ರಂಗಾಯಣ ತೊರೆದು ಬಂದಾಗಿತ್ತು. ಮಾಲೂರಿನ ಅಂಬೇಡ್ಕರ್ ಹಾಸ್ಟೆಲ್ ಹುಡುಗರಿಗೆ ನಾಟಕ ಮಾಡುವುದೆಂದು ತೀರ್ಮಾನಿಸಿ ಆಗ ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಆಗಿದ್ದ ಕಪ್ಪಣ್ಣ ಹಾಗು ಅಧ್ಯಕ್ಷರಾಗಿದ್ದ ಕೆ.ಮರುಳಸಿದ್ದಪ್ಪ ಅವರನ್ನು ಭೇಟಿಯಾಗಿ ಹಾಸ್ಟೆಲ್ ಹುಡುಗರಿಗೆ ರಂಗ ತರಬೇತಿ ಶಿಬಿರದ ಜತೆಗೆ ನಾಟಕ ಮಾಡಿಸುವ ಯೋಜನೆಯೊಂದಿಗೆ ಮಾಲೂರಲ್ಲಿ ಕಾಯಕ ಪ್ರಾರಂಭಿಸಿದೆ.
ಲಕ್ಷ್ಮೀಪತಿ ಕೋಲಾರ ಅವರಿಂದ ಹೊಸ ನಾಟಕ (ಸಿಂದ್ ಆಟ) ಬರೆಸಿ ಆತಂಕದಿಂದಲೆ ರಿಹರ್ಸಲ್ ಆರಂಭಿಸಿದ್ದೆ. ನಾಟಕದ ವಿಷಯ ತಳ ಸಮುದಾಯಗಳ ಸಾಂಸ್ಕೃತಿಕ ದ್ರವ್ಯವಾದ್ದರಿಂದ ಜತೆಗೆ ಹೊಸ ಹುಡುಗರಾದ್ದರಿಂದ ತುಂಬಾ ಎಚ್ಚರದಿಂದ ನಾಟಕ ಕಟ್ಟತೊಡಗಿದೆ. ಆದರೆ ನಾಟಕದಲ್ಲಿ ಹಾಡು, ಕುಣಿತಗಳು ಪ್ರಮುಖ ಭಾಗವಾದ್ದರಿಂದ ಗೆಲ್ಲುತ್ತೇನೆಂಬ ನಂಬಿಕೆಯೂ ಇತ್ತು.
ಸರಿ ತಿಂಗಳ ತರಬೇತಿ, ನಾಟಕದ ತಯಾರಿಯೆಲ್ಲಾ ಮುಗಿದು ಜಿಲ್ಲಾ ಕೇಂದ್ರ ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಯಶಸ್ವೀ ಪ್ರದರ್ಶನವೂ ಆಯಿತು. ಅಂದು ನಾಟಕ ಪ್ರದರ್ಶನ ನೋಡಲು ಬಂದಿದ್ದ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ಕೆ.ಮರುಳಸಿದ್ದಪ್ಪ ನಾಟಕ ವೀಕ್ಷಿಸಿ ಲಕ್ಷ್ಮೀಪತಿ ಕೋಲಾರ ಮತ್ತು ನನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಈ ನಾಟಕವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಲ್ಲಿ ಪ್ರದರ್ಶಿಸಬೇಕೆಂದೂ, ತಯಾರಿ ಮಾಡಿಕೊಳ್ಳಿ ಎಂದು ಹೊರಟರು.
ಅದರಂತೆ 14 ಮಾರ್ಚ್ 1996. ದಕ್ಷಿಣ ಭಾರತದ ರಂಗಭೂಮಿಯ ಕಾಶಿ ಎಂದೇ ಕರೆಯಲ್ಪಡುವ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕಿಕ್ಕಿರಿದ ಪ್ರೇಕ್ಷಕರ ಮುಂದೆ ಮಾಲೂರಿನ ಅಂಬೇಡ್ಕರ್ ಹಾಸ್ಟೆಲ್ ಹುಡುಗರು ಕನ್ನಡ ರಂಗಭೂಮಿಯಲ್ಲಿ ದಲಿತ ಕಲೆಯ ಶಕ್ತಿ ಏನೆಂಬುದನ್ನು ದಾಖಲಿಸಿದ್ದರು. ಹಾಗೇ ಆವೊತ್ತೇ ಆ ತಂಡವೇ ಮುಂದೆ ಸಾರಂಗರಂಗ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡನಾಡಿನ ವಿಶೇಷವಾಗಿ ಬಯಲುಸೀಮೆಯ ಗ್ರಾಮೀಣ ಜನಪದ, ನಾಟಕ, ಸಾಹಿತ್ಯ, ಸಂಗೀತ, ಚರ್ಚೆ, ಸಂವಾದ, ಪ್ರದರ್ಶನ ಹೀಗೆ ನೂರಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಈಗ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.
ಇದು ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹದಿಂದ ಆದ ನಡೆ. ಈ ನಿಮ್ಮ ಅಮೂಲ್ಯ ಪ್ರೀತಿ ಪ್ರೋತ್ಸಾಹ ಮುಂದುವರೆಯುತ್ತದೆಂದು ನಂಬುತ್ತಾ ಈ ವಿಶೇಷ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದೇನೆ.
- ಪಿಚ್ಚಳ್ಳಿ ಶ್ರೀನಿವಾಸ್, ಸಾರಂಗರಂಗ ತಂಡ




