ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದಂತಹ ಕ್ಷೇತ್ರಗಳ ಅಕಾಡೆಮಿ, ಪರಿಷತ್, ಪ್ರಾಧಿಕಾರ ಮುಂತಾದ ಸಾರ್ವಜನಿಕ ಸಂಸ್ಥೆಗಳಿಗೆ ಆಯಾ ಕ್ಷೇತ್ರಗಳಲ್ಲಿ ಪರಿಶ್ರಮ ಮತ್ತು ತಜ್ಞತೆಯುಳ್ಳ ವ್ಯಕ್ತಿಗಳನ್ನು ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳನ್ನಾಗಿ ನೇಮಿಸಿ ಶೀಘ್ರವಾಗಿ ಚಾಲನೆಗೊಳಿಸುವುದು ಯಾವುದೇ ಸರ್ಕಾರದ ಬಹುಮುಖ್ಯ ಜವಾಬ್ದಾರಿ. ಇಲ್ಲದಿದ್ದರೆ ಸಾಂಸ್ಕೃತಿಕ ಬಸವಳಿಕೆ ಎದುರಾಗುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿ ಒಂದು ವರ್ಷ ಸಮೀಪಿಸುತ್ತಾ ಬಂದಿದೆ. ಈಗಲೂ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಗಳಾದ ವಿವಿಧ ಅಕಾಡೆಮಿ, ಪರಿಷತ್ತು, ಪ್ರಾಧಿಕಾರ, ರಂಗಾಯಣ ಮುಂತಾದ ಸಂಸ್ಥೆಗಳಿಗೆ ಸೂಕ್ತ ವ್ಯಕ್ತಿಗಳನ್ನು ಹುಡುಕಿ ನಾಮನಿರ್ದೇಶನ ಮಾಡದೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಒಳ್ಳೆಯದಲ್ಲ.
ಬಲಪಂಥೀಯ ರಾಜಕೀಯ ವಿಚಾರಧಾರೆಯ ಪಕ್ಷಗಳ ನೇತೃತ್ವದ ಸರ್ಕಾರಗಳು ಇಂತಹ ಸಂಸ್ಥೆಗಳನ್ನು ಅತ್ಯಂತ ವೇಗವಾಗಿ ಬಳಸಿಕೊಂಡು ತಮ್ಮ ಇಂಗಿತ ಪ್ರಣಾಳಿಕೆಯ ರಾಜಕೀಯ ಸಿದ್ಧಾಂತವನ್ನು ಸಮಸ್ತ ದೇಶಬಾಂಧವರ ಮೇಲೆ ಹೇರುವ ಮೂಲಕ ಸಾಂಸ್ಕೃತಿಕ ಉತ್ಪಾತವನ್ನು ಈ ಹಿಂದೆ ಸೃಷ್ಟಿಸಿವೆ. ಇದರ ಅಡ್ಡಪರಿಣಾಮಗಳನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ. ಸಾಮಾಜಿಕ ಉದ್ವಸ್ಥ ಸ್ಥಿತಿಗೂ ಆಗಿನ ಸರ್ಕಾರಗಳ ಸಾಂಸ್ಕೃತಿಕ ಮತ್ತು ರಾಜಕೀಯ ನಡೆಗಳು ಕಾರಣವಾದವು. ಆಗಿನ ಅಪಸವ್ಯದ ಪರಿಣಾಮಗಳನ್ನು ಈಗ ಸುಧಾರಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ನಾವಿದ್ದೇವೆ.
ಸಾಹಿತ್ಯ ಮತ್ತು ಸಂಸ್ಕೃತಿಗಳ ಹಂಬಲಗಳು ಸೃಜನೆಯಾಗದ ಹೊರತು ಗುಣಾತ್ಮಕ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ವಿವಿಧ ಅಕಾಡೆಮಿಗಳು, ಪರಿಷತ್, ಪ್ರಾಧಿಕಾರ, ರಂಗಾಯಣ ಮುಂತಾದುವುಗಳಿಗೆ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿದ ಬಳಿಕವಷ್ಟೇ ವಿವಿಧ ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶ ಸಿಗಲು ಸಾಧ್ಯ. ಈ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಕ್ರಿಯಾ ಯೋಜನೆಗಳ ಮೂಲಕ ಸರ್ಕಾರದ ಜನಪರ ಆಶಯಗಳನ್ನು ಜನರಿಗೆ ಮುಟ್ಟಿಸಲು ಸಾಧ್ಯವಿದೆ. ಆ ಮೂಲಕ ಜಾತ್ಯತೀತ ಸಮಾಜವಾದಿ ಆಶಯಗಳ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ತಕ್ಕಂತೆ ಸಾಹಿತ್ಯ ಮತ್ತು ಸಂಸ್ಕೃತಿ ಸಂವೇದನೆಗಳನ್ನು ಸದೃಢವಾಗಿ ಸಂಘಟಿಸುವ ಕೆಲಸಗಳು ವೇಗ ಪಡೆದುಕೊಳ್ಳುತ್ತವೆ. ಸರ್ಕಾರ ಇದನ್ನು ಅರ್ಥಮಾಡಿಕೊಂಡು ಶೀಘ್ರವಾಗಿ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆಗಳನ್ನು ಚಾಲನೆಗೊಳಿಸಲು ಮುಂದಾಗಲೆಂದು ನಾವು ಆಶಿಸೋಣವೇ ?
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




