ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆ ನಡೆಸಿ: ಸಿದ್ದರಾಮಯ್ಯ

1 year ago

ಬೆಂಗಳೂರು: ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿ.ವೈ.ವಿಜಯೇಂದ್ರ ಅವರು ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯೇಂದ್ರ ಆಮಿಷ ಒಡ್ಡಿರುವ ಕುರಿತಂತೆ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕು  ಎಂದು ಒತ್ತಾಯಿಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಿಜಯೇಂದ್ರ ನಮ್ಮ ಮನೆಗೆ ಬಂದು ವಕ್ಪ್ ಆಸ್ತಿ ಕಬಳಿಕೆಯ ತನಿಖೆ ನಡೆಸಿ ನೀಡಿರುವ ವರದಿ ಬಗ್ಗೆ ಮೌನವಹಿಸುವಂತೆ ಕೇಳಿಕೊಂಡಿದ್ದು ಮಾತ್ರವಲ್ಲ ಇದಕ್ಕಾಗಿ 150 ಕೋಟಿ ರೂಪಾಯಿಗಳ ಆಮಿಷವೊಡ್ಡಿದ್ದರು. ನಾನು ಅವರಿಗೆ ಗದರಿಸಿ ಮನೆಯಿಂದ ಓಡಿಸಿದ್ದೆ ಎಂದು ಮಾಣಿಪ್ಪಾಡಿ ಹೇಳಿದ್ದಾರೆ ಎಂದಿದ್ದಾರೆ.

ಅದರ ನಂತರ ಈ ಎಲ್ಲ ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ’’ ಎಂದು ತಿಳಿಸಿದ್ದಾರೆ. ಆದರೆ ’ನಾ ಖಾವೂಂಗಾ, ನಾ ಖಾನೆ ದೂಂಗಾ’’ ಎಂದು ಊರೆಲ್ಲ ಡಂಗೂರ ಹೊಡ್ಕೊಂಡು ತಿರುಗಾಡುವ ನರೇಂದ್ರ ಮೋದಿಯವರು ಈ ಆರೋಪದ ಬಗ್ಗೆ ಮೌನವಾಗಿರುವುದು ಸಂಶಯವನ್ನು ಮಾತ್ರವಲ್ಲ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ವಕ್ಪ್ ಆಸ್ತಿ ವಿಚಾರದಲ್ಲಿ ವಿಜಯೇಂದ್ರ ಅವರು ವಹಿಸುತ್ತಿರುವ ಆಸಕ್ತಿಯನ್ನ ನೋಡಿದರೆ ಅವರು ಮತ್ತು ಅವರ ಕುಟುಂಬ ವರ್ಗ ವಕ್ಫ್ ಆಸ್ತಿ ಕಬಳಿಕೆಯಲ್ಲಿ ನೇರವಾಗಿ ಷಾಮೀಲಾಗಿರುವಂತೆ ಕಾಣುತ್ತಿದೆ. ಅವರ ಜೊತೆ ಪಕ್ಷದ ಮಹಾಮಹಿಮರೆಲ್ಲರೂ ಷಾಮೀಲಾಗಿರುವ ಸಂಶಯ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ವಕ್ಪ್ ಆಸ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಗರಿಷ್ಠ ಸಂಖ‍್ಯೆಯಲ್ಲಿ ನೋಟೀಸ್ ನೀಡಿರುವುದನ್ನು ಈಗಾಗಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆ. ಮಾಣಿಪ್ಪಾಡಿ ಅವರ ಬಾಯಿಮುಚ್ಚಿಸುವ ಷಡ್ಯಂತ್ರದಲ್ಲಿ ಯಾರೆಲ್ಲ ಷಾಮೀಲಾಗಿದ್ದಾರೆ? ವಕ್ಫ್ ಆಸ್ತಿ ಲೂಟಿಯಲ್ಲಿ ಬೇರೆ ಯಾರೆಲ್ಲ ಪಾಲುದಾರರಿದ್ದಾರೆ? ಎನ್ನುವ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೇ, ಕೋವಿಡ್ ಸಲಕರಣೆಗಳ ಖರೀದಿ ಭ್ರಷ್ಟಾಚಾರದಿಂದ ಹಿಡಿದು ವಕ್ಫ್ ಆಸ್ತಿ ಕಬಳಿಕೆಯಲ್ಲಿನ ಲೂಟಿವರೆಗೆ ರಾಜ್ಯ ಬಿಜೆಪಿಯ ಕಪಾಟಿನಿಂದ ಒಂದೊಂದೇ ಅಸ್ತಿ ಪಂಜರಗಳು ಉರುಳಿಬೀಳುತ್ತಲೇ ಇದೆ. ಈ ಹಗರಣಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ರಾಜ್ಯದ ಬಿಜೆಪಿ ನಾಯಕರು ನಮ್ಮ ಪಕ್ಷ ಮತ್ತು ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply