ಜಯನಗರದಲ್ಲಿ 3,000 ಮಹಿಳೆಯರಿಂದ ಭವ್ಯ ಶ್ರೀ ಲಲಿತಾ ಸಹಸ್ರನಾಮ ಪೂಜೆ!
ಬೆಂಗಳೂರು: ಜಾತಿ, ಮತ, ಧರ್ಮದ ಭೇದವಿಲ್ಲ, ದೇವರ ಮುಂದೆ ಎಲ್ಲರೂ ಸಮಾನರು ಎಂದು ಮಂತ್ರಾಲಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಸಂದೇಶ ನೀಡಿದ್ದಾರೆ.
- ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲ!!!
- ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ
- ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್ಕುಮಾರ್ ಸಭಾಂಗಣ ಲೋಕಾರ್ಪಣೆ
- ಬಿಜೆಪಿಯವರು ಧರ್ಮಸ್ಥಳವನ್ನು ತಮ್ಮ ರಾಜಕಾರಣಕ್ಕೆ ಬಳಸಬಾರದು
- ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ ಜವಾಬ್ದಾರಿ: ಬಿ ಕೆ ಹರಿಪ್ರಸಾದ್
ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ 4ನೇ ವರ್ಷದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಮತ್ತು ಮಂತ್ರ ಪಠಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಈ ಮಹಾ ಪೂಜೆಯಲ್ಲಿ ಸುಮಾರು 3,000ಕ್ಕೂ ಹೆಚ್ಚು ಮಹಿಳೆಯರು ಏಕಕಾಲದಲ್ಲಿ ಮಂತ್ರ ಪಠಣೆ ಮಾಡಿದ್ದು ವಿಶೇಷವಾಗಿತ್ತು.
ಭಕ್ತಿ ಸಾಗರದಲ್ಲಿ ತೇಲಿದ ಉದ್ಯಾನನಗರಿ: ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು, ಉದ್ಯಾನನಗರಿ ಬೆಂಗಳೂರಿನಲ್ಲಿ ರಕ್ಷಾ ಫೌಂಡೇಷನ್ ಕಳೆದ ನಾಲ್ಕು ವರ್ಷಗಳಿಂದ ಲಲಿತಾ ಸಹಸ್ರನಾಮ ಪೂಜೆಯನ್ನು ಹಾಗೂ 14 ವರ್ಷಗಳಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಸತ್ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಪೂಜೆಯಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಹಾಗೂ ಪೌರಕಾರ್ಮಿಕರು ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಪಾಲ್ಗೊಂಡಿರುವುದು ಸನಾತನ ಹಿಂದೂ ಧರ್ಮದ ವೈಶಿಷ್ಟ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಲೋಕಕಂಟಕರ ನಾಶಕ್ಕಾಗಿ ಅವತರಿಸಿದ ಶ್ರೀ ಲಲಿತಾ ದೇವಿಯನ್ನು ಪ್ರತಿನಿತ್ಯ ಸ್ಮರಿಸುವುದರಿಂದ ಕಷ್ಟಗಳು ದೂರವಾಗಲಿವೆ ಎಂದರು.
ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಅನನ್ಯ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಲಲಿತಾಂಬೆಯ ಆರಾಧನೆ ಹಾಗೂ ಸ್ವಾಮೀಜಿಯವರ ಮಾರ್ಗದರ್ಶನ ಸಮಾಜಕ್ಕೆ ಸದಾ ಸಿಗಲಿ” ಎಂದು ಹಾರೈಸಿದರು.
ಶಾಸಕ ಸಿ. ಕೆ. ರಾಮಮೂರ್ತಿ ಮಾತನಾಡಿ, ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರಿಂದ ಸಕಲ ಸಂಪತ್ತು, ಮಕ್ಕಳಿಗೆ ಜ್ಞಾನವೃದ್ಧಿ ಹಾಗೂ ಗೃಹದೋಷ ನಿವಾರಣೆಯಾಗುತ್ತದೆ ಎಂದು ಪುರಾಣಗಳಲ್ಲೇ ಹೇಳಲಾಗಿದೆ. ‘ನಾನು’ ಎಂಬ ಅಹಂಕಾರ ಬಿಟ್ಟು, ‘ನಾವೆಲ್ಲರೂ’ ಒಂದೇ ಎಂದು ಕೂಡಿ ಬಾಳುವುದೇ ನಿಜವಾದ ಜೀವನ. ಈ ಭವ್ಯ ಕಾರ್ಯಕ್ರಮದಿಂದ ಜಯನಗರ ಕ್ಷೇತ್ರ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಆಶಿಸಿದರು.
ಈ ಧಾರ್ಮಿಕ ಸಮಾರಂಭದಲ್ಲಿ ಆರ್.ಎಸ್.ಎಸ್. ಭಗಿನಿ ಮತ್ತು ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಪ್ರಸಿದ್ಧ ಚಲನಚಿತ್ರ ನಟಿ ಪ್ರಣೀತಾ ಸುಭಾಷ್, ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿ ಉಪಸ್ಥಿತರಿದ್ದರು.
ಅಲ್ಲದೆ, ಮಾಜಿ ಪಾಲಿಕೆ ಸದಸ್ಯರುಗಳಾದ ಬಿ. ಸೋಮಶೇಖರ್, ಮಾಲತಿ ಸೋಮಶೇಖರ್, ಚಂದ್ರಶೇಖರ್ ರಾಜು, ಗೋವಿಂದನಾಯ್ಡು, ಜೆಲ್ಲಿ ರಮೇಶ್, ಧನರಾಜ್, ದೀಪಿಕಾ ಮಂಜುನಾಥ್ ರೆಡ್ಡಿ ಸೇರಿದಂತೆ ಜಯನಗರ ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ಪ್ರಮುಖರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.









