ಭಾರತದ ಮೂಲನಿವಾಸಿ ದ್ರಾವಿಡರ ಸಾಂಸ್ಕೃತಿಕ ಅಸ್ಮಿತೆಗಳನ್ನು ವೈದಿಕಾರ್ಯ ಪುರೋಹಿತಶಾಹಿಗಳು ತಮ್ಮದೇ ಆದ ಕೂಟತಂತ್ರಗಳ ಮೂಲಕ ಅದಲು ಬದಲು ಮಾಡಿದ್ದಾರೆ. ಮೌಖಿಕರ ಅಗಾಧವಾದ ನೆನಪಿನ ಕೋಶದಲ್ಲಿರುವ ದ್ರಾವಿಡ V/s ಆರ್ಯ ಚಾರಿತ್ರಿಕ ಸಂಘರ್ಷ ಹಾಗೂ ಸಾಂಸ್ಕೃತಿಕ ಪಲ್ಲಟಗಳ ಕುತೂಹಲಕಾರಿ ಕಥನಗಳು ಈಗಲೂ ಮೌಖಿಕರ ನಾಲಗೆಗಳ ಮೇಲೆ ಕದಲುತ್ತಿವೆ. ಇವುಗಳ ಕೆಲವು ಅಂಶಗಳು ಆಚರಣಾತ್ಮಕ ಪದ ಪುರಾಣಗಳಾಗಿ ದ್ರಾವಿಡರ ಬದುಕಿನ ವಿನ್ಯಾಸಗಳಲ್ಲಿಯೂ ಸಾಂದರ್ಭಿಕವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತವೆ. ಇಂತಹ ಐತಿಹಾಸಿಕ ಮತ್ತು ಪುರಾಣಿಮ ಆಕೃತಿಗಳ ಬೆನ್ನತ್ತಿ ಕವಿ – ಸಂಶೋಧಕ – ನಾಟಕಕಾರ ಲಕ್ಷ್ಮೀಪತಿ ಕೋಲಾರ ಅವರು ಹಲವಾರು ವರ್ಷಗಳ ಕಾಲ ಸಂಶೋಧನೆ ನಡೆಸಿರುವ ಫಲಿತವೇ “ಅದಲು ಬದಲು ಕಂಚಿ ಕದಲು” ಎಂಬ ನಾಟಕ. ನಿನ್ನೆ 15-07-2026 ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಿಕ್ಕಿರಿದ ಪ್ರೇಕ್ಷಕರೆದುರು ಚೊಚ್ಚಲ ರಂಗಪ್ರಯೋಗವಾಗಿ ಪ್ರದರ್ಶನವಾಯಿತು.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
“ಅದಲು ಬದಲು ಕಂಚಿ ಕದಲು” ಎಂಬುದು ಜನಪದರ ನುಡಿಗಟ್ಟು. ಇದು ಕಕರುಮಕರುಗೊಂಡ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ. ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಯ ಕಣ್ಣುರಪ್ಪೆಗಳ ಮೇಲೆ ಕಣ್ಣುಪಟ್ಟಿಯ ವಸ್ತ್ರವನ್ನು ಭದ್ರವಾಗಿ ಬಿಗಿದುಕಟ್ಟಿ ಸ್ವಲ್ಪದೂರ ಕರೆದೊಯ್ದು, ನಂತರದಲ್ಲಿ ‘ಅಪ್ಪಾಳೆ ತಿಪ್ಪಾಳೆ’ ಎಂದು ಅವನನ್ನು ಗಿರಗಿರನೆ ಗಿರಗಟ್ಳೆಯಂತೆ ಸುತ್ತಿರುಗಿಸುತ್ತಾನೆ. “ಅದಲು ಬದಲು ಕಂಚಿ ಕದಲು… ಕಕ್ಕಾಬಿಕ್ಕಿ ಕಲ್ಲಾಬಿಲ್ಲೆ” ಎಂದು ಮನಸ್ಸನ್ನು ಭ್ರಾಮಕ ಅಥವಾ ಪ್ರಕ್ಷುಬ್ಧ ಸ್ಥಿತಿಗೊಯ್ದು ಅಲ್ಲಿಯೇ ಬಿಟ್ಟುಬಿಡುತ್ತಾನೆ. ಬಿಗಿದ ಕಣ್ಣುಪಟ್ಟಿಯ ಕತ್ತಲಿನಲ್ಲಿಯೇ ಆ ವ್ಯಕ್ತಿಯು ತಾನು ನಡೆದುಬಂದ ದಾರಿಯ ಗುರುತುಗಳನ್ನು ನೆನಪುಗಳಿಂದ ತಡವುತ್ತಾ ಮೂಲಸ್ಥಳಕ್ಕೆ ಮರಳಲು ಪ್ರಯತ್ನಿಸುತ್ತಾನೆ. ಇದು ಜನಪದರ ಕಣ್ಣಾಮುಚ್ಚಾಲೆ ಆಟದ ಒಂದು ಬಗೆ. ಕವಿ – ಸಂಶೋಧಕ – ನಾಟಕಕಾರ ಲಕ್ಷ್ಮೀಪತಿ ಕೋಲಾರ ಅವರು ಮೂಲನಿವಾಸಿಗಳ ಸಾಂಸ್ಕೃತಿಕ ಪಲ್ಲಟಗಳ ಚಾರಿತ್ರಿಕ ಕಥನವನ್ನು “ಅದಲು ಬದಲು ಕಂಚಿ ಕದಲು” ನಾಟಕದ ಮೂಲಕ ಮಂಡಿಸಿದ್ದಾರೆ.
ಕಂಚಿಯು ದಕ್ಷಿಣ ಭಾರತದ ಒಂಭತ್ತು(ಎಡಗೈ) ಮತ್ತು ಹದಿನೆಂಟು(ಬಲಗೈ) ಪಣಕಟ್ಟಿಗೆ ಸೇರಿದ ದ್ರಾವಿಡರ ಸಾಂಸ್ಕೃತಿಕ ರಾಜಧಾನಿ. ಕೊಲಾರಿಯನ್ ಪರ್ಯಾಯ ದ್ವೀಪವೆನ್ನಿಸಿದ ಭಾರತದ ಉತ್ತರದ ಹರಪ್ಪ ನಾಗರಿಕತೆಯು ದಕ್ಷಿಣದ ಕಂಚಿಯವರೆಗೂ ಮೈಚಾಚಿಕೊಂಡು ಕತ್ತಲಗರ್ಭದಲ್ಲಿ ಉದುಗಿ ಹೋಗಿದ್ದ ಇತಿಹಾಸದ ಮೂಲ ಕುರುಹುಗಳನ್ನು ಹೊರತೆಗೆಯುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗಿದೆ. ಜಾಂಬುಮುನಿಯ ಜಂಬೂದ್ವೀಪದಲ್ಲಿ ‘ಸಿಂದ್ ಲೋಯಲವಾಳ್ಳು’ ಎಂದೆನ್ನಿಸಿದ ಸಿಂದೋಯಿಗಳ ಏಳುಮಂದಮ್ಮಗಳು, ಜಾಂಬುತಾತ, ಹೆಪ್ಪುಮುನಿ, ಬೆಪ್ಪುಮುನಿ, ಗಂಗಸ್ಥಲದ ಗಂಗಮ್ಮ, ದಕ್ಕಲ ಮಹಾಮುನಿ, ಸಿಂದ್ ಭಾಗವತ, ವಿಶ್ವಕರ್ಮ, ಮಣೆಗಾರ ಹಾಗೂ ಕಂಚಿಯ ಬ್ರಾಹ್ಮಣ ಅಳಸಿಂಗಾಚಾರ್ಯ ಮುಂತಾದ ಪಾತ್ರಗಳ ಮೂಲಕ ರಂಗನಿರ್ದೇಶಕ ಡಾ.ಉದಯ್ ಸೋಸಲೆ ಈ ನಾಟಕವನ್ನು ರಂಗಮಂಚದ ಮೇಲೆ ತರುವಲ್ಲಿ ಮಾಡಿರುವ ಪ್ರಯತ್ನ ಅಸಾಧಾರಣವಾದದ್ದು.
– ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು, 8722724174







