ ಮಾಡಿದ್ದು ಎಷ್ಟು ನ್ಯಾಯ?  ಕೇಂದ್ರ ಕಸಾಪದ ಕಾಮಗಾರಿಯಲ್ಲಿ ಎಷ್ಟು ಕೋಟಿ ತಿಂದ ಅನ್ನೋದು ಕಣ್ಣ ಎದುರೆ ಇದೆ. ಕಸಾಪದ ಪುಟ್ಟ ಕಟ್ಟಡಕ್ಕೆ 56 CC ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದ. ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಹಂಪೆಯನ್ನಾಗಿ ಮಾಡಿದ್ದ. ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ ಗಣಪತಿ ವಿಗ್ರಹ ಬಿಟ್ಟರೆ ಕಸಾಪ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ!! ಇದೆಲ್ಲ ಗಮನಿಸಿ, ಆಡಳಿತಾಧಿಕಾರಿ ಶ್ರೀ ದಯಾನಂದ ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮತ್ತಿತರ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಅವರ ಫೋಟೋ ವ್ಯವಸ್ಥೆ ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ ಕಮಾನನ್ನು ಜೋಶಿ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ ನನ್ನ ಧನ್ಯವಾದ.

ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ” ; ಇದೇ ಈಗ ಅವನ ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಅವನ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಆಗಲೆ ನಮ್ಮಂಥ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ.

ಕಸಾಪದ ಆಡಳಿತ ಚುಕ್ಕಾಣಿ, ಪರಂಪರೆ, ಇತಿಹಾಸ ಇಬ್ಬರು “ಉಢಾಳರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು 3 ವರ್ಷಕ್ಕೆ ಬೈಲ ತಿದ್ದುಪಡಿ ತರಲಿ. ಅವರೂ ಸರ್ವಾಧಿಕಾರಿ ಆಗೋದು ಬೇಡ. ಜನ ಎಚ್ಚೆತ್ತುಕೊಂಡಿದ್ದಾರೆ. ಸಂಘಟನೆ ಬಲವಾಗುತ್ತಿದೆ. ಈಕಡೆ ಗಮನ ಅಗತ್ಯ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸನ್ನು ನನಸಾಗಿಸುತ್ತ ಕನ್ನಡಪರ ನಿಲುವು ತೆಗೆದುಕೊಳ್ಳುವ ಅಧ್ಯಕ್ಷರಿಗೆ ಕಸಾಪ ಎದುರು ನೋಡುತ್ತಿದೆ. ಬರುವ ಡಿಶಂಬರ್ (6 ತಿಂಗಳು ಮಾತ್ರ) ಚುನಾವಣೆ ಆಗಲು ಈಗಿರುವ ಆಡಳಿತಾಧಿಕಾರಿಗಳು ಕಾರ್ಯೋನ್ಮಖರಾಗಬೇಕು. ಸಾಹಿತ್ಯಮುಖಿಯಾಗಿ, ಕನ್ನಡಪರ, ಜನಪರ, ಪ್ರಾಮಾಣಿಕ ಸೇವೆ ಮಾಡಲು ಮುಂದಾಗುವವರಿಗೆ ನನ್ನ ಬೆಂಬಲ.

– ಆರ್ ಜಿ ಹಳ್ಳಿ ನಾಗರಾಜ, ಕಸಾಪ ಆಜೀವ ಸದಸ್ಯ ಹಾಗೂ ಪತ್ರಕರ್ತ

One Response

Leave a Reply