ಪ್ರೊ.ನಂಜುಂಡಸ್ವಾಮಿ ಅವರು ಕಾರು ದಬಾಕಿಸಿಕೊಂಡ ಕಥನ
ನಮ್ಮ ಮಿತ್ರ ನಟರಾಜ್ ಹುಳಿಯಾರ್ ರಚಿಸಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಹೋರಾಟದ ಕಥನ ಆಧಾರಿತ ‘’ ಡೈರೆಕ್ಟ್ ಆಕ್ಷನ್ನ್’’ ಎಂಬ ನಾಟಕ 18 ಮತ್ತು 19, ಡಿಸೆಂಬರ್ , 2023ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಪ್ರದರ್ಶನವಾಗಲಿದೆ. ನಿಜಕ್ಕೂ ಇದು ಆಗಲೇ ಬೇಕಿದ್ದ ಪ್ರಯತ್ನ. ಈ ನಾಟಕವನ್ನು ಇಡೀ ರಾಜ್ಯದೆಲ್ಲೆಡೆ ಪ್ರದರ್ಶನವಾಗುವಂತೆ ಸಮಾನ ಮನಸ್ಕರು ಕೈ ಜೋಡಿಸಬೇಕಿದೆ.
ಈ ಸಂದರ್ಭದಲ್ಲಿ ಬೆಳಿಗ್ಗೆ ಮಿತ್ರ ರವಿಕುಮಾರ್ ಬಾಗಿ ಕಳುಹಿಸಿದ್ದ ಪ್ರೊಫೆಸರ್ ನಾಟಕದ ಆಹ್ವಾನ ಪತ್ರಿಕೆಯನ್ನು ನೋಡುತ್ತಿದ್ದಂತೆ ಒಂದು ತಮಾಷೆಯ ಘಟನೆ ನೆನಪಾಯಿತು.
ಅದು 1991 ರ ಮೇ 22 ರಂದು ಕೆಂಗೇರಿ ಮತ್ತು ಬಿಡದಿ ನಡುವೆ ರಸ್ತೆಯಲ್ಲಿ ನಡೆದ ಘಟನೆ. 1991 ರ ಮೇ 21 ರ ರಾತ್ರಿ ತಮಿಳುನಾಡಿನ ಶ್ರೀಪೆರಬಂದೂರಿನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಶ್ರೀಲಂಕಾ ಉಗ್ರರ ಬಾಂಬ್ ದಾಳಿಗೆ ಬಲಿಯಾಗಿದ್ದರು. ಇಡೀ ಕರ್ನಾಟಕದಲ್ಲಿ ಅಘೋಷಿತ ಬಂದ್ ಮೇ 22 ರ ಬೆಳಿಗ್ಗೆಯಿಂದಲೇ ಚಾಲ್ತಿಯಲ್ಲಿತ್ತು.
ಪ್ರೊಫೆಸರ್ ಬಳಿ ಆ ಕಾಲದಲ್ಲಿ ಸುಮಾರು 15 ಅಡಿ ಉದ್ದದ ಹಳೆಯ ವಿದೇಶಿ ಮಾಡೆಲ್ ಕಾರು ಇತ್ತು. ಇಂತಹದ್ದೇ ಕಾರುಗಳು ರಾಮನಗರದಲ್ಲಿ ರೇಷ್ಮೆ ಗೂಡು ವ್ಯವಹಾರ ಮಾಡುವ ಹಲವು ಮುಸ್ಲಿಮರ ಬಳಿಯೂ ಇದ್ದವು. ಅವರುಗಳು ನಾಲ್ಕೈದು ಮಂದಿ ಒಟ್ಟಿಗೆ ಕಾರಿನಲ್ಲಿ ಹೋಗಿ ಬೆಂಗಳೂರಿನ ಕಬ್ಬನ್ ಪೇಟೆಯ ಬಳಿಯ ರೇಷ್ಮೆ ನೂಲಿನ ವ್ಯಾಪಾರಿಗಳಿಗೆ ನೂಲು ಸರಬರಾಜು ಮಾಡುತ್ತಿದ್ದರು. ಒಂದಿಬ್ಬರು ರಾಮನಗರದಿಂದ ಬೆಂಗಳೂರಿನ ಮೈಸೂರು ಸರ್ಕಲ್ ವರೆಗೆ ಪ್ರಯಾಣಿಕರನ್ನು ಕೊಂಡೊಯ್ಯಲು ಈ ತರಹದ ಕಾರುಗಳನ್ನು ಬಳಸುತ್ತಿದ್ದರು.
