ಸಿರಿತನದ ಸೌಧ ಕುಸಿಯದಂತೆ ಕಾಯುವ ಆಧುನಿಕ ಸರ್ಪಗಾವಲಿನ ಕತೆಪ್ರಾಚೀನ ಕಾಲದಲ್ಲಿ ಅಪಾರ ಸಂಪತ್ತನ್ನು ಅಡಗಿಸಲಾಗಿದೆ ಎನ್ನುವ ಸ್ಥಳ ಅಥವಾ ಅಂತಹ ಕಡೆ ಆ ಸಂಪತ್ತನ್ನು ಕಾಯಲು ಸರ್ಪವೋ/ದೊಣ್ಣೆಕಾಟವೋ/ಉಡವೋ/ಕೋಣವೋ/ಹುಂಜವೋ ಇದೆ ಎನ್ನುವ ಮಿತ್ ಗಳನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ಆ ಸಂಪತ್ತನ್ನು ದೋಚಲು ಹೋದರೆ ಸರ್ಪ ಎದ್ದುನಿಲ್ಲುತ್ತೆ/ಕೋಣ ಗುಟುರು ಹಾಕುತ್ತೆ/ದೊಣ್ಣೆಕಾಟ ತಲೆ ಹಾಕುತ್ತೆ ಇತ್ಯಾದಿ. ಈ ಮೂಲಕ ದೋಚಲು ಬಂದವರನ್ನು ನಾಶಗೊಳಿಸುತ್ತೆ ಎನ್ನುವುದು ಈ ಮಿತ್ ನ ಒಂದೆಳೆ ಸಾರಾಂಶ. ಹೀಗೆ ಉಳ್ಳವರು ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಎಂಥಹ ಅದ್ಭುತ ಕತೆ ಹೆಣೆದಿದ್ದಾರೆ ಎನ್ನುವ ಬಗ್ಗೆ ಬೆರಗು ಹುಟ್ಟುತ್ತದೆ. ಹಾಗಾದರೆ ಆಧುನಿಕ ಸಂಪತ್ತುಗಳನ್ನು ಕಾಯುವ ಸರ್ಪಗಳು ಯಾವುವು? ಇದೊಂದು ಕುತೂಹಲಕಾರಿ ಸಂಗತಿ.
ಯಾವುದೇ ಕ್ಷೇತ್ರದಲ್ಲಿ ಅವರ ಸ್ವ–ಪ್ರತಿಭೆಯಿಂದಲೋ, ನಿರಂತರವಾದ ಅಪಾರ ಶ್ರಮದಿಂದಲೋ.. ಹಲವು ಬಗೆಯ ಪ್ರಭಾವ ಬಳಸಿಯೋ ಕೆಲವೊಮ್ಮೆ ಅಡ್ಡದಾರಿ ಹಿಡಿದೋ ಕಡುಭ್ರಷ್ಟರಾಗಿಯೋ ಮಧ್ಯಮ ವರ್ಗವನ್ನು ಮೀರಿ ಮೇಲೆ ಬಂದವರು ಅಥವಾ ಆರ್ಥಿಕವಾಗಿ ಬಲಾಡ್ಯರಾದಾಗ ಈ ಸಂಪತ್ತು, ಇದರ ಜತೆ ಹೆಸರು, ಸೋಷಿಯಲ್ ಸ್ಟೇಟಸ್ ಈ ಎಲ್ಲವೂ ಕುಸಿಯದಂತೆ ಕಾಯಬೇಕಾಗುತ್ತೆ. ಇದನ್ನು ಸರ್ಪಗಾವಲು ಕಾಯಲು ಅಧಿಕಾರದಲ್ಲಿರುವ ಸರಕಾರದ ಶ್ರೀರಕ್ಷೆ ಬೇಕಾಗುತ್ತದೆ. ಹಾಗಾಗಿ ಆಯಾ ಆಡಳಿತ ಪಕ್ಷವನ್ನೋ… ರಾಜಕಾರಣಿಗಳನ್ನೋ ಓಲೈಸಬೇಕಾಗುತ್ತದೆ ಅಥವಾ ಅವರೆ ಆಳುವ ಸರಕಾರ ಅಥವಾ ರಾಜಕೀಯ ಪಕ್ಷದ ಒಳಸೇರಿ ಅದರ ಭಾಗವೇ ಆಗಬೇಕಾಗುತ್ತದೆ. ಹೀಗೆ ಆಗದೆ ಆಳುವ ಸರಕಾರ–ಪಕ್ಷದ ವಿರುದ್ಧವಾದರೆ ತಾನು ಕಟ್ಟಿದ ಸಿರಿತನದ ಸೌಧ ಕಣ್ಣೆದುರೆ ಕುಸಿಯುವುದನ್ನು ನೋಡಲು ಅಸಾಧ್ಯ ಧೈರ್ಯ ಮತ್ತು ಸಿದ್ಧತೆ ಬೇಕಾಗುತ್ತದೆ. ಎಲ್ಲವನ್ನೂ ಕಳೆದುಕೊಂಡು ಶೂನ್ಯಕ್ಕೆ ಮರಳಲು ಆತ/ಆಕೆಯನ್ನು ನಂಬಿದ ಇಡೀ ಕುಟುಂಬ ಮಾನಸಿಕವಾಗಿ ಸಿದ್ಧಗೊಳ್ಳಬೇಕಾಗುತ್ತದೆ. ಈ ಆಧುನಿಕ ವಾಣಿಜ್ಯೀಕರಣಗೊಂಡ ಸಾಮಾಜಿಕ ಜೀವನದ ವಾತಾವರಣವು ಇಂತಹ ದೈರ್ಯವನ್ನು ಕಲಿಸಿಲ್ಲ.
ಈ ಮನಸ್ಥಿತಿಯನ್ನು ಇದೀಗ ಆಳುವ ಪಕ್ಷಗಳು ಚೆನ್ನಾಗಿ ಅರ್ಥಮಾಡಿಕೊಂಡಿವೆ. ಹಾಗಾಗಿ ಕೊಂಡಿಯೆತ್ತಿ ಕುಟುಕಲು ಬರುವ ಚೇಳನ್ನು ನಾನಾ ರೀತಿಯ ತಂತ್ರ ಬಳಸಿ ಕೊಂಡಿಯನ್ನು ಮುರಿಯಲಾಗುತ್ತದೆ. ಹೀಗೆ ಕೊಂಡಿ ಮುರಿಸಿಕೊಂಡ ಚೇಳುಗಳು ಬಾಲಮುದುರಿಕೊಂಡು ಬಿಲದೊಳಗೆ ಜೀವಿಸಬೇಕಾಗುತ್ತದೆ.
ಹಾಗಾಗಿಯೇ ಈ ಕಾಲದಲ್ಲಿ ಸಿರಿವಂತಿಕೆಯ ಮಹಡಿಯಲ್ಲಿ ಜೀವಿಸುವ ನಟನಟಿಯರು/ ಕ್ರೀಡಾಪಟುಗಳು/ ಉದ್ಯಮಿಗಳು/ಸ್ವಾಮೀಜಿ-ಮಠಾಧೀಶೆಯರು/ ರಾಜಕಾರಣಿಗಳು/ ಅಧಿಕಾರಿಗಳು/ ಅಧ್ಯಾಪಕರು/ ಸಾಹಿತಿಗಳು/ ಚಳವಳಿಗಾರರು ಮೊದಲಾದವರ ಪ್ರಗತಿಪರತೆಯು ಯಾವಾಗಲೂ ಒಂದು ಮಿತಿಗೆ ಒಳಪಟ್ಟಿರುತ್ತದೆ. ಸಮಯ ಸಂದರ್ಭ ವಾತಾವರಣಕ್ಕೆ ತಕ್ಕಂತೆ ಯಾವಾಗಲಾದರೂ ರಾಜಕೀಯ ಪಕ್ಷದ ಬಗೆಗಿನ ಈ ನಿಷ್ಠೆ ಅದಲು–ಬದಲಾಗಬಹುದು. ಕೊನೆಗೆ ಮೌನವನ್ನಾದರೂ ತಾಳಬಹುದು.
ಹಾಗಾಗಿ ಇಂತಹವರ ಪ್ರಗತಿಪರತೆಯನ್ನು/ಜೀವಪರತೆಯನ್ನು ಅಂತರ ಕಾಯ್ದುಕೊಂಡು ನೋಡಬೇಕಷ್ಟೆ. ಅತಿಯಾಗಿ ನಂಬಬಾರದು. ವಿಜೃಂಬಿಸಬಾರದು. ಇದು ಯಾವುದೋ ಒಂದು ರಾಜಕೀಯ ಪಕ್ಷಕ್ಕೆ ಐಡಿಯಾಲಜಿಗೆ ಸೀಮಿತವಲ್ಲ. ಅಧಿಕಾರ ಅದಲು–ಬದಲಾದಾಗ ಪಕ್ಷಗಳ ಧೋರಣೆಗಳೂ/ಆ ಪಕ್ಷಗಳ ಬೆಂಬಲ ಮತ್ತು ವಿರೋಧವೂ ಅದಲು ಬದಲಾಗುತ್ತವೆ. ನಾನು ಹೇಳಿದ್ದಕ್ಕೆ ಕೆಲವು ಅಪವಾದಗಳು ಸಿಕ್ಕಾವು.




