‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿ

1 hour ago

ರಂಗಲೋಕದ ವಿಸ್ಮಯ

ತಂತ್ರಜ್ಞಾನ ಮತ್ತು ಮನುಷ್ಯನ ಕಲಾತ್ಮಕ ಸೃಷ್ಟಿಯ ಸಂಯೋಗದೊಂದಿಗೆ ಅರಿವಿನ‌ಮನೆಯ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ರಂಗ ಶಿಬಿರದ ಮೊದಲ ರಂಗಪ್ರಯೋಗ ಎಲ್ಲಾ ಮಕ್ಕಳಿಗೂ ಒಂದು ಸವಾಲಿನದ್ದೇ ಆಗಿತ್ತು. ‘ಸಂಗಡಿಗರ’ ತಂಡ ಪ್ರಸ್ತುತ ಪಡಿಸಿದ ರಂಗಗೀತೆಗಳು ಸಾಹಿತ್ಯಾಸಕ್ತರನ್ನು ಒಂದು ರೀತಿ ಸಂಗೀತಲೋಕಕ್ಕೇ ಧ್ಯಾನಸ್ಥರನ್ನಾಗಿಸಿದರೆ ಕೆ.ರಾಮಯ್ಯನವರು ರಚಿಸಿ, ಅಶೋಕ್ ಕುಮಾರ್ ನಿರ್ದೇಶಿಸಿದ ‘ಹಕ್ಕಿಹಾಡು’ ನೂತನ ರಂಗಪ್ರಯೋಗ, ರಂಗಾಸಕ್ತ ಸಹೃದಯರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ನವಿಲಿನ ಚೀತ್ಕಾರದೊಂದಿಗೆ ಪ್ರಾರಂಭಗೊಂಡ ನಾಟಕ, ಮಕ್ಕಳ ಹೊಸ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿತು. ಕಥೆಯ ಆರಂಭದಲ್ಲಿ ಮಕ್ಕಳ ಗಣಪನ ನೃತ್ಯ, ಹಕ್ಕಿಹಾಡು ಕಥನದ ಫಲಕ, ಅರಿವಿನ ಮನೆಯ ಸಹಕಾರ, ಪಪೆಟ್ ನ ಮೂಲಕ ಪ್ರದರ್ಶನಗೊಂಡು ನೋಡುಗರನ್ನು ಹುಬ್ಬೇರಿಸಿತು. ಕಥನಕ್ಕೆ ಪೂರಕ ತಂತ್ರಜ್ಞಾನ, ಕಥೆ, ಅಭಿನಯ, ಪಪೆಟ್ ಮೂಲಕ ಎರಡನ್ನೂ ಸಮತೂಕದೊಂದಿಗೆ ಒಯ್ದದ್ದು ನಾಟಕದ ಹೈಲೆಟ್. ಕೇವಲ ಇಪ್ಪತ್ತು ದಿನಗಳ ಕಾಲವಧಿಯಲ್ಲಿ ನಟನಾ ಕ್ಷೇತ್ರದ ಯಾವೊಂದು ಅನುಭವವಿಲ್ಲದ ಮಕ್ಕಳು ನಿಜಾರ್ಥದಲ್ಲಿ ಪ್ರೇಕ್ಷಕರ ಹೃದಯಗೆದ್ದಿದ್ದಾರೆ. ನಾಟಕದುದ್ದಕ್ಕೂ ಡಾ.ಶ್ರೀಪಾದ ಭಟ್ ರ ಸಂಗೀತ ಹಾಡುಗಳು ಪ್ರೇಕ್ಷಕರ ಮನಸೂರೆಗೊಂಡವು.

ಯಾವುದೇ ಮುಂದಾಲೋಚನೆಯಿಲ್ಲದೆ ಮನೆಯ ಮುಂದಿನ ಮರವನ್ನು ನಿರ್ದಾಕ್ಷಿಣ್ಯವಾಗಿ ಕಡಿಯಿವ ಮುನ್ನ ಈ ನಾಟಕ ನೋಡಬೇಕು. ಒಂದು ಮರ ಎಷ್ಟು ಪಕ್ಷಿಗಳಿಗೆ ಆಶ್ರಯಕೊಡಬಲ್ಲದೆಂಬುದನ್ನು ಆ ಮರದಲ್ಲಿ ಆಶ್ರಯಪಡೆಯುವ ಒಂದೊಂದು ಹಕ್ಕಿಯ ಪರಿಚಯದ ಮೂಲಕ ತಿಳಿಸಿ, ಅದೇ ಮರದಲ್ಲಿ ಪುಟ್ಟ ಸಂಸಾರ ಹೂಡಿ ಭವಿಷ್ಯತ್ತಿನ ಭಾವಿ ಪುಟ್ಟ ಹಕ್ಕಿಗಳು ಬರುವ ಕನಸು ಕಂಡು ಮೊಟ್ಟಯಿಡುವ ಹಕ್ಕಿಗೆ ಲೋಕ ಕಂಟಕ ತಪ್ಪಿದ್ದಲ್ಲ. ಆ ಕಂಟಕ ಬೆಕ್ಕಿನ ರೂಪದಲ್ಲಿ ಅವತರಿಸುತ್ತದೆ. ಬೆಕ್ಕು ಪಕ್ಷಿಗೆ ಮೊಟ್ಟೆ ತಿನ್ನಲು ಬಲವಂತದ ಬೇಡಿಕೆ ಇಡುತ್ತದೆ. ಪಕ್ಷಿ ಮುಂದೆ ಮರಿಗಳಾದಾಗ ನೀಡುವ ಭರವಸೆ ನೀಡುತ್ತದೆ, ಪುಣ್ಯಕೋಟಿ ಹಸುವಿನಂತೆ. ಕಾಲ ಕಳೆದು ಮೊಟ್ಟೆಯೊಡೆದು ಮರಿಬಂದದ್ದುನ್ನು ಪಪೆಟ್ ನ ಮೂಲಕ ಕಥಾನಕ ಸಾಗುತ್ತದೆ. ಮತ್ತೆ ಬೆಕ್ಕು ಕೊಟ್ಟಮಾತು ಉಳಿಸಲು ನೆನಪಿಸುತ್ತದೆ. ಕಣ್ಣೆದುರೇ ತನ್ನ ಹೆತ್ತಕಂದಮ್ಮಗಳ ಬಲಿಕೊಡದ ಹಕ್ಕಿ, ಮತ್ತೆ ದೊಡ್ಡದಾದಾಗ ತಿನ್ನುವುದರಿಂದ ಆಗುವ ಉಪಯೋಗದ ಬಗೆಗೆ ತಿಳಿಸಿ ಆಗಲೂ ಮರಿಗಳನ್ನು ಬೆಕ್ಕಿನಿಂದ ರಕ್ಷಿಸುತ್ತದೆ.  ಹೀಗೆ ಸಾಗುವ ಕಥಾನಕ ಮುಂದೆ ಹಕ್ಕಿ ಮರಿಗಳು ಬೆಕ್ಕಿನ ಪಾಲಾದವೇ? ಅಥವಾ ಹಕ್ಕಿ ಉಪಾಯದಿಂದ ತನ್ನ ಬಳಗವನ್ನು ಸಂರಕ್ಷಿಸಿತೇ? ಇದೇ ಕಥೆಯ ತಿರುಳು.

ಪಪೆಟ್ ತಂತ್ರಜ್ಞಾನ ಮತ್ತು ರಂಗಾಭಿನಯಗಳೆರಡರ ಮೂಲಕ ಕಥಾನಕ ಹೆಣೆದಿರುವ ರೀತಿ ಮಾತ್ರ ವಿಸ್ಮಯ ಮೂಡಿಸುತ್ತದೆ. ಏಕಕಾಲಕ್ಕೆ ಅಭಿನಯಿಸುತ್ತಾ ರಂಗದ ಮೇಲೆ ನಟನೆಮಾಡುವ ಮಕ್ಕಳೆ ಮತ್ತೋಮ್ಮೆ ಪಪೆಟ್ ತಂತ್ರಜ್ಞಾನವನ್ನು ನಿರ್ವಹಿಸುವ ತಮ್ಮಗಳ ಚಾಣಾಕ್ಷ ಕಲೆಗೆ ಪ್ರೇಕ್ಷಕ ತಲೆದೂಗದೇ ಇರಲಾರ. ಕೇವಲ ಇಪ್ಪತ್ತು ದಿನಗಳ ರಂಗ ತರಬೇತಿಯಿಂದಾಗಿ ಅರಿವಿನ ಮನೆಗೆ ಹೊಸ ಕಳೆ ತಂದಿದೆ. ಸದಾ ಗಿಜುಗುಡುವ ವಾಣಿಜ್ಯೋದ್ಯಮದಲ್ಲೇ ಮಿಂದಿರುವ ಕಡೂರಿಗೆ ಬೇಸಗೆ ರಂಗಶಿಬಿರದ ಮಕ್ಕಳ ಈ ಪುಟ್ಟ ರಂಗಪ್ರಯೋಗವೊಂದು ಕಡೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಅಚ್ಚಳಿಯದ ಪುಟ್ಟ ದಾಖಲೆಯಾಗಿ ಉಳಿದಿದೆ.

ಇಂತಹ ಪರಿಕಲ್ಪನೆಯನ್ನು ಹೊತ್ತು ತಂದ ಗೆಳೆಯ, ಆವರಣ ಸಂಸ್ಥೆಯ ಸಂಸ್ಥಾಪಕ ಅಜಯ್ ಭಂಡಾರಿಯವರಿಗೂ, ಇಪ್ಪತ್ತು ದಿನಗಳ ಕಾಲ ಬಹು ತಾಳ್ಮೆಯಿಂದ ನಮ್ಮ ಮಕ್ಕಳನ್ನು ಸಹಿಸಿಕೊಂಡ ನಿರ್ದೇಶಕ ಅಶೋಕ್ ಕುಮಾರ್ ರವರಿಗೂ, ಅರಿವಿನ ಮನೆಯ ಸಮಸ್ತರಿಗೂ, ನಂಬಿ ರಂಗಶಿಬಿರಕ್ಕೆ ಬೆಂಬಲವಿತ್ತ  ನಮ್ಮ ಪೋಷಕರಿಗೂ ಪ್ರೀತಿಪೂರ್ವಕ ಅಭಿನಂದನೆಗಳು.

– ಡಾ.ಮಂಜುನಾಥ್. ಬಿ.ಹೊಳೆಹೊನ್ನೂರು, ಸಹಾಯಕ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜಂಪುರ

Leave a Reply