ಪ್ರಕರಣದ ತನಿಖೆಗೆ ತಕ್ಷಣವೆ ಎಸ್ಐಟಿ ರಚಿಸಿ: ಸಿಪಿಐಎಂ ಆಗ್ರಹ
ಠಾಣಾಧಿಕಾರಿ ಅಮಾನತು ಗಮನ ಬೇರೆಡೆ ಸೆಳೆಯುವ ಗಿಮಿಕ್
ಮಂಗಳೂರು: ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವ ಕುಡುಪು ಗುಂಪು ಹತ್ಯೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದಲ್ಲಿ ಸ್ಥಳೀಯ ಠಾಣಾಧಿಕಾರಿ ಹಾಗೂ ಕಾನ್ಸ್ ಟೇಬಲ್ ಗಳ ಅಮಾನತು ಆಕ್ರೋಶಿತ ಜನತೆಯ ಗಮನ ಬೇರೆಡೆಗೆ ಸೆಳೆಯುವ ಸರಕಾರದ ತಂತ್ರ ಅಲ್ಲದೆ ಮತ್ತೇನಲ್ಲ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಪ್ರಕರಣದ ಕುರಿತು ಠಾಣಾಧಿಕಾರಿಯಷ್ಟೆ ಮಾಹಿತಿ ಪೊಲೀಸ್ ಕಮೀಷನರ್ ಅವರಿಗೂ ಇತ್ತು. ಅವರು ಮಾಧ್ಯಮಗಳು, ರಾಜಕೀಯ ಕಾರ್ಯಕರ್ತರ ಸತತ ಪ್ರಶ್ನೆಗಳಿಗೆ 36 ಗಂಟೆಗಳ ದೀರ್ಘ ಮೌನ ಪಾಲಿಸಿದ್ದೇ ಇದಕ್ಕೆ ಸಾಕ್ಷಿ. ಹೀಗಿರುತ್ತಾ, ಪ್ರಕರಣ ಮುಚ್ಚಿ ಹಾಕುವ ಯತ್ನದ ಆರೋಪದಲ್ಲಿ ಕೆಳ ಹಂತದ ಅಧಿಕಾರಿಗಳನ್ನು ಮಾತ್ರ ಅಮಾನತುಗೊಳಿಸುವುದು ನ್ಯಾಯಯುತ ಕ್ರಮ ಅಲ್ಲ. ಠಾಣಾಧಿಕಾರಿಯ ಅಮಾನತನ್ನು ಸ್ವಾಗತಿಸುತ್ತಲೆ, ನೇರ ಹೊಣೆಗಾರರಾದ ಪೊಲೀಸ್ ಕಮೀಷನರ್ ಅಗರವಾಲ್ ರವರನ್ನೂ ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ಸಮಾನ ಮನಸ್ಕ ಜನಪರ ಸಂಘಟನೆಗಳನ್ನು ಜೊತೆ ಸೇರಿಸಿ ಹೋರಾಟವನ್ನು ಸಂಘಟಿಸಲಾಗುವುದು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಎಚ್ಚರಿಕೆ ನೀಡಿದೆ.
ಹಲ್ಲೆಕೋರರನ್ನು ರಕ್ಷಿಸುವ ಉದ್ದೇಶದಿಂದ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸ್ ಇಲಾಖೆ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿತ್ತು ಎಂಬ ಆರೋಪವನ್ನು ಸರಕಾರ ಕೊನೆಗೂ ಒಪ್ಪಿಕೊಂಡಿದೆ. ಆದರೆ, ಈ ನಾಚಿಕೆಗೇಡಿನ ಪ್ರಯತ್ನದ ರೂವಾರಿ ಪೊಲೀಸ್ ಕಮೀಷನರ್ ಅವರನ್ನು ರಕ್ಷಿಸುವ ಯತ್ನವನ್ನು ಸರಕಾರ ಮಾಡಿದೆ. ಘಟನೆ ನಡೆದ ದಿನವೆ ಪೊಲೀಸ್ ಕಮೀಷನರ್ ಅವರಿಗೆ ಗುಂಪು ಹತ್ಯೆಯ ಮಾಹಿತಿ ದೊರಕಿತ್ತು. ಮಾಧ್ಯಮದ ಪ್ರತಿನಿಧಿಗಳೂ ಈ ಕುರಿತು ಕಮೀಷನರ್ ಬಳಿ ಮಾಹಿತಿ ಕೇಳಿದ್ದರು. ಆದರೆ, ಕಮೀಷನರ್ ಉದ್ದೇಶ ಪೂರ್ಚಕವಾಗಿ ಮೌನ ವೃತ ಪಾಲಿಸಿದ್ದರು ಎಂದಿದೆ.
ಅದಲ್ಲದೆ, ಘಟನೆ ನಡೆದ ಮಾರನೆಯ ದಿನ ಮುಸ್ಸಂಜೆ ಶವಾಗಾರದಲ್ಲಿ ಮೃತ ದೇಹವನ್ನು ವೀಕ್ಷಿಸಲು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರು, ಸಿಪಿಐಎಂ ಪಕ್ಷದ ಎರಡು ಜನ ಜಿಲ್ಲಾ ಸಮಿತಿ ಸದಸ್ಯರು ತೆರಳಿದ್ದರು. ಆ ಸಂದರ್ಭ ಸ್ಥಳದಲ್ಲಿದ್ದ ಕಾನೂನು ಸುವ್ಯವಸ್ಥೆ ಡಿಸಿಪಿ ಬಳಿ ಆಳವಾದ ಗಾಯಗಳಿರುವ ಕುರಿತು ಪ್ರಶ್ನಿಸಿದಾಗ, “ಅದು ತರಚಿದ ಗಾಯ, ಸಾಮಾನ್ಯವಾಗಿ ಅಷ್ಟಕ್ಕೆ ಕುಟುಂಬದವರ ಒಪ್ಪಿಗೆ ಇಲ್ಲದೆ ಶವ ಪರೀಕ್ಷೆ ಮಾಡುವುದಿಲ್ಲ” ಎಂದು ಬೇಜವಾಬ್ದಾರಿ ಉತ್ತರ ನೀಡಿ ಅಸಹಜ ಸಾವು ಎಂದು ಯುಡಿಆರ್ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದರು. ಇದೆಲ್ಲವೂ ಕಮೀಷನರ್ ಕಚೇರಿಗೆ ಘಟನೆಯ ಪೂರ್ತಿ ವಿವರ ಗೊತ್ತಿತ್ತು , ಮುಚ್ಚಿ ಹಾಕುವ ಸಂಚು ನಡೆಯುತ್ತಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ಹೇಳಿದೆ.
