ಜಾತಿ ನಿಂದನೆ ಆರೋಪ ಹಾಗೂ ವಕ್ಫ್ ಆಸ್ತಿ ಒತ್ತುವರಿ: ಸದನದಲ್ಲಿ ವಾಗ್ವಾದ

1 year ago

ಬೆಳಗಾವಿ: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಜಾತಿ ನಿಂದನೆ ಆರೋಪ ಪ್ರಕರಣ ಹಾಗೂ ವಕ್ಫ್ ಆಸ್ತಿ ಒತ್ತುವರಿ ತೆರವು ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ, ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಆಡಳಿತ ಪಕ್ಷದ ಶಾಸಕರು ದುರುದ್ದೇಶಪೂರ್ವಕವಾಗಿ ಗದ್ದಲದ ಮೂಲಕ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ಕಲಾಪ ಮುಗಿದ ನಂತರ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್, ವಕ್ಫ್ ಕುರಿತು ವಿಷಯ ಪ್ರಸ್ತಾಪಿಸಲು ಮುಂದಾದರು. ಈ ವೇಳೆ ಎದ್ದು ನಿಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ, ರಾಜ್ಯದಲ್ಲಿ ಆಗಿರುವ ಮಳೆ ಹಾನಿ ಕುರಿತಂತೆ ಹೇಳಿಕೆ ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ವಿಪಕ್ಷ ನಾಯಕರು ಸಮ್ಮತಿಸಿದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಖಾದರ್ ಅವರು ಹೇಳಿಕೆ ನೀಡುವಂತೆ ಸಚಿವರಿಗೆ ಸೂಚಿಸಿದರು. ಈ ವೇಳೆ ಎದ್ದುನಿಂತ ಆಡಳಿತ ಪಕ್ಷದ ನರೇಂದ್ರಸ್ವಾಮಿ, ನಯನಾ ಮೋಟಮ್ಮ , ಪ್ರಸಾದ್ ಅಬ್ಬಯ್ಯ, ಶರತ್ ಬಚ್ಚೇಗೌಡ ಅವರು ನಾವು ನಿಲುವಳಿ ಸೂಚನೆಗೆ ನೋಟಿಸ್ ನೀಡಿದ್ದೇವೆ. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಈ ಸದನದ ಸದಸ್ಯರೊಬ್ಬರು ಜಾತಿ ನಿಂದನೆ ಮಾಡಿದ್ದಾರೆ. ಇದೊಂದು ಸಂವಿಧಾನ ವಿರೋಧಿ ನಡವಳಿಕೆಯಾಗಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಏರಿದ ದನಿಯಲ್ಲಿ ಆಗ್ರಹಿಸಿದರು.

ಈ ಸದನದ ಸದಸ್ಯರೊಬ್ಬರು ಜಾತಿನಿಂದನೆ ಮಾಡಿರುವುದು ಎಫ್‌ಎಸ್‌‍ಎಲ್‌ ವರದಿಯಲ್ಲಿ ಸಾಬೀತಾಗಿದೆ ಈ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

ಇದಕ್ಕೆ ಒಪ್ಪದ ಪ್ರಭಾಧ್ಯಕ್ಷ ಯು ಟಿ ಖಾದರ್, ಈಗಾಗಲೇ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡ ಅವರಿಗೆ ಹೇಳಿಕೆ ನೀಡಲು ಅನುಮತಿ ನೀಡಿದ್ದೇನೆ. ಅದಕ್ಕೆ ಅವಕಾಶ ಮಾಡಿಕೊಡಿ ಎಂದರು. ಆದರೆ ಇದಕ್ಕೆ ಒಪ್ಪದ ಆಡಳಿತ ಪಕ್ಷದ ಶಾಸಕರು ನಿಲುವಳಿ ಸೂಚನೆ ಅಡಿಯಲ್ಲಿ ನಮಗೆ ವಿಷಯ ಪ್ರಸ್ತಾಪಿಸಲು ಅನುಮತಿ ನೀಡಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಅವಕಾಶ ನೀಡಲು ನಿರಾಕರಿಸಿದ ಸಭಾಧ್ಯಕ್ಷರು, ಆಡಳಿತ ಪಕ್ಷದ ಶಾಸಕರೇ ಈ ರೀತಿ ವರ್ತಿಸುವುದು ಸರಿಯಲ್ಲ. ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಇದರಿಂದ ಕೆರಳಿದ ಕಾಂಗ್ರೆಸ್ಸಿನ ನರೇಂದ್ರಸ್ವಾಮಿ, ಇಲ್ಲಿ ಮಾಜಿ ಮಂತ್ರಿ ಹಾಗೂ ಈ ಸದನದ ಸದಸ್ಯರೊಬ್ಬರಿಂದ ಜಾತಿ ನಿಂದನೆಯಾಗಿದೆ. ಇಂತಹ ಪ್ರಕರಣಗಳಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಇಲ್ಲಿ ಸುಮ್ಮನೆ ಕೂರಬೇಕೆ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಇದರಿಂದ ಅಸಮಾಧಾನಗೊಂಡ ವಿಪಕ್ಷ ನಾಯಕ ಆರ್‌.ಅಶೋಕ್‌, ಈ ಸರ್ಕಾರಕ್ಕೆ ಸರಿಯಾಗಿ ಸದನ ನಡೆಸಲು ಬರುವುದಿಲ್ಲ. ವಿರೋಧ ಪಕ್ಷವಾಗಿ ನಾವು ಸಹಕಾರ ಕೊಡುತ್ತೇವೆ ಎಂದರೂ ಆಡಳಿತ ಪಕ್ಷದ ಶಾಸಕರೇ ಅತಿರೇಕದ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ಮಾತಿನ ಚಕಮಕಿ, ಗದ್ದಲ ಹೆಚ್ಚಾಯಿತು. ಆಡಳಿತ ಪಕ್ಷದ ಶಾಸಕರ ನಡವಳಿಕೆ ವಿರೋಧಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು. ಜೆಡಿಎಸ್‌‍ ಶಾಸಕರು ಅವರನ್ನು ಅನುಸರಿಸಿದರು. ಬಿಜೆಪಿಯ ಎಸ್‌‍.ಟಿ.ಸೋಮಶೇಖರ್‌ ಮಾತ್ರ ಸಭಾತ್ಯಾಗ ಮಾಡದೆ ಸದನದಲ್ಲಿ ಕುಳಿತಿದ್ದರು. ಶಿವರಾಮ್‌ ಹೆಬ್ಬಾರ್‌ ಕೂಡ ಅವರ ಬಳಿ ಬಂದು ಕುಳಿತುಕೊಂಡು ಬಿಜೆಪಿ ನಡೆಯಿಂದ ಅಂತರ ಕಾಯ್ದುಕೊಂಡರು.

Leave a Reply