ಚಾಮರಾಜನಗರ: ರಾಷ್ಟ್ರಕವಿ ಕುವೆಂಪು ಮತ್ತು ವರನಟ ಡಾ. ರಾಜಕುಮಾರ್ ಅವರು ಕನ್ನಡ ಸಂಸ್ಕೃತಿಯ ರಾಜರೆನಿಸಿಕೊಂಡು ಕರ್ನಾಟಕದ ಕೀರ್ತಿಯನ್ನು ವಿಶ್ವಮಾನ್ಯ ಮಾಡಿದರು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸಿ ನಾಗಣ್ಣ ಅಭಿಪ್ರಾಯಪಟ್ಟರು.
ಚಾಮರಾಜನಗರ ವಿಶ್ವವಿದ್ಯಾಲಯದ ನಿಜಗುಣ ಸಭಾಂಗಣದಲ್ಲಿ ರಂಗವಾಹಿನಿ ಹಾಗೂ ಚಾಮರಾಜನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಚಾಮರಾಜನಗರ ಬೆಳ್ಳಿ ಹಬ್ಬ ಸಂಭ್ರಮ- ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡಿಗರು ಒಲ್ಮೆ , ಬಲ್ಮೆ , ಜಾಣ್ಮೆ ಉಳ್ಳವರು ಎಂದು ಕರೆದಿರುವ ಬಿ ಎಂ ಶ್ರೀಕಂಠಯ್ಯ ಅವರ ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕನ್ನಡಿಗರಾದ ನಾವು ನಮ್ಮ ಭಾಷೆ ಬಗ್ಗೆ ಹೆಚ್ಚಿನ ಅಭಿಮಾನವನ್ನು ಹೊಂದಬೇಕಾದ ಅಗತ್ಯವಿದೆ. ದೇಶದ ನಾನಾ ಕಡೆ ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿನ ಭಾಷಾ ಪ್ರಾಂತ್ಯಗಳನ್ನು ಒಂದುಗೂಡಿಸಿದ ಅನೇಕ ಮಹನೀಯರನ್ನು ನಾವು ಸ್ಮರಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ಭಾಷಣ ಮಾಡಿದ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ ಮಹಾದೇವ, ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುಂಚೂಣಿಗೆ ತರುವುದು, ವಿಚಾರ ಸಂಕಿರಣ ಸೇರಿದಂತೆ ನಾನಾ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಬಲ ವಿದ್ವತ್ ಹೊಂದಿರುವ ವಿದ್ವಾಂಸರ ಅಗತ್ಯವಿದೆ. ಅಂತಹವರ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯವರೇ ಆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರೊ. ನಾಗಣ್ಣ ಒಬ್ಬರು. ಪ್ರತಿ ತಲೆಮಾರಿಗೂ ಪರಂಪರಾಗತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ, ಸ್ವಯಂ ಸಾಧನೆಯಿಂದ ಮೆಟ್ಟಲೇರಿರುವ ಇಂತಹ ಮಹಾನ್ ಸಾಹಿತಿಗಳ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ ವಿವಿ ಕುಲಪತಿ ಪ್ರೊ ಎಂ ಆರ್ ಗಂಗಾಧರ್ ಮಾತನಾಡಿದರು.
ರಂಗವಾಹಿನಿ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಪ್ರಾಸ್ತವಿಕ ಭಾಷಣ ಮಾಡಿದರು. ವಿವಿ ಕುಲ ಸಚಿವ ಪಿ ಮಾದೇಶ್ ಕನ್ನಡ ವಿಭಾಗದ ಮುಖ್ಯಸ್ಥ ಎಸ್ ಬಸವಣ್ಣ ಮೂಕಹಳ್ಳಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಕನ್ನಡ ಪ್ರಾಧ್ಯಾಪಕ ಪ್ರೊ.ಶಿವಸ್ವಾಮಿ, ಜಗ್ಗು ಜಾದುಗಾರ, ಗುರುರಾಜ್ ಯರಗನಹಳ್ಳಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕವಿ ಕಾವ್ಯ ಸಂಭ್ರಮ ಕವಿಗೋಷ್ಠಿ ಸಾಹಿತಿ ಡಾ. ರಾಜಶೇಖರ ಜಮದಂಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕವಿಗಳಾದ ಕೆಸ್ತೂರು ಮಂಜುನಾಥ್ , ಶಿವಕುಮಾರ ಕೆಂಪನಪುರ, ಕಮರವಾಡಿ ಮಹದೇವಸ್ವಾಮಿ, ಬಳೆಪೇಟೆ ಪ್ರಕಾಶ್, ಗುಂಡ್ಲುಪೇಟೆ ಪುಷ್ಪ, ಇರಸವಾಡಿ ಮಹೇಶ್, ಅಶ್ವಿನಿ ಕಶ್ಯಪ್, ನಾಗೇಂದ್ರ ರಾಜಗುರು , ಗುರುರಾಜ ತಮ್ಮಡಹಳ್ಳಿ , ಸಾಗರ್ ಪ್ರಥಮ್ ಅವರುಗಳು ಕವಿತೆ ವಾಚಿಸಿದರು.