ಈಗ ಜನಾಕ್ರೋಶ ತೀವ್ರಗೊಂಡು ಪೊಲೀಸ್ ಇಲಾಖೆಯ ಜೊತೆಗೆ ಕಾಂಗ್ರೆಸ್ ಸರಕಾರದ ಮಾನ ಬೀದಿಯಲ್ಲಿ ಹರಾಜು ಆಗುತ್ತಿದೆ. ಇಂತಹ ಜನಾಕ್ರೋಶದಿಂದ ಪಾರಾಗಲು ವಿವಿಧ ಪ್ರಕರಣಗಳಲ್ಲಿ ಹೆಸರು ಕೆಡಿಸಿಕೊಂಡಿರುವ, ಗುಂಪು ಹತ್ಯೆಯ ಪ್ರಧಾನ ಆರೋಪಿ ಜೊತೆ ಆತ್ಮೀಯತೆ ಹೊಂದಿದ್ದ ಸ್ಥಳೀಯ ಠಾಣಾಧಿಕಾರಿ, ಹಾಗೂ ಕಾನ್ಸ್ ಟೇಬಲ್ ಗಳನ್ನು ಬಲಿಕೊಟ್ಟು ಜನಾಕ್ರೋಶ ತಣಿಸುವ ಯತ್ನ ನಡೆಸಲಾಗಿದೆ. ಅದೇ ಸಂದರ್ಭ ಆಳುವ ಪಕ್ಷ ಹಾಗೂ ಜಿಲ್ಲೆಯ ಅತಿ ಪ್ರಭಾವಿ ರಾಜಕಾರಣಿಯ ಆಪ್ತ ವಲಯದಲ್ಲಿರುವ ಪೊಲೀಸ್ ಕಮೀಷನರ್ ಅಗ್ರವಾಲ್ ರನ್ನು ರಕ್ಷಿಸುವ ಯತ್ನ ಮಾಡಲಾಗಿದೆ. ಇದನ್ನು ಯಾವುದೆ ಕಾರಣಕ್ಕೂ ಮಂಗಳೂರಿನ ನಾಗರಿಕ ಸಮಾಜ ಒಪ್ಪುವುದಿಲ್ಲ. ಮಂಗಳೂರನ್ನು ಕ್ರೈಂ ಸಿಟಿಯಾಗಿ ಪರಿವರ್ತಿಸಿದ, ದಂಧೆಕೋರರ ಜೊತೆ ಶಾಮೀಲಾಗಿರುವ, ಠಾಣಾಧಿಕಾರಿಗಳನ್ನೂ ಭ್ರಷ್ಟರನ್ನಾಗಿಸಿರುವ, ಮಾಬ್ ಲಿಂಚಿಂಗ್ ಪ್ರಕರಣವನ್ನು ಮುಚ್ಚಿ ಹಾಕಲು ಮೌನ ಸಮ್ಮತಿ ನೀಡಿದ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ರವರನ್ನೂ ತಕ್ಷಣ ದಿಂದಲೆ ಅಮಾನತುಗೊಳಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಹಾಗೆಯೆ, ಗುಂಪು ಹತ್ಯೆ ಪ್ರಕರಣದ ತನಿಖೆಯನ್ನು ಕಳಂಕಿತ ಹಿರಿಯ ಅಧಿಕಾರಿಗಳ ದಂಡೇ ತುಂಬಿಕೊಂಡಿರುವ ಮಂಗಳೂರು ಕಮಿಷನರೇಟ್ ಪೊಲೀಸರು ನಡೆಸುವುದು ನೈತಿಕವಾಗಿವಾಗಿ ಸರಿಯಲ್ಲ, ಪ್ರಕರಣದಲ್ಲಿ ನ್ಯಾಯಯುತ ತನಿಖೆಯ ಖಾತರಿಯೂ ಇಲ್ಲ. ಅದರಿಂದಾಗಿ, ಪ್ರಕರಣದ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದ ವಿಶೇಷ ತನಿಖಾ ತಂಡ ನೇಮಿಸಬೇಕು, ಹಾಗೂ ಪೊಲೀಸರು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಆರೋಪದ ತನಿಖೆಯನ್ನೂ ಈ ತನಿಖಾ ತಂಡದ ವ್ಯಾಪ್ತಿಗೆ ತರಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ. ರಾಜ್ಯ ಸರಕಾರ ಈ ಕುರಿತು ಕ್ರಮ ಜರುಗಿಸದಿದ್ದಲ್ಲಿ ಸಮಾನ ಮನಸ್ಕರನ್ನು ಜೊತೆ ಸೇರಿಸಿ ಹೋರಾಟಗಳನ್ನು ಸಂಘಟಿಸಲಾಗುವುದು ಎಂದು ಅದು ಎಚ್ಚರಿಸಿಕೆ ನೀಡಿದೆ.




