ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸುಪಾರಿ ಪಡೆದಿರುವ ಆರೋಪ

1 year ago

ಬೆಂಗಳೂರು: ಪಂಚಮಸಾಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಹೋರಾಟದ ನೇತೃತ್ವ ವಹಿಸಿರುವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಸುಪಾರಿ ಪಡೆದಿರುವ ಆರೋಪ ಕೇಳಿಬಂದಿದೆ.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಸಿಎಂ ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲೆಂದು ಬಿಜೆಪಿಯವರಿಂದ ಸುಪಾರಿ ತೆಗೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಆಪಾದಿಸಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ ಮೈಸೂರಿನಲ್ಲಿ ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು, ಸಿದ್ದರಾಮಯ್ಯ ಅವರ ತಪ್ಪಿಲ್ಲದಿದ್ದರೂ ಮುಡಾ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು ಮುಂದಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸಿದರು. ಆದರೆ, ಇದರಿಂದ ಪ್ರಯೋಜನ ಆಗದಿದ್ದಕ್ಕೆ ಸ್ವಾಮೀಜಿಯನ್ನು ಎತ್ತಿ ಕಟ್ಟಿದ್ದಾರೆ ಎಂದು ಆರೋಪಿಸಿದರು.

ಕೆಲವು ತಿಂಗಳುಗಳ ಹಿಂದೆಯಷ್ಟೆ ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದ ಸ್ವಾಮೀಜಿ ಈಗ ದ್ವೇಷ ಕಾರುತ್ತಿದ್ದಾರೆ. ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸದ ಮೂಲಕ ಅಪನಂಬಿಕೆ ಸೃಷ್ಟಿಸುತ್ತಿದ್ದಾರೆ. ಸೌಹಾರ್ದ ಹಾಳಾಗಲೆಂದು ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಪುಡಾರಿಯ ರೀತಿ ಅವರು ಮಾತನಾಡುತ್ತಿರುವುದು ಸರಿಯಲ್ಲ. ಒಂದು ಸಮುದಾಯವನ್ನು ಸಿದ್ದರಾಮಯ್ಯ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರ ಸ್ವಾಮೀಜಿ ಅವರದ್ದಾಗಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದರು.

ಸ್ವಾಮೀಜಿಯು ಮುಖ್ಯಮಂತ್ರಿಯವರನ್ನು ಅವಹೇಳನ ಮಾಡುತ್ತಿರುವುದು ಖಂಡನೀಯ. ಅವರು ಒಂದು ಸಮಾಜದ ಸ್ವಾಮೀಜಿಯಾ ಅಥವಾ ಎಲ್ಲರಿಗೂ ಸೇರಿದವರಾ ಎಂಬುದನ್ನು ಸ್ಪಷ್ಟಪಡಿಸಲಿ. ಒಂದು ಜಾತಿಯ ಪರವಾಗಿ ಗುರುತಿಸಿಕೊಂಡರೆ ಅಂಥವರು ಸನ್ಯಾಸಿಯಾಗಲು ಯೋಗ್ಯರಲ್ಲ; ಹಗಲುವೇಷ ಹಾಕಿದವರು ಎನ್ನಬೇಕಾಗುತ್ತದೆ ಎಂದರು.

Leave a Reply