ಕಳೆದು ಹೋದವರ ಹಾಡು: ಗಾಳಿಗಿಟ್ಟ ದೀಪಗಳ ಪ್ರತಿಬಿಂಬ!
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ವಸ್ತುವನ್ನು ಕಳೆದುಕೊಂಡಿರುತ್ತಾನೆ. ತನಗೆ ಪ್ರಿಯವಾದದ್ದನ್ನು ಕಳೆದುಕೊಂಡಾಗ ಪರಿತಪಿಸುತ್ತಾನೆ. ಆತ್ಮೀಯ ಸ್ನೇಹಿತರು ದೂರವಾದಾಗ ನೊಂದುಕೊಳ್ಳುತ್ತಾನೆ. ಈ ಜಗವನ್ನು ಬಿಟ್ಟು ಹೋದ ತಂದೆ-ತಾಯಿ ಬಂಧುಬಳಗವನ್ನು ನೆನಪಿಸಿಕೊಂಡು ಅಳುವಿನ ಹಾಡು ಕಟ್ಟುತ್ತೇವೆ. ಮರುಗುತ್ತೇವೆ. ನಮಗೆ ಸಾವಿದೆ ನೆನಪುಗಳಿಗೇಕೆ ಸಾವಿಲ್ಲ ಎಂದು ದೇವರಿಗೆ ಹಿಡಿ ಶಾಪ ಹಾಕುತ್ತೇವೆ. ಇದು ಸಾಮಾನ್ಯನ ಕಥೆಯಾದರೆ, ನಮ್ಮ ನಡುವೆ ಗಂಡಾಗಿ ಹುಟ್ಟಿ ಹೆಣ್ಣಾಗಿರಬೇಕೆಂಬ ಆಸೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದುಕಬೇಕೆಂಬ ಬಯಕೆ. ಈ ಜೀವಿಗಳು ತಮ್ಮ ಜೀವನದಲ್ಲಿ ಏನನ್ನು ಕಳೆದುಕೊಂಡರು? ಹೇಗೆ ಕಳೆದುಕೊಂಡರು? ತಮ್ಮ ಆಕಾಂಕ್ಷೆಗಳಿಗೆ ಅಡ್ಡಿ ಪಡಿಸಿದವರಾರು? ತದನಂತರ ಈ ಸಮಾಜ, ಕುಟುಂಬ ತನ್ನನ್ನು ಹೇಗೆ ಒಪ್ಪಿಕೊಂಡಿತು ಎಂಬ ಕುತೂಹಲದ ಸಂಕಟವೇ ‘ಕಳೆದು ಹೋದವರ ಹಾಡು’. ತಮ್ಮ ನೋವುಗಳನ್ನು ತಾವೇ ಹೇಳಿಕೊಳ್ಳುವುದು ಅಧಿಕೃತ. ಹಾಗಾಗಿ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಹಾಡನ್ನು ತಾವೇ ರಂಗದ ಮೂಲಕ ಹೇಳ ಹೊರಟಿದ್ದಾರೆ. ಮೈಸೂರು ರಂಗಾಯಣದ ‘ಬಹುರೂಪಿ ಬಾಬಾ ಸಾಹೇಬ’ರ ಉತ್ಸವದಲ್ಲಿ ಪಯಣ ತಂಡ ತನ್ನ ಅನುಭವವನ್ನು ಮಂಗಳ.ಎನ್ ನಿರ್ದೇಶನದಲ್ಲಿ ಪ್ರಸ್ತುತಪಡಿಸಿತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಬದುಕು ಹಾಡಾಗುವುದು, ಆಟವಾಗುವುದು, ಕಷ್ಟವಾಗುವುದು, ಇಷ್ಟವಾಗುವುದು.ನಗೆ ಚಾಟಿಕೆಯಾಗುವುದು. ಮಳೆಯಾಗುವುದು, ಚಳಿಯಾಗುವುದು. ಬಿಸಿಲಾಗುವುದು. ಈ ಪರಿವರ್ತನೆ ಸಹಜ ಮತ್ತು ಸೋಜಿಗ. ಲಿಂಗತ್ವ ಅಲ್ಪಸಂಖ್ಯಾತರು ಬಾಲ್ಯದಲ್ಲಿ ತಾವು ಕಂಡ ಕನಸುಗಳನ್ನು, ಹರೆಯದಲ್ಲಿ ತಾವುಂಡ ವೇದನೆಗಳನ್ನು ದಕ್ಕಿಸಿಕೊಂಡಿದ್ದು ಹೇಗೆ? ಉಳಿಸಿಕೊಂಡದ್ದು ಹೇಗೆ ಎಂದು ಪ್ರತಿಯೊಬ್ಬರ ಅಂತರಂಗದ ತೊಳಲಾಟಗಳ ಮೂಲಕ ನಾಟಕ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ.
ಆತಂಕ ದುಗುಡಗಳಲ್ಲಿಯೇ ಬದುಕು ಸಾಗಿಸುವುದು ಬದುಕಲ್ಲ, ನರಕ. ಬದುಕಿದರೆ ಸ್ವತಂತ್ರವಾಗಿ ಬದುಕಬೇಕೆಂದು ನಿರ್ಧಾರ ಮಾಡುವ ಯೋಚನೆಯೇ ದೊಡ್ಡದು. ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಸ್ಪೂರ್ತಿಯಾಗಿದೆ. ನಿಜ ಸ್ವರೂಪದ ಮಹಿಳೆ – ಪುರುಷ ಮನೆ ಬಿಟ್ಟು ಬಂದರೆ ಪಡುವ ತಾಪತ್ರಯಗಳು ಅಸಂಖ್ಯ. ಬೆನ್ನು ಬಿಡದ ಬೇತಾಳದಂತೆ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಇನ್ನು ತನ್ನ ದೇಹದಲ್ಲಿ ಉಂಟಾಗುವ ಮಾನಸಿಕ ಖಿನ್ನತೆ, ಹಾರ್ಮೋನುಗಳಿಂದ ತಲ್ಲಣವಾಗಿರುವ ಮನಸ್ಸು – ದೇಹದಿಂದ ಬಿಡುಗಡೆ ಪಡೆಯುವುದಾದರೂ ಹೇಗೆ? ಇದರಿಂದ ಬಿಡುಗಡೆಯಾದರೆ ಸ್ವಾತಂತ್ರ್ಯ ಸಿಕ್ಕಿತೊ ಅಥವಾ ಮತ್ತೊಂದು ಬಂಧನದೊಳಗೆ ಸಿಕ್ಕಿ ಕೊಳ್ಳುತ್ತೇವೆಯೋ ಎಂಬ ಗೊತ್ತುಗುರಿಗಳೇ ಇಲ್ಲದ ಲಿಂಗತ್ವ ಅಲ್ಪಸಂಖ್ಯಾತರ ಜೀವನ ಪಯಣ ಗಾಳಿಗಿಟ್ಟ ದೀಪದಂತೆ ಎಂಬ ಧ್ವನಿಯನ್ನು ಪ್ರಯೋಗ ತೋರ್ಪಡಿಸಿದೆ.
ಗಂಡು ಹೆಣ್ಣಾಗುವ, ಹೆಣ್ಣು ಗಂಡಾಗುವ ಮನಸ್ಸುಗಳನ್ನು ಸಮಾಜ ಅರಿಯಬೇಕು. ಹೀಗಾಗುವ ಸಂದರ್ಭದಲ್ಲಿ ಅವರು ಅನುಭವಿಸುವ ಸಂಕಟ, ಯಾತನೆ, ನೋವು, ನಿಂದನೆ, ತಳಮಳ, ಆಶಯ, ಅಸಹಾಯಕತೆ, ಆತ್ಮವಿಶ್ವಾಸ ನಾಟಕದ ಜೀವಾಳವಾಗಿದೆ. ತಮ್ಮ ಪಯಣ ಸೂರ್ಯನಂತೆ ಪೂರ್ವದಿಂದ ಪಶ್ಚಿಮಕ್ಕೆ ಅಲ್ಲ,ಪಶ್ಚಿಮದಿಂದ ಪೂರ್ವಕ್ಕೆ ಎಂಬುದೇ ಕಳೆದು ಹೋದವರ ಹಾಡು.
