ಸದನದಲ್ಲಿ ಕಾವೇರಿಸಿದ ಅನ್ವರ್ ಮಾಣಿಪ್ಪಾಡಿ – ವಕ್ಫ್ ಗದ್ದಲ

1 year ago

ಬೆಳಗಾವಿ: ರಾಜ್ಯದಲ್ಲಿ ನಡೆದಿರುವ ವಕ್ಫ್ ಅತಿಕ್ರಮಣ ಕುರಿತು ತನಿಖೆ ನಡೆಸಲು ನೇಮಿಸಿದ್ದ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಣದ ಆಮಿಷ ಒಡ್ಡಿದ್ದರು ಎಂಬ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕಾವೇರಿದ ಚರ್ಚೆಗೆ ಗ್ರಾಸವಾಯಿತು. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ, ವಕ್ಫ್ ಆಸ್ತಿ ತೆರವು ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್ ಅಶೋಕ್ ಈ ಬಗ್ಗೆ ಚರ್ಚೆ ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಎದ್ದು ನಿಂತ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ನಾನು ವಿಜಯೇಂದ್ರ ವಿರುದ್ಧ ಆರೋಪ ಮಾಡಿಲ್ಲ. ಪತ್ರಿಕಾ ವರದಿಯನ್ನು ಉಲ್ಲೇಖಿಸಿದ್ದೇನೆ ಅಷ್ಟೇ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಆಗ ವಿಪಕ್ಷದ ಸದಸ್ಯರೆಲ್ಲಾ ಒಮ್ಮೆಗೆ ಎದ್ದುನಿಂತು ಪತ್ರಿಕಾ ವರದಿಯ ಮೇಲೆ ನೋಟಿಸ್ ನೀಡದೆ ಮಾತನಾಡುವುದು ಎಷ್ಟು ಸರಿ? ನೀವು ಮಾಡಿರುವ ಆರೋಪ ಸರಿಯಲ್ಲ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಮುಗಿಬಿದ್ದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ವಕ್ಫ್ ಗೆ ಸಂಬಂಧಿಸಿದಂತೆ ನಡೆದ ಚರ್ಚೆ ಸಂದರ್ಭದಲ್ಲಿ ಅವರು ಹೇಳಿದ್ದಾರೆ ಎಂದು ವರದಿ ಮಂಡನೆ, ವಿತ್ತೀಯ ಕಾರ್ಯಕಲಾಪಗಳಿಗೆ ಅವಕಾಶ ಕಲ್ಪಿಸಿದರು. ಅನಂತರ ಸ್ಪಷ್ಟೀಕರಣ ನೀಡಲು ವಿಜಯೇಂದ್ರ ಅವರಿಗೆ ಅವಕಾಶ ಮಾಡಿಕೊಟ್ಟರು. ವಿಜಯೇಂದ್ರ ಮಾತನಾಡಿ, ಮುಡಾ ಹಗರಣ ಎನ್ನುತ್ತಿದ್ದಂತೆ ಕಾಂಗ್ರೆಸ್ನ ಹಲವು ಶಾಸಕರು ಎದ್ದು ನಿಂತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಯಾಗಿ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಗ್ವಾದ, ಗೊಂದಲದ ವಾತಾವರಣ ಸೃಷ್ಟಿಯಾಯಿತು.

ವಿಜಯೇಂದ್ರ ಮಾತು ಮುಂದುವರೆಸಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ವಿಜಯೇಂದ್ರ ಅವರನ್ನು ರಾಜಕೀಯವಾಗಿ ಹತ್ತಿಕ್ಕಬೇಕು ಎಂಬ ಉದ್ದೇಶದಿಂದ ಕೋವಿಡ್ ನೆಪ ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಜವಾಬ್ದಾರಿಯುತ ಸಚಿವರು ಆರೋಪ ಮಾಡಿದ್ದಾರೆ. ಹಿಟ್ ಅಂಡ್ ರನ್ ಮಾಡಲು ಸದನ ಇಲ್ಲ ಎಂದರು.

ಆಗ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಕಾಂಗ್ರೆಸ್ನ ಹಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಯಾಗಿ ಬಿಜೆಪಿ ಶಾಸಕರು ಮಾತನಾಡಿದ್ದರಿಂದ ಸದನದಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಆರ್ ಅಶೋಕ್ ಪತ್ರಿಕೆಯ ಜೆರಾಕ್ಸ್ ಪ್ರತಿಯೊಂದನ್ನು ಪ್ರದರ್ಶಿಸಿ ವಿಜಯೇಂದ್ರ ಅವರ ಮೇಲೆ ಸಚಿವ ಖರ್ಗೆ ಮಾಡಿರುವ ಆರೋಪ ಸಿಬಿಐಗೆ ಕೊಡಿ, ಅವರ ಬಳಿ ಯಾವ ಆಧಾರವಿದೆ, ಆರೋಪ ಮಾಡುವ ಮುನ್ನ ಸಭಾಧ್ಯಕ್ಷರಿಗೆ ನೋಟೀಸ್ ಕೊಡಬೇಕಿತ್ತಲ್ಲವೇ ಎಂದರು.

ಪ್ರತಿಯಾಗಿ ಖರ್ಗೆ, ಪತ್ರಿಕೆಯೊಂದರ ಜೆರಾಕ್ಸ್ ಪ್ರತಿಯನ್ನು ಪ್ರದರ್ಶಿಸಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಅವಕಾಶ ಕೊಡಿ ಎಂದು ಹೇಳಿ, ಆಮಿಷ ಒಡ್ಡಿದ್ದಾರೆ ಎಂದು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಆರೋಪ ಮಾಡಿದ್ದಾರೆ. ಅವರು ಈ ಆರೋಪದ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಜೆ.ಪಿ.ನಡ್ಡಾ, ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದಾರೆ. ಅಲ್ಪ ಸಂಖ್ಯಾತರ ಆಯೋಗಕ್ಕೆ ಬಿಜೆಪಿ ಸರ್ಕಾರವೇ ಮಾಣಿಪ್ಪಾಡಿ ಅವರನ್ನು ನೇಮಕ ಮಾಡಿದ್ದರು ಎಂದರು.

ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಏರಿದ ಧ್ವನಿಯಲ್ಲಿ ಮಾತನಾಡಲು ಮುಂದಾದರು. ಪ್ರತಿಯಾಗಿ ಖರ್ಗೆಯವರೂ ಮಾತನಾಡಲು ಮುಂದಾದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಸಭಾಧ್ಯಕ್ಷರು ಪರಿಸ್ಥಿತಿಯನ್ನು ತಿಳಿಗೊಳಿಸಿ ಉತ್ತರಕರ್ನಾಟಕ ಅಭಿವೃದ್ಧಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

Leave a Reply