ಪ್ರೊಫೆಸರ್ ನಂಜುಂಡಸ್ವಾಮಿ ಅವರು ಮೇ 22 ರಂದು ಬೆಳಿಗ್ಗೆ ಮೈಸೂರಿನಿಂದ ಹೊರಟು ಬೆಂಗಳೂರಿನ ವಿಜಯನಗರದ ಬಳಿ ಇದ್ದ ಆರ್.ಪಿ.ಸಿ. ಲೇ ಔಟ್ ನ ಬಾಡಿಗೆಗೆ ಇದ್ದ ಮನೆಗೆ ಹೊರಟಿರುವಾಗ, ಕೆಂಗೇರಿ ಬಳಿಯ ಮೈಸೂರು-ಬೆಂಗಳೂರು ರಸ್ತೆಯ ಪೆಪ್ಸಿ ಕೋಲಾ ಫ್ಯಾಕ್ಟರಿ ಬಳಿ ಸ್ಥಳೀಯ ಹಳ್ಳಿಯ ಹುಡುಗರು ಅವರ ಕಾರನ್ನು ತಡೆದಿದ್ದಾರೆ.
ರಾಮನಗರದ ಸಾಬಣ್ಣ ಇವತ್ತೂ ಸಹ ಕಾರು ಓಡಿಸುತ್ತಿದ್ದಾನೆ ಎಂದು ಸಿಟ್ಟುಗೊಂಡಿದ್ದಾರೆ. ಪ್ರೊಫೆಸರ್ ಅವರನ್ನು ಕಾರಿನಿಂದ ಇಳಿಸಿ, ರಸ್ತೆ ಪಕ್ಕಕ್ಕೆ ಕಾರನ್ನು ತಲೆ ಕೆಳಕಾಗಿ ಮಗುಚಿ ಹಾಕಿಬಿಟ್ಟಿದ್ದರು. ಪ್ರೊಫೆಸರ್, ಆ ಹುಡುಗರ ಜೊತೆ ಏನೂ ಮಾತನಾಡದೆ ಮೌನವಾಗಿ ಮರದಡಿ ಸಿಗರೇಟು ಸೇದುತ್ತಾ ನಿಂತಿದ್ದರು.
ನನ್ನ ಮಗ ಅನನ್ಯ 1990 ರ ಮೇ 24 ರಂದು ಜನಿಸಿದ್ದ. ಅವನಿಗೆ 91 ರ ಮೇ 24 ರ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಹೊಸ ಬಟ್ಟೆ ತರಲು ಬೆಂಗಳೂರಿಗೆ ಹೊರಟಿದ್ದ ನಾನು ಬಸ್ ಗಳು ಇಲ್ಲದ ಕಾರಣ, ಮಂಡ್ಯದ ಗೆಳೆಯನನ್ನು ಕರೆದುಕೊಂಡು ಹೀರೊ ಹೊಂಡಾ ಬೈಕ್ ನಲ್ಲಿ ಹೊರಟಿದ್ದೆ.
ನನ್ನ ಬ್ಯಾಂಕ್ ಅಕೌಂಟ್ ಬೆಂಗಳೂರು ಕೆಂಪೇಗೌಡ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಕೇಂದ್ರ ಕಚೇರಿಯ ಅವಿನ್ಯೂ ರಸ್ತೆಯ ಶಾಖಾ ಕಚೇರಿಯಲ್ಲಿತ್ತು. ನಾನು ಬ್ಯಾಂಕಿಗೆ ಹೋಗಿ ಹಣ ಡ್ರಾ ಮಾಡಬೇಕಿತ್ತು. ಮಧ್ಯಾಹ್ನ ಹನ್ನೆರೆಡು ಗಂಟೆ ಸಮಯಕ್ಕೆ ಸರಿಯಾಗಿ ಪ್ರೊಫೆಸರ್ ಅಲ್ಲಿ ನಿಂತಿದ್ದನ್ನು ನೋಡಿ ಬೈಕ್ ನಿಲ್ಲಿಸಿದೆ. ನಾನು ಕಾರು ಆಕ್ಸಿಡೆಂಟ್ ಆಗಿದೆ ಎಂದು ಊಹಿಸಿದ್ದೆ.
ಏನ್ ಸಾರ್, ಏನಾದ್ರು ಏಟಾಗಿದೆಯಾ? ಎಂದು ಕೇಳುತ್ತಾ ಹತ್ತಿರ ಹೋದೆ. ಇಲ್ಲಕಣಯ್ಯಾ, ಎಂದು ಹೇಳುತ್ತಾ, ‘’ನನ್ನನ್ನು ಈ ಹಳ್ಳಿ ಹುಡುಗರು ರಾಮನಗರದ ಸಾಬಿ’’ ಮಾಡಿಬಿಟ್ಟರು ಕಣಯ್ಯ ಎಂದು ಹೇಳುತ್ತಾ ನಡೆದ ಘಟನೆಯನ್ನು ವಿವರಿಸಿದರು. ‘’ಏನ್ಸಾರ್ ನೀವು ವಲ್ಡ್ ಫೇಮಸ್ ಈ ಹುಡುಗರಿಗೆ ನಿವ್ಯಾರೆಂದು ಗೊತ್ತಾಗಲಿಲ್ಲವಾ? ಎಂದು ಪ್ರಶ್ನಿಸಿದೆ. ನಾನು ಪೊಲೀಸರ ಪಾಲಿಗೆ ಮಾತ್ರ ಫೇಮಸ್ ಕಣಯ್ಯ ಎಂದು ನಕ್ಕರು.
ನಂತರ ನನ್ನ ಗೆಳೆಯನ ಬೈಕ್ ಮೇಲೆ ಕೂರಿಸಿ, ಅವರನ್ನು ಮನೆಗೆ ಬಿಟ್ಟು ಬಾ, ನಾನು ನಡೆದುಕೊಂಡು ಬರ್ತಿನಿ ಎಂದು ಹೇಳಿ ಅವರನ್ನು ಕಳಿಸಿಕೊಟ್ಟು, ನಾನು ನಡೆಯುತ್ತಾ ಹೊರಟೆ. ಪ್ರೊಫೆಸರ್ ಅವರನ್ನು ಮನೆಗೆ ತಲುಪಿಸಿ, ನನ್ನ ಗೆಳೆಯ ವಾಪಸ್ ಬರುವುದರೊಳಗೆ ಒಂದೂವರೆ ಗಂಟೆಯಾಗಿತ್ತು. ಆ ದಿನ ಬೆಂಗಳೂರಿನಲ್ಲಿ ಸಹ ಬಂದ್ ಆಚರಿಸಲಾಗುತ್ತಿತ್ತು.
ನಂತರ ನಾವಿಬ್ಬರೂ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಕೆಲಸ ಮಾಡುತ್ತಾ ಮಾಗಡಿ ರಸ್ತೆಯ ಪ್ರಸನ್ನ ಥಿಯಟರ್ ಬಳಿ ಇದ್ದ ನನ್ನ ಫ್ರೆಂಡ್ ದೇವು ಎಂಬಾತನ ರೂಂ ಗೆ ಹೋಗಿ ಆ ದಿನ ಕಾಲ ಕಳೆದವು. ಮರುದಿನ ಮಗನಿಗೆ ಬಟ್ಟೆ ತೆಗೆದುಕೊಂಡು ಮಂಡ್ಯಕ್ಕೆ ವಾಪಸ್ ಬಂದೆವು.
ನನಗೆ ಈಗಲೂ ಸಹ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಬಸ್ ಅಥವಾ ಕಾರಿನಲ್ಲಿ ಓಡಾಡುವಾಗ ಪೆಪ್ಸಿ ಕಂಪನಿಯ ಆ ಫ್ಯಾಕ್ಟರಿ ಬಳಿ ಬಂದಾಗ ಪ್ರೊಫೆಸರ್ ಅವರು ರಾಮನಗರದ ಸಾಬಣ್ಣನಾದ ಕಥೆ ನೆನಪಿಗೆ ಬರುತ್ತದೆ. ಪ್ರೊಫೆಸರ್ ನಾಟಕದ ನೆನಪಿನಲ್ಲಿ ಇಂದು ಅದು ನೆನಪಾಯಿತು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



