ಮಾಬ್ ಲಿಂಚಿಂಗ್ ಪ್ರಕರಣದ ಆರೋಪಿಗಳಿಗೆ ಜಾಮೀನು
ಕುಡುಪು ಗುಂಪು ಹತ್ಯೆಯ ಗಂಭೀರ ಪ್ರಕರಣದ ಇಬ್ಬರು ಆರೋಪಿಗಳಿಗೆ 35 ದಿನಗಳ ಕಡಿಮೆ ಅವಧಿಯಲ್ಲಿ ಜಾಮೀನು ದೊರಕಿರುವುದು ವಿಷಾದಕರ ಬೆಳವಣಿಗೆ, ಜಾಮೀನು ಮಂಜೂರಾತಿಗೆ ನ್ಯಾಯಾಲಯ ಪರಿಗಣಿಸಿರುವ ಅಂಶಗಳು ಸಿಪಿಐಎಂ ಹಾಗು ನಾಗರಿಕ ಸಂಘಟನೆಗಳು ಘಟನೆಯ ಸಂದರ್ಭ ಪೊಲೀಸ್ ಇಲಾಖೆಯ ಮೇಲೆ ಮಾಡಿರುವ ಆರೋಪಗಳನ್ನು ಪುಷ್ಟೀಕರಿಸಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಕುಡುಪು ಗುಂಪು ಹತ್ಯೆ ನಡೆದು ಗಂಟೆಗಳ ಒಳಗಡೆ ವಿಷಯ ಪೊಲೀಸ್ ಕಮೀಷನರ್ ಕಚೇರಿ ತಲುಪಿತ್ತು. ಈ ಕುರಿತು ಸಿಪಿಐಎಂ ಸಹಿತ ಹಲವು ಸಾಮಾಜಿಕ ಸಂಘಟನೆಗಳು, ಮಾಧ್ಯಮ ಪ್ರತಿನಿಧಿಗಳು ಪೊಲೀಸ್ ಕಮೀಷನರ್ ಬಳಿ ಮಾಹಿತಿ ಕೇಳಿದರೂ, ಆಗಿನ ಕಮೀಷನರ್ ಅನುಪಮ್ ಅಗ್ರವಾಲ್ ಸತತ 36 ತಾಸು ಮೌನ ಪಾಲಿಸಿದ್ದರು. ನಿರ್ಲಕ್ಷ್ಯ ವಹಿಸಿದ್ದರು. ಘಟನೆಯ ವಿವರ ತಿಳಿದೂ ಗುಂಪು ಹತ್ಯೆಯ ಭಾಗಿದಾರನಿಂದಲೆ ದೂರು ಬರೆಸಿ ಅಸಹಜ ಸಾವು ಎಂದು ಎಫ್ಐಆರ್ ಬದಲಿಗೆ ಯುಡಿಆರ್ ದಾಖಲಿಸಿದ್ದರು. ಆಳವಾದ ಗಾಯಗಳಿದ್ದರೂ, ತರಚು ಗಾಯಗಳು ಎಂದು ನಾಗರಿಕ ಸಂಘಟನೆಗಳನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಸತತ ಸಾರ್ವಜನಿಕ ಒತ್ತಡದಿಂದಾಗಿ ಅನಿವಾರ್ಯವಾಗಿ 36 ತಾಸುಗಳ ತರುವಾಯ ಪೋಸ್ಟ್ ಮಾರ್ಟಂ ಮಾಡುವ, ಅದರ ಆಧಾರದಲ್ಲಿ ಕೊಲೆ ಪ್ರಕರಣ ಎಂದು ಎಫ್ಐಆರ್ ದಾಖಲಿಸಲು ಮುಂದಾದರು. ಆ ಸಂದರ್ಭದಲ್ಲೂ ಸು ಮಟೊ ಎಫ್ಐಆರ್ ದಾಖಲಿಸುವ ಬದಲಿಗೆ ಗುಂಪು ಹತ್ಯೆ ನಡೆಸಿದ ದುಷ್ಕರ್ಮಿಗಳ ಒಡನಾಟದ ವ್ಯಕ್ತಿಯನ್ನೆ ಆಯ್ಕೆ ಮಾಡಿ ದೂರು ಬರೆಸಿಕೊಂಡು ಎಫ್ಐಆರ್ ದಾಖಲಿಸಿದರು. ಕಮೀಷನರ್ ಸಹಿತ ಹಿರಿಯ ಅಧಿಕಾರಿಗಳ ಗಮನದಲ್ಲಿ ಇದ್ದೇ ನಡೆದ ಈ ಎಲ್ಲಾ ಪಿತೂರಿ, ಪ್ರಹಸನಕ್ಕೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಹೊಣೆಯಾಗಿಸಿ ಅಮಾನತುಗೊಳಿಸಿ ತಾವುಗಳು ಬಚಾವ್ ಆದರು, ಪ್ರಕರಣವನ್ನು ಪೂರ್ತಿ ಹಳಿ ತಪ್ಪಿಸಿಬಿಟ್ಟರು.
ಸಿಪಿಐಎಂ ಪಕ್ಷ ಈ ಕುರಿತು ಆ ಸಂದರ್ಭದಲ್ಲೆ ಸರಕಾರದ ಗಮನ ಸೆಳೆದಿತ್ತು. ಪ್ರಕರಣ ಮುಚ್ಚಿ ಹಾಕುವ, ದುರ್ಬಲಗೊಳಿಸುವ ಯತ್ನಕ್ಕೆ ಪೊಲೀಸ್ ಕಮೀಷನರ್ ಹಾಗು ಹಿರಿಯ ಅಧಿಕಾರಿಗಳನ್ನು ಹೊಣೆ ಆಗಿಸುವಂತೆ, ಪ್ರಕರಣದ ತನಿಖೆಗೆ ನುರಿತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸುವಂತೆ ಆಗ್ರಹಿಸಿತ್ತು. ಈ ಕುರಿತು ಸಂತ್ರಸ್ತ ಕುಟುಂಬ ಹಾಗು ಹಲವು ಸಾಮಾಜಿಕ ಸಂಘಟನೆಗಳು ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸ್ಪೀಕರ್ ಯು ಟಿ ಖಾದರ್ ಬಳಿ ಹಲವು ಬಾರಿ ತೆರಳಿ ಮನವಿ ಸಲ್ಲಿಸಿದ್ದವು. ಈ ಇಬ್ಬರೂ ಮನವಿ, ಅಗ್ರಹ, ಸಾರ್ವಜನಿಕ ಒತ್ತಾಯವನ್ನು ಪೂರ್ತಿ ನಿರ್ಲಕ್ಷಿಸಿದರು. ಪೊಲೀಸ್ ಕಮೀಷನರ್ ಅಗ್ರವಾಲ್ ನಿಲುವಿನ ಪರ ನಿಂತರು.
ಅದರ ಪರಿಣಾಮ ತಿಂಗಳ ಒಳಗಡೆ ಗುಂಪು ಹತ್ಯೆಯ ಆರೋಪಿಗಳಿಗೆ ಜಾಮೀನು ದೊರಕತೊಡಗಿದೆ. ಜಾಮೀನು ಮಂಜೂರಾತಿ ಆದೇಶಕ್ಕೆ ಅಸಹಜ ಸಾವು ಎಂದು ಯುಡಿಆರ್ ಮಾಡಿರುವುದು, ಒಂದು ದಿನ ತಡವಾಗಿ ಎಫ್ಐಆರ್ ದಾಖಲಿಸಿರುವುದು, ದೂರುದಾರ ಘಟನೆಯ ಪ್ರತ್ಯಕ್ಷದರ್ಶಿ ಆಗಿದ್ದರೂ ಒಂದು ದಿನ ತಡವಾಗಿ ದೂರು ನೀಡಿರುವುದು, ದೂರಿನ ಸಾರಾಂಶ ಕೊಲೆಯ ಬದಲಿಗೆ ನರಹತ್ಯೆಯ ಸೆಕ್ಷನ್ ಗಳಿಗೆ ಹತ್ತಿರವಾಗಿದೆ ಎಂಬ ಅಂಶಗಳು ಜಾಮೀನು ನೀಡಲು ಪ್ರಮುಖ ಕಾರಣಗಳಾಗಿ ನ್ಯಾಯಾಲಯ ಪರಿಗಣಿಸಿದೆ. ಇದು ಪ್ರಕರಣದಲ್ಲಿ ಕಮೀಷನರ್ ಸಹಿತ ಹಿರಿಯ ಅಧಿಕಾರಿಗಳ ಶಾಮೀಲಾತಿ, ತನಿಖೆಗೆ ವಿಶೇಷ ತನಿಖಾ ತಂಡದ ರಚನೆಗೆ ನಮ್ಮ ಆಗ್ರಹಗಳನ್ನು ಸಮರ್ಥಿಸುತ್ತದೆ. ಸರಕಾರ ಈಗಲಾದರು ಕುಡುಪು ಗುಂಪು ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬೇಕು,ಆಗಿನ ಕಮೀಷನರ್ ಸಹಿತ ಹಿರಿಯ ಅಧಿಕಾರಿಗಳ ಶಾಮೀಲಾತಿಯ ಆರೋಪದ ಕುರಿತು ತನಿಖೆ ನಡೆಸಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
– ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ




