ಪಾಪದ ಪಾಲು ಧಿಕ್ಕರಿಸಿ ಹೊರಟ ಪಾಂಡುರಂಗ

12 months ago

ಪಾಂಡುರಂಗ, ಸದಾನಂದನ ಏಕೈಕ ಪತ್ರ. ಸದಾನಂದ ಬಡ್ಡಿ ವ್ಯಾಪಾರ ಮಾಡುತ್ತಾನೆ. ಪಾಂಡುರಂಗ ವಿದೇಶದಲ್ಲಿ ಮೆರಿಟ್ ಸೀಟು ಪಡೆದು ಓದಿ ಅಲ್ಲಿಯೇ ಕೆಲಸಕ್ಕೆ ಸೇರಿದ. ಅಲ್ಲಿಯೇ ಜೊತೆಯಲ್ಲಿದ್ದ ತನ್ನ ಮನಸ್ಸಿಗೆ ಹೊಂದಿಕೊಳ್ಳುವ ಯುವತಿಯನ್ನು ಮದುವೆಯಾದ. ತಂದೆ ತಾಯಿಗೆ ಮದುವೆ ವಿಚಾರವನ್ನು ದೂರವಾಣಿಯಲ್ಲಿ ತಿಳಿಸಿದ. ಇವರಿಗೆ ಮಗುವಾಯಿತು. ಸದಾನಂದ ಮಗುವನ್ನು ನೋಡಲು ಸಹಜವಾಗಿ ಬಯಸಿದ. ಪಾಂಡುರಂಗ ಯಾವುದೇ ಕಾರಣಕ್ಕೂ ತಾವಾಗಲಿ ಅಮ್ಮನಾಗಲಿ ಮಗುವನ್ನು ನೋಡಲು ಬರುವ ಅವಶ್ಯಕತೆ ಇಲ್ಲ ಎಂದು ನೇರವಾಗಿ ಯಾವುದೇ ಮುಲಾಜಿಲ್ಲದೆ ಹೇಳಿದ.

ಸದಾನಂದ ಮತ್ತು ಅವನ ಹೆಂಡತಿ ಎಷ್ಟೇ ಬೇಡಿಕೊಂಡರು ಪಾಂಡುರಂಗನ ಮನಸ್ಸು ಕರಗಲಿಲ್ಲ. ಅಂತಿಮವಾಗಿ ಪಾಂಡುರಂಗನೇ ಒಂದು ದಿನ ಫೋನ್ ಮಾಡಿ ನಾನು ಸದ್ಯದಲ್ಲಿಯೇ ಬೆಂಗಳೂರಿಗೆ ಬರುತ್ತೇನೆ ಒಂದು ದಿನಗಳ ಕಾಲ ಮಾತ್ರ ಮನೆಯಲ್ಲಿ ಇರುತ್ತೇನೆ ಎಂದು ತಿಳಿಸಿದ. ಅವನ ಮಾತಿನಂತೆ ಕೆಲವು ದಿನಗಳ ನಂತರ ಪಾಂಡುರಂಗ ಅವನ ಹೆಂಡತಿ ಮತ್ತು ಮಗು ಇವರ ಮನೆಗೆ ಬಂದರು.

ಸದಾನಂದ ಮಗ ಮತ್ತು ಸೊಸೆ ಹಾಗೂ ಮಗುವಿಗೆ ಹೊರಡುವ ವೇಳೆಯಲ್ಲಿ ಬಂಗಾರದ ಆಭರಣಗಳನ್ನು ಕೊಟ್ಟ. ಇದನ್ನು ಪಾಂಡುರಂಗ ನೋಡಿದ ತಕ್ಷಣ ಅಪ್ಪ ನನಗೆ ಇವುಗಳು ಯಾವುದು ಬೇಡ ಎಂದು ಅವುಗಳನ್ನು ಕೈಯಲ್ಲೂ ಸಹ ಮುಟ್ಟದೆ ಹಿಂತಿರುಗಿಸಿದ.

ನಾವು ಪ್ರೀತಿಯಿಂದ ಕೊಟ್ಟದ್ದನ್ನು ನಿರಾಕರಿಸಬೇಡ. ನೀನು ಬೇಡ ಎಂದರೆ ನಮ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಇವರ ತಾಯಿ ಹೇಳಿದಳು.

ಇವುಗಳನ್ನು ತೆಗೆದುಕೊಂಡರೆ ನನ್ನ ಮನಸ್ಸಿಗೆ ನೋವಾಗುತ್ತದೆ ಎಂದು ಪ್ರತಿಯಾಗಿ ಪಾಂಡುರಂಗ ಹೇಳಿದ.

ಅದೇನೆಂದು ಮಾತನಾಡುತ್ತೀಯ ನಾವು ಕೊಡುವುದನ್ನು ತೆಗೆದುಕೊಂಡರೆ ನಿನ್ನ ಮನಸ್ಸಿಗೆ ನೋವು ಏಕೆ ಆಗುತ್ತದೆ ಸದಾನಂದ ಪ್ರಶ್ನಿಸಿದ.

ಆಗುತ್ತದೆ ನೋವು ಹೇಳಲೇ ಎಂದು ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಪಾಂಡುರಂಗ ಮಾತನಾಡಿದ.

ವಾದ ಮಾಡುವುದರಲ್ಲಿ ಅರ್ಥವಿಲ್ಲವೆಂದು ಸದಾನಂದ ಮತ್ತು ಅವನ ಹೆಂಡತಿ ಸುಮ್ಮನಾದರು.

ಮನೆಯಿಂದ ಹೊರಡುವ ವೇಳೆಯಲ್ಲಿ ಸದಾನಂದ ಪಾಂಡುರಂಗ ನೀನು ಯಾವ ಕಾರಣಕ್ಕೆ ಈ ರೀತಿಯಲ್ಲಿ ವರ್ತಿಸುತ್ತಿದ್ದೀಯ, ನಾವು ಎಷ್ಟೇ ಬೇಡ ಎಂದರು ನೀನು ಮೆರಿಟ್ ಸೀಟ್ ಎಂದು ವಿದೇಶಕ್ಕೆ ಹೋಗಿ ಓದಿದೆ, ನಮ್ಮನ್ನು ಒಂದು ಮಾತು ಕೇಳದೆ ಮದುವೆಯಾದೆ, ಕೊನೆಗೆ ನಿನ್ನ ಮಗುವನ್ನು ನೋಡಲು ನಮಗೆ ಹಲವಾರು ವರ್ಷಗಳ ಕಾಲ ಅವಕಾಶ ಕೊಡಲಿಲ್ಲ, ನಾವು ಮಾಡಿರುವ ತಪ್ಪಾದರೂ ಏನು ಎಂದು ಮಗನನ್ನು ಕೇಳಿದ.

ನಾನು ಇಷ್ಟು ದಿನ ಹೇಳಬಾರದು ಎಂದು ಇದ್ದೆ, ಈಗ ಹೇಳುತ್ತಿದ್ದೇನೆ ಕೇಳಿ ಎಂದು ಪಾಂಡುರಂಗ ಮಾತನಾಡಿದ.

ನಾನು ಪಿಯುಸಿ ತರಗತಿಯಲ್ಲಿದ್ದ ಒಂದು ಸಂದರ್ಭದಲ್ಲಿ ಮನೆಯ ಮುಂದೆ ಗಂಡ ಹೆಂಡತಿ ಬಂದಿದ್ದರು. ಅವರು ನಿನಗೆ ಸಾಲವನ್ನು ವಾಪಸ್ಸು ಕೊಡಲಿಲ್ಲ ಎಂದು ನೀನು ಅವನನ್ನು ಕೆಟ್ಟ ಪದದಿಂದ ಬೈದೆ. ಜೊತೆಗೆ ಅವನ ಮುಂದೆಯೇ ಅವನ ಹೆಂಡತಿಯ ಮೈ ಮೇಲಿದ್ದ ತಾಳಿಯನ್ನು ಬಿಡದೆ ಕಿತ್ತುಕೊಂಡೆ. ಆ ಸಂದರ್ಭದಲ್ಲಿ ಆ ಮಹಿಳೆಯ ಕಣ್ಣಿನಿಂದ ಹರಿದ ಕಣ್ಣೀರು ಮತ್ತು ಅವರ ಮುಖದಲ್ಲಿ ಅವರಿಗೆ ಆದಂತಹ ನೋವು ನಾನು ಗಮನಿಸಿದೆ. ಈ ರೀತಿಯಲ್ಲಿ ಯಾರದು ಕಣ್ಣೀರಿನಿಂದ ನಮ್ಮ ಮನೆಯನ್ನ ಉದ್ಧಾರ ಮಾಡಿಕೊಳ್ಳಲು ನನಗೆ ಸರಿ ಅನಿಸಲಿಲ್ಲ, ಆ ಕ್ಷಣದಲ್ಲಿಯೇ ನಿನ್ನ ಮತ್ತು ನಿನ್ನ ವ್ಯವಹಾರದ ಬಗ್ಗೆ ನನ್ನ ಮನಸ್ಸಿಗೆ ನಾಚಿಕೆಯಾಯಿತು. ಅಂದೇ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ನಿನ್ನ ಈ ಪಾಪದ ಸಂಪಾದನೆಯ ಹಣದಿಂದ ನಾನು ಪ್ರತಿಷ್ಠಿತ ಕಾಲೇಜಿನಲ್ಲಿ ಓದಬಾರದೆಂದು ಸಾಲವನ್ನು ಮಾಡಿ ಪರೀಕ್ಷೆಯನ್ನ ಬರೆದು ವಿದೇಶದಲ್ಲಿ ಪ್ರವೇಶವನ್ನು ಪಡೆದುಕೊಂಡೆ. ಮದುವೆಗೂ ಸಹ ನಿಮಗೆ ಹೇಳಲಿಲ್ಲ. ಏಕೆಂದರೆ ಆ ಪಾಪದ ಹಣದಲ್ಲಿ ನೀವು ಮದುವೆ ಹೆಸರಿನಲ್ಲಿ ಖರ್ಚು ಮಾಡುವುದು ನನಗೆ ಬೇಕಿರಲಿಲ್ಲ. ಇನ್ನೂ ನನಗೆ ಹುಟ್ಟಿರುವ ಮಗುವಿನ ಮೇಲೆ ನಿಮ್ಮ ದುಷ್ಟ ಮನಸ್ಸಿನ ಮುಖ ದರ್ಶನವಾಗಬಾರದು ಎಂಬ ಕಾರಣದಿಂದ ನಾನು ನಿಮಗೆ ಮಗುವನ್ನು ನೋಡಲು ಅವಕಾಶ ಕೊಡಲಿಲ್ಲ. ಆದರೆ ಈಗ ಎಷ್ಟೇ ಆಗಲಿ, ನೀವು ನನ್ನ ಹೆತ್ತವರು ಎನ್ನುವ ಕಾರಣದಿಂದ ಮನೆಗೆ ಬಂದು ದಿನದ ಮಟ್ಟಿಗೆ ನಿಮ್ಮ ಜೊತೆಯಲ್ಲಿ ಇದ್ದೇನೆ ಎಂದು ತನ್ನ ಮನಸ್ಸಿನಲ್ಲಿ ಹಲವಾರು ವರ್ಷಗಳಿಂದ ಮನಸ್ಸಿನಲ್ಲಿ ತುಂಬಿಕೊಂಡಿದ್ದ ಭಾವನೆಗಳೆಲ್ಲವನ್ನು ಮಾತಿನಲ್ಲಿ ಹೊರಹಾಕಿದ.

ನಿನ್ನನ್ನು ಹೆತ್ತು ಒಂದು ಹಂತದ ತನಕ ಬೆಳೆಸಿರುವುದು ಈ ನನ್ನ ಸಂಪಾದನೆಯಲ್ಲಿ ಅಲ್ಲವೇ ಎಂದು ಸದಾನಂದ ಸ್ವಲ್ಪ ಕೋಪದಿಂದ ಹೇಳಿದ.

ಹೌದು ನೀವು ಹೇಳುತ್ತಿರುವುದು ಸರಿ. ಅದಕ್ಕೆ ನಾನು ಸಂಪೂರ್ಣವಾಗಿ ನಿಮ್ಮ ಪಾಪದ ಹಣದ ಪಾಲಿನಿಂದ ಮುಕ್ತವಾಗಿ ಬದುಕಲು ಸಾಧ್ಯವಿಲ್ಲ. ಆದರೂ ಕಳೆದ ವರ್ಷ ಬರಗಾಲ ಬಂದಾಗ ನಿಮ್ಮ ಹೆಸರಿನಲ್ಲಿ ಸರ್ಕಾರಕ್ಕೆ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದೇನೆ. ಈ ಮೂಲಕವಾದರೂ ಸ್ವಲ್ಪ ಮಟ್ಟಿಗೆ ಪಾಪದ ಪಾಲನ್ನು ಕಳೆದುಕೊಳ್ಳುವ ಪ್ರಯತ್ನ ನಡೆಸಿದ್ದೇನೆ ಎಂದು ಹೇಳಿದ.

ನನಗೆ ಗೊತ್ತಿದ್ದಿದ್ದು ಇದೊಂದೇ ವ್ಯಾಪಾರ. ಇದು ಬಿಟ್ಟು ಬೇರೆ ಇರಲಿಲ್ಲ. ಅದಕ್ಕಾಗಿ ಆ ರೀತಿ ಬದುಕಿದ್ದೇನೆ ಎಂದು ಸದಾನಂದ ಸಮರ್ಥಿಸಿಕೊಳ್ಳಲು ಹೊರಟ.

ಆಗ ಅವಶ್ಯಕತೆ ಇತ್ತು. ಈಗಲಾದರೂ ಬಿಡಬಹುದಲ್ಲ. ಈಗಲೂ ನೀವು ಅದೇ ನಡವಳಿಕೆಯನ್ನ ಮುಂದುವರೆಸಿದ್ದೀರಿ. ಅದಕ್ಕಾಗಿ ನನಗೆ ನಿಮ್ಮ ಜೊತೆಯಲ್ಲಿ ಇರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ.

ಸದಾನಂದನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಸದಾನಂದನ ಹೆಂಡತಿ ಮಗನ ಮಾತುಗಳಿಗೆ ಸ್ವಲ್ಪಮಟ್ಟಿಗೆ ವಿಚಲಿತಳಾದಳು. ಮಗನ ಮಾತಿನಲ್ಲಿ ಸತ್ಯವಿದೆ ಎಂದು ಅನಿಸಿತು, ಆದರೆ ಗಂಡನಿಗೆ ಬುದ್ಧಿ ಹೇಳುವ ಧೈರ್ಯ ಇವಳಿಗಿಲ್ಲ.

ಅಪ್ಪ ಮತ್ತು ಮಗನ ನಡುವಿನ ಸಂಭಾಷಣೆಯನ್ನು ನೋಡುತ್ತಿದ್ದ ಪಾಂಡುರಂಗನ ಹೆಂಡತಿಗೆ ಏನೂ ಅರ್ಥವಾಗುತ್ತಿಲ್ಲ. ಕಾರಣ ಅವಳು ವಿದೇಶದವಳು. ಅವಳಿಗೆ ಇವರಾಡುವ ಭಾಷೆ ತಿಳಿಯುತ್ತಿಲ್ಲ. ಅವಳ ಪಾಡಿಗೆ ಅವಳು ತನ್ನ ಮಗುವಿನೊಂದಿಗೆ ಕುಳಿತಿದ್ದಾಳೆ. ಆದರೆ ಏನು ಚರ್ಚೆ ಆಗುತ್ತಿದೆ ಎನ್ನುವುದು ಮಾತ್ರ ತಿಳಿಯುತ್ತಿತ್ತು.

ಅಂದು ಮನೆಯಿಂದ ಹೊರಟ ಮಗ ಸೊಸೆ ಮತ್ತೆ ಎಂದೂ ಇವರ ಮನೆಯ ಕಡೆ ಬಂದಿಲ್ಲ. ಒಂದೊಂದು ವೇಳೆ ದೊಡ್ಡದಾದ ಮನೆಯಲ್ಲಿ ಗಂಡ ಹೆಂಡತಿ ಇವರಿಬ್ಬರೇ ಇರುವುದು. ಸಾಕಷ್ಟು ಆಸ್ತಿ ಸಂಪತ್ತು ಹಣ ಎಲ್ಲವನ್ನು ನೋಡಿದಾಗ ಸದಾನಂದನಿಗೆ ಬದುಕಿನಲ್ಲಿ ಯಾವ ಅರ್ಥವೂ ಇಲ್ಲ ಎಂದು ಅನಿಸುತ್ತದೆ. ಆದರೆ ಇವನ ಹಣದ ಆಸೆ ಮಾತ್ರ ಇವನನ್ನು ಬದಲಾಯಿಸುತ್ತಿಲ್ಲ. ಇವನು ಬದಲಾಗುತ್ತಿಲ್ಲ. ಮಗ ಇವನೊಂದಿಗೆ ಇರಲು ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಸದಾನಂದ ಮತ್ತು ಅವರ ಹೆಂಡತಿ ಇವರ ಪಾಡಿಗೆ ಇವರು ಇದ್ದಾರೆ. ಪಾಂಡುರಂಗ ದೂರದ ದೇಶದಲ್ಲಿ ಇದ್ದಾನೆ.

ಎಷ್ಟೋ ಬಾರಿ ಸದಾನಂದನಿಗೆ ಮಗನ ಮೇಲೆ ವ್ಯಾಮೋಹ ಬಂದು ವೃತ್ತಿಯನ್ನು ಬಿಡಬೇಕೆಂದು ಅನಿಸುತ್ತದೆ. ಆದರೆ ಹಣದ ವ್ಯಾಮೋಹ ಕಾಡುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply