ಕುಡುಪು ಗ್ರಾಮದಲ್ಲಿ ಗುಂಪು ಹತ್ಯೆ

12 months ago

ಬೆಂಗಳೂರು: ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿದ ಆರೋಪದಲ್ಲಿ ‌ಯುವಕನೊಬ್ಬನನ್ನು ಗುಂಪೊಂದು ಮನಬಂದಂತೆ ಥಳಿಸಿ ಹತ್ಯೆ ಮಾಡಿದ ಘಟನೆ ಮಂಗಳೂರಿನ ಕುಡುಪು ಗ್ರಾಮದಲ್ಲಿ ನಡೆದಿದೆ. ಹತ್ಯೆಗೀಡಾಗಿರುವ ವ್ಯಕ್ತಿಯನ್ನು ಕೇರಳದ ವಯನಾಡು ನಿವಾಸಿ ಅಶ್ರಫ್‌ ಎಂದು ಗುರುತಿಸಲಾಗಿದೆ.

ಈತ ಕೇರಳದ ವಯನಾಡ್‌ ಜಿಲ್ಲೆಯ ಸುಲ್ತಾನ್‌ ಬತ್ತೇರಿ ತಾಲ್ಲೂಕಿನ ಪುಲ್ಪಲ್ಲಿ ಗ್ರಾಮದವನು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 27ರಂದು ಸಂಜೆ ಸುಮಾರು 5.30 ಗಂಟೆಗೆ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಸಮೀಪದಲ್ಲಿ ಯುವಕನ ಮೃತದೇಹ ಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬಂದಿತ್ತು. ಸ್ಥಳೀಯ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹದಲ್ಲಿ ಗಂಭೀರ ಗಾಯಗಳು ಕಂಡುಬಂದಿರಲಿಲ್ಲ. ಅನುಮಾನಾಸ್ಪದ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದೆವು. ಈ ಬಗ್ಗೆ ತನಿಖೆ ನಡೆಸಿದಾಗ ಮೈದಾನದಲ್ಲಿ ಸ್ಥಳೀಯರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಹೋದ ಯುವಕ ಪಾಕಿಸ್ತಾನ ಪರವಾದ ಘೋಷಣೆ ಕೂಗಿದ್ದಾನೆ. ಇದರಿಂದ ಕೆರಳಿದ ಸ್ಥಳೀಯ ಯುವಕರು ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.

ಆತನ ಮೇಲೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಿದ್ದರು. ಸ್ಥಳದಲ್ಲಿದ್ದ ಕೆಲವರು ತಡೆಯಲು ಯತ್ನಿಸಿದರೂ ಕೇಳದೇ ಹಲ್ಲೆ ನಡೆಸಿದ್ದರು. ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಎಂದರು.

ಅಶ್ರಫ್‌ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದ್ದು, ಆಂತರಿಕ ರಕ್ತಸ್ರಾವ ಮತ್ತು ಆಘಾತಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳು ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಅವರು ಅಧಿಕೃತ ಗುರುತಿಸುವಿಕೆಗಾಗಿ ಮತ್ತು ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಪರವಾಗಿ ಘೋಷಣೆ ಹಾಕುವುದು ದೇಶದ್ರೋಹ ಎಂದು ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇಂತಹ ಘಟನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಹದಿನೈದು ಜನರ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಯಾರೇ ಪಾಕಿಸ್ತಾನದ ಪರವಾಗಿ ಮಾತನಾಡಿದರೂ ಅದು ತಪ್ಪು ಎಂದರು.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಭಾರತದಲ್ಲಿದ್ದುಕೊಂಡು ಪಾಕಿಸ್ತಾನ್‌ ಜಿಂದಾಬಾದ್ ಎಂದು ಘೋಷಣೆ ಕೂಗುವವರನ್ನು ನಾನು ಬೆಂಬಲಿಸುವುದಿಲ್ಲ. ನನ್ನ ಮನೆಯವರೇ ಹಾಗೆ ಕೂಗಿದ್ದರೂ ಅವರ ಮೇಲೆ ಕ್ರಮವಾಗಬೇಕು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಯಾಕೆ ಕೂಗುತ್ತಿದ್ದಾರೆ ಎಂಬುದಕ್ಕೆ ನೂರಾರು ಕಾರಣಗಳಿವೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ವಿಷಯಾಂತರಗಳು ಆಗಬಾರದು ಎಂದರು.

ಅವರ ಮೇಲೆ ಆಗಿರುವ ಅತ್ಯಾಚಾರಗಳೇನು ಕಡಿಮೆಯೇ? ಅದನ್ನೂ ನಾವು ನೋಡಬೇಕು ತಾನೇ? ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ನಾನಾ ಭಾಗಗಳಲ್ಲೂ ಆ ರೀತಿಯ ಘಟನೆಗಳು ನಡೆದಿವೆ. ಯಾಕೆ ನಡೆಯುತ್ತಿದೆ ಎಂಬುದಕ್ಕೆ ನಾನು ಹೊಣೆಗಾರ ಅಲ್ಲ ಎಂದು ಹೇಳಿದರು.

ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಿರಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ. 1971ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಪಾಕಿಸ್ತಾನದವರ ಮಂಡಿಯೂರಿಸಿದ್ದರು. ಈಗ ಲಕ್ಷಾಂತರ ಜನರ ಮಂಡಿಯೂರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತೀರ್ಮಾನಗಳಿಗೆ ನಮ್ಮ ಬೆಂಬಲವಿದೆ. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಕ್ಕಾಗಲೂ ಇದನ್ನೇ ಹೇಳಿದ್ದೇನೆ. ಈ ವಿಚಾರದಲ್ಲಿ ಅಭಿಪ್ರಾಯ ಭಿನ್ನತೆ ಇಲ್ಲ ಎಂದರು.

ಹತ್ಯೆ ಆರೋಪದದಲ್ಲಿ ಹಲವು ಯುವಕರನ್ನು ಬಂಧಿಸಿರುವ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿರುವ ಬಿಜೆಪಿ ನಾಯಕ ಸುನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ಕ್ರಮ ಖಂಡನೀಯ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಈ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು ಎಂದು ಟೀಕಿಸಿದ್ದಾರೆ.

ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು. ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ. ಇಂತಹ ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಖಂಡಿಸಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಲಾಗಿದೆ. ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸ್ ಕಿರುಕುಳವನ್ನು ಸಮಾಜ ಖಂಡಿಸುತ್ತದೆ ಎಂದಿದ್ದಾರೆ.

Leave a Reply