“ಎಲ್ಲಿ ಕಳೆದು ಹೋಯಿತೋ
ನನ್ನ ನಿಜದ ರೂಪ
ಎಲ್ಲಿ ಕಳೆದು ಹೋಯಿತೋ
ನನ್ನ ಪುಟ್ಟ ಕನ್ನಡಿ “ಎಂಬ ಹಾಡು ಅನುರಣನಗೊಳ್ಳುತಿತ್ತು.
ಪಾತ್ರಗಳು ತಮ್ಮ ಶಾಲಾ ದಿನಗಳ ಅನುಭವವನ್ನು ತೆರೆದಿಟ್ಟವು. ಆಣೆ ಕಲ್ಲಿನ ಆಟ ಮರೆತು ಹೋಗಿರುವಾಗ ರಂಗದ ಮೇಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿತು. ಶಾಲಾ ದಿನಗಳಲ್ಲಿ ಶಿಕ್ಷಕರು ಹೆಣ್ಣು ಗಂಡೆಂಬ ಭೇದಭಾವ ಮಾಡುತ್ತಿದ್ದರು. ಕೆಲವೊಮ್ಮೆ ದುರುಪಯೋಗವು ಆಗಿದೆ. ಏನೂ ಗೊತ್ತಿಲ್ಲದ ವಯಸ್ಸಿನಲ್ಲಿ ತಿಳುವಳಿಕೆ ಹೇಳಬೇಕಾದ ಶಿಕ್ಷಕರು ತಪ್ಪು ಮಾಡುವ ರೀತಿ ಒಪ್ಪಿಕೊಳ್ಳುವಂತದ್ದಲ್ಲ. ಗಂಡು ಹೆಣ್ಣಿನಲ್ಲಿ ಆಗುವ ಮಾನಸಿಕ ಹಾಗೂ ಶರೀರ ಹಾಗೂ ಶಾರೀರಿಕ ಬದಲಾವಣೆಗಳ ಕುರಿತು ವೈಚಾರಿಕ ಹಿನ್ನೆಲೆಯಲ್ಲಿ ಮಕ್ಕಳಿಗೆ ತಿಳಿಯಪಡಿಸಬೇಕೆಂಬ ಸೂಚ್ಯ ದನಿ ನಾಟಕದಲ್ಲಿದೆ. ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಾಗ ಅದರ ಸದುಪಯೋಗವಾಗುತ್ತದೆ. ಇಲ್ಲವಾದಲ್ಲಿ ಅದು ಕುತೂಹಲ ಕೆರಳಿಸಿ ಅನಾನುಕೂಲವನ್ನುಂಟು ಮಾಡುತ್ತದೆ ಎಂಬ ಧೋರಣೆ ಇದೆ. ಶಾಲಾ ದಿನಗಳಲ್ಲಿ ಕಣ್ಣು ಮುಚ್ಚಾಲೆ ಆಟ, ಬಚ್ಚಿಟ್ಟುಕೊಳ್ಳುವ ಆಟ ಆಡುತ್ತಿದ್ದರು. ಪ್ರೌಢ ಹಂತ ತಲುಪಿದ ನಂತರ ಈ ಕಳ್ಳತನದ ಆಟ ಬೇಡ. ನಮ್ಮಲ್ಲಿರುವ ಪ್ರಜ್ಞೆಯನ್ನು ಹೊರಹಾಕುವುದೇ ನಿಜವಾದ ಬದುಕಿನ ಲಕ್ಷಣವೆಂದು ಆ ಮನಸ್ಸು ಅರಿತು, ಈ ಮುಚ್ಚಾಟ, ಬೇಡವೆಂಬ ಪ್ರತಿರೋಧ ತಾಳುವ ಮನೋಭಾವವೇ ಸಮಾಜವನ್ನು ಎದುರಿಸುವ ಮೊದಲ ಹಂತ ಎಂದು ಪ್ರಯೋಗ ಪರಿಭಾವಿಸುತ್ತದೆ.
‘ನಾನು ಕುಣಿಯುತ್ತೇನೆ, ಬಾಗುತ್ತೇನೆ, ನಡೆಯುತ್ತೇನೆ, ನಾನು ಶೃಂಗಾರ ಮಾಡಿಕೊಳ್ಳುತ್ತೇನೆ ಏನ್ ಈವಾಗ್’ ಎಂಬ ಧೋರಣೆ ಬಲವಾಗುವುದಕ್ಕೆ ತೊಡಗಿದಾಗ ಸಮಾಜವನ್ನು ಎದುರಿಸುವ ಶಕ್ತಿ ನಿರ್ಮಾಣವಾಗುತ್ತಾ ಸಾಗುತ್ತದೆ. ಇಲ್ಲಿ ತಾವೇ ಆತ್ಮಸ್ಥೈರ್ಯವನ್ನು ತಂದುಕೊಳ್ಳಬೇಕು. ತಾವೇ ಸಂತೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಪಸಂಖ್ಯಾತರ ಬದುಕು ಕೆಂಡದ ಹಾದಿಯ ಮೇಲೆ ನಡೆದಂತೆ ಎಂಬ ನಿಲುವು ಪ್ರೇಕ್ಷಕರದಾಯಿತು.
ಸಿನಿಮಾ ನಟರನ್ನು ಮೆಚ್ಚಿಕೊಳ್ಳುವುದು. ಅವರ ಹಾಡುಗಳ ಗುಣಗಾನ, ಪ್ರೀತಿ ಪ್ರೇಮವನ್ನು ಕಟ್ಟಿಕೊಡಲಾಗಿದೆ. ತಾವು ಪ್ರೀತಿಸಿದ ಹುಡುಗ ಹುಡುಗಿಯರು ಹೇಗೆ ತಮ್ಮನ್ನು ಮೋಸಗೊಳಿಸಿದರೆಂದು ಅನಾವರಣಗೊಳಿಸಿದರು. ಮನೆ ಮಾರು ಬಿಟ್ಟು ಬಂದ ಜೀವಕ್ಕೆ ಆಸರೆ ಆಗುತ್ತೇನೆಂದು ಹೇಳಿ ನಿರಾಶ್ರಿತನನ್ನಾಗಿ ಮಾಡಿದವರಿಗೆ ಯಾವ ಶಾಪವನ್ನು ಇವರು ಹಾಕಲಿಲ್ಲ. ತಮ್ಮನ್ನು ಈ ಸಮಾಜ ಒಪ್ಪಿಕೊಂಡರೆ ಸಾಕೆಂಬ ಧೋರಣೆಯಲ್ಲಿಯೇ ಇಂದಿಗೂ ಬದುಕು ಕಳೆಯುತ್ತಿದ್ದೇವೆ ಎಂಬ ಇವರ ಆತ್ಮಸ್ಥೈರ್ಯಕ್ಕೆ ಸಾಟಿಯೇ ಇಲ್ಲ.
ಆರಂಭದಲ್ಲಿ ಗಂಡು ಹೆಣ್ಣಾಗದೆ, ಹೆಣ್ಣು ಗಂಡಾಗದೆ ಇರುವುದನ್ನು ಒಪ್ಪಿಕೊಳ್ಳದೆ ಇದ್ದರೂ ನಾಟಕದ ಕೊನೆ ಘಳಿಗೆಯಲ್ಲಿ ಗಂಡು ಹೆಣ್ಣಾಗುವುದನ್ನು ಒಪ್ಪಿಕೊಳ್ಳುವುದರ ಚಲನೆ ಬದಲಾವಣೆಯನ್ನು ಸೂಚಿಸುತ್ತದೆ. ಅವರ ಕಥೆಗಳಲ್ಲಿನ ಸಾವು ಕೂಡ ಅವರ ಅಸ್ತಿತ್ವವನ್ನು ಪ್ರತಿಪಾದಿಸುತ್ತದೆ. ಒಬ್ಬರಾದ ಮೇಲೆ ಒಬ್ಬರು ತಮ್ಮ ಕಥೆಗಳನ್ನು, ನೋವುಗಳನ್ನು ಅಭಿವ್ಯಕ್ತಿಸುವ ಕ್ರಮವೇ ವಿಶಿಷ್ಟವಾಗಿತ್ತು. ವೃತ್ತಿಪರ ನಟರಲ್ಲದಿದ್ದರು ಆಸಕ್ತಿಯಿಂದ ರಂಗದ ಶಿಸ್ತನ್ನು ಪಾಲಿಸಿದ್ದು ಅವರ ಹೆಗ್ಗಳಿಕೆ. ಕುಟುಂಬದ ಸದಸ್ಯರ ಸಾವುಗಳಿಂದ ವಿಚಲಿತರಾದಂತಹ ಸಂದರ್ಭ. ಸಮಾಜ,ಪಂಚಾಯಿತಿ ಕಟ್ಟೆಯ ವಾದವಿವಾದಗಳು ನಡೆದು ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳುವ ದೃಶ್ಯ ಪರಿವರ್ತನೆಯ ಸಮಾಜಕ್ಕೆ ಮಾದರಿಯಾಯಿತು.
ರಂಗ ಪರಿಕರವಾಗಿ ಜೇಡರ ಬಲೆಯಂತೆ ರೂಪಿಸಿರುವ ಬಲೆಯೊಳಗೆ ಕನ್ನಡಿ ಇದೆ. ಕನ್ನಡಿಯ ಹಿನ್ನೆಲೆಯಲ್ಲಿ ಕಾಮನಬಿಲ್ಲಿನ ಬಣ್ಣಗಳು ಸಾಂಕೇತಿಕವಾಗಿ ಇಡೀ ನಾಟಕದ ತಿರುಳನ್ನು ಕಟ್ಟಿಕೊಟ್ಟಿದ್ದವು. ಈ ಬಣ್ಣಗಳ ಕನಸಿನ ಲೋಕದಲ್ಲಿ ಜೇಡರ ಬಲೆ ಒಳಗಿನ ಕನ್ನಡಿ ಪ್ರತಿಯೊಂದನ್ನು ದ್ವನಿಸುತ್ತಿತ್ತು, ಪ್ರತಿ ಬಿಂಬಿಸುತ್ತಿತ್ತು. ಅದರೊಳಗೆ ನಮ್ಮನ್ನು ನಾವು ಕಂಡುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದವು.
ಮಗಳಾಗಿ ಮಗನಾಗಿ ಮನೆಯಲ್ಲಿ ಇರಬೇಕೆಂಬ ಭಾವ ಕುಟುಂಬದವರದು. ಇದು ವ್ಯತಿರಿಕ್ತವಾದಾಗ ಮನೆಯಿಂದ ಹೊರ ನಡೆಯಬೇಕೆಂಬ ಆಸೆ. ಮದುವೆ ಮಾಡಬೇಕೆಂದಾಗ ಇದು ಕೂಡ ತನಗೆ ಆಗದ ಕಾರ್ಯವೆಂದು ಕುಟುಂಬದಿಂದ ವಿಮುಖನಾಗುವ ಘಳಿಗೆಗಳನ್ನ ಕಣ್ಣಿಗೆ ಕಟ್ಟುವಂತೆ ದೃಶ್ಯ ಕಟ್ಟಿದ್ದಾರೆ. ಸ್ವಂತ ಮನೆಯಲ್ಲಿದ್ದರೂ ತನ್ನ ಸಮುದಾಯದ ಜನರೊಂದಿಗೆ ಬೆರೆಯುವುದಕ್ಕೆ ಆಗಲಿಲ್ಲ ಎಂಬ ಕೊರಗು ಇನ್ನು ಕೆಲವರದು. ತಾಪತ್ರಯಗಳ ಸುಳಿಯಲ್ಲಿ ತಮ್ಮ ಬದುಕು ಕಳೆದುಹೋಗಿದೆ ಎಂಬ ನೋವಿನಲ್ಲಿಯೇ ಪಯಣವಿದೆ. ಬೆಂಗಳೂರಿಗೆ ವಲಸೆ ಬಂದಾಗ ಬೆಂಗಳೂರಿನ ಕರಾಳ ಮುಖವನ್ನು ತೋರಿಸುವ ದೃಶ್ಯದಿಂದ ಮಾನವೀಯತೆ ಮರೀಚಿಕೆಯಾಗಿದೆ. ಅದನ್ನು ರಕ್ಷಿಸಬೇಕೆಂದು ಸೂಚಿಸುತ್ತಿತ್ತು. ನಮ್ಮದು ಹತ್ತು ತಲೆಯ ರಾವಣನ ಪ್ರೀತಿ ಇದ್ದರೂ, ನಮ್ಮನ್ನು ಕಂಡು ಜಾತಿ ಯಾವುದು? ಎಷ್ಟು ಗಳಿಸಿದೆ ಎಂಬ ಇತ್ಯಾದಿ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಸಿಗಲು ಸಾಧ್ಯವೇ? ಎಂಬ ನೋವನ್ನು ದಾಖಲಿಸುವ ಹಾಡು.
ಕೊನೆಯದಾಗಿ, ಕನ್ನಡಿಯೊಳಗೆ ಕಳೆದು ಹೋಗುವ ವ್ಯಕ್ತಿತ್ವ ಸಮುದಾಯದ ಕನ್ನಡಿ ಒಳಗೆ ಹುಡುಕುವ ಪ್ರಯತ್ನದಲ್ಲಿ ತೃತೀಯ ಜಗತ್ತಿನವರ ಬದುಕಿದೆ. ನಾವೆಲ್ಲರನ್ನೂ ಪ್ರೀತಿಸುತ್ತೇವೆ. ನಮ್ಮನ್ನು ಯಾರು ಪ್ರೀತಿಸುವುದಿಲ್ಲ. ಪ್ರೀತಿ ಹುಡುಕುತ್ತಾ ಹೊರಟ ಪಯಣಿಗರು ನಾವು ಎಂಬ ಸಂದೇಶದ ಕಥನವಿದು. ರಾಜ್ಯದಲ್ಲಿ 10,365 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವರದಿ ನೀಡಿದೆ. ಇವರೆಲ್ಲರ ನೋವಿಗೆ ಪಯಣ ರಂಗ ತಂಡ ಸಾಕ್ಷಿಯಾಗಿದೆ. ಕಲಾವಿದರಾಗಿ ಶಾಂತಿ, ಕ್ರಿಸ್ಟಿ ರಾಜ್, ಭಾನು, ದೀಪಕ್ ಬಿ, ಶೋಬನ ಕುಮಾರಿ, ಸವಿತ ಎನ್, ಲಕ್ಷ್ಮಿ, ದೇವಿ ವಿ ನದಿಯ, ಪ್ರಮೋದಿನಿ, ಡ್ಯಾನಿಯೇಲ್, ತ್ರಿಮೂರ್ತಿ ಕೆ, ಸರವಣ, ಚಾಂದಿನಿ ನಟಿಸಿದ್ದು ವಿಶೇಷವಾಗಿತ್ತು. ಸಂಗೀತ ರೂಮಿ ಹರೀಶ್, ಪ್ರಸಾದನ ರವಿಶಂಕರ್, ಬೆಳಕು ಮಂಜುನಾಥ್, ಕಲೆ ಶಶಿಧರ್ ಅಡಪದವರದಾಗಿತ್ತು. ಕಳೆದು ಹೋದವರ ಹಾಡಿಗೆ ನಾವು ಕೂಡ ಕಾರಣಕರ್ತರೆಂಬ ಪಶ್ಚಾತ್ತಾಪದ ಅರಿವು ಮೂಡಿದಾಗ ಸಮಾನತೆಯ ಕನಸಿಗೆ ರೆಕ್ಕೆ ಮೂಡುವುದು.
– ಡಾ. ರಾಜೇಂದ್ರಕುಮಾರ್ ಕೆ. ಮುದ್ನಾಳ್, ಯಾದಗಿರಿ






