ಕನ್ನಡ ಚಿತ್ರರಂಗದ ಧ್ರುವತಾರೆಯಂತಿದ್ದ ಪುನೀತ್ ರಾಜಕುಮಾರ್ ಅಗಲಿಕೆ ನಾಡಿಗೆ ಎರಗಿದ ಅನಿರೀಕ್ಷಿತ ಆಘಾತ. ಇದು ಸೈರಿಸಿಕೊಳ್ಳಲಾಗದ ದುಃಖ, ವೇದನೆ, ತಳಮಳ. ಇಷ್ಟು ಚಿಕ್ಕ ವಯಸ್ಸಿಗೆ ಅಪ್ಪು ಅವರನ್ನು ಸಾವು ಅಪ್ಪಿಕೊಂಡಿದೆಯೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಕನ್ನಡ ಚಿತ್ರರಂಗ ನಿಜವಾದ ಅರ್ಥದಲ್ಲಿ ಬಡವಾಗಿದೆ, ಪುನೀತ್ ಅವರ ಅಗಲಿಕೆ ದೊಡ್ಡ ಶೂನ್ಯವನ್ನು ನಿರ್ಮಿಸಿದೆ.
ಗರ್ವವಿಲ್ಲದ, ಸಹಜವಾಗಿ ಎಲ್ಲರೊಂದಿಗೆ ಕಲೆತು ಬೆರೆಯುವ ಪುನೀತ್ ರಾಜಕುಮಾರ್, ಎಷ್ಟೇ ಖ್ಯಾತಿ ದೊರೆತರೂ ನಿಂತ ನೆಲವನ್ನು ಮರೆತರವರಲ್ಲ. ಯಾವುದೇ ರೀತಿಯ ವಿವಾದಗಳಿಗೆ ಗುರಿಯಾದವರಲ್ಲ. ಅಂತರಂಗ, ಬಹಿರಂಗಗಳೆರಡನ್ನೂ ಶುದ್ಧವಾಗಿ, ಪಾರದರ್ಶಕವಾಗಿ ಇಟ್ಟುಕೊಂಡವರು. ಇಂಥ ಜೀವಗಳು ಅಪರೂಪ.
ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ಹಾದಿಯನ್ನೇ ಅನುಸರಿಸಿದ ಪುನೀತ್ ರಾಜಕುಮಾರ್ ತಂದೆಯ ಹಾಗೆಯೇ ಸದಭಿರುಚಿಯ, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳನ್ನು ಮಾಡಿದರು. ಅವರಿಲ್ಲದೆ ಕನ್ನಡ ಚಿತ್ರರಂಗದ ಒಂದು ದೊಡ್ಡ ಆಧಾರಸ್ಥಂಭವೇ ಕುಸಿದಂತಾಗಿದೆ. ಈ ಸಾವು ನ್ಯಾಯವೇ?
ಇಡೀ ಕರುನಾಡೇ ದುಃಖದಲ್ಲಿ ಮುಳುಗಿದೆ. ಈ ಸಂಕಟ ಅಷ್ಟು ಸುಲಭಕ್ಕೆ ಕರಗುವುದಿಲ್ಲ. ಡಾ.ರಾಜಕುಮಾರ್ ಅವರ ಕುಟುಂಬಕ್ಕೆ , ಕನ್ನಡ ಚಿತ್ರರಂಗಕ್ಕೆ, ಕನ್ನಡಿಗರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ. ಅಗಲಿದೆ ಜೀವಕ್ಕೆ ಅನಂತಗಳು. ನೀವು ಸದಾ ನಮ್ಮ ಸ್ಮರಣೆಯಲ್ಲಿ ಇರುತ್ತೀರಿ.
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